Asianet Suvarna News

ಇಂದು ಸೀತಾ ಜಯಂತಿ: ಸೀತೆ ರಾವಣನ ಮಗಳೆಂಬ ಕತೆ ನಿಮಗೆ ಗೊತ್ತಾ?

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನ ಜನ್ಮದಿನ. ವೈಶಾಖ ಶುಕ್ಲ ಪಕ್ಷ ನವಮಿಯಂದು ಸೀತಾ ಜಯಂತಿ ಅಥವಾ ಸೀತೆ ಹುಟ್ಟಿದ ದಿನ. ಇಂದು ಉತ್ತರ ಭಾರತದ ಸ್ತ್ರೀಯರು ಸೀತಾದೇವಿಯನ್ನು ಪೂಜಿಸುತ್ತಾರೆ ಮತ್ತು ತಮ್ಮ ಪತಿ, ಕುಟುಂಬದ ಸೌಭಾಗ್ಯಕ್ಕಾಗಿ ಸೀತೆಯನ್ನು ಪ್ರಾರ್ಥಿಸುತ್ತಾರೆ. ಆಕೆ ಲಕ್ಷ್ಮೀದೇವಿಯ ಅವತಾರ, ಸಕಲ ಸೌಭಾಗ್ಯದಾಯಿನಿ ಎಂಬುದು ನಂಬಿಕೆ.

Do you know sita is daughter of Ravana in Ramayana
Author
Bengaluru, First Published May 2, 2020, 2:16 PM IST
  • Facebook
  • Twitter
  • Whatsapp

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನ ಜನ್ಮದಿನ. ವೈಶಾಖ ಶುಕ್ಲ ಪಕ್ಷ ನವಮಿಯಂದು ಸೀತಾ ಜಯಂತಿ ಅಥವಾ ಸೀತೆ ಹುಟ್ಟಿದ ದಿನ. ಇಂದು ಉತ್ತರ ಭಾರತದ ಸ್ತ್ರೀಯರು ಸೀತಾದೇವಿಯನ್ನು ಪೂಜಿಸುತ್ತಾರೆ ಮತ್ತು ತಮ್ಮ ಪತಿ, ಕುಟುಂಬದ ಸೌಭಾಗ್ಯಕ್ಕಾಗಿ ಸೀತೆಯನ್ನು ಪ್ರಾರ್ಥಿಸುತ್ತಾರೆ. ಆಕೆ ಲಕ್ಷ್ಮೀದೇವಿಯ ಅವತಾರ, ಸಕಲ ಸೌಭಾಗ್ಯದಾಯಿನಿ ಎಂಬುದು ನಂಬಿಕೆ. ಸೀತಾದೇವಿ ಜನಕನ ಮಗಳು ಎಂಬುದು ಎಲ್ಲರಿಗೆ ಗೊತ್ತು. ಅದರೆ ಜನಕನ ನೇರ ಮಗಳಲ್ಲ. ಆದರೂ ಜನಕ ಸಾಕಿದ್ದರಿಂದ ಆಕೆಗೆ ಜಾನಕಿ ಎಂಬ ಹೆಸರು ಬಂದಿದೆ. ಸೀತಾದೇವಿಯ ಹುಟ್ಟು- ಅವತಾರದ ಬಗ್ಗೆ ಹಲವು ಕತೆಗಳಿವೆ. ಅವುಗಳಲ್ಲಿ ಸೀತೆ ರಾವಣನ ಮಗಳು ಎಂಬ ಕತೆಯೂ ಒಂದು.

ಲಲಿತಾ ಸಹಸ್ರನಾಮ ಪಠಣದಿಂದೇನು ಲಾಭ?

ಮಿಥಿಲೆಗೆ ರಾಜನಾಗಿದ್ದ ಜನಕ ಯಜ್ಞಕಾರ್ಯಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ, ಆತನ ನೇಗಿಲ ಮೊನೆಗೆ ಒಂದು ಚಿನ್ನದ ತೊಟ್ಟಿಲು ತಾಕಿತು. ಅದೇನೆಂದು ಎತ್ತಿ ನೋಡಿದಾಗ, ಮುದ್ದಾದ ಹೆಣ್ಣು ಮಗಳು ನಗುತ್ತಿದ್ದಳು. ಆಕೆಯನ್ನು ಜನಕ ಸಾಕಿದ. ಸಂಸ್ಕೃತದಲ್ಲಿ ನೇಗಿಲ ಗೆರೆಗೆ ಸಿತ ಎಂದು ಹೆಸರು. ಹೀಗೆ ಆಕೆ ಸೀತೆ ಆದಳು. ಮಿಥಿಲೆಯ ರಾಜಕುಮಾರಿಯಾದ್ದರಿಂದ ಮೈಥಿಲಿಯಾದಳು. ಭೂಮಿಯಲ್ಲಿ ಕಂಡುಬಂದವಳಾದುದರಿಂದ ಭೂಮಿಪುತ್ರಿ, ಭೂಜಾತೆಯಾದಳು. ಈಕೆಯ ತಂದೆ ಜನಕ ಮಹಾರಾಜ, ಆಧ್ಯಾತ್ಮಜೀವಿಯಾಗಿದ್ದು, ದೇಹವೇ ಇಲ್ಲದೆ ಆತ್ಮದ ಮೂಲಕ ಸಂಚರಿಸಬಲ್ಲವನಾಗಿದ್ದ. ಹೀಗಾಗಿ ಅವನಿಗೆ ವಿದೇಹ ಎಂಬ ಹೆಸರಿತ್ತು. ವಿದೇಹನ ಮಗಳು ವೈದೇಹಿಯೂ ಆದಳು.

ಇನ್ನೊಂದು ಕತೆಯ ಪ್ರಕಾರ, ಒಮ್ಮೆ ಜನಕ ಮಹಾರಾಜ, ಆಗಸದಲ್ಲಿ ಸಂಚರಿಸುತ್ತಿದ್ದ ಮೇನಕೆಯನ್ನು ನೋಡಿ ಮೋಹಿತನಾಗಿ, ನಿನ್ನಲ್ಲಿ ನನಗೊಂದು ಮಗು ಬೇಕು ಎಂದು ಕೇಳಿದ. ಮೇನಕೆ ತಥಾಸ್ತು ಎಂದಳು. ಬಳಿಕ ಜನಕನಿಗೆ ಯಜ್ಞಕ್ಕಾಗಿ ಹೊಲ ಉಳುತ್ತಿದ್ದಾಗ ಈ ಮಗು ಸಿಕ್ಕಿತು. ತಕ್ಷಣವೇ ಮೇನಕೆ ಪ್ರತ್ಯಕ್ಷಳಾಗಿ, ಇದೇ ನೀನು ಬಯಸಿದ್ದ ಮಗು ಎಂದಳು, 

ನಿಮಗೆ ಗೊತ್ತಿಲ್ಲದ ಪುರಾಣ ಕಥೆ - ನಹುಷ ಹೆಬ್ಬಾವಾದ ಕತೆ ಗೊತ್ತಾ? 

ಸೀತೆ ರಾವಣನ ಮಗಳೂ ಹೌದು

ಸೀತಾದೇವಿಯ ಹುಟ್ಟಿನಲ್ಲಿ ರಾವಣದ ನಾಶದ ಉದ್ದೇಶವೂ ಇದೆ. ಅದಕ್ಕೊಂದು ಕತೆಯಿದೆ. ವೇದವತಿ ಎಂಬ ದೇವ ಸ್ತ್ರೀ, ಮಹಾವಿಷ್ಣುವನ್ನು ಪಡೆಯುವ ಉದ್ದೇಶದಿಂದ ವ್ರತಸ್ಥಳಾಗಿದ್ದಳು. ದುಷ್ಟ ರಾವಣ ಆಕೆಯನ್ನು ಕಂಡು ಮೋಹಿತನಾಗಿ ಆಕೆಯನ್ನೂ ಆಕೆಯ ವ್ರತವನ್ನೂ ಕೆಡಿಸಿದ. ಇದರಿಂದ ರೋಷತಪ್ತಳಾದ ಆಕೆ, ಮುಂದಿನ ಜನ್ಮದಲ್ಲಿ ತಾನು ರಾವಣನ ನಾಶಕ್ಕೆ ಕಾರಣಳಾಗಿ ಹುಟ್ಟುವೆ ಎಂದು ಶಪಥ ಮಾಡಿ, ಅಗ್ನಿಕುಂಡ ರಚಿಸಿ ಅದರಲ್ಲಿ ಹಾರಿಕೊಂಡಳು. ಈ ವೇದವತಿಯೇ ಮುಂದೆ ರಾವಣ- ಮಂಡೋದರಿಯರಲ್ಲಿ ಜನಿಸಿದಳು. ಆದರೆ ಇವಳು ಜನಿಸಿದ ಕೂಡಲೇ ಜ್ಯೋತಿಷಿಗಳು, ಈ ಹೆಣ್ಣು ಮಗು ರಾವಣನ ನಾಶಕ್ಕೆ ಕಾರಣಳಾಗುತ್ತಾಳೆ ಎಂದು ಭವಿಷ್ಯ ನುಡಿದರು. ಇದರಿಂದಾಗಿ ರಾವಣ ಆಕೆಯನ್ನು ಲಂಕೆಯಿಂದ ಬಹುದೂರದ ಮಿಥಿಲೆಗೆ ಕೊಂಡೊಯ್ದು ಅಲ್ಲಿ ಮಣ್ಣಿನಲ್ಲಿ ಆಕೆಯನ್ನು ಪೆಟ್ಟಿಗೆಯಲ್ಲಿ ಹೂತುಹಾಕಿದ. ಈ ಮಗು ಮುಂದೆ ಜನಕ ಯಜ್ಞಕ್ಕಾಗಿ ನೆಲ ಊಳುತ್ತಿದ್ದಾಗ ಆತನಿಗೆ ದೊರೆಯಿತು. ಹೀಗಾಗಿ ಸೀತೆ ರಾವಣನ ಮಗಳೂ ಹೌದು. 

ಶತಮಾನಗಳಿಂದ ಭಾರತೀಯ ಮಹಿಳೆಯರು ಸೀತೆ ಆದರ್ಶ ನಾರಿಯೆಂದು ಭಾವಿಸುತ್ತ ಬಂದಿದ್ದಾರೆ. ಆಕೆಯ ಸೌಮ್ಯತನ, ಆಕೆಯ ಪತಿಪ್ರೀತಿ, ಸೋದರವಾತ್ಸಲ್ಯಗಳೆಲ್ಲ ಆದರ್ಶವೇ.

ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ 

ಸೀತೆಯನ್ನು ಪೂಜಿಸುವುದು ಹೇಗೆ?
ಸೀತಾ ಜಯಂತಿಯ ಆಚರಣೆ ಬಹಳ ಸರಳ. ತುಳಸಿಯಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ, ಸೀತೆ ಲಕ್ಷ್ಮಿದೇವಿಯ ಅವತಾರ. ಹೀಗಾಗಿ ತುಳಸಿ ಪೂಜೆ ಮಾಡಬಹುದು. ಸೀತಾ- ರಾಮರ ದೇವಾಲಯಕ್ಕೆ ಭೇಟಿ ನೀಡಿ ಅನುಗ್ರಹ ಪಡೆಯಬಹುದು. ಮನೆಯಲ್ಲೇ ಸೀತಾ- ರಾಮರ ಪೂಜೆ ಮಾಡಬಹುದು. ಹನ್ನೆರಡು ಮುಖದ ರುದ್ರಾಕ್ಷಿಯನ್ನು ಬಳಸಿ ಜಪ ಮಾಡಬಹುದು. ಈ ರುದ್ರಾಕ್ಷಿಯಲ್ಲಿ ಶ್ರೀರಾಮದೇವರು ನೆಲೆಸಿರುತ್ತಾನೆ ಎಂದು ಪ್ರತೀತಿ. ಶ್ರೀಗಂಧದ ಅಗರಬತ್ತಿ, ಧೂಪ, ಹೂವು, ಹಣ್ಣುಗಳಿಂಧ ಅರ್ಚಿಸಿದರೆ ಸೀತೆ- ರಾಮರು ಪ್ರಸನ್ನರಾಗುತ್ತಾರೆ. ಆರೋಗ್ಯವಾಗಿರುವವರು ಒಂದು ದಿನದ ಉಪವಾಸ ಆಚರಿಸಬಹುದು. ಅಥವಾ ನೀರು ಮಾತ್ರ ಸೇವಿಸಿ ಉಪವಾಸವನ್ನೂ ಮಾಡಬಹುದು. 

Follow Us:
Download App:
  • android
  • ios