ಒಂದೇ ಕಡೆ ಹೆಚ್ಚು ದಿನ ತಂಗುವಂತಿಲ್ಲ, ಕಂಡ ಕಂಡಲ್ಲಿ ಭಿಕ್ಷೆ ಬೇಡುವಂತಿಲ್ಲ, ನಾಗ ಸಾಧುಗಳ ವರ್ಗವೆಷ್ಟು ಗೊತ್ತಾ?
ಪ್ರಯಾಗರಾಜ್ ನಲ್ಲಿ ಎಲ್ಲಿ ನೋಡಿದ್ರೂ ನಾಗ ಸಾಧುಗಳು, ಸನ್ಯಾಸಿಗಳು ಕಾಣಸಿಗ್ತಾರೆ. ಪ್ರತಿಯೊಬ್ಬರೂ ಭಿನ್ನವಾಗಿದ್ದು, ಅವರ್ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಸನ್ಯಾಸಿಗಳ ವಿಧ, ವಸ್ತ್ರಧಾರಣೆ ಬಗ್ಗೆ ಮಾಹಿತಿ ಇಲ್ಲಿದೆ.

ಮಹಾಕುಂಭ ಮೇಳ (Mahakumbh Mela )ದಿಂದ ಪ್ರಯಾಗರಾಜ್ (Prayagraj) ಈಗ ಸುದ್ದಿಯಲ್ಲಿದೆ. ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ದಶನಮಿ ನಾಗ ಸನ್ಯಾಸಿಗಳ (Naga sadhu) ಸಂಪ್ರದಾಯವು ವಿಶೇಷ ಮಹತ್ವವನ್ನು ಹೊಂದಿದೆ. ಇವರು ಕೇವಲ ಸನಾತನ ಧರ್ಮದ ರಕ್ಷಕರಲ್ಲ, ಆಧ್ಯಾತ್ಮಕ ಕ್ಷೇತ್ರದಲ್ಲಿ ಪ್ರೇರಣೆ ನೀಡ್ತಾರೆ. ದಶನಮಿ ನಾಗ ಸನ್ಯಾಸಿಗಳು ಆದಿಶಂಕರಾಚಾರ್ಯರು (Adi Shankaracharya) ಸ್ಥಾಪಿಸಿದ ವಿಶಿಷ್ಟ ಸಂಪ್ರದಾಯದ ಭಾಗವಾಗಿದ್ದಾರೆ. ಈ ಸಂಪ್ರದಾಯವು ಸನ್ಯಾಸಿಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತದೆ. ಇದು ಸಂಪ್ರದಾಯದ ವರ್ಗೀಕರಣ ಮಾತ್ರವಲ್ಲ, ಸನ್ಯಾಸಿಗಳ ಆಧ್ಯಾತ್ಮಿಕ ಪ್ರಗತಿಯ ಮಟ್ಟಕ್ಕೂ ಆಧಾರವಾಗಿದೆ. ಈ ಸನ್ಯಾಸಿಗಳನ್ನು ಕುಟಿಚಕ್, ಬಹುದಕ, ಹಂಸ ಮತ್ತು ಪರಮಹಂಸ ಎಂದು ವರ್ಗೀಕರಿಸಲಾಗಿದೆ. ನಾವಿಂದು ಸನ್ಯಾಸಿ ವಿಧಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಕುಟಿಕಚ್ : ಲೌಕಿಕ ಪ್ರಲೋಭನೆಗಳಿಂದ ಸಂಪೂರ್ಣವಾಗಿ ಮುಕ್ತರಾಗಿ ಕಾಡಿನಲ್ಲಿ ಗುಡಿಸಲಿನಲ್ಲಿ ವಾಸಿಸುವ ಸನ್ಯಾಸಿಗಳು. ಧಾರ್ಮಿಕ ಚಿಂತನೆ, ಪೂಜೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವರು ಯಾವುದೇ ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಭಿಕ್ಷಾಟನೆಯಲ್ಲಿ ಸಿಗುವ ಹಣವನ್ನೇ ಅವರು ಅವಲಂಭಿಸಿರುತ್ತಾರೆ.
ತ್ರಿವೇಣಿಯಲ್ಲಿ ಎಷ್ಟು ದಿನ ಸ್ನಾನ ಮಾಡಿದ್ರೆ ಪಾಪ ಪರಿಹಾರ, ಸದ್ಗುರು ಹೇಳೋದೇನು?
ಬಹುದಕ : ಬಹುದಕ ಸನ್ಯಾಸಿಗಳು ಅಲೆಮಾರಿಗಳಾಗಿರುತ್ತಾರೆ. ಆಹಾರ ಇತ್ಯಾದಿಗಳನ್ನು ಮಾತ್ರ ದಾನವಾಗಿ ಸ್ವೀಕರಿಸುತ್ತಾರೆ. ಅವರು ಒಂದ್ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಬೆಳೆಸ್ತಾ ಧರ್ಮದ ಪ್ರಚಾರ ಮಾಡ್ತಾರೆ. ದೇಶಾದ್ಯಂತ ಪ್ರಯಾಣ ಮಾಡುವುದು ಅವರ ಗುರಿ. ಅವರು ನಿರಂತರವಾಗಿ ತೀರ್ಥಯಾತ್ರೆಯ ಸ್ಥಳಗಳಿಗೆ ಭೇಟಿ ನೀಡ್ತಿರುತ್ತಾರೆ.
ಹಂಸ : ಹಂಸ ಸನ್ಯಾಸಿಗಳು ವೇದಾಂತ ತತ್ತ್ವಶಾಸ್ತ್ರದಲ್ಲಿ ಪಾರಂಗತರಾದವರು. ಪರಮಾತ್ಮನ ಸಂಪೂರ್ಣ ಜ್ಞಾನವನ್ನು ಪಡೆಯುವುದು ಅವರ ಗುರಿಯಾಗಿದೆ. ಅವರು ಯೋಗಾಭ್ಯಾಸ ಮತ್ತು ದಾನವನ್ನು ಅವಲಂಬಿಸಿ ಸಮಾಜಕ್ಕೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತಾರೆ.
ಪರಮಹಂಸ : ಇದು ಆಧ್ಯಾತ್ಮಿಕ ಬೆಳವಣಿಗೆಯ ಅತ್ಯುನ್ನತ ಸ್ಥಿತಿ. ಈ ಹಂತದ ಸನ್ಯಾಸಿಗಳು ಮೋಕ್ಷವನ್ನು ಪಡೆದಿದ್ದಾರೆ ಮತ್ತು ಅವರ ಆತ್ಮವು ಪರಮಾತ್ಮನೊಂದಿಗೆ ವಿಲೀನಗೊಂಡಿದೆ ಎಂದು ನಂಬಲಾಗಿದೆ. ಅವರನ್ನು ಮಾನವ ಸಮಾಜದ ಸರ್ವೋಚ್ಚ ಗುರು ಮತ್ತು ಆಧ್ಯಾತ್ಮಿಕ ಜ್ಞಾನದ ಪರಮ ಆಚಾರ್ಯ ಎಂದು ಪರಿಗಣಿಸಲಾಗಿದೆ.
ಅಲ್ಲದೆ ಅವರನ್ನು ಶಾಸ್ತ್ರಧಾರಿ ಮತ್ತು ಶಸ್ತ್ರಧಾರಿ ಎಂದು ಎರಡು ವರ್ಗ ಮಾಡಲಾಗಿದೆ. ಶಾಸ್ತ್ರಧಾರಿ ಸನ್ಯಾಸಿಗಳು ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾರೆ. ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸೈದ್ಧಾಂತಿಕ ಬೆಳವಣಿಗೆಯ ಮೇಲೆ ಅವರು ಗಮನ ಕೇಂದ್ರೀಕರಿಸುತ್ತಾರೆ. ಅದೇ ಶಸ್ತ್ರಧಾರಿ ಸನ್ಯಾಸಿಗಳು ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ಆಯುಧಗಳನ್ನು ಬಳಸುವುದರಲ್ಲಿ ನಿಪುಣರು. ಹಿಂದೂ ಸನಾತನ ಧರ್ಮವನ್ನು ರಕ್ಷಿಸುವುದು ಅವರ ಉದ್ದೇಶ. ಸಂದರ್ಭಗಳಿಗೆ ಅನುಗುಣವಾಗಿ, ಅವರು ಶಾಸ್ತ್ರಗಳನ್ನು ಮತ್ತು ಆಯುಧಗಳನ್ನು ಬಳಸುತ್ತಾರೆ. ಮಹಾ ಕುಂಭದಂತಹ ಕಾರ್ಯಕ್ರಮಗಳಲ್ಲಿ ದಶನಮಿ ನಾಗ ಸನ್ಯಾಸಿಗಳ ಉಪಸ್ಥಿತಿಯು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ರಕ್ಷಣೆಯನ್ನು ಸಂಕೇತಿಸುತ್ತದೆ.
Indian Mythology: ಮಹಾಭಾರತದಲ್ಲಿ ಕರ್ಣನ ಜನ್ಮರಹಸ್ಯ ಹನ್ನೊಂದು ಮಂದಿಗೆ
ಸನ್ಯಾಸಿಗಳು ಪಾಲಿಸಬೇಕಾದ ನಿಯಮ :
• ಭಿಕ್ಷೆಗೆ ಹೋಗುವಾಗ ಸನ್ಯಾಸಿ ಎರಡು ಬಟ್ಟೆಗಳನ್ನು ಧರಿಸಬೇಕು. ಒಂದು ಬಟ್ಟೆಯು ಸೊಂಟದ ಕೆಳಗಿನ ಮತ್ತು ಮೊಣಕಾಲುಗಳ ಮೇಲಿನ ಭಾಗವನ್ನು ಮುಚ್ಚಬೇಕು. ಇನ್ನೊಂದು ಬಟ್ಟೆಯನ್ನು ಭುಜದ ಮೇಲೆ ಹಾಕಬೇಕು.
• ಯಾವುದೇ ಸನ್ಯಾಸಿ ಒಂದು ಬಾರಿ ಏಳು ಮನೆಗಳಿಗಿಂತ ಹೆಚ್ಚು ಮನೆಗಳಿಂದ ಭಿಕ್ಷೆ ಬೇಡಬಾರದು. ಆದ್ರೆ ಕುಟಿಕಚ್ ಸನ್ಯಾಸಿಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ.
• ರಾತ್ರಿ ಅಥವಾ ಬೆಳಿಗ್ಗೆ ಈ ಎರಡರಲ್ಲಿ ಒಂದು ಸಮಯ ಮಾತ್ರ ಸನ್ಯಾಸಿಗಳು ಆಹಾರ ಸೇವನೆ ಮಾಡಬೇಕು.
• ಜನನಿಬಿಡ ಪ್ರದೇಶದಿಂದ ದೂರದಲ್ಲಿ ಸನ್ಯಾಸಿಗಳು ತಮ್ಮ ಕುಟೀರ ನಿರ್ಮಾಣ ಮಾಡಿಕೊಳ್ಳಬೇಕು.
• ಸನ್ಯಾಸಿಗಳು ನೆಲದ ಮೇಲೆ ಮಲಗಬೇಕು.
• ಯಾರನ್ನೂ ಹೊಗಳುವ ಹಾಗೂ ತೆಗಳುವ ಕೆಲಸವನ್ನು ಸನ್ಯಾಸಿಗಳು ಮಾಡ್ಬಾರದು.