ದಕ್ಷಿಣ ಭಾರತದಲ್ಲಿ ಹಲವು ಸಮುದಾಯಕ್ಕೆ ಸೇರಿದ ಜನರಿದ್ದಾರೆ. ನಿಸರ್ಗಕ್ಕೆ ಬಹಳ ಹತ್ತಿರವಾಗಿ ಬದುಕುವವರು ಬುಡಕಟ್ಟು ಜನ. ಅವರ ಆಚರಣೆಗಳು ಪ್ರಕೃತಿಯನ್ನು ಕೇಂದ್ರೀಕರಿಸಿಕೊಂಡೇ ಇರುತ್ತವೆ. ಸೂರ್ಯನನ್ನು, ಮರ ಗಿಡಗಳನ್ನು, ಭೂಮಿ ತಾಯಿಯನ್ನು ಅವರಷ್ಟು ಪ್ರೀತಿಯಿಂದ ಮಾತನಾಡಿಸುವವರು, ಆರಾಧನೆ ಮಾಡುವವರು ಬೇರಿಲ್ಲವೇನೋ. ಅವರ ಪ್ರತೀ ನಡೆ ನುಡಿ ಬಹಳ ಸೂಕ್ಷ್ಮವಾಗಿದ್ದು, ಪ್ರಕೃತಿಯ ನಾಡಿಮಿಡಿತ ಅರಿತವರಂತಿರುತ್ತದೆ. ಯುಗಾದಿ ನಿಸರ್ಗದ ಹಬ್ಬ. ನಿಸರ್ಗಕ್ಕೆ ಹೊಸ ಹುಟ್ಟು ನೀಡುವ ಹಬ್ಬ. ಯುಗಾದಿ ಅನ್ನೋದು ನಿಜದ ಹೊಸ ವರ್ಷ.ಈ ಹಬ್ಬದ ಹಿನ್ನೆಲೆಯಲ್ಲಿ ಅನೇಕ ಕತೆಗಳಿವೆ. ಪದ್ಯಗಳಿವೆ. ಜೊತೆಗೆ ಅನೇಕ ನಂಬಿಕೆಗಳೂ ಇವೆ. ಯುಗಾದಿ ಮೂಲತಃ ಸಂಸ್ಕೃತದಿಂದ ಪದ. ಕನ್ನಡದಲ್ಲಿ ಉಗಾದಿ ಎಂದಾಗಿದೆ. ಯುಗಾದಿಯ ದಿನ ಪ್ರಚಾಂಗ ಶ್ರವಣ ಮಾಡುವ ಪರಂಪರೆ ನಮ್ಮಲ್ಲಿ ಹಿಂದಿನಿಂದಲೂ ಇದೆ. ಈ ಸಂದರ್ಭದಲ್ಲಿ ಯುಗಾದಿಗೆ ಸಂಬಂಧಿಸಿದ ಆ ಗೀತೆಗಳನ್ನು, ಕತೆಗಳನ್ನು ಕೇಳಿದರೆ ಮನಸ್ಸಿನ ಕಷ್ಟಗಳು ಮರೆಯಾಗಿ ನಮಗರಿವಿಲ್ಲದೇ ಸಂಭ್ರಮವೊಂದು ನಮ್ಮನ್ನು ಆವರಿಸುತ್ತದೆ.

 

ಹೊಸ ವರ್ಷದಾರಂಭ: ಹೇಗಿದೆ ನಿಮ್ಮ ಭವಿಷ್ಯ? ಯಾರಿಗೆ ಸಿಹಿ, ಯಾರಿಗೆ ಕಹಿ?...

 

ಆದಿ ಬ್ರಹ್ಮ ಈ ದಿನ ಸೂರ್ಯೋದಯದ ಕಾಲದಲ್ಲಿ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ, ನಕ್ಷತ್ರ, ಗ್ರಹ, ಋತು, ಮಾಸಗಳನ್ನು ಆರಂಭಿಸಿದ ಅನ್ನುವ ನಂಬಿಕೆ ವೈದಿಕರೂ ಸೇರಿ ಹಲವರಲ್ಲಿದೆ. ವೈದಿಕ ಆಚರಣೆಗಳು ಬರುವ ಮೊದಲೂ ಯುಗಾದಿ ಆಚರಣೆ ನಮ್ಮಲ್ಲಿತ್ತು ಎಂಬ ನಂಬಿಕೆ ಇದೆ. ವೈದಿಕತೆಯ ಬಳಿಕ ಇದಕ್ಕೊಂದು ಸ್ಪಷ್ಟ ರೂಪ ಸಿಕ್ಕಿತು. ಪ್ರಕೃತಿಯ ಆರಾಧನೆಯನ್ನು ಮಂತ್ರ, ಪಂಚಾಂಗ ಶ್ರವಣದ ಮೂಲಕ ಮಾಡುವ ಆಚರಣೆಯೂ ಬೆಳೆಯಿತು ಅನ್ನುತ್ತಾರೆ.

ಆದರೆ ನಾವು ಪ್ರಕೃತಿಯಿಂದ ದೂರ ಹೋದಂತೆಲ್ಲ ಸೂಕ್ಷ್ಮತೆ ಕಳೆದುಕೊಳ್ಳುತ್ತಾ ಹೋಗುತ್ತಿದ್ದೇವೆ. ಪ್ರಕೃತಿಗೆ ಹತ್ತಿರದಲ್ಲಿರುವವರಿಗೆ ಗೊತ್ತಾಗುವ ಅನೇಕ ಸಂಗತಿಗಳು ಆಧುನಿಕ ಬದುಕಿನಲ್ಲಿ ನಿಸರ್ಗದಿಂದ ದೂರ ಇರುವ ನಮಗೆ ತಿಳಿಯೋದಿಲ್ಲ. ಹಿಂದು ಮುಂದಿಲ್ಲದ ಅಪಾಯಕರ ಮಟ್ಟದ ನಮ್ಮ ಓಟಕ್ಕೆ ಒಂದು ಬ್ರೇಕ್ ಹಾಕಲು ಈ ಬಾರಿಯ ಯುಗಾದಿಗೆ ಕಷ್ಟ ಬಂದಿದೆ. ಹೆಚ್ಚಿನವರ ನಂಬಿಕೆ ಅಂದರೆ ಯುಗಾದಿಯಾಗಲಿ, ಯಾವುದೇ ಹಬ್ಬದ ದಿನವಾಗಲಿ ಖುಷಿಯಿಂದಿದ್ದರೆ ಇಡೀ ವರ್ಷ ಖುಷಿಯಿಂದಿರುತ್ತಾರೆ ಅಂತ. ಹಾಗಂತ ಆ ನಂಬಿಕೆ ತಪ್ಪು ಅಂತಲ್ಲ. ಆದರೆ ಈ ಯುಗಾದಿ ನೀಡುವ ಸಂದೇಶವೇ ಬೇರೆ. ಬೇವು ಚಿಗುರುವ ಈ ಮಾಸದಲ್ಲಿ ರಸಭರಿತ ಬೆಲ್ಲವೂ ಸಿದ್ಧವಿರುತ್ತದೆ. ಬೇವು ಕಹಿ, ಬದುಕಿನ ಕಷ್ಟಕ್ಕೆ ಸಂಕೇತ ಅಂತೆಲ್ಲ ನಂಬುತ್ತೇವೆ. ಆದರೆ ನೀವು ಕಹಿಯಾದ ಬೇವನ್ನು ತಿಂದರೆ ಆರೋಗ್ಯ ಸಿಹಿಯಾಗಿರುವುದು ಸುಳ್ಳಲ್ಲವಲ್ಲ. ನಾಲಿಗೆಗೆ ಸಿಹಿ ನೀಡುವ ಬೆಲ್ಲದಿಂದ ಉತ್ತಮವಾದರೂ ಇದರಂಥಾ ಆರೋಗ್ಯಪೂರ್ಣ ಉಪಯೋಗಗಳಿಲ್ಲ. ಬೇವಿನ ಮರದ ನೆರಳು ಎಷ್ಟು ತಂಪು ಅನ್ನುವುದು ನಿಮ್ಮ ಗಮನಕ್ಕೆ ಬಂದಿರಬಹುದು.

 

ಕಾಯಿಲೆ ಗುಣಪಡಿಸಿ, ಇಷ್ಟಾರ್ಥ ಪೂರೈಸುವ ಎಟ್ಟಮನೂರ್ ಮಹಾದೇವ!


ಬುಡಕಟ್ಟು ಜನರಲ್ಲಿ ಒಂದು ನಂಬಿಕೆ ಇದೆ. ಗಿಡ ಚಿಗುರುವ ಹೊತ್ತಿಗೆ ಬರುವ ಕಷ್ಟ ಹೆಚ್ಚು ದಿನ ನಿಲ್ಲೋದಿಲ್ಲ ಅಂತ. ಪ್ರಕೃತಿಯ ಹೆರಿಗೆ ನೋವಿನಷ್ಟೇ ತಾತ್ಕಾಲಿಕ ಈ ಕಷ್ಟಗಳು. ಆಮೇಲೆ ಹೂ ಹಣ್ಣುಗಳು ನೀಡುವ ಮುದ ಇದ್ದದ್ದೇ.

ಸದ್ಯಕ್ಕೀಗ ನಮ್ಮ ಸ್ಥಿತಿ ಕಹಿಯಾಗಿಯೇ ಇದೆ. ಇದು ಮುಂದಿನ ಸಿಹಿಗೆ ಮುನ್ನುಡಿ ಎಂದು ಭಾವಿಸೋಣ. ಬೇವಿನ ಕಹಿ ಆರೋಗ್ಯಕ್ಕೆ ಹೇಗೆ ಉತ್ತಮವೋ, ಹಾಗೆ ಇಂದಿನ ಈ ಸ್ಥಿತಿ ನಮಗೆ ಪರೋಕ್ಷವಾಗಿ ಉತ್ತಮವೆಂದೇ ಭಾವಿಸೋಣ.

ನಮ್ಮ ಆಧುನಿಕ ಬದುಕು ಮಿತಿ ಮೀರಿ ಬೆಳೆದು ಬಿಟ್ಟಿದೆ. ಇದರಿಂದ ನಮ್ಮ ನಮ್ಮ ನಡುವೆಯೇ ಗ್ಯಾಪ್‌ ಕ್ರಿಯೇಟ್‌ ಆಗಿದೆ. ಕೆಲಸದ ಧಾವಂತದಲ್ಲಿ ಒಂದೇ ಮನೆಯಲ್ಲಿದ್ದರೂ ಮನೆಯವರ ಮುಖವನ್ನೂ ಸರಿಯಾಗಿ ನೋಡಲಾಗದ ಪರಿಸ್ಥಿತಿ ಇದೆ. ಜೊತೆಗೆ ಆಧುನಿಕ ಬದುಕಿನಿಂದ ಹೆಚ್ಚುತ್ತಿರುವ ಟೆನ್ಶನ್ನು, ವರ್ಕ್ ಲೋಡ್‌ ನಿಂದ ಸ್ಟ್ರೆಸ್ ಹೆಚ್ಚಿ ಬದುಕು ದುಸ್ತರವಾಗುತ್ತಿದೆ. ಇಂಥಾ ಟೈಮ್ ನಲ್ಲಿರುವ ಬಂದಿರುವ ಈ ಕಷ್ಟದಿಂದ ನಮ್ಮ ಬದುಕಿಗೆ ಸಣ್ಣ ಸಾವಧಾನತೆ ಬಂದಿದೆ. ಮನೆಯಲ್ಲಿರುವವರ ಜೊತೆಗೆ ಹತ್ತು ನಿಮಿಷ ಮಾತನಾಡಲು ಟೈಮ್ ಸಿಕ್ಕಿದೆ. ವಿಷಾದವಿದ್ದರೂ ಸ್ಟ್ರೆಸ್‌ ಕಡಿಮೆಯಾಗುತ್ತಿದೆ.
 

ಬುಡಕಟ್ಟು ಜನರ ನಂಬಿಕೆಯಂತೇ ಸುಖದ ದಿನಗಳು ಮುಂದಿವೆ, ಶಾರ್ವರಿ ನಮ್ಮನ್ನು ಖಂಡಿತಾ ಕೈ ಬಿಡುವುದಿಲ್ಲ. ಉತ್ತಮ ಬೆಳವಣಿಗೆಯತ್ತ, ಒಳ್ಳೆಯ ದಿನಗಳತ್ತ ಕರೆದೊಯ್ಯುತ್ತಾಳೆ. ಎಲ್ಲರಿಗೂ ಶುಭ ಯುಗಾದಿ. ಶಾರ್ವರಿ ನಾಮ ಸಂವತ್ಸರ ನಿಮ್ಮ ಬದುಕನ್ನು ಚಿಗುರಿಸಲಿ. ಹೆಮ್ಮರವಾಗಿಸಲಿ.