ಕೊಡಗು: ಅದ್ಧೂರಿ ಹನುಮಜಯಂತಿ; ಗಮನ ಸೆಳೆದ ಉತ್ಸವ
ಕೊಡಗು ಜಿಲ್ಲೆಯಲ್ಲಿ ಹನುಮ ಜಯಂತಿ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ಕುಶಾಲನಗರದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಿಂದ ಅದ್ದೂರಿಯಾಗಿ 37ನೇ ವರ್ಷದ ಹನುಮ ಜಯಂತಿಯನ್ನು ಆಚರಿಸಲಾಯಿತು.
ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.6) : ಕೊಡಗು ಜಿಲ್ಲೆಯಲ್ಲಿ ಹನುಮ ಜಯಂತಿ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ಕುಶಾಲನಗರದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಿಂದ ಅದ್ದೂರಿಯಾಗಿ 37ನೇ ವರ್ಷದ ಹನುಮ ಜಯಂತಿಯನ್ನು ಆಚರಿಸಲಾಯಿತು.
ಕುಶಾಲನಗರ ಪಟ್ಟಣದ ರಥಬೀದಿಯಲ್ಲಿರುವ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಸೋಮವಾರ ಮಧ್ಯಾಹ್ನದಿಂದಲೇ ವಿಶೇಷ ಪೂಜೆ ನಡೆದವು. ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಸಂಜೆಯಾಗುತ್ತಿದ್ದಂತೆ ಕುಶಾಲನಗರ, ಮುಳ್ಳುಸೋಗೆ, ಗುಡ್ಡೆಹೊಸೂರು ಸೇರಿದಂತೆ ವಿವಿಧ 8 ಗ್ರಾಮಗಳಿಂದ 8 ಸ್ತಬ್ಧ ಚಿತ್ರಗಳ ಮಂಟಪಗಳು ಹೊರಟು ಕುಶಾಲನಗರದ ಗಣಪತಿ ದೇವಾಲಯದ ಬಳಿ ಜಮಾವಣೆಗೊಂಡವು. ನಂತರ ಕುಶಾಲನಗರದ ಆಂಜನೇಯ ದೇವಸ್ಥಾನದ ಬಳಿಯಿಂದ ಬೈಚನಹಳ್ಳಿವರೆಗೆ ಶೋಭಾಯಾತ್ರೆ ಮೆರವಣಿಗೆ ನಡೆಯಿತು.
ಕೊಡಗಿನಲ್ಲಿ ಅನಾವರಣಗೊಂಡ ಹಾಡಿ ಸಂಸ್ಕೃತಿ, ಶ್ರೀಮಂತ ಜಾನಪದ ಕಲೆಗಳ ಅನಾವರಣ
ಅದಕ್ಕೂ ಮುನ್ನ ಬೆಳಗ್ಗೆಯಿಂದಲೇ ಆಂಜನೇಯ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ನೆರೆದಿದ್ದ ಭಕ್ತರಿಗೆ ಪಾನಕವನ್ನು ಈ ಸಂದರ್ಭ ವಿತರಿಸಲಾಯಿತು. ಇನ್ನು ಹನುಮ ಜಯಂತಿ ಹಿನ್ನೆಲೆ ಕುಶಾಲನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 600 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರ ಕಣ್ಗಾವಲು ಇತ್ತು. ಶೋಭಾಯಾತ್ರೆಯಲ್ಲಿ 12 ಸಾವಿರ ಜನರು ಭಾಗವಹಿಸಿದ್ದರು, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಇಡೀ ಪಟ್ಟಣ ಕೇಸರಿಮಯವಾಗಿದ್ದು, 8 ಮಂಟಪಗಳ ಶೋಭಾಯಾತ್ರೆಯಲ್ಲಿ ಯುವ ಸಮೂಹ ಆಂಜನೇಯನಿಗೆ ಜೈಕಾರ ಹಾಕುತ್ತಾ, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಗುಡ್ಡೆಹೊಸೂರು, ಬಸವನಹಳ್ಳಿ ಮತ್ತು ಗುಮ್ಮನಕೊಲ್ಲಿ ಸೇರಿದಂತೆ 8 ಕಡೆಗಳಿಂದ ಸ್ತಬ್ಧ ಚಿತ್ರಗಳ ದೇವರ ಮಂಟಪಗಳು ಆಗಮಿಸಿದ್ದವು. ಪ್ರತಿ ಗ್ರಾಮದಿಂದಲೂ ವಿವಿಧ ದೇವಾಸುರರ ಕಥಾಹಂದರಗಳನ್ನು ಆಧರಿಸಿದ ಮಂಟಪಗಳು ಗಮನಸೆಳೆದವು.
ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಮಂಟಪಗಳು ನೆರೆದಿದ್ದ ಭಕ್ತರನ್ನು ಭಕ್ತಿಭಾವದಲ್ಲಿ ಪರವಶಗೊಳಿಸಿದವು. ಈ ಕುರಿತು ಬಜರಂಗದಳದ ಕಾರ್ಯದರ್ಶಿ ನವನೀತ್ ಪೊನ್ನೇಟಿ ಮಾತನಾಡಿ, ಕಳೆದ 37 ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಹನುಮಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕಳೆದ ಎರಡು ವರ್ಷಗಳ ಕಾಲ ಕೋವಿಡ್ ನಿಂದಾಗಿ ಅದ್ಧೂರಿಯಾಗಿ ಹನುಮಜಯಂತಿ ಮಾಡಲಾಗಿರಲಿಲ್ಲ. ಕೇವಲ ಪೂಜೆಗಳಿಗೆ ಅಷ್ಟೇ ಸೀಮಿತವಾಗಿತ್ತು. ಈ ಬಾರಿ ದೇವರ ದಯೆಯಿಂದ ಯಾವುದೇ ಸಮಸ್ಯೆ ಇಲ್ಲ ಹೀಗಾಗಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು, ಕನಿಷ್ಠ 12 ಸಾವಿರ ಭಕ್ತರು ಸೇರಿದ್ದರು ಎಂದರು.
Hanuma Jayanthi: ನಗರದಲ್ಲಿ ಭಕ್ತಿಭಾವದಿಂದ ಹನುಮ ಜಯಂತಿ
ಕಳೆದ ಎಲ್ಲಾ ವರ್ಷಗಳಲ್ಲೂ ಕುಶಾಲನಗರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿಯೇ ಸುತ್ತಮುತ್ತಲ ಗ್ರಾಮಗಳ ಭಕ್ತರು ಆಗಮಿಸಿ ಉತ್ಸವ ಆಚರಿಸುತ್ತಿದ್ದರು. ಈ ಬಾರಿ ಪ್ರತ್ಯೇಕವಾಗಿ ಆಯಾ ಗ್ರಾಮಗಳಲ್ಲಿಯೇ ಉತ್ಸವ ಆಚರಿಸುತ್ತಿದ್ದು, ಅಲ್ಲಿಂದಲೇ ಶೋಭಾಯಾತ್ರೆ ಮಂಟಪಗಳು ಆಗಮಿಸಿದ್ದವು ಎಂದರು.