Asianet Suvarna News Asianet Suvarna News

ನೀವರಿಯದ ಗೌರಿ -ಗಣೇಶರ ಕುತೂಹಲಕಾರಿ ಕತೆಗಳು

ಗೌರಿ ಮತ್ತು ಗಣೇಶ ಪುರಾಣದ ತುಂಬ ಆದರ್ಶ ಅಮ್ಮ- ಮಗ. ಅಮ್ಮ ಕಣ್ಣೀರು ಹಾಕಿದರೆ ಮಗನ ಕಣ್ಣಲ್ಲೂ ನೀರು ಬರುತ್ತೆ. ಮಗನನ್ನು ಎಚ್ಚರದಿಂದ ಪೊರೆಯುತ್ತಾಳೆ ಅಮ್ಮ ಗೌರಿ. ಇಂಥ ತಾಯಿ- ಮಗನ ಕತೆಗಳನ್ನು ಇಲ್ಲಿ ನೋಡೋಣ ಬನ್ನಿ.

 

Do you know these stories of Gowri- Ganesha
Author
Bengaluru, First Published Aug 21, 2020, 5:19 PM IST

ಗೌರಿಯ ಕೇಳಿದ ರಾವಣನ ಮೇಲೆ ಬೆನಕನ ಸಿಟ್ಟು
ರಾವಣ ಶಿವನ ಮಹಾಭಕ್ತ. ಆತನಿಗೆ ಕೈಲಾಸವನ್ನು ತನ್ನ ಮನೆ ಹತ್ರ ತಂದಿಟ್ಟುಕೊಳ್ಳಬೇಕು ಅನಿಸುತ್ತೆ. ನೇರ ಕೈಲಾಸಕ್ಕೆ ಬಂದು ಅದನ್ನೆತ್ತಿ ಲಂಕೆಗೆ ಕೊಂಡೊಯ್ಯಲು ಮುಂದಾಗ್ತಾನೆ. ಶಿವನಿಗೂ ರಾವಣನ ವರ್ತನೆಗೆ ಕೋಪ ಬಂದು, ಕಾಲನ್ನು ಒತ್ತಿ ಹಿಡಿಯುತ್ತಾನೆ, ರಾವಣ ಕೈಲಾಸದಡಿ ಸಿಕ್ಕು ನುಜ್ಜುಗುಜ್ಜಾಗುತ್ತಾನೆ. ಸಾವಿರದೊಂದು ಸಲ ಶಿವನ ನಾಮಸ್ಮರಣೆ ಮಾಡಿದಾಗ ಶಿವನ ಸಿಟ್ಟೆಲ್ಲ ಕರಗಿ ವರ ಕೊಡಲು ಮುಂದಾಗ್ತಾನೆ. ರಾವಣ ತನ್ನ ಬುದ್ಧಿ ಎಲ್ಲಿ ಬಿಡುತ್ತಾನೆ? ‘‘ನಂಗೆ ಪಾರ್ವತಿ ಬೇಕು,’’ ಅಂತ ಕೇಳುತ್ತಾನೆ. ಶಿವನೋ ‘‘ಅವಳು ಮಾನಸ ಸರೋವರದಲ್ಲಿದ್ದಾಳೆ, ಅಲ್ಲೇ ಹೋಗು,’’ ಅಂದುಬಿಡ್ತಾನೆ. ಇದನ್ನೆಲ್ಲ ನೋಡುತ್ತಿದ್ದ ಗಣೇಶ ಅಮ್ಮನ ಬಳಿ ಓಡಿ ವಿಷಯ ಹೇಳುತ್ತಾನೆ. ಅವನು ಬರುವುದರೊಳಗೆ ಏನಾದರೂ ಮಾಡಬೇಕು ಅಂತ ಅಮ್ಮ ಮಗ ಚಿಂತಿಸುತ್ತಾರೆ. ಜಾಣ ಗಣೇಶ ಉಪಾಯ ಹೇಳುತ್ತಾನೆ. ಅದರಂತೆ, ಪಾರ್ವತಿ ಅಲ್ಲಿದ್ದ ಕಪ್ಪೆಗಳ ರಾಣಿ ಮಂಡೂಕವನ್ನೇ ಚೆಂದದ ಹೆಣ್ಣಾಗಿ ಬದಲಾಯಿಸುತ್ತಾಳೆ. ರಾವಣ ಪಾರ್ವತಿಯನ್ನರಸಿ ಬಂದಾಗ ಅವನ ಕಣ್ಣಿಗೆ ಬಿದ್ದದ್ದು ಈ ಚೆಲುವೆ. ಅವಳನ್ನೇ ಮದುವೆಯಾಗುತ್ತಾನೆ. ಆಕೆಯೇ ಮಂಡೋದರಿ.

Do you know these stories of Gowri- Ganesha

ಭಂಡಾಸುರ ದಮನ
ದೇವಿ ಭಾಗವತದಲ್ಲಿ ಗಣೇಶನ ಜನನದ ಬಗೆಗೆ ಭಿನ್ನವಾದ ಒಂದು ಕತೆಯಿದೆ. ಕಾಮದಹನದ ನಂತರ ಉಳಿದ ಬೂದಿಯಿಂದ ಭಂಡಾಸುರನೆಂಬ ರಕ್ಕಸ ಜನ್ಮ ತಾಳುತ್ತಾನೆ. ಭಂಡಾಸುರನ ಕಿರುಕುಳ ತಾಳಲಾರದ ದೇವತೆಗಳು ದೇವಿಯನ್ನು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಗೆ ಓಗೊಟ್ಟ ದೇವಿ, ಅಗ್ನಿಕುಂಡದಿಂದ ಪ್ರಕಟಗೊಂಡು ಅಗ್ನಿಕುಂಡ ಸಮುದ್ಭವೆ ಎಂದು ಹೆಸರು ಗಳಿಸುತ್ತಾಳೆ. ಶಿವ ಕಾಮೇಶ್ವರ ರೂಪದಲ್ಲಿ ಆಕೆಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ನಂತರ ದೇವಿಯು ರಾಜಮಾತಂಗಿ, ವಾರಾಹಿ, ನಕುಲಿ ಮುಂತಾದ ಮಾತೃಕೆಯರೊಡನೆ ಭಂಡಾಸುರನನ್ನು ಸಂಹರಿಸಲು ತೆರಳುತ್ತಾಳೆ. ಭಂಡಾಸುರ ದೇವಿಯ ಮೇಲೆ ವಿಘ್ನಯಂತ್ರದ ಪ್ರಯೋಗ ಮಾಡುತ್ತಾನೆ. ದೇವಿಗೆ ಇದರಿಂದ ಹಿನ್ನಡೆಯಾಗುತ್ತದೆ. ಇದನ್ನು ಪರಿಹರಿಸಲು ದೇವಿಯು ಪತಿ ಕಾಮೇಶ್ವರನೊಂದಿಗೆ ಕೂಡಿ ಗಣೇಶನಿಗೆ ಜನ್ಮ ನೀಡುತ್ತಾಳೆ. ಸರ್ವ ದೇವತೆಗಳೂ ತಮ್ಮ ಶಕ್ತಿಗಳನ್ನು ಗಣೇಶನಿಗೆ ನೀಡುತ್ತಾರೆ. ಗಣಪ ವಿಘ್ನಯಂತ್ರವನ್ನು ನಾಶ ಮಾಡುತ್ತಾನೆ. ಶಕ್ತಿ ಕಳೆದುಕೊಂಡ ಭಂಡಾಸುರ, ಗಜಾಸುರನನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಗಜಾಸುರನನ್ನು ಗಣೇಶ ಮಣಿಸುತ್ತಾನೆ. ನಂತರ ದೇವಿ ಭಂಡಾಸುರನನ್ನು ಸಂಹರಿಸುತ್ತಾಳೆ.

ಕಾವೇರಿಯ ಉಗಮಕ್ಕೆ ಕಾರಣನಾದ 
ದಕ್ಷಿಣ ಭಾರತದಲ್ಲಿ ನದಿಗಳಿಲ್ಲದೆ ಜನರು ನೀರಿಗಾಗಿ ತೊಂದರೆಪಡುತ್ತಿದ್ದಾಗ, ಈ ಸಮಸ್ಯೆ ಮನಗಂಡ ಅಗಸ್ತ್ಯ ಮುನಿ, ಬ್ರಹ್ಮನ ಸಲಹೆಯಂತೆ ಕೈಲಾಸಕ್ಕೆ ತೆರಳಿ ಧ್ಯಾನಕ್ಕೆ ಕುಳಿತ. ತಪಸ್ಸಿಗೆ ಮೆಚ್ಚಿದ ಶಿವ ಅಗಸ್ತ್ಯನ ಕಮಂಡಲಕ್ಕೆ ನೀರಿನ ಹನಿಗಳನ್ನು ಹಾಕಿ, ಸೂಕ್ತ ಸ್ಥಳ ನೋಡಿ ಕಮಂಡಲದ ನೀರು ಚೆಲ್ಲುವಂತೆ ಸೂಚಿಸಿದ. ಅಗಸ್ತ್ಯ ಕಮಂಡಲ ಹಿಡಿದುಕೊಂಡು ದಕ್ಷಿಣ ಭಾರತದ ತಲಕಾವೇರಿ ತಲುಪಿದ. ನಡೆದೂ ನಡೆದೂ ಸುಸ್ತಾಗಿತ್ತು. ಅಲ್ಲಿ ಪುಟ್ಟ ಬಾಲಕನ ರೂಪದಲ್ಲಿ ಗಣಪ ಕಾಣಿಸಿದ. ಆತನಿಗೆ ಕಮಂಡಲ ನೋಡಿಕೊಳ್ಳಲು ಹೇಳಿ ವಿಶ್ರಾಂತಿ ಪಡೆಯಲು ಹೋದ. ಗಣಪತಿ ಕಮಂಡಲವನ್ನು ನೆಲದ ಮೇಲಿಟ್ಟ. ಕಾಗೆಯೊಂದು ಹಾರಿ ಬಂದು ಕಮಂಡಲ ಮಗುಚಿ ನೀರು ಚೆಲ್ಲಿ ಬಿಟ್ಟಿತು. ಪವಿತ್ರ ಜಲ ನದಿಯಾಗಿ ಹರಿಯಿತು. ಆ ನದಿಯೇ ಕಾವೇರಿ.

ಏಕದಂತ, ಗಣೇಶನ ಬಗ್ಗೆ ಗೊತ್ತಿರದ ವಿಷಯಗಳು ಇವು...

ಪ್ರಾಣಿ ಹಿಂಸೆ ಬಿಟ್ಟ ತುಂಟ ಗಣಪ
ಬಾಲ್ಯದಲ್ಲಿ ಗಣಪತಿ ತುಂಟ. ಒಮ್ಮೆ ಕೈಗೆ ಸಿಕ್ಕಿದ ಬೆಕ್ಕನ್ನು ಹಿಡಿದು ಅಮುಕಿ ಹಿಂಡಿ ಪರಚಿದ. ನಂತರ ಬೆಕ್ಕನ್ನು ಬಿಟ್ಟು ಮನೆಯೊಳಗೆ ಹೋದ. ನೋಡುತ್ತಾನೆ; ತಾಯಿ ಪಾರ್ವತಿ ಮೈಯೆಲ್ಲ ತರಚು ಗಾಯಗಳಾಗಿ ನೋವಿನಿಂದ ಬಳಲುತ್ತಿದ್ದಳು. ಯಾಕಮ್ಮಾ, ಏನಾಯಿತು, ಯಾರು ನಿನಗೆ ಹೀಗೆ ಮಾಡಿದರು ಎಂದು ಸಿಟ್ಟಿನಿಂದ ಕೇಳಿದ. ನೀನೇ ಈಗ ಹೊರಗೆ ನನಗೆ ಮೈಯೆಲ್ಲ ಪರಚಿದೆಯಲ್ಲಾ ಎಂದಳು ಗೌರಿ ಮಾತೆ. ಗಣಪತಿಗೆ ಲೋಕವೆಲ್ಲವೂ ಪ್ರಕೃತ ಮಾತೆಯಾಗಿ ತನ್ನ ತಾಯಿಯೇ, ತನ್ನ ಹಿಂಸೆಯ ಫಲ ಜಗನ್ಮಾತೆ ತಾಯಿಗೂ ತಟ್ಟಿದೆ ಎಂದರ್ಥವಾಯಿತು. ತಾಯಿಯ ಕ್ಷಮೆ ಕೇಳಿದ.

ಪಂಚಾಂಗ: ಸ್ತ್ರೀ, ಪುರುಷ ಎಂಬ ಬೇಧವಿಲ್ಲದೇ ಸ್ವರ್ಣ ಗೌರಿಯನ್ನು ಆರಾಧಿಸಿ! ...

ನೂಪುರಾಸುರ ಮಥನ
ಗಣೇಶನು ಕಲಾಪ್ರಿಯ ಎನಿಸಿಕೊಳುವುದಕ್ಕೆ ಕಾರಣವಿದೆ. ಹರಗಣಕ್ಕೆ ಗಣಪತಿ ಅಧಿಪತಿ. ಯೋಗಭೂಮಿ ಕೈಲಾಸದಲ್ಲಿ ನಟರಾಜನ ರಂಗಮಂಚದಲ್ಲಿ ಸುಕುಮಾರ ಬಾಲ ಗಣಪನು ಅಮ್ಮನ ತೆಕ್ಕೆಯಿಂದ ಜಾರಿಳಿದು ಥಕಥೈ ಎಂದು ಕುಣಿದ. ಇಟ್ಟ ಹೆಜ್ಜೆ ತಾಳದ ಗತಿಯನ್ನು ಕಚ್ಚಿಕೊಂಡಿತು, ನೃತ್ಯವನ್ನು ಕಂಡು ತಾಯಿ ಹಿಗ್ಗಿದಳು; ತಂದೆ ಆಶ್ಚರ್ಯಚಕಿತನಾದ. ಗೆಜ್ಜೆ ಕಟ್ಟಿ ಹೆಜ್ಜೆಯಿಟ್ಟು ಗಣೇಶನನ್ನು ಅನುಸರಿಸಿದರು. ವಿಷ್ಣು, ದೇವೇಂದ್ರರನ್ನೂ ಮೊದಲ್ಗೊಂಡು ದೇವಾನುದೇವತೆಗಳು ಈ ನೈಸರ್ಗಿಕ ನೃತ್ಯದಲ್ಲಿ ಪಾಲ್ಗೊಂಡರು. ಗಣಪತಿಯ ನರ್ತನ ಲೀಲಾವಿನೋದವು ವಿಶ್ವವನ್ನೇ ವ್ಯಾಪಿಸಿತು. ಗೌರಿಗೆ ಗಾಬರಿಯಾಯಿತು. ಹೊಂಚು ಹಾಕಿ ಕುಳಿತಿದ್ದ ನೂಪುರಾಸುರನಿಗೆ ಇದೇ ಅವಕಾಶವಾಯಿತು. ಮಗುವಿಗೂ ಕಾಲುಗಳು ಮರಗಟ್ಟಿ ನಿಂತವು, ಗೆಜ್ಜೆ(ನೂಪುರ) ಭಾರವಾಯಿತು. ಗೌರಿ ಹೌಹಾರಿದಳು. ತಾಯಿಯ ನೋವು ಗಣೇಶನಿಗೆ ತಿಳಿಯಿತು. ಕಾಲುಗಳನ್ನು ಝಾಡಿಸಿದ, ನೂಪುರಾಸುರ ಸಿಡಿದುಬಿದ್ದ. ಅಂದಿನಿಂದಲೇ ಗೆಜ್ಜೆಯನ್ನು ಪೂಜಿಸಿ, ಅದಕ್ಕೆ ಗುರುಗೌರವ ತೋರುವ ವಿನಯ ಬೆಳೆದುಬಂತು. 

ಇಂದು ಬೆನಕನ ಅಮಾವಾಸ್ಯೆ: ಗಣಪತಿ ಆರಾಧನೆಯಿಂದ ಶುಭಫಲ 

Follow Us:
Download App:
  • android
  • ios