Asianet Suvarna News Asianet Suvarna News

ಬೆಣ್ಣೆನಗರಿ ದಾವಣಗೆರೆಯಲ್ಲಿ ಅದ್ದೂರಿ ಹಿಂದೂ ಮಹಾ ಗಣಪತಿ ಮೆರವಣಿಗೆ

ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, 25ನೇ ದಿನವಾದ ಶನಿವಾರ ವಿಸರ್ಜನಾ ಕಾರ್ಯಕ್ರಮ ಬೃಹತ್ ಶೋಭಾ ಯಾತ್ರೆ ಸಹಸ್ರ ಸಹಸ್ರ ಸಂಖ್ಯೆಯ ಜನರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. 

hindu maha ganapati procession in davanagere gvd
Author
First Published Sep 25, 2022, 2:00 AM IST

ವರದಿ: ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ 

ದಾವಣಗೆರೆ (ಸೆ.25): ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, 25ನೇ ದಿನವಾದ ಶನಿವಾರ ವಿಸರ್ಜನಾ ಕಾರ್ಯಕ್ರಮ ಬೃಹತ್ ಶೋಭಾ ಯಾತ್ರೆ ಸಹಸ್ರ ಸಹಸ್ರ ಸಂಖ್ಯೆಯ ಜನರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮುಂಜಾನೆ  ಗಣೇಶ ಮೂರ್ತಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳು ದರ್ಶನ ಪಡೆದರು. ಬೆಳಿಗ್ಗೆ 11 ಗಂಟೆ ವೇಳೆಗೆ ಶಾಸಕ ಎಸ್.ಎ.ರವೀಂದ್ರನಾಥ ಶೋಭಾಯಾತ್ರೆ  ಮೆರವಣಿಗೆಗೆ ಚಾಲನೆ ನೀಡಿದರು. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ ಟ್ರಾಕ್ಟರ್  ಚಲಾಯಿಸಿದರು. ನಗರದ ಹೈಸ್ಕೂಲ್ ಮೈದಾನ ಒಂದು ರೀತಿಯ ಜಾತ್ರೆಯಂತೆ ಕಂಗೊಳಿಸುತ್ತಿತ್ತು. 

ವಿವಿಧ ರೀತಿಯ ಗೊಂಬೆಗಳ ಮುಖವಾಡಗಳು, ಕೇಸರಿ ವಸ್ತ್ರ ಶಾಲು, ಪೇಟಗಳು ಮಾರಾಟ ಮಾಡಲಾಗುತ್ತಿತ್ತು. ಈ ಮೇಳದಲ್ಲಿ ಜನಪದ ತಂಡಗಳಿಗಿಂತ ಹೆಚ್ಚಾಗಿ ವಿಶೇಷವಾದ ಡಿಜೆ ಸೆಟ್‌ಗಳು ಶಬ್ಧ ಮಾಡಿದವು. ಬೆಳಗಾವಿಯಿಂದ ಬಂದಂತಹ ಡಿಜೆ ಕ್ರೇನ್‌ನಲ್ಲಿ ತರಲಾಗಿದ್ದು, ಬಹಳಷ್ಟು ಜೋರಾದ ಶಬ್ಧ ಹೊಂದಿದ್ದು, ಅದರಲ್ಲಿ ಕ್ಯಾಮರಾ, ಎಲ್‌ಇಡಿ ಟಿವಿ, ವಿವಿಧ ಬಗೆಯ ಪೋಕಸ್  ಲೈಟುಗಳನ್ನು ಹೊಂದಿತ್ತು. ಇನ್ನುಳಿದ ನಾಲ್ಕು ಡಿಜೆಗಳೂ ಸಹ ಹೆಚ್ಚು ಶಬ್ದ ಮಾಡುತ್ತಿದ್ದವು. ಒಂದು ಡಿಜೆಯಲ್ಲಿ ಮಹಿಳೆಯರಿಗೆ ಮಾತ್ರ ಕುಣಿಯಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಹಾಸ್ಟಲ್ ವಿದ್ಯಾರ್ಥಿನಿಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು, ಹೊರ ಊರುಗಳಿಂದ ಬಂದಂತಹ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು.

‘ಪೇ ಸಿಎಂ’ ಮೂಲಕ ಜನತೆಗೆ ಸರ್ಕಾರದ ಭ್ರಷ್ಟಾಚಾರ ಗೊತ್ತಾಗಲಿ: ಯತೀಂದ್ರ

ಯುವತಿಯರು ಸಹಾ ಕೇಸರಿ ಶಾಲು, ಪೇಟ ಧರಿಸಿ ಹೆಜ್ಜೆ ಹಾಕಿದರು. ಪುನಿತ್ ಭಾವಚಿತ್ರ, ಸಾವರ್ಕರ್ ಭಾವಚಿತ್ರಗಳು ಯುವತಿಯರ ಕೈಯಲ್ಲಿ ರಾರಾಜಿಸಿದವು. ಬೃಹತ್ ಜನಸ್ತೋಮ‌ ಮೆರವಣಿಗೆಯನ್ನು ಎರಡು ಡ್ರೋಣ್ ಕ್ಯಾಮರ ಚಿತ್ರೀಕರಣ ಮಾಡುತ್ತಿದ್ದವು. ಜರೀಕಟ್ಟೆಯ ಗೆಳೆಯರ ಬಳಗದಿಂದ ಡಿಜೆ ಹಾಗೂ ಪುನೀತ್ ರಾಜಕುಮಾರ ಭಾವಚಿತ್ರದ ಟ್ರಾಕ್ಟರ್  ತಂದಿದ್ದರು. ಗಣೇಶ ಮೂರ್ತಿ ವಿಸರ್ಜನೆಗೆ ತೆರಳುವ ರಸ್ತೆಯಲ್ಲಿನ ಕೆಲವೆಡೆ ಅಂಗಡಿಗಳು ಸ್ವಯಂ ಪ್ರೇರಿತರಾಗಿ ಮುಚ್ಚಲ್ಪಟ್ಟಿದ್ದವು. ಹಿಂದೂ ಮಹಾ ಸಭಾದಿಂದ ಪ್ರತಿಷ್ಠಾಪಿಸಲಾಗಿದ್ದ ಈ ಗಣೇಶ ಪೆಂಡಾಲ್‌ನಲ್ಲಿ ಪ್ರತಿದಿನ ಗಣೇಶನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

ಪ್ರತಿದಿನ ಸಂಜೆ ರಸಮಂಜರಿ ಕಾರ್ಯಕ್ರಮ, ಜಾದು ಚಿತ್ರಕಲಾ ಸ್ಪರ್ಧೆ, ಯಕ್ಷಗಾನ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚಲನಚಿತ್ರ ನಟ ನಟಿಯರು, ಹಿರಿಯ ರಾಜಕಾರಣಿಗಳು ಬಂದು ಗಣೇಶನ ದರ್ಶನ ಪಡೆದಿದ್ದರು. ಈ ಶೋಭಾ ಯಾತ್ರೆಯಲ್ಲಿ ಪುನೀತ್ ರಾಜಕುಮಾರ, ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಹಾಗೂ ನಮ್ಮ ದಾವಣಗೆರೆಯ ಬಿ.ಜೆ.ಅಜಯಕುಮಾರ, ಶ್ರೀನಿವಾಸ ದಾಸಕರಿಯಪ್ಪನವರ ಭಾವಚಿತ್ರ ಹೊಂದಿದ ಬಾವುಟಗಳು ಸಹಾ ರಾರಾಜಿಸಿದವು. ದಾರಿಯುದ್ದಕ್ಕೂ ರಸ್ತೆಗಳಲ್ಲಿ ಕೇಸರಿ ಬಟ್ಟೆ ರಾರಾಜಿಸುತ್ತಿದ್ದವು. ರಸ್ತೆ ಇಕ್ಕೆಲೆಗಳಲ್ಲಿ, ಮನೆ, ಕಟ್ಟಡಗಳ ಮೇಲೆ, ಕಾಂಪೌಂಡ್  ಮೇಲೆ ನಿಂತು ಜನರು ಶೋಭಾ ಯಾತ್ರೆಯನ್ನು ವೀಕ್ಷಿಸಿದರು. 

ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಬದಲಾವಣೆ ಗಾಳಿ: ಡಿ.ಕೆ.ಶಿವಕುಮಾರ್‌

ಮೆರವಣಿಗೆ ತೆರಳುವ ಮುಖ್ಯ ಮಾರ್ಗದ ತಿರುವುಗಳ ರಸ್ತೆಗಳನ್ನು ಬ್ಯಾರಿಕೇಡ್‌ನಿಂದ ಬಂದ್ ಮಾಡಿದ್ದರು. ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಮಾಡಿ ಮೆರವಣಿಗೆಗೆ ಅನುವು ಮಾಡಿಕೊಟ್ಟಿದ್ದರು. ಬೆಸ್ಕಾಂ ಸಿಬ್ಬಂದಿ ಸಹಾ ಮೆರವಣಿಗೆಯಲ್ಲಿ ವಿದ್ಯುತ್ ಜಾಗೃತಿ ಬಗ್ಗೆ ಗಮನ ಹರಿಸಿ ಮೆರವಣಿಗೆಯಲ್ಲಿ ಯಾವುದೇ ಅನಾಹುತ ಆಗದಂತೆ ಎಚ್ಚರವಹಿಸಿದ್ದರು. ವರ್ಷದಿಂದ ವರ್ಷಕ್ಕೆ ದಾವಣಗೆರೆ ಹಿಂದೂ ಮಹಾಗಣಪತಿ ಮೆರವಣಿಗೆ ಕಳೆಗಟ್ಟಿದ್ದು ಈ ಬಾರಿ  30 - 40 ಸಾವಿರ ಜನ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಪೊಲೀಸ್  ಎಚ್ಚರವಹಿಸಿದ್ದು 9.30 ರ ನಂತರ ಡಿಜೆ ಆಫ್ ಮಾಡಿ ಕುಣಿಯುವ ಉತ್ಸಾಹಕ್ಕೆ ಪೊಲೀಸರು ಬ್ರೇಕ್ ಹಾಕಿದರು.

Follow Us:
Download App:
  • android
  • ios