ಕುಕ್ಕೆಯಲ್ಲಿ ಈ ಬಾರಿ ಮಡೆಸ್ನಾನಕ್ಕೆ ನಿರ್ಬಂಧ, ಎಡೆಸ್ನಾನಕ್ಕೆ ಅವಕಾಶ
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಎಡೆಸ್ನಾನ ಈ ಬಾರಿಯೂ ನಡೆಯಲಿದೆ.
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಹಿನ್ನೆಲೆ ಈ ಬಾರಿ ಎಡೆಸ್ನಾನಕ್ಕೆ ಅವಕಾಶ ನೀಡಲಾಗಿದ್ದು, ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದ.ಕ. ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಎಡೆಸ್ನಾನಕ್ಕೆ ನಿರ್ಬಂಧವಿತ್ತು. ಆದರೆ ಈ ಬಾರಿ ಎಡೆಸ್ನಾನಕ್ಕೆ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಸಮಿತಿ ಅವಕಾಶ ನೀಡಿದೆ. ನವೆಂಬರ್ 21ರಿಂದ ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ನಡೆಯಲಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಇರುವ ಕಾರಣ ಮಡೆಸ್ನಾನಕ್ಕೆ ಬ್ರೇಕ್ ಬಿದ್ದಿದ್ದು, ಕೆಲ ವರ್ಷಗಳಿಂದ ಕುಕ್ಕೆಯಲ್ಲಿ ಎಡೆಸ್ನಾನಕ್ಕಷ್ಟೇ ಅವಕಾಶ ಇದೆ. ದೇವಾಲಯದ ಅಂಗಳದ ಸುತ್ತಲೂ ಎಲೆಗಳನ್ನ ಹಾಕಿ ಅದ್ರಲ್ಲಿ ನೈವೇದ್ಯ ಬಡಿಸಲಾಗುತ್ತೆ. ಅದನ್ನ ಹಸುಗಳು ತಿಂದ ಬಳಿಕ ಭಕ್ತರು ಎಲೆಯ ಮೇಲೆ ಉರುಳೋದು ಎಡೆಸ್ನಾನ. ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಆಗಮಶಾಸ್ತ್ರ ಪಂಡಿತರು ಉಪಸ್ಥಿತಿಯಲ್ಲಿ ಎಡೆಸ್ನಾನ ನಡೆಯುತ್ತೆ. ಈ ಬಾರಿಯೂ ಕುಕ್ಕೆಯಲ್ಲಿ ಎಡೆಸ್ನಾನ ನಡೆಯಲಿದೆ.