Asianet Suvarna News Asianet Suvarna News

ಮಂಡ್ಯದಲ್ಲಿ ವೈಭವದ ಜಾನಪದ ಲೋಕ ಅನಾವರಣ

ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಜಾನಪದ ಪರಿಷತ್ತು ಹಾಗೂ ಜಿಲ್ಲಾಡಳಿತ ವತಿಯಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

Glorious folk world unveiling in Mandya gvd
Author
First Published Dec 10, 2022, 12:26 PM IST

ಮಂಡ್ಯ (ಡಿ.10): ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಜಾನಪದ ಪರಿಷತ್ತು ಹಾಗೂ ಜಿಲ್ಲಾಡಳಿತ ವತಿಯಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಡಾ.ರಾಮೇಗೌಡ (ರಾಗೌ)ರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಸ್ವಾಮೀಜಿ ಮಾತನಾಡಿ, ಆಧುನಿಕ ಪ್ರಗತಿಯ ದುರಂತಗಳನ್ನು ತಪ್ಪಿಸಲು ಜಾನಪದದ ಕಡೆಗೆ ಹೋದಾಗ ಮಾತ್ರ ನಭೋಮಂಡಲ ಉಳಿಸಲು ಸಾಧ್ಯ. 

ನೆಲಮೂಲ ಸಂಸ್ಕೃತಿಯನ್ನು ಬಿಟ್ಟು ಮನುಷ್ಯ ಬದುಕಲಾರ. ಭೂಮಿಯಿಂದ ಜನಪದ ಬೇರುಗಳು ಕಿತ್ತು ಬಂದರೆ ಏನೂ ಪ್ರಯೋಜನವಿಲ್ಲ. ಮನುಷ್ಯನ ಜ್ಞಾನದಿಂದಾಗಿ ತಾಂತ್ರಿಕತೆ ಬೆಳೆದಿದೆ. ಆದರೆ, ಅದು ವಿಕೋಪಕ್ಕೆ ತಿರುಗಿ ಯುದ್ಧದಂತಹ ವಿಪ್ಲವಗಳು ನಡೆದಲ್ಲಿ ಇಡೀ ಭೂಮಿಯೇ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಹಿರಿಯ ಐಎಎಸ್‌ ಅಧಿಕಾರಿ ಡಾ.ಎಚ್‌.ಎಲ್‌.ನಾಗೇಗೌಡ ಹಾಗೂ ಇತರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

Mandya : 9, 10ರಂದು ಕರ್ನಾಟಕ ಜಾನಪದ ಸಮ್ಮೇಳನ

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರಾದ ಡಾ.ರಾಮೇಗೌಡ (ರಾಗೌ) ಅವರನ್ನು ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಅಲಂಕೃತ ರಥದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮಾರ್ಗವಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನಕ್ಕೆ ಆಗಮಿಸಿತು. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಕಲಾವಿದರ ತಂಡಗಳು ಇದರಲ್ಲಿ ಪಾಲ್ಗೊಂಡಿದ್ದವು. ಜನಪದ ಜಾತ್ರೆಯಲ್ಲಿ ದೇಶಿ ಜಾನಪದ ಕಲೆಗಳು ಸುಂದರವಾಗಿ ಅನಾವರಣಗೊಂಡವು. ಜಾನಪದ ಕಲಾತಂಡಗಳ ಮೆರವಣಿಗೆ ಅಕ್ಷರಶ: ಜನಪದ ಜಾತ್ರೆಯಂತಿತ್ತು. ಜನಪದರ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.

ಜಾನಪದ ಕಲಾತಂಡಗಳ ಮೆರಗು: ಮಂಡ್ಯದ ಪ್ರಮುಖ ಆಕರ್ಷಣೆಯಾದ ಪೂಜಾ ಕುಣಿತ, ಡೊಳ್ಳು ಕುಣಿತ ಗಮನ ಸೆಳೆಯಿತು. ಉಳಿದಂತೆ ಗೊರವರ ಕುಣಿತ, ಗೊರುಕಾನ ನೃತ್ಯ, ಚಿಟ್‌ಮೇಳ, ಕೋಲಾಟ, ಜಗ್ಗಲಿಗೆ ಮೇಳ, ಎಂ.ನಗಾರಿ, ಸುಗ್ಗಿ ಕುಣಿತ, ಹಗಲುವೇಷ, ಕೊರಣಿಗೆ ಭಾವನೃತ್ಯ, ಪುರುವಂತಿಕೆ ಮೇಳ, ಗೊಂದಲಿಗರ ಮೇಳ, ಹೆಜ್ಜೆಮೇಳ, ಕಂಸಾಳೆ, ಪೂಜಾಕುಣಿತ, ವೀರಭದ್ರನ ಕುಣಿತ, ಸೂತ್ರದ ಗೊಂಬೆ, ಗಾರುಡಿಗೊಂಬೆಗಳು ಗಮನ ಸೆಳೆದವು. ವೀರಗಾಸೆ ಮೂಲಕ ಪುರವಂತರ ರೋಷಾವೇಶ, ಲಂಬಾನಿ ಮಹಿಳೆಯರ ವಿಶಿಷ್ಟಹಾಡು ಕುಣಿತ, ಕೋಲಾಟ ಹಾಗೂ ಸೋಮನ ಕುಣಿತಗಳು ಮುದ ನೀಡಿದವು. ಕಹಳೆ, ಕಂಸಾಳೆ, ಜಗ್ಗಲಿಗೆ, ಡೊಳ್ಳು, ನಗಾರಿ, ತಮಟೆ, ಡೋಲು, ಕರಡಿ ಮಜಲು, ಚೌಡಿಕೆಗಳ ನಾದ ಅನುರಣಿಸಿದವು. ಗೀಗೀ ನೀಲಗಾರರ ಪದಗಳು ಮತ್ತು ಸೋಬಾನೆ ಪದಗಳು ಹೊಸ ಲೋಕವನ್ನೆ ಸೃಷ್ಟಿಸಿದ್ದವು.

Mandya: ಮೂಲ ಸೌಲಭ್ಯವಿಲ್ಲದ ಮಂಡ್ಯ ವಿಶ್ವವಿದ್ಯಾನಿಲಯ

ಮುದ್ದೆ, ಅವರೆಕಾಳು ಗೊಜ್ಜು ಸವಿದ ಕಲಾವಿದರು: ಅಪ್ಪಟ ಜಾನಪದ ಶೈಲಿಯಲ್ಲೇ ಅಡುಗೆ ತಯಾರಿಸಲಾಗಿತ್ತು. ಹೊರಗಿನಿಂದ ಬಂದವರಿಗೆ ಮಂಡ್ಯ ಗ್ರಾಮೀಣ ಸೊಗಡಿನ ಭೋಜನ ಉಣಬಡಿಸಲಾಯಿತು. ಮುದ್ದೆ, ಅವರೆಕಾಳು ಗೊಜ್ಜು, ಕಜ್ಜಾಯದ ಜೊತೆ ಬಾಳೆಹಣ್ಣು, ತುಪ್ಪ, ಪುಳಿಯೋಗರೆ, ಪಾಯಸ, ಅನ್ನ-ಸಾಂಬಾರ್‌ ನೀಡಲಾಯಿತು. ರಾತ್ರಿ ವಾಂಗಿಬಾತ್‌, ಮೈಸೂರು ಪಾಕ್‌ ಜೊತೆ ಅನ್ನ-ಸಾಂಬಾರ್‌ ತಯಾರಿಸಿ ಉಣಬಡಿಸಲಾಯಿತು.

Follow Us:
Download App:
  • android
  • ios