ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಒಂದು ಅರ್ಥವಿರುತ್ತದೆ. ಭವಿಷ್ಯದಲ್ಲಿ ನಡೆಯುವ ವಿಚಾರದ ಬಗ್ಗೆ ತಿಳಿಸುವ ಒಂದು ಸಂಕೇತ ಎಂದೂ ಹೇಳಬಹುದು. ಸ್ವಪ್ನ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ಕನಸಿನಲ್ಲಿ ನಾವು ಕಂಡ ವಸ್ತು, ದೃಶ್ಯ, ಪ್ರಾಣಿ ಮತ್ತು ಪಕ್ಷಿಗಳು ಭವಿಷ್ಯದಲ್ಲಿ ನಡೆಯುವ ವಿಷಯದ ಸೂಚಕ ಸಹ ಆಗಿರುತ್ತವೆ.

ಕನಸಿನಲ್ಲಿ ಕಂಡದ್ದು ನಿಜವಾಗುತ್ತದೆ ಎಂಬ ಬಗ್ಗೆ ಕೇಳಿರುತ್ತೇವೆ. ಕನಸಿನ ಬಗ್ಗೆ ಚಿಂತಿಸುತ್ತೇವೆ. ಅದಕ್ಕೆ ಅರ್ಥವನ್ನು ಅಥವಾ ಸೂಚನೆ ಏನಿರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಕನಸಿನಿಂದ ಕೆಲವು ಬಾರಿ ಖುಷಿಯಾದರೆ, ಇನ್ನು ಕೆಲವು ಬಾರಿ ಗಾಬರಿಯಾಗುವಂತೆ ಮಾಡುತ್ತದೆ. 

ಇದನ್ನು ಓದಿ: ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!? 

ಕನಸಿನಲ್ಲಿ ಕಂಡ ವಸ್ತುಗಳು ಅಥವಾ ಘಟನೆಗಳು ಶುಭಾಶುಭಗಳ ಸಂಕೇತವಾಗಿರುತ್ತವೆ. ಹಾಗೆಯೇ ಕನಸಿನಲ್ಲಿ ಕೆಲವು ಪ್ರಾಣಿಗಳನ್ನು ಕಂಡರೆ ಧನಲಾಭವಾಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಆ ಪ್ರಾಣಿಗಳು ಯಾವುವು ಎಂದು ತಿಳಿಯೋಣ...ಕಪ್ಪು ನಾಗರ
ಕನಸಿನಲ್ಲಿ ಕಪ್ಪು ನಾಗರ ಹಾವು ಕಂಡರೆ ಶುಭ ಸೂಚಕವೆಂದು ಹೇಳಲಾಗುತ್ತದೆ.  ಜೀವನದಲ್ಲಿ ಯಶಸ್ಸನ್ನು ಮತ್ತು ವೃತ್ತಿಯಲ್ಲಿ ಏಳಿಗೆಯನ್ನು ಕಾಣುವುದರ ಸಂಕೇತ ಇದಾಗಿರುತ್ತದೆ. ಅಷ್ಟೇ ಅಲ್ಲದೇ ಮನಸ್ಸಿನಲ್ಲಿರುವ ಯಾವುದೋ ಒಂದು ಇಚ್ಛೆ ಪೂರ್ಣವಾಗುವುದರ ಸಂಕೇತ ಸಹ ಇದಾಗಿದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!? 

ಮೊಲ
ಮೊಲ ಕನಸಿನಲ್ಲಿ ಬಂದರೆ ಒಳ್ಳೆಯದಾಗುತ್ತದೆ ಎಂದು ಅರ್ಥ. ಶ್ವೇತ ವರ್ಣದ ಮೊಲ ಕನಸಿನಲ್ಲಿ ಕಾಣುವುದು, ಜೀವನದಲ್ಲಿ ಪ್ರೀತಿಸಿದವರು ಸಿಗುತ್ತಾರೆ ಮತ್ತು ವಿವಾಹಿತರಿಗಾದರೆ ವೈವಾಹಿಕ ಜೀವನ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವುದರ ಸಂಕೇತ ಇದಾಗಿದೆ.

ಕನಸಿನಲ್ಲಿ ಹಲ್ಲಿಯನ್ನು ಕಂಡರೆ
ಎಚ್ಚರವಿದ್ದಾಗ ಹಲ್ಲಿಯನ್ನು ಕಂಡರೆ ಬಹುದೂರ ಓಡುವುದು ಸಹಜ. ಅದೇ ಕನಸಿನಲ್ಲಿ ಕಂಡರೆ ಶುಭ ಸೂಚಕ. ಕನಸಿನಲ್ಲಿ ಹಲ್ಲಿಯನ್ನು ನೋಡಿದರೆ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ ಎಂದು ಹೇಳಲಾಗುತ್ತದೆ. ಸದ್ಯದಲ್ಲೇ ಧನಲಾಭವಾಗುತ್ತದೆ ಮತ್ತು ಸಾಲದಿಂದ ಮುಕ್ತಿ ದೊರೆಯುತ್ತದೆ ಎಂಬುದನ್ನು ಸೂಚಿಸುತ್ತದೆ. ಭವಿಷ್ಯದಲ್ಲಿ ಮಾಡುವ ಉತ್ತಮ ಕೆಲಸಗಳು ಶುಭಫಲವನ್ನು ನೀಡುತ್ತವೆ ಎಂಬ ಸಂಕೇತವನ್ನು ತಿಳಿಸುತ್ತದೆ.

ಕುರಿ
ಕುರಿ ಕನಸಿನಲ್ಲಿ ಬಂದರೆ ಅದಕ್ಕೇನು ಅರ್ಥವಿರುತ್ತದೆ ಎಂದು ನಿರ್ಲಕ್ಷ್ಯ ತೋರಬೇಡಿ. ಕುರಿ ಕನಸಿನಲ್ಲಿ ಕಂಡರೆ ವೃತ್ತಿಗೆ ಸಂಬಂಧಿಸಿದಂತೆ ಉತ್ತಮವಾದ ಫಲವನ್ನು ಪಡೆಯುತ್ತಾರೆಂದರ್ಥ. ವೃತ್ತಿಗೆ ಸಂಬಂಧಿಸಿದಂತೆ ಪ್ರವಾಸ ಕೈಗೊಂಡಿದ್ದರೆ ಅದು ಶುಭವನ್ನುಂಟು ಮಾಡುವುದಲ್ಲದೇ, ವೃತ್ತಿ ಅಥವಾ ವ್ಯಾಪಾರದಲ್ಲಿ ಯಾವುದೋ ದೊಡ್ಡ ಬದಲಾವಣೆಯ ಸೂಚಕ ಸಹ ಇದಾಗಿದೆ.

ಇದನ್ನು ಓದಿ: ರಾಶಿಯನುಸಾರ ಈ ಪ್ರಾಣಿಗಳನ್ನು ಸಾಕಿದರೆ ಶುಭ ಫಲ...

ಮೀನು
ಕನಸಿನಲ್ಲಿ ಮೀನನ್ನು ಕಂಡರೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಬರಬೇಕಿದ್ದ ಹಣ ವಾಪಸ್ ನಿಮ್ಮ ಕೈ ಸೇರುತ್ತದೆ. ಅವಿವಾಹಿತರಿಗೆ ಜಾತಕ ಕೂಡಿ ಬಂದು ಕಂಕಣ ಭಾಗ್ಯ ಬರುತ್ತದೆ ಎಂಬ ಸಂಕೇತ ಸಹ ಇದಾಗಿದೆ.

ಸಿಂಹ
ಕಾಡಿನ ಕ್ರೂರ ಪ್ರಾಣಿ ಸಿಂಹ ಕನಸಿನಲ್ಲಿ ಬಂದರೆ ಒಳ್ಳೆಯದಾಗುತ್ತದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ ಮತ್ತು ಅರ್ಧಕ್ಕೆ ನಿಂತಿರುವ ಕೆಲಸ ಪ್ರಭಾವಿತ ವ್ಯಕ್ತಿಯ ಸಹಾಯದಿಂದ ಪೂರ್ಣವಾಗಲಿದೆ ಎಂಬ ಅರ್ಥವನ್ನು ಸಿಂಹದ ಕನಸು ಸೂಚಿಸುತ್ತದೆ. ಅಷ್ಟೇ ಅಲ್ಲದೇ ಕೋರ್ಟ್ ಕಚೇರಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ಯಶಸ್ಸು ದೊರಕುತ್ತದೆ ಎಂದು ಸಹ ಹೇಳಬಹುದಾಗಿದೆ.

ಆನೆ
ಆನೆಯು ಕನಸಿನಲ್ಲಿ ಬಂದರೆ ಶುಭದ ಸಂಕೇತವಾಗಿದೆ. ಆನೆಯು ಕನಸಿನಲ್ಲಿ ಕಂಡರೆ ಧನಲಾಭವಾಗುವುದಲ್ಲದೇ, ವ್ಯಾಪಾರ- ವ್ಯವಹಾರಗಳಲ್ಲಿ ಮತ್ತು ಸಮಾಜದಲ್ಲಿ ಏಳಿಗೆಯನ್ನು ಕಾಣುವ ಸಂಕೇತ ಇದಾಗಿದೆ. ಜೀವನದಲ್ಲಿ ಯಾವುದೇ ಸಮಸ್ಯೆಗೂ ಚಿಂತಿಸದೇ, ಮುನ್ನುಗ್ಗಿದರೆ ಜಯ ಸಾಧಿಸಬಹುದೆಂಬ ಅರ್ಥವನ್ನು ಸಹ ಇದು ಹೇಳುತ್ತದೆ.