ನಹುಷನ ಕತೆ

ಈತ ಚಂದ್ರ ವಂಶದ ರಾಜ. ಯುಧಿಷ್ಠಿರನ ಪೂರ್ವಜ. ಪಿತೃದೇವತೆಗಳ ಮಗಳಾದ ವಿರಜೆ ಇವನ ಹೆಂಡತಿ. ಈ ನಹುಷನಿಗೆ ಯಯಾತಿ, ಯತಿ, ಸಂಯಾತಿ, ಧ್ರದ ಮೊದಲಾದ ಆರು ಮಂದಿ ಮಕ್ಕಳಿದ್ದರು. ಅತ್ಯುತ್ತಮ ಆಡಳಿತಗಾರ. ಇವನ ಅಧಿಪತ್ಯದಲ್ಲಿ ದೇಶ ಸುಭಿಕ್ಷವಾಗಿತ್ತು. ರಾಜನೂ, ರಾಣಿಯೂ, ಪ್ರಜೆಗಳೂ ಸಂತೋಷದಿಂದಿದ್ದ ಕಾಲಕ್ಕೆ ಸ್ವರ್ಗದಲ್ಲಿ ಒಂದು ಘಟನೆ ನಡೆಯಿತು. ತ್ವಷ್ಟೃ ಪ್ರಜಾಪತಿ ಇಂದ್ರನ ಸಂಹಾರಕ್ಕಾಗಿ ಅಗ್ನಿಯಲ್ಲಿ ಒಬ್ಬ ಮಗನನ್ನು ಸೃಷ್ಟಿಸುತ್ತಾನೆ. ಆತನ ಹೆಸರೇ ವೃತ್ರ. ಈತ ತನ್ನ ದುಷ್ಟ ಸ್ವಭಾವಗಳಿಂದ ಇಂದ್ರನನ್ನು ಕೊಲ್ಲಲು ಹವಣಿಸುತ್ತಾನೆ. ಮುಂದೆ ಇಂದ್ರನೇ ಇವನ ಸಂಹಾರ ಮಾಡುತ್ತಾನೆ. ಆದರೆ ಆಗ ಇಂದ್ರನಿಗೆ ಬ್ರಹ್ಮಹತ್ಯೆಯ ದೋಷ ಉಂಟಾಗುತ್ತದೆ. ಅವನು ಈ ಪಾಪದ ಭಯದಿಂದ ತತ್ತರಿಸಿ ಅದೃಶ್ಯನಾಗಿ ಬಿಡುತ್ತಾನೆ. ದೇವತೆಗಳು ಎಷ್ಟು ಹುಡುಕಿದರೂ ಕಾಣಿಸಿಕೊಳ್ಳುವುದಿಲ್ಲ. ಆ ಹೊತ್ತಿಗೆ ದೇವತೆಗಳಿಗೆ ತಾತ್ಕಾಲಿಕವಾಗಿ ಇಂದ್ರ ಪದವಿಗೆ ನಹುಷನೇ ಸೂಕ್ತ ಅನಿಸುತ್ತದೆ. ನಹುಷನನ್ನು ಸ್ವರ್ಗಕ್ಕೆ ಕರೆಸಿಕೊಂಡು ಆತನನ್ನು ಇಂದ್ರಪಟ್ಟದಲ್ಲಿ ಕೂರಿಸುತ್ತಾರೆ. ಆರಂಭದಲ್ಲಿ ಬಹಳ ಉತ್ತಮವಾಗಿಯೇ ತನ್ನ ಪದವಿ ನಿಭಾಯಿಸಿದ ಈತನಿಗೆ ಆಮೇಲೆ ಅಹಂಕಾರ ಬರುತ್ತದೆ. ನಿಜವಾದ ಇಂದ್ರನ ಪತ್ನಿ ಶಚಿ ದೇವಿಯ ಮೇಲೆ ಮೋಹವೂ ಶುರುವಾಗುತ್ತದೆ. ತಾನೀಗ ಇಂದ್ರ ಅಂದ ಮೇಲೆ ಆಕೆ ತನ್ನನ್ನು ಪತಿಯಾಗಿ ಸ್ವೀಕರಿಸಬೇಕು ಎಂದು ಹೇಳಿ ಕಳಿಸುತ್ತಾನೆ. ಆದರೆ ತನ್ನ ಪತಿಯನ್ನು ಬಹಳ ಪ್ರೀತಿಸುತ್ತಿದ್ದ ಶಚಿಗೆ ಇದು ನುಂಗಲಾರದ ತುತ್ತು. ಇಂದ್ರನ ಮಾತನ್ನು ಮೀರುವಂತೆಯೂ ಇಲ್ಲ.ಸಂದಿಗ್ಧದಲ್ಲಿ ಆಕೆ ಬೃಹಸ್ಪತಿಯನ್ನು ಭೇಟಿಯಾಗುತ್ತಾಳೆ. ಆತ ಅವಳ ಸಮಸ್ಯೆಗೆ ಒಂದು ಉಪಾಯ ಹೇಳುತ್ತಾನೆ. 'ನಹುಷ ತನ್ನನ್ನು ನೋಡಲು ಪಲ್ಲಕ್ಕಿಯಲ್ಲಿ ಬರಬೇಕು. ಆ ಪಲ್ಲಕ್ಕಿ ಸಪ್ತರ್ಷಿಗಳು ಹೊರಬೇಕು' ಎಂದು ಹೇಳು ಎಂದು ಸೂಚನೆ ಕೊಡುತ್ತಾನೆ. 

ಇದರಂತೆ ಶಚಿದೇವಿ ನಹುಷನಿಗೆ ಹೇಳಿ ಕಳುಹಿಸುತ್ತಾಳೆ. ಕಾಮಾತುರನೂ ಬುದ್ಧಿಗೇಡಿಯೂ ಆಗಿ ಬದಲಾಗಿದ್ದ ನಹುಷ ಈ ಆಹ್ವಾನಕ್ಕೆ ಒಪ್ಪಿ ಸಪ್ತರ್ಷಿಗಳಿಗೆ ಪಲ್ಲಕ್ಕಿ ಮೇಲೆ ತನ್ನನ್ನು ಹೊತ್ತು ಶಚಿದೇವಿಯಲ್ಲಿಗೆ ಕರೆದೊಯ್ಯುವಂತೆ ಆಜ್ಞಾಪಿಸುತ್ತಾನೆ. ಆದರೆ ಆ ಸಪ್ತರ್ಷಿಗಳಲ್ಲಿ ಅಗಸ್ತ್ಯರು ತುಸು ವಿಳಂಬಿಸಲು, 'ಬೇಗ ಬೇಗ ನಡೆ' ಅನ್ನುತ್ತಾ ಅವರ ತಲೆಗೆ ಕಾಲಿಂದ ಒದೆಯುತ್ತಾನೆ. ಇದರಿಂದ ಕ್ರೋಧಗೊಂಡ ಅಗಸ್ತ್ಯರು, 'ನೀನು ಸರ್ಪವಾಗು' ಎಂದು ಶಾಪ ಕೊಡುತ್ತಾರೆ. ಆಗ ನಹುಷನ ಅಹಂಕಾರ ಕರಗಿ ವಸ್ತುಸ್ಥಿತಿ ಗೊತ್ತಾಗುತ್ತದೆ. ಆತ ಅಗಸ್ತ್ಯರ ಕಾಲಿಗೆ ಬಿದ್ದು ಮನ್ನಿಸುವಂತೆ ಪರಿ ಪರಿಯಾಗಿ ಕೇಳುತ್ತಾರೆ. ಆಗ ಅಗಸ್ತ್ಯರು, 'ಮುಂದೆ ನಿನ್ನ ವಂಶಜನಾದ ಯುಧಿಷ್ಠಿರನ ಜೊತೆಗೆ ಸಂಭಾಷಣೆಗಿಳಿದಾಗ ನಿನ್ನ ಶಾಪ ವಿಮೋಚನೆಯಾಗುತ್ತದೆ ಎಂದು ತಿಳಿಸುತ್ತಾನೆ. 

ಕ್ಷಣದಲ್ಲಿ ಹೆಬ್ಬಾವಾಗಿ ನಹುಷ ಬದಲಾಗುತ್ತಾನೆ. ಮುಂದೆ ಪಾಂಡವರ ಅರಣ್ಯವಾಸದ ಕಾಲದಲ್ಲಿ ಭೀಮ ಕಂದಮೂಲ ಸಂಗ್ರಹಿಸಲು ಕಾಡಿಗೆ ಹೋಗುತ್ತಾನೆ. ಆಗ ನಹುಷ ಭೀಮನನ್ನು ಹೆಬ್ಬಾವಾಗಿ ಬಂಧಿಸುತ್ತಾನೆ. ಹೆಬ್ಬಾವಿನ ಹಿಡಿತಕ್ಕೆ ಭೀಮ ಸಂಕಟ ಪಡುತ್ತಿದ್ದಾಗ ಅವನನ್ನು ಹುಡುಕಿ ಯುಧಿಷ್ಠಿರ ಬರುತ್ತಾನೆ. 

ಈ ಅಕ್ಷಯ ತೃತೀಯ ನಂತರ ಇವರ ಭವಿಷ್ಯ ಮುಂಚಿನಂತಿರೋಲ್ಲ! 


ನೋಡಿದರೆ ಭೀಮ ಹೆಬ್ಬಾವಿನ ಬಾಯಿಗೆ ಸಿಲುಕಿದ್ದಾನೆ.. ಆಗ ಹೆಬ್ಬಾವು ಯುಧಿಷ್ಠಿರನ ಜೊತೆಗೆ ಮನುಷ್ಯರಂತೆ ಮಾತನಾಡುತ್ತಾ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ನೀನು ಈ ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರೆ ತಮ್ಮನನ್ನು ಬಿಡುತ್ತೇನೆ ಎನ್ನುತ್ತಾನೆ. 'ನಿಜವಾದ ಬ್ರಾಹ್ಮಣ ಯಾರು?' ಅನ್ನುವುದು ಮೊದಲ ಪ್ರಶ್ನೆ. 'ಸತ್ಯ, ಶೀಲ, ದಯೆ, ಕ್ಷಮೆ, ತಪಸ್ಸುಗಳೆಂಬ ಗುಣ ಹೊಂದಿದವನೇ ಬ್ರಾಹ್ಮಣ' ಎಂಬ ಉತ್ತರ ಯುಧಿಷ್ಠಿರನದು. 'ಬೇರೆ ವರ್ಗಕ್ಕೆ ಸೇರಿದವನಲ್ಲಿ ಈ ಗುಣ ಇದ್ದರೆ?' ಎಂದು ಹೆಬ್ಬಾವು ಮರು ಪ್ರಶ್ನೆ ಹಾಕುತ್ತದೆ. 'ಹಾಗಿದ್ದರೆ ಆತ ಪೂಜ್ಯನಾಗುತ್ತಾನೆ. ಬ್ರಾಹ್ಮಣನಾಗಿ ಹುಟ್ಟಿಯೂ ಈ ಗುಣವಿಲ್ಲದಿದ್ದರೆ ಆತ ತ್ಯಾಜ್ಯನಾಗುತ್ತಾನೆ' ಎಂದು ಉತ್ತರ ಕೊಡುತ್ತಾನೆ. ಹೀಗೆ ಹೆಬ್ಬಾವಿನ ರೂಪದಲ್ಲಿದ್ದ ನಹುಷನ ಎಲ್ಲಾ ಪ್ರಶ್ನೆಗೆ ಯುಧಿಷ್ಠಿರ ಸಮಂಜಸ ಉತ್ತರ ಕೊಟ್ಟ ಮೇಲೆ ನಹುಷ ತನ್ನ ಸರ್ಪರೂಪ ತ್ಯಚಿಸಿ ಸ್ವರ್ಗಕ್ಕೆ ಹೋಗುತ್ತಾನೆ. 

ಬಸವ ತತ್ವಗಳನ್ನು ಅಳವಡಿಸಿಕೊಂಡು ಬಸವ ಜಯಂತಿ ಸಂಪನ್ನಗೊಳಿಸೋಣ