Asianet Suvarna News Asianet Suvarna News

Holi 2023: ರತಿ-ಮನ್ಮಥರನ್ನು ನಗಿಸಿ 4 ಲಕ್ಷ ರೂ. ಗೆಲ್ಲಿ!

ಕಾಮಣ್ಣ ಸ್ವಲ್ಪ ನಕ್ಕರ ನಗಪಾ, ಏನ ಚಿಂತಿ ಐತಿ ನಿನಗ? ಎಂಎಲ್‌ಎ ಟಿಕೆಟ್‌ ಚಿಂತಿ ಐತ್ಯೇನ್‌? ಯಾವ ಪಕ್ಷದ ಟಿಕೆಟ್‌ ಬೇಕ್‌ ಹೇಳ್‌, ಬೇಕಾದ್ರ ಎಲ್ಲಾರನ್ನೂ ಬಿಟ್ಟು ನೀನಗ್‌ ಹೇಳಿ ಕೊಡಸೂನಂತ!

Holi festivals  4 Lakhs win make Rati-Manmatha smile at haveri rav
Author
First Published Mar 6, 2023, 10:13 AM IST | Last Updated Mar 6, 2023, 10:13 AM IST

ಬಸವರಾಜ ಸರೂರ

ರಾಣಿಬೆನ್ನೂರು (ಮಾ.6) : ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 65 ವರ್ಷಗಳಿಂದ ಜೀವಂತ ರತಿ-ಮನ್ಮಥರನ್ನು ನಗಿಸುವ ಕಾರ್ಯಕ್ರಮ ಏರ್ಪಡಿಸುತ್ತಾ ಬಂದರೂ ಈ ವರೆಗೂ ಯಾರು ಯಶಸ್ವಿಯಾಗಿಲ್ಲ. ಈ ಬಾರಿ ಮಾ. 7ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜೀವಂತ ರತಿ ಮನ್ಮಥರನ್ನು ಕುಳ್ಳರಿಸಲಾಗುತ್ತದೆ.

ಕಸರತ್ತು:

ರತಿ-ಮನ್ಮಥ(Rati-Manmatha)ರನ್ನು ನಗಿಸಲು ಜನರು ಮಾಡುವ ಕಸರತ್ತುಗಳು ವೈವಿಧ್ಯಮಯವಾಗಿರುತ್ತದೆ. ಆದರೆ ನಗಿಸಲು ಸಾಧ್ಯವಾಗುತ್ತಿಲ್ಲ. ಕಾಮಣ್ಣ ಸ್ವಲ್ಪ ನಕ್ಕರ ನಗಪಾ, ಏನ ಚಿಂತಿ ಐತಿ ನಿನಗ? ಎಂಎಲ್‌ಎ ಟಿಕೆಟ್‌ ಚಿಂತಿ ಐತ್ಯೇನ್‌? ಯಾವ ಪಕ್ಷದ ಟಿಕೆಟ್‌ ಬೇಕ್‌ ಹೇಳ್‌, ಬೇಕಾದ್ರ ಎಲ್ಲಾರನ್ನೂ ಬಿಟ್ಟು ನೀನಗ್‌ ಹೇಳಿ ಕೊಡಸೂನಂತ!

Holi 2023: ಹಬ್ಬದಲ್ಲಿ ಈ ಬಣ್ಣಗಳನ್ನು ನೀವು ಬಳಸಲೇಬೇಕು, ಏಕೆ ಗೊತ್ತಾ?

ಯವ್ವಾ ರತಿದೇವಿ ನೀನರ್‌ ಸ್ವಲ್ಪ ನಕ್ಕರ ನಗು, ಬಹುಮಾನದ ಹಣ ಪೂರಾ ನಿಮಗೆ ಕೊಡ್ತೇವಿ? ಸುಮ್ನಾ ಗಂಟು ಮಾರಿ ಹಾಕ್ಕೊಂಡ ಯಾಕ್‌ ಕುಂದರಿತಿ? ಕಾಮ ಮುತ್ತು ಕೊಡಬೇಕಾರ ಅವನ ಮೀಸಿ ನಿನಗ್‌ ಚುಚ್ಚಾಗಿಂಗಲ್ಲೇನ್‌? ಹನಿಮೂನ್‌ಗೆ ಸವಾರಿ ಎಲ್ಲಿಗೆ? ಎಂಬ ವೈವಿಧ್ಯಮಯ ಮಾತುಗಳು ಇಲ್ಲಿಗೆ ಆಗಮಿಸುವ ಜನರಿಂದ ಕೇಳಿ ಬರುತ್ತವೆ.

ಹಾಗೆ ಉಳಿಯುತ್ತಿರುವ ಬಹುಮಾನ:

ನಗಿಸಿದವರಿಗೆ ವಿವಿಧ ಸಂಘ-ಸಂಸ್ಥೆಗಳು ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡುವುದಾಗಿ ತಿಳಿಸಿದರೂ ಕಳೆದ 65 ವರ್ಷಗಳಿಂದ ಯಾರೊಬ್ಬರೂ ಜೀವಂತ ರತಿ ಕಾಮಣ್ಣರನ್ನು ನಗಿಸಿದ ಉದಾಹರಣೆಗಳಿಲ್ಲ. (ಈ ಬಾರಿ ಬಹುಮಾನದ ಮೊತ್ತ . 4 ಲಕ್ಷ. ಕೊಟ್ರೇಶ ಕೆಂಚಪ್ಪನವರ, ಅನಿಲ ಸಿದ್ದಾಳಿ, ಬಸವರಾಜ ರೊಡ್ಡನವರ ಹಾಗೂ ಅಜ್ಜಪ್ಪ ಜಂಬಗಿ ತಲಾ . 1 ಲಕ್ಷ ) ನಿಜಕ್ಕೂ ಇದೊಂದು ದಾಖಲೆಯಾಗಿ ಮುಂದುವರಿದಿದೆ. ಇದರ ಮರ್ಮವನ್ನು ಅರಿಯಲು ಸ್ಥಳೀಯ ಜನತೆ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟುಜನ ಇಲ್ಲಿಗೆ ಆಗಮಿಸಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ.

ನಗೆಪಾಟಲಿಗೆ ಈಡಾಗುವ ಜನತೆ:

ರತಿ ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿಗೆ ಬರುವ ಜನ ತಾವೇ ನಗೆಪಾಟಲಿಗಿಡಾಗುವ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. ವಯಸ್ಸು ಹಾಗೂ ಲಿಂಗ ಭೇದವಿಲ್ಲದೆ ಅನೇಕರು ವಿಚಿತ್ರ ಹಾವಭಾವ ಕೂಡ ಪ್ರದರ್ಶಿಸುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಬಹುಮಾನ ಗೆಲ್ಲಲು ಪ್ರಯತ್ನ ಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಕೆಲವರು ರಿಮಿಕ್ಸ್‌ ಮಾಡಿದ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ನಗಿಸಲು ಪ್ರಯತ್ನಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಏಕೆಂದರೆ ರತಿ ಮನ್ಮಥರು ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಪರಕಾಯ ಪ್ರವೇಶ ಮಾಡಿದಂತೆ ತಮ್ಮ ಪಾಡಿಗೆ ತಾವು ತದೇಕಚಿತ್ತದಿಂದ ಗಂಭೀರವದನರಾಗಿ ಕುಳಿತುಕೊಂಡಿರುತ್ತಾರೆ.

ಜಾತ್ರೆಯ ಅನುಭವ:

ವಿವಿಧ ಪ್ರದೇಶಗಳ ಯುವಕರು ಹಲಗೆ ಬಾರಿಸುತ್ತ ಇಲ್ಲಿಗೆ ಬಂದು ಹೋಗುವುದನ್ನು ಕಂಡರೆ ಇಲ್ಲಿ ಒಂದು ಜಾತ್ರೆ ನಡೆದಿದೆಯೇನೋ ಎಂದೆನೆಸುತ್ತದೆ. ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿಯಾದ ಪೊಲೀಸ್‌ ಬಂದೋಬಸ್‌್ತ ಮಾಡಲಾಗುತ್ತದೆ.

ಅಚ್ಚರಿಯ ಸಂಗತಿ:

ಕಳೆದ 24 ವರ್ಷಗಳಿಂದ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ 33 ವರ್ಷಗಳಿಂದ ರತಿ ವೇಷವನ್ನು ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟುಹಾಸ್ಯಪ್ರಜ್ಞೆ ಹೊಂದಿದ್ದು ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ನಗೆಯ ಲವಲೇಶವೂ ತಮ್ಮ ಹತ್ತಿರ ಸುಳಿಯದಂತೆ ಕುಳಿತುಕೊಳ್ಳುವ ರೀತಿ ಸಾರ್ವಜನಿಕರಿಗೆ ಕುತೂಹಲದ ಜತೆಗೆ ಅಚ್ಚರಿ ಉಂಟು ಮಾಡುತ್ತದೆ. ಇದರ ನಿಗೂಢತೆ ರಹಸ್ಯವಾಗಿಯೇ ಉಳಿದಿದ್ದು ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳಿಗಿದೆ ಧನವೃಷ್ಟಿ..

ಈ ಬಾರಿ ವಿಶೇಷ ಅತಿಥಿ:

ಈ ವರ್ಷದ ಜೀವಂತ ರತಿ ಮನ್ಮಥರ ಪ್ರದರ್ಶನ ವೀಕ್ಷಿಸಲು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ದಾವಣಗೆರೆ ಡಿಐಜಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ಬನ್ನಿ ನೀವು ಪ್ರಯತ್ನಿಸಿ:

ನೀವೇಕೆ ಮಾ. 8ರಂದು ರಾಣಿಬೆನ್ನೂರಿಗೆ ಆಗಮಿಸಿ ರತಿ-ಮನ್ಮಥರನ್ನು ನಗಿಸಿ ಬಹುಮಾನ ನಿಮ್ಮದಾಗಿಸಿಕೊಳ್ಳಬಾರದು!

Latest Videos
Follow Us:
Download App:
  • android
  • ios