ಶುಕ್ರವಾರ ಇಂಥ ಕೆಲಸ ಮಾಡಲೇಬೇಡಿ, ಮಾಡಿದ್ರೆ ಧನ ಹಾನಿ..!
ಶುಕ್ರವಾರ ಲಕ್ಷ್ಮೀದೇವಿಯ ವಾರ. ಭಾಗ್ಯದ ಲಕ್ಷ್ಮಿ ಇರುವ ವಾರ, ಹೀಗೆ ಲಕ್ಷ್ಮೀ ಕೃಪಾಕಟಾಕ್ಷ ನಮ್ಮ ಮೇಲಿರಲು ಅನೇಕ ಆರಾಧನೆ, ದೇವರ ಅನುಷ್ಠಾನಗಳು, ಪೂಜೆ ಪುನಸ್ಕಾರಗಳನ್ನು ಪಾಲಿಸುತ್ತಾ ಬರುತ್ತಿರುತ್ತೇವೆ. ಆದರೆ, ಶುಕ್ರವಾರದಂದು ಕೆಲವು ಆಚರಣೆಯನ್ನು ನಾವು ಮಾಡಲೇಬಾರದು. ಹೀಗೆ ಮಾಡಿದರೆ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾದರೆ, ಶುಕ್ರವಾರದಂದು ಮಾಡಬಾರದ ಕೆಲಸಗಳು ಏನು ಎಂಬ ಬಗ್ಗೆ ನೋಡೋಣ ಬನ್ನಿ…
ಹಿಂದೂ ಧರ್ಮದಲ್ಲಿ ತಿಂಗಳಲ್ಲಿ ಹಲವು ವಿಶೇಷ ದಿನಗಳು ಇದ್ದೇ ಇರುತ್ತವೆ. ಶ್ರೀ ಲಕ್ಷ್ಮೀ ದೇವಿಯನ್ನು ಪ್ರಸನ್ನಗೊಳಿಸಲು ಶುಕ್ರವಾರವು ಅತ್ಯಂತ ಪ್ರಶಸ್ತವಾದ ದಿನವಾಗಿದೆ ಎಂದು ಹೇಳಲಾಗುತ್ತದೆ. ಶುಕ್ರವಾರ ಸಂಧ್ಯಾ ಕಾಲದಲ್ಲಿ ಲಕ್ಷ್ಮೀ ದೇವಿಯನ್ನು ಆರಾಧಿಸಿದಲ್ಲಿ ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಮಾಡುವ ಕೆಲಸಗಳ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ.
ಲಕ್ಷ್ಮೀದೇವಿಯ ಕೃಪೆ ಯಾರಿಗೆ ಬೇಡ ಹೇಳಿ…? ಎಲ್ಲರಿಗೂ ಬೇಕು. ಧನ-ಧಾನ್ಯಗಳ ಅಧಿದೇವತೆ ಲಕ್ಷ್ಮೀಯೇ ಆಗಿರುವುದರಿಂದ ಸಮಸ್ತ ಜಗತ್ತಿಗೆ ಯಶಸ್ಸು, ವೈಭವ ಮತ್ತು ಕೀರ್ತಿಯನ್ನು ಪಾಲಿಸುವ ದೇವತೆಯಾಗಿದ್ದಾಳೆ. ಲಕ್ಷ್ಮೀ ಕೃಪೆಯುಳ್ಳವರಿಗೆ ಯಾವುದೇ ಆತಂಕವಿರುವುದಿಲ್ಲ. ಅಂಥ ಮನೆಯಲ್ಲಿ ಧನ-ಧಾನ್ಯ ಮತ್ತು ಸಮೃದ್ಧಿಯು ಅಪಾರವಾಗಿರುತ್ತದೆ.
ಹೌದು. ಶನಿವಾರ, ಮಂಗಳವಾರ ಹೀಗೆ ವಾರದ ಕೆಲವು ದಿನ ಕೆಲವಷ್ಟು ಕಾರ್ಯಗಳ ಮಾಡುವುದು ನಿಷಿದ್ಧವೆಂದು ಶಾಸ್ತ್ರ ಹೇಳುತ್ತದೆ. ವಾರದ ಆ ಕೆಲ ದಿನಗಳಲ್ಲಿ ಶುಕ್ರವಾರವೂ ಒಂದು. ಶುಕ್ರವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ್ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿಯೋಣ.
ಸಾಲ ಕೊಡುವುದು ಮತ್ತು ಪಡೆಯುವುದು
ಶುಕ್ರವಾರ ಸಾಲವನ್ನು ಕೊಡಬಾರದು ಮತ್ತು ತೆಗೆದುಕೊಳ್ಳಲೂಬಾರದು ಎಂದು ಶಾಸ್ತ್ರ ಹೇಳುತ್ತದೆ. ಶುಕ್ರವಾರವು ಲಕ್ಷ್ಮೀ ದೇವಿಯ ದಿನವಾಗಿದ್ದು, ಆ ದಿನ ಹಣವನ್ನು ಕೊಟ್ಟು- ತೆಗೆದುಕೊಳ್ಳುವುದು ಉತ್ತಮವಲ್ಲ. ಶುಕ್ರವಾರ ಹಣಕಾಸಿನ ವ್ಯವಹಾರ ಅಂದರೆ ಆ ಸಾಲವನ್ನು ಕೊಡುವುದು ಅಥವಾ ಸಾಲವನ್ನು ತೆಗೆದುಕೊಳ್ಳುವುದು ಮಾಡಿದರೆ ಲಕ್ಷ್ಮೀದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾಗಿ ಆ ದಿನ ಇಂಥ ಕೆಲಸಗಳನ್ನು ಮಾಡದಿರುವುದು ಉತ್ತಮ.
ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…!
ಸುಮಂಗಲಿಯರಿಗೆ ಅಗೌರವ
ಶುಕ್ರವಾರವು ಸೌಭಾಗ್ಯವನ್ನು ಸ್ಥಿರಗೊಳಿಸುವ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರದಂದು ಮುತ್ತೈದೆಯರಿಗೆ ಕನ್ಯೆಯರಿಗೆ ಮತ್ತು ಕಿನ್ನರರಿಗೆ ಗೌರವಾದರಗಳನ್ನು ನೀಡುವುದರ ಜೊತೆಗೆ ಶಕ್ತ್ಯಾನುಸಾರ ಮಂಗಳಕರ ವಸ್ತುಗಳನ್ನು ನೀಡಬೇಕು. ಹೀಗೆ ಮಾಡದಿದ್ದಲ್ಲಿ ಲಕ್ಷ್ಮೀದೇವಿಯ ಸಿಟ್ಟಿಗೆ ಗುರಿಯಾಗ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಸಕ್ಕರೆ ಕೊಡಬೇಡಿ
ಶುಕ್ರವಾರದಂದು ಸಕ್ಕರೆಯನ್ನು ಸಾಲವಾಗಿ ಕೊಡಬಾರದೆಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಶುಕ್ರ ಗ್ರಹವು ನೀಚಸ್ಥಿತಿಗೆ ತಲುಪುತ್ತದೆ ಎಂದು ಹೇಳಲಾಗುತ್ತದೆ. ಶುಕ್ರ ಗ್ರಹವು ಸುಖ, ಸಮೃದ್ಧಿ, ಸಂಪತ್ತಿಗೆ ಕಾರಕ ಗ್ರಹವಾಗಿದೆ. ಹಾಗಾಗಿ ಶುಕ್ರ ಗ್ರಹವು ಉಚ್ಛಸ್ಥಿತಿಯಲ್ಲಿರುವುದು ಅವಶ್ಯಕ. ಹಾಗಾಗಿ ಶುಕ್ರವಾರ ಸಕ್ಕರೆಯನ್ನು ನೀಡಬಾರದೆಂದು ಹೇಳಲಾಗುತ್ತದೆ.
ಇದನ್ನು ಓದಿ: ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..!
ಹುಳಿ ಪದಾರ್ಥಗಳನ್ನು ತಿನ್ನಬಾರದು
ಶುಕ್ರವಾರದಿಂದ ಹುಳಿ ಪದಾರ್ಥಗಳನ್ನು ಸೇವಿಸದೇ ನಿಷಿದ್ಧವೆಂದು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಸಂತೋಷಿ ದೇವಿಯ ವ್ರತವನ್ನು ಆಚರಿಸುತ್ತಿರುವವರು ಹುಳಿ ಪದಾರ್ಥಗಳನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.
ಮನೆ ಅಸ್ತವ್ಯಸ್ತವಾಗಿರಬಾರದು, ಶುಚಿತ್ವ ಕಾಪಾಡಿ
ಲಕ್ಷ್ಮೀ ದೇವಿಯ ಕೃಪೆ ಬಯಸುವವರು ಸ್ವಚ್ಚತೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ಯಾವ ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಮನೆಯನ್ನು ಸ್ವಚ್ಛವಾಗಿ ಸಾರಿಸಿ ನಂತರ ಚಂದವಾಗಿ ಅಲಂಕರಿಸಿ ಲಕ್ಷ್ಮೀ ದೇವಿಯನ್ನು ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ.
ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಪರಿಶ್ರಮಿಗಳು - ಛಲಗಾರರು...
ಹೀಗೆ ಮಾಡಿ ಧನಲಾಭ ಪಡೆಯಿರಿ
ತೆಂಗಿನಕಾಯಿಯು ದೇವರಿಗೆ ಶ್ರೇಷ್ಠ. ಶುಕ್ರವಾರದ ದಿನ ಮಹಾಲಕ್ಷ್ಮೀಗೆ ತೆಂಗಿನಕಾಯಿಯನ್ನು ಒಡೆದು ಅರ್ಪಿಸಬೇಕು. ಅದು ಒಳ್ಳೆಯದೆಂದು ಹೇಳಲಾಗುತ್ತದೆ. ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮೀಯ ಉಪಾಸನೆ ಶ್ರೇಷ್ಠವಾದ ದಿನ ಶುಕ್ರವಾರ. ಅಂದು ಲಕ್ಷ್ಮೀದೇವಿಯು ಪ್ರಸನ್ನಗೊಳ್ಳಲೆಂದು ವ್ರತವನ್ನೂ ಆಚರಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರದಂದು ವ್ರತವನ್ನು ಆಚರಿಸುವವರಿಗೆ ಲಕ್ಷ್ಮೀ ಕೃಪೆಯಿಂದಾಗಿ ಸುಖ-ಸೌಭಾಗ್ಯಗಳನ್ನು ಹೊಂದುತ್ತಾರೆ. ಲಕ್ಷ್ಮೀದೇವಿಗೆ ತೆಂಗಿನಕಾಯಿ ನೈವೇದ್ಯ ಅತಿ ಪ್ರಿಯವೆಂದು ಹೇಳಲಾಗುತ್ತದೆ. ಯಾರು ಶುಕ್ರವಾರ ಸಂಜೆ ಲಕ್ಷ್ಮೀಗೆ ಶ್ರೀಫಲವನ್ನು ಅರ್ಪಿಸುತ್ತಾರೋ ಅಂಥವರ ದರಿದ್ರ ದೂರವಾಗಿ ಸುಖ-ಸಮೃದ್ಧಿ ನೆಲೆಸುತ್ತದೆ.