Bengaluru: ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ಮತ್ತು ದೀಪಾವಳಿಯ ಸಂಭ್ರಮ
ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಬುಧವಾರದಂದು ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು. ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದು ಮಥುರಾ ನಿವಾಸಿಗಳನ್ನು ಭಯಂಕರ ಮಳೆಯಿಂದ ರಕ್ಷಿಸಿದ ಸ್ಮರಣಾರ್ಥವಾಗಿ ಈ ಗೋವರ್ಧನ ಪೂಜೆ ಆಚರಿಸಲಾಯಿತು.
ಬೆಂಗಳೂರು (ಅ.26): ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಬುಧವಾರದಂದು ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು. ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದು ಮಥುರಾ ನಿವಾಸಿಗಳನ್ನು ಭಯಂಕರ ಮಳೆಯಿಂದ ರಕ್ಷಿಸಿದ ಸ್ಮರಣಾರ್ಥವಾಗಿ ಈ ಗೋವರ್ಧನ ಪೂಜೆ ಆಚರಿಸಲಾಯಿತು. ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಶ್ರೀಕೃಷ್ಣ ಮತ್ತು ಬಲರಾಮ ದೇವರಿಗೆ ಗಿರಿಧಾರಿ ಅಲಂಕಾರ ಮತ್ತು ರಾಧಾಕೃಷ್ಣ ಉತ್ಸವ ಮೂರ್ತಿಗೆ ಶ್ರೀರಾಧಾಗಿರಿಧಾರಿಯಾಗಿ ಅಲಂಕರಿಸಲಾಯಿತು.
ಇಡೀ ದೇವಸ್ಥಾನವು ತಳಿರು ತೋರಣ ಮತ್ತು ಹೂವಿನ ಮಾಲೆಯಿಂದ ದೀಪಾಲಂಕಾರ ಮಾಡಿ ಸಿಂಗರಿಸಲಾಗಿತ್ತು. ಗೋವರ್ಧನ ಗಿರಿ ಪೂಜೆ ಜೊತೆಗೆ ಗೋವುಗಳಿಗೆ ವಿಶೇಷ ಪೂಜೆ, ನೈವೇದ್ಯ ಮತ್ತು ಗೊಗ್ರಾಸವನ್ನು ಸಮರ್ಪಿಸಲಾಯಿತು. ಭಕ್ತರು ಮಧ್ಯಾಹ್ನದವರೆಗೆ ಶ್ರೀಕೃಷ್ಣನ ಲೀಲೆಗಳನ್ನು ಹೇಳುವ ಸಂಗೀತೋತ್ಸವ ನಡೆಸಿಕೊಟ್ಟರು. ಇಸ್ಕಾನ್ ಬಯಲು ರಂಗ ಸಭಾಂಗಣದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀ ಮಧು ಪಂಡಿತದಾಸ ಅವರು ಗೋವರ್ಧನ ಪೂಜೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
Sri Radhastami: ಇಸ್ಕಾನ್ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ರಾಧಾಷ್ಟಮಿ ಉತ್ಸವ
ಗೋವರ್ಧನ ಗಿರಿ ಮಾದರಿ ಕೇಕ್: ಉತ್ತರ ಪ್ರದೇಶದ ಮಥುರ ಜಿಲ್ಲೆಯ ಗೋವರ್ಧನ ಬೆಟ್ಟದ ಆಕೃತಿಯನ್ನು ಹೋಲುವ ಒಂದು ಸಾವಿರ ಕೆಜಿ ಸಸ್ಯಹಾರಿ ಕೇಕಿನಿಂದ ಗಿರಿಯನ್ನು ತಯಾರಿಸಲಾಯಿತು. ಜಾಮೂನು, ರಸಗುಲ್ಲ, ಬರ್ಫಿ, ಲಡ್ಡು, ಪೇಡಾ, ಚಕ್ಕುಲಿ, ನಿಪ್ಪಟ್ಟು ಸೇರಿ ವಿವಿಧ ಬಗೆಯ 56 (ಛಪ್ಪನ್ ಭೋಗ) ತಿಂಡಿಗಳನ್ನು ಕೃಷ್ಣನಿಗೆ ಸಮರ್ಪಿಸಲಾಯಿತು. ನಂತರ ದೇವಸ್ಥಾನಕ್ಕೆ ಬಂದ ಭಕ್ತಾಧಿಗಳು ರಾಧಾಕೃಷ್ಣಚಂದ್ರರಿಗೆ ತುಪ್ಪದ ದೀಪದಿಂದ ಆರತಿಯನ್ನು ಸಮರ್ಪಿಸಿದರು. ನಂತರ ಮಹಾಮಂಗಳಾರತಿ, ಶಯನ ಪಲ್ಲಕ್ಕಿ ಮತ್ತು ಶಯನ ಉತ್ಸವಗಳಿಂದ ಪೂರ್ಣಗೊಂಡಿತು. ಕೃಷ್ಣನ ಎಲ್ಲಾ ಬಗೆಬಗೆಯ ನೈವೇದ್ಯವನ್ನು ಭಕ್ತಾಧಿಗಳಿಗೆ ಹಂಚಲಾಯಿತು.