ವರಮಹಾಲಕ್ಷ್ಮಿ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ?: ವ್ರತಕ್ಕಿರುವ ಪೌರಾಣಿಕ ಹಿನ್ನೆಲೆ ಗೊತ್ತಾ?
ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿ ವ್ರತವು ಸುಮಂಗಲೆಯರಿಗೆ ಒಂದು ಮಹತ್ತ್ವದ ವ್ರತವಾಗಿದೆ. ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು, ಮನೆಯಲ್ಲಿ ಸುಖ ಹಾಗೂ ನೆಮ್ಮದಿ ನೆಲೆಸಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಪುರಾಣಗಳು ಹೇಳುತ್ತವೆ.

ವಿನೋದ ಕಾಮತ್, ಸನಾತನ ಸಂಸ್ಥೆ
ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ ಅಥವಾ ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವಾಗ ಅದು ವ್ರತವಾಗುತ್ತದೆ. ಒಟ್ಟಿಗೆ ಒಂದು ಕಡೆ ಸೇರಿ ಆಚರಿಸುವಾಗ ಅದು ಉತ್ಸವವಾಗುತ್ತದೆ. ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾವಣ ಮಾಸವು ಮಹತ್ತ್ವದ್ದಾಗಿದೆ. ಶ್ರಾವಣದಲ್ಲಿ ಬರುವಂತಹ ವರಮಹಾಲಕ್ಷ್ಮಿ ವ್ರತವು ಸುಮಂಗಲೆಯರಿಗೆ ಒಂದು ಮಹತ್ತ್ವದ ವ್ರತವಾಗಿದೆ. ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ವರಮಹಾಲಕ್ಷ್ಮಿ ವ್ರತವೂ ಒಂದು.
ವರಮಹಾಲಕ್ಷ್ಮಿ ವ್ರತದ ಹಿನ್ನೆಲೆ: ಪುರಾಣದ ಪ್ರಕಾರ ಒಮ್ಮೆ ಕೈಲಾಸದಲ್ಲಿ ಶಿವ ಪಾರ್ವತಿಯ ನಡುವೆ ಸಂವಾದ ನಡೆಯಿತಂತೆ. ಪಾರ್ವತಿ ದೇವಿಯು ಶಿವನಲ್ಲಿ ಕೇಳುತ್ತಾಳೆ- ‘ಲೋಕದಲ್ಲಿ ಯಾವ ವ್ರತದಿಂದ ಎಲ್ಲ ಕಷ್ಟಗಳು ಪರಿಹಾರವಾಗಲು ಸಾಧ್ಯವಿದೆಯೋ, ಯಾವ ವ್ರತದಿಂದ ಸರ್ವ ಸಂಪತ್ತುಗಳು ಪ್ರಾಪ್ತವಾಗಲು ಸಾಧ್ಯವಿದೆಯೋ, ಅಂತಹ ವ್ರತವೇನಾದರೂ ಇದ್ದರೆ, ಆ ವ್ರತದ ಬಗ್ಗೆ ನನಗೆ ತಿಳಿಸಿ.’ ಈ ಕೋರಿಕೆಯನ್ನು ಆಲಿಸಿದ ಶಂಕರನು ಪಾರ್ವತಿ ದೇವಿಗೆ ಮುಂದಿನ ಕಥೆಯನ್ನು ಹೇಳುತ್ತಾನೆ.
‘ಹಿಂದೊಮ್ಮೆ ಪುರಾಣ ಕಾಲದಲ್ಲಿ ಕುಂಡಿನಾಪುರ ಎಂಬ ಸಂಪದ್ಭರಿತವಾದ ಊರಿನಲ್ಲಿ ಚಾರುಮತಿ ಎಂಬ ಓರ್ವ ಬ್ರಾಹ್ಮಣ ಸ್ತ್ರೀಯು ಅವಳ ಪತಿಯೊಂದಿಗೆ ವಾಸಿಸುತ್ತಿದ್ದಳು. ಮನೆಯಲ್ಲಿ ಕಡು ಬಡತನವಿದ್ದರೂ ಚಾರುಮತಿಯು ಭಕ್ತಿಯಲ್ಲಿ ಶ್ರೀಮಂತಳಾಗಿದ್ದಳು. ಅವಳ ಅನನ್ಯ ಭಕ್ತಿಗೆ ಪ್ರಸನ್ನಳಾದ ವರಮಹಾಲಕ್ಷ್ಮಿ ದೇವಿಯು ಕನಸಿನಲ್ಲಿ ದರ್ಶನವನ್ನು ನೀಡಿ ಮುಂದಿನ ವರವನ್ನಿತ್ತಳು. ‘ಶ್ರಾವಣ ಮಾಸದ ಹುಣ್ಣಿಮೆಯ ಹತ್ತಿರದ ಶುಕ್ರವಾರದಂದು (ಅಂದರೆ 2ನೇ ಶುಕ್ರವಾರದಂದು) ಯಾರು ಈ ವ್ರತವನ್ನು ಭಕ್ತಿ ಭಾವದಿಂದ ಆಚರಿಸುತ್ತಾರೋ ಅವರು ಏನನ್ನು ಬೇಡಿದರೂ ಅವರಿಗೆ ಅದು ಪ್ರಾಪ್ತವಾಗುತ್ತದೆ. ಆ ದಿನ ಸಂಜೆ ನಾನು ಭೂಲೋಕಕ್ಕೆ ಇಳಿದು ಬರುವೆನು. ಆ ಸಮಯದಲ್ಲಿ ಯಾರು ಮನೆಯ ಬಾಗಿಲಿನಲ್ಲಿ ದೀಪ ಬೆಳಗಿಸಿ ನನ್ನನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆಯೋ ಅವರ ಮನೆಯಲ್ಲಿ ನಾನು ನೆಲೆಸಿ ಸಕಲ ಸಂಪತ್ತುಗಳನ್ನು ನೀಡುವೆನು’ ಎಂದು ಹೇಳಿ ದೇವಿ ವರಮಹಾಲಕ್ಷ್ಮಿಯು ಅದೃಶ್ಯಳಾದಳು.’
ಇದು ಮನೆಗೆ ಶ್ರೀಮಂತಿಕೆ ಬರುವ ಸಂಕೇತ; ಲಕ್ಷ್ಮಿಯ ಆಗಮನದ ಸೂಚನೆ ಹೇಗಿರುತ್ತೆ?
‘ತನಗೆ ದೇವಿ ನೀಡಿದ ದರ್ಶನದ ಬಗ್ಗೆಯೂ, ವರದ ಬಗ್ಗೆಯೂ ಚಾರುಮತಿ ಬೆಳಗಾಗುತ್ತಲೇ ಊರಿನವರೆಲ್ಲರಿಗೂ ಹೇಳುತ್ತಾಳೆ. ಇವಳ ಮಾತನ್ನು ಕೇಳಿದ ಊರಿನವರು ‘ಚಾರುಮತಿಗೆ ಭ್ರಮೆಯಾಗಿದೆ, ಬುದ್ಧಿ ಭ್ರಷ್ಟವಾಗಿದೆ’ ಎಂದು ಹೇಳಿ ಹೀಯಾಳಿಸುತ್ತಾರೆ. ಆದರೆ ಅಂದು ಶ್ರಾವಣ ಮಾಸದ ಎರಡನೇ ಶುಕ್ರವಾರವಾಗಿತ್ತು. ಚಾರುಮತಿಯು ದೇವಿಯ ಆಜ್ಞೆಯಂತೆ ಮನೆಯನ್ನು ಶುಚಿಗೊಳಿಸಿ, ದೀಪ ಬೆಳಗಿಸಿ, ಮನೆಯನ್ನು ಯಥಾಶಕ್ತಿ ದೀಪಗಳಿಂದ ಅಲಂಕರಿಸಿ ದೇವಿಯ ಆಗಮನಕ್ಕೆ ಭಕ್ತಿ ಭಾವದಿಂದ ಕಾದು ಕುಳಿತಳು. ದೇವಿಯು ಭೂಲೋಕಕ್ಕೆ ಇಳಿದಾಗ, ಇತರರ ಮನೆಯಲ್ಲಿ ಅವಳನ್ನು ಬರಮಾಡಿಕೊಳ್ಳಲು ದೀಪಗಳು ಇರಲಿಲ್ಲ. ಆದುದರಿಂದ ದೀಪಗಳಿಂದ ಝಗಮಗಿಸುವ ಭಕ್ತೆ ಚಾರುಮತಿಯ ಮನೆಗೆ ಬಂದು ದೇವಿಯು ಶಾಶ್ವತವಾಗಿ ಅಲ್ಲೇ ನೆಲೆಸುತ್ತಾಳೆ.
varalakshmi vratham 2023: ವರಮಹಾಲಕ್ಷ್ಮಿ ವ್ರತಾಚರಣೆ ವಿಧಾನ ಹೇಗಿರುತ್ತೆ?; ಸಿದ್ಧತೆ ಹೇಗೆ ಮಾಡಬೇಕು?
ದೇವಿಯ ಆಗಮನದಿಂದ ಚಾರುಮತಿಯ ಮನೆಯ ಬಡತನವೆಲ್ಲ ದೂರವಾಗಿ ಅಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುತ್ತವೆ, ಮನೆತನವು ಸಂಪದ್ಭರಿತವಾಗುತ್ತದೆ. ಚಾರುಮತಿಯ ಮೇಲಾದ ದೇವಿಯ ಕೃಪೆಯನ್ನು ಕಂಡ ಊರಿನ ಇತರ ಸುಮಂಗಲೆಯರೂ ಕೂಡ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ ಇಷ್ಟಾರ್ಥ ಸಿದ್ಧಿಗಳನ್ನು ಮಾಡಿಕೊಳ್ಳುತ್ತಾರೆ.’ ಶಿವನು ಪಾರ್ವತಿಗೆ ಹೇಳಿದ ಈ ಕತೆಯೇ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ. ಈ ಕತೆಯನ್ನು ಕೇಳಿದ ಆಸ್ತಿಕರು, ಇಂದಿಗೂ ವರಮಹಾಲಕ್ಷ್ಮಿ ಹಬ್ಬವನ್ನು ಅಥವಾ ವ್ರತವನ್ನು ಯಥಾಶಕ್ತಿ ಆಚರಿಸುತ್ತಾ ಬಂದಿದ್ದಾರೆ. ಈ ಹಬ್ಬವನ್ನು ಆಚರಿಸುವವರ ಮನೆಯ ಮೇಲೆ ಮಹಾಲಕ್ಷ್ಮಿಯ ಕೃಪೆಯಿರುತ್ತದೆ ಎಂದು ನಂಬಲಾಗಿದೆ.