ಈ ಕತೆ ನಿಮಗೆ ಗೊತ್ತಿರಬಹುದು. ಒಮ್ಮೆ ಒಬ್ಬ ಬೇಡನು ಹೆಂಡತಿ ಮಕ್ಕಳಿಗಾಗಿ ಆಹಾರ ಹುಡುಕುತ್ತಾ ಹುಡುಕುತ್ತಾ ಕಾಡಿನ ಆಳವನ್ನು ಪ್ರವೇಶಿಸಿದ. ಅಂದು ಬೇಟೆಯೇ ಸಿಗಲಿಲ್ಲ. ರಾತ್ರಿಯಾಯಿತು. ರಾತ್ರಿಯನ್ನು ಕಾಡುಪ್ರಾಣಿಗಳ ಅಪಾಯದಿಂದ ಪಾರಾಗಿ ಕಳೆಯೋಣವೆಂದು ಒಂದು ಮರ ಹತ್ತಿದ. ಆತನ ಅದೃಷ್ಟದಿಂದ, ಆ ದಿನ ಶಿವರಾತ್ರಿಯಾಗಿತ್ತು. ಆತ ಹತ್ತಿದ ರ ಬಿಲ್ವದ ಮರವಾಗಿತ್ತು. ಆ ಮರದ ಕೆಳಗೊಂದು ಶಿವನ ಲಿಂಗವಿತ್ತು. ಆತನಿಗೆ ಇದೊಂದೂ ಗೊತ್ತಿರಲಿಲ್ಲ. ಆತ ರಾತ್ರಿ, ಪ್ರಾಣಿಗಳ ಭಯದಿಂದ ಎಚ್ಚರವಾಗಿದ್ದ. ನಿದ್ರೆ ಬರದೆ ಇರಲೆಂದು ಕೈಗೆ ಸಿಕ್ಕಿದ ಎಲೆಗಳನ್ನೆಲ್ಲ ಒಂದೊಂದೇ ಕಿತ್ತು ಕಿತ್ತು ಕೆಳಗೆ ಹಾಕುತ್ತಿದ್ದ. ಅವು ಹೋಗಿ ಶಿವಲಿಂಗದ ಮೇಲೆ ಬೀಳುತ್ತಿದ್ದವು. ಬೆಳಗ್ಗಿನಿಂದ ಏನೂ ತಿನ್ನದೆ ಉಪವಾಸವಿದ್ದ. ರಾತ್ರಿಯಡೀ ಜಾಗರಣೆ. ಬೆಳಗಿನ ಹೊತ್ತಿಗೆ ಶಿವದೂತರು ಆತನ ಮುಂದೆ ಪ್ರತ್ಯಕ್ಷರಾದರು. ಕೈಲಾಸಕ್ಕೆ ಬಾರೆಂದು ಕರೆದರು. ಆತನಿಗೆ ಆಶ್ಚರ್ಯ. ಕಡೆಗೆ ಅವರೇ ವಿವರಿಸಿದರು- ನಿನಗೇ ಅರಿವೇ ಇಲ್ಲದಿದ್ದರೂ ಶಿವರಾತ್ರಿಯ ಶುಭದಿನದಂದು ಉಪವಾಸ, ರಾತ್ರಿ ಜಾಗರಣೆ ಹಾಗೂ ರಾತ್ರಿಯಡೀ ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡಿರುವೆ. ಹೀಗಾಗಿ ನೀನು ಅಪ್ಪಟ ಶಿವಭಕ್ತನಿದ್ದೀಯೆ.

ಇದು, ಶಿವರಾತ್ರಿಯ ಬಗ್ಗೆ ಅರಿವೇ ಇಲ್ಲದಿದ್ದರೂ ಮುಗ್ಧತೆಯಿಂದ ಶಿವಾರಾಧನೆ ನಡೆಸಿ ಸಾಯುಜ್ಯ ಪಡೆದ ಬೇಡನ ಕತೆ. ನಮಗೆ ಶಿವನ ಮಹಾತ್ಮೆಯ ಅರಿವಿದೆ ಅಲ್ಲವೇ. ಹಾಗಿದ್ದರೆ ಶಿವರಾತ್ರಿಯ ಆರಾಧನೆ ಅರ್ಚನೆ ಪೂಜೆಗಳನ್ನು ಮಾಡಲು ಯಾಕೆ ಹಿಂಜರಿಯಬೇಕು?

 

ಬಿಲ್ವಾರ್ಚನೆ

ಶಿವರಾತ್ರಿಯಂದು ಮಾಡುವ ಬಿಲ್ವಾರ್ಚನೆ ಶಿವನಿಗೆ ತುಂಬಾ ಪ್ರಿಯವಾದುದು. ನೀವೇ ಕೈಯಾರೆ ಕೊಯ್ದು ತಂದ ಬಿಲ್ವದ ಎಲೆಗಳನ್ನು ಚೆನ್ನಾಗಿ ತೊಳೆದು, ಉಪವಾಸವಿದ್ದು, ಓಂ ನಮಃಶಿವಾಯ ಎಂಬ ಪಂಚಾಕ್ಷರಿ ಮಂತ್ರದ ಸಮೇತ ಈಶ್ವರನಿಗೆ ಅರ್ಪಣೆ ಮಾಡಬೇಕು. ಹೀಗೆ ನೂರೆಂಟು ಬಾರಿ ಮಾಡಬೇಕು. ಸಾವಿರದೆಂಟು ಬಾರಿ ನಡೆಸುವುದು ಅತಿಶ್ರೇಷ್ಠ. ಹೀಗೆ ಮಾಡಿದವರಿಗೆ ಈ ಜನ್ಮದಲ್ಲಿ ಬಯಸಿದ್ದು ಕೈಗೆ ಎಟುಕುವುದು. ಮನೆ ಕಟ್ಟಿಸುವ ಯೋಗವಿದೆ. ಬದುಕು ಸದಾ ಹಸಿರಾಗಿರುತ್ತದೆ. ನೀವು ಲೌಕಿಕ ಯಶಸ್ಸಿನ ಗುರಿಯನ್ನು ಇಟ್ಟುಕೊಂಡು ಈ ಆರಾಧನೆ ಮಾಡಿದ್ದರೆ ಅದೂ ಸಿಗುವುದು; ಅಲೌಕಿಕವಾದ ಸುಖ, ಆನಂದ ಶಾಂತಿ ಪ್ರಾಪ್ತಿಗಾಗಿ ಮಾಡಿದ್ದರೆ ಶಿವನು ಹೆಚ್ಚಿನ ಪ್ರೀತಿಯನ್ನು ಅಂಥವರ ಮೇಲೆ ತೋರುವನು. ಲೋಕದ ಒಳಿತಿಗಾಗಿ ಪ್ರಾರ್ಥನೆ ನಡೆಸಿದರೆ ಅಂಥವರನ್ನು ಕೈಲಾಸದಲ್ಲಿ ತನ್ನ ಪಾದದ ಬಳಿಯೇ ಇರಿಸಿಕೊಳ್ಳುವನು. ಮೇಷ, ಮಿಥುನ, ಕುಂಭ, ಮೀನ, ಕಟಕ ರಾಶಿಯವರಿಗೆ ಈ ಅರ್ಚನಾ ವಿಧಾನ ಶ್ರೇಯಸ್ಕರ.

 

ಹಾಲಿನ ಅಭಿಷೇಕ

ಶಿವನಿಗೆ ಹಾಲು ಪ್ರಿಯ. ಅವನಿಗೆ ಹಾಲಿನ ಅಭಿಷೇಕ ಮಾಡಬಹುದು. ಅಭಿಷೇಕದ ಮಂತ್ರಗಳನ್ನು ಹೇಳಿಕೊಳ್ಳಬೇಕು. ಓಂ ನಮಃಶಿವಾಯ ಮತ್ತು ಸರ್ವೇಭ್ಯೋ ದೇವೇಭ್ಯೋ ನಮಃ ಎಂಬ ಮಂತ್ರಗಳನ್ನು ಪಠಿಸಬಹುದು. ಹಾಲು ಶುದ್ಧವಾಗಿರಬೇಕು. ಉವಾಸ ವ್ರತದ ಕೊನೆಗೆ ಹಾಗೂ ಜಾಗರಣೆಯ ನಂತರ ಇದನ್ನು ಪ್ರಸಾದ ರೂಪದಲ್ಲಿ ಸೇವಿಸಬಹುದು. ಶಿವಲಿಂಗಕ್ಕೆ ಶ್ರೀಗಂಧ ಹಾಗೂ ಭಸ್ಮದಿಂದ ಲೇಪನ ಮಾಡಬೇಕು. ಹಾಲಿನ ಅಭಿಷೇಕ ನಡೆಸುವವರು ಹಾಲಿನಂಥ ಬದುಕು, ಬೆಳ್ಳಿ ಬಂಗಾರಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಮ್ಮ ಜೀವನದಲ್ಲಿ ಪಡೆಯುತ್ತಾರೆ. ಸುಖಕ್ಕೆ ಯಾವತ್ತೂ ಕೊರತೆಯಾಗದು. ಮಕ್ಕಳು ಹೆಮ್ಮೆ ತರುತ್ತಾರೆ. ಜೀವನದಲ್ಲಿ ದುಃಖವು ದೂರವಾಗುತ್ತದೆ. ಧನು, ಮೀನ, ಮಕರ, ವೃಷಭ, ಕನ್ಯಾ ರಾಶಿಯವರು ಈ ವ್ರತವನ್ನು ಮಾಡುವುದು ಶ್ರೇಯಸ್ಕರ.

 

ಮದ್ವೆಯಲ್ಲಿಯೇ ನೆರೆದವರ ಮುಂದೆ ಶಿವ ದಿಗಂಬರನಾಗಿದ್ದು ಹೇಗೆ?

 

ಶಿವದೇಗುಲಗಳ ಭೇಟಿ

ಮನೆಯಲ್ಲಿ ಪೂಜೆ ಮಾಡುವ ಸೌಲಭ್ಯ ಇಲ್ಲದವರು ಈಶ್ವರನ ದೇವಾಲಯಗಳಿಗೆ ಭೇಟಿ ನೀಡಬಹುದು. ಆದರೆ ಉಪವಾಸ ಹಾಗೂ ಜಾಗರಣೆ ವ್ರತಗಳನ್ನು ಪಾಲಿಸಬೇಕು. ಯಾವುದೇ ಅಶುಚಿಯಾದ ಆಹಾರವನ್ನು ಸ್ವೀಕರಿಸತಕ್ಕದ್ದಲ್ಲ. ರಾತ್ರಿ ಶುಭ್ರವಾದ ಬಿಳಿಯ ವಸ್ತ್ರವನ್ನು ಧರಿಸಿ, ಈಶ್ವರನ ದೇವಾಲಯವನ್ನು ಪ್ರವೇಶಿಸಿ, ಶಿವನ ದರ್ಶನ ಮಾಡಿ, ಅಲ್ಲಿ ಧ್ಯಾನದಲ್ಲಿ ನಿರತರಾಗಬಹುದು. ತುಂಬಾ ಜನಜಂಗುಳಿಯಿದ್ದು ಧ್ಯಾನವು ಸಾಧ್ಯವಾಗಲಿಲ್ಲ ಎಂದಾದರೆ, ಐದು ವಿವಿಧ ಶಿವ ದೇವಾಲಯಗಳಿಗೆ ಭೇಟಿ ಕೊಡಬಹುದು. ಇದೂ ಸಾಧ್ಯವಾಗದಿದ್ದರೆ, ಒಮ್ಮೆ ಶಿವ ದರ್ಶನವನ್ನು ಪಡೆದು, ಬೇರ್ಯಾವುದಾದರೂ ಪ್ರಶಾಂತವಾದ ಸ್ಥಳದಲ್ಲಿ ಪದ್ಮಾಸನದಲ್ಲಿ ಕುಳಿತು ಕೈಲಾಸನಾಥನ ಧ್ಯಾನವನ್ನು ಶಿವಪಂಚಾಕ್ಷರಿಯ ಮೂಲಕ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ವೃತ್ತಿಜೀವನ ಹಾಗೂ ಕುಟುಂಬ ಜೀವನದಲ್ಲಿ ಸದಾ ಶ್ರೇಯಸ್ಸನ್ನು ಕಾಣಬಹುದು. ಬಂಧುಗಳು ಹಾಗೂ ಸಹೋದ್ಯೋಗಿಗಳು ಸದಾ ನಿಮ್ಮನ್ನು ಆದರಿಸುತ್ತಾರೆ. ಕಷ್ಟಗಳು ಶಿವಕರುಣೆಯಿಂದ ದೂರವೇ ಉಳಿಯುತ್ತವೆ. ಅವಿವಾಹಿತರಿಗೆ ಲಗ್ನದ ಭಾಗ್ಯ ಲಭ್ಯವಾಗುತ್ತದೆ. ಯಾವುದೇ ರಾಶಿಯವರು ಇದನ್ನು ಮಾಡಬಹುದು.

 

ನರಮಾಂಸ ತಿನ್ನು ಅಘೋರಿಗಳು ಇನ್ನೂ ಇದ್ದಾರಾ?

 

ಉಪವಾಸ, ಜಾಗರಣೆ

ಬೇರ್ಯಾವುದೇ ಪೂಜೆ ಸಾಧ್ಯವಿಲ್ಲದವರು ಕನಿಷ್ಠ ಅಂದು ಉಪವಾಸ ಹಾಗೂ ಜಾಗರಣೆಯನ್ನಾದರೂ ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಶುಚಿರ್ಭೂತರಾಗಿ, ಮನಸ್ಸಿನಲ್ಲೇ ಶಿವದೇವರನ್ನು ಆವಾಹಿಸಿಕೊಂಡು, ಉಪವಾಸ ಹಾಗೂ ಜಾಗರಣೆಯ ಸಂಕಲ್ಪ ಮಾಡಬೇಕು. ಅಂದು ತೊಟ್ಟು ನೀರನ್ನೂ ಸೇವಿಸಬಾರದು. ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಮಕ್ಕಳು, ವೃದ್ಧರು ಇದನ್ನು ಮಾಡತಕ್ಕದ್ದಲ್ಲ. ಜಾಗರಣೆಯ ಸಂದರ್ಭದಲ್ಲಿ ಶಿವಧ್ಯಾನ ಮಾಡಬೇಕು ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಗ್ನರಾಗಿ ಬೆಳಕು ಮಾಡಬಹುದು. ಹೀಗೆ ವ್ರತನಿರತರಾದವರಿಗೆ ಶಿವನು ಮಂಗಳದ ಮಳೆ ಕರೆಯುವನು. ನಿರುದ್ಯೋಗಿಗಳಿಗೆ ಉದ್ಯೋಗ, ಅವಿವಾಹಿತರಿಗೆ ಕಂಕಣಭಾಗ್ಯ, ಮನೆಯಿಲ್ಲದವರಿಗೆ ಮನೆ, ದರಿದ್ರರಿಗೆ ಸಂಪತ್ತು ಪ್ರಾಪ್ತವಾಗುವಂತೆ ಆಶೀರ್ವದಿಸುತ್ತಾನೆ. ಯಾವುದೇ ರಾಶಿಯವರು ಈ ವ್ರತವನ್ನು ಮಾಡಬಹುದು.