ಕೊಡಗಿನಲ್ಲಿ ಅನಾವರಣಗೊಂಡ ಹಾಡಿ ಸಂಸ್ಕೃತಿ, ಶ್ರೀಮಂತ ಜಾನಪದ ಕಲೆಗಳ ಅನಾವರಣ

ಗಿಡ, ಮರಗಳ ಸೊಪ್ಪು ಕಟ್ಟಿ ಕುಣಿಯುತ್ತಿರುವ ಜೇನುಕುರುಬರು, ಮತ್ತ್ಯಾವುದೋ ಎಲೆಗಳಿಗೆ ಬಣ್ಣ ಬಳಿದು ತಲೆಗೆ ಕಟ್ಟಿದರೆಂದರೆ ಅದೇ ಕಿರೀಟ. ಹೀಗೆ ಹಾಡಿಗಳ ನಿಜಬಣ್ಣವನ್ನೇ ಹೊದ್ದು ನೃತ್ಯ ಮಾಡುತ್ತಿದ್ದ ಪಣಿಯ, ಯರವ, ಜೇನುಕುರುಬರ ವಿವಿಧ ನ್ಲತ್ಯಗಳು ಎಲ್ಲರ ಚಿತ್ತಾಕರ್ಷಗೊಳಿಸಿ ಸೆಳೆದುಬಿಟ್ಟವು. ಇದು ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ನಡೆದ ಗಿರಿಜನ ಉತ್ಸವದ ಜಲಕ್.

Tribal hadis rich folk art program in Kodagu gow

ವರದಿ: ರವಿ. ಎಸ್ ಹಳ್ಳಿ, ಏಷ್ಯಾ ನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.3): ಕಾಡಿನ ಉತ್ಪನ್ನಗಳೇ ಇವರ ಸುಂದರ ಹುಡುಗೆ, ತೊಡುಗೆ. ನೀರಿನ ಡ್ರಮ್, ಬಿದಿರು ಬೊಂಬು, ಟಿವಿ ಆಂಟೆನಾಗಳೇ ಇವರ ಸಂಗೀತ ವಾದ್ಯ ಪರಿಕರಗಳು. ಕಂಜರ ಹಿಡಿದು ಬಡಿಯುತ್ತಾ ಹಾಡಲು ಶುರು ಮಾಡಿದರೆಂದರೆ ಇಡೀ ಸಭೆಯ ಸಭಿಕರೆಲ್ಲರೂ ಸಂಪೂರ್ಣ ತುದಿಗಾಲಿನಲ್ಲಿ ನಿಂತು ಹುಚ್ಚೆದ್ದು ಕುಣಿಯುತ್ತಿದ್ದರು. ಇಂತಹ ಅದ್ಭುತ, ಅಪ್ಪಟ್ಟ ಜಾನಪದ ಸಂಸ್ಕೃತಿ ಅನಾವರಣಗೊಂಡಿದ್ದನ್ನು ನೀವು ಕೂಡ ಕಣ್ತುಂಬಿಕೊಳ್ಳಲೇಬೇಕು. ಗಿಡ, ಮರಗಳ ಸೊಪ್ಪು ಕಟ್ಟಿ ಕುಣಿಯುತ್ತಿರುವ ಜೇನುಕುರುಬರು, ಮತ್ತ್ಯಾವುದೋ ಎಲೆಗಳಿಗೆ ಬಣ್ಣ ಬಳಿದು ತಲೆಗೆ ಕಟ್ಟಿದರೆಂದರೆ ಅದೇ ಕಿರೀಟ. ಹೀಗೆ ಹಾಡಿಗಳ ನಿಜಬಣ್ಣವನ್ನೇ ಹೊದ್ದು ನೃತ್ಯ ಮಾಡುತ್ತಿದ್ದ ಪಣಿಯ, ಯರವ, ಜೇನುಕುರುಬರ ವಿವಿಧ ನ್ಲತ್ಯಗಳು ಎಲ್ಲರ ಚಿತ್ತಾಕರ್ಷಗೊಳಿಸಿ ಸೆಳೆದುಬಿಟ್ಟವು. ಇದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಿರಿಜನ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಗಿರಿಜನ ಉತ್ಸವದ ಜಲಕ್. ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ್ ಇದ್ದ ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಚೊಟ್ಟೆಪಾರಿ ಹಾಡಿಯ ಜೆ.ಕೆ. ರಾಮು ಮತ್ತು ತಂಡ ಜೇನುಕುರುಬರ ನೃತ್ಯ ಪ್ರದರ್ಶಿಸಿದರು. ಇದಕ್ಕೂ ಮೊದಲು ರಾಮು ಅವರು ಅವರದೇ ಭಾಷೆಯಲ್ಲಿ ಹಾಡಿದ ಕಾಡು ನಮ್ಮದೆ ಗೀತೆ ಸಭಿಕರು ಹಾಡಿನುದ್ಧಕ್ಕೂ ಚಪ್ಪಾಳೆ ಬಡಿಯುತ್ತಲೇ ತಾವೂ ಧ್ವನಿಗೂಡಿಸುವಂತೆ ಮಾಡಿತು. ನಾಗರಹೊಳೆಯ ಜೆ.ಬಿ. ರಮೇಶ್ ಅವರ ತಂಡ ‘ಕುರ ಬಾವನಿಂಗೆ’ ಗೀತೆ ಹಾಡುತ್ತಾ ಪ್ರದರ್ಶಿಸಿದ ನೃತ್ಯ ಎಲ್ಲರ ಗಮನಸೆಳೆಯಿತು. ಇನ್ನು ಕುಮಾರ್ ನಾಯಕ್ ಮತ್ತು ತಂಡದವರಿಂದ ಪ್ರದರ್ಶಿಸಿದ ತಾಡಬಟ್ಲು ಕಂಸಾಳೆ ನೃತ್ಯದ ವಿವಿಧ ಕಸರತ್ತುಗಳು ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿದವು. ಈ ಕಾರ್ಯಕ್ರಮದಿಂದ ಗಿರಿಜನರ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅನುಕೂಲವಾಗಿದೆ ಎಂದು ಗಿರಿಜನ ಉತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು ಹರ್ಷ ವ್ಯಕ್ತಪಡಸಿದರು. 

ಕನ್ನಡ ಕೇವಲ ಅಕ್ಷರವಲ್ಲ ಅದು ನಮ್ಮ ಸಂಸ್ಕೃತಿ: ಬರಗೂರು ರಾಮಚಂದ್ರಪ್ಪ

ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಯುಕ್ತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಶ್ರಿಮಂತವಾದ ಗಿರಿಜನ ಸಂಸ್ಕೃತಿಯು ಮಹತ್ತರವಾದದ್ದು. ಇವರು ಕಾಡಿನ ಮಧ್ಯೆ ಬದುಕುವ ಜೊತೆಗೆ ಅರಣ್ಯವನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಂಸ್ಕೃತಿಯನ್ನು ಸಂರಕ್ಷಿಸುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

Grama Vastavya: ಗಿರಿಜನ ಹಾಡಿ ನಿವಾಸಿಗಳ ಕಷ್ಟ ಸುಖ ಆಲಿಸಿದ ಸಚಿವ ಆರ್.ಅಶೋಕ್

 

ಒಟ್ಟಿನಲ್ಲಿ ಗಿರಿಜನ ಉತ್ಸವದಲ್ಲಿ  ಕೊಡಗಿನ ವಿವಿಧ ಗಿರಿಜನ ಹಾಡಿಗಳಿಂದ ಬಂದಿದ್ದ ವಿವಿಧ ಕಲಾತಂಡಗಳು ತಮ್ಮದೇ ಸಂಸ್ಕೃತಿಯ ವಿವಿಧ ಗೀತೆ ನೃತ್ಯಗಳನ್ನು ಮಾಡಿ ಎಲ್ಲರ ಗಮನ ಸೆಳೆದವು.

Latest Videos
Follow Us:
Download App:
  • android
  • ios