Deepavali 2022 : ಧನ ತ್ರಯೋದಶಿ ದಿನ ಹಿತ್ತಾಳೆ ಖರೀದಿ ಹಿಂದಿದೆ ಕಾರಣ
ಈ ಬಾರಿ ಅಕೋಬರ್ 23ರಂದು ಧನ ತ್ರಯೋದಶಿ ಆಚರಣೆ ಮಾಡಲಾಗ್ತಿದೆ. ಜನರು ಬಂಗಾರ, ಬೆಳ್ಳಿ ಖರೀದಿಗೆ ಹಣ ಹೊಂದಿಸ್ತಿದ್ದಾರೆ. ಚಿನ್ನ ದುಬಾರಿ ಎನ್ನುವವರು ದೇವರ ಕೃಪೆ ಪಡೆಯಲು ಹಿತ್ತಾಳೆ ವಸ್ತು ಖರೀದಿಸಿದ್ರೆ ಸಾಕು.
ಧನ ತ್ರಯೋದಶಿಯನ್ನು ದೀಪಾವಳಿಗೆ ಮುನ್ನ ಆಚರಣೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಧನ ತ್ರಯೋದಶಿಗೂ ವಿಶೇಷ ಮಾನ್ಯತೆಯಿದೆ. ಧನ ತ್ರಯೋದಶಿ ದಿನ ತಾಯಿ ಲಕ್ಷ್ಮಿ ಹಾಗೂ ಕುಬೇರನನ್ನು ಜನರು ಪೂಜೆ ಮಾಡ್ತಾರೆ. ಈ ದಿನ ಲಕ್ಷ್ಮಿ ಹಾಗೂ ಕುಬೇರನ ಪೂಜೆ ಮಾಡುವುದ್ರಿಂದ ಮನೆಯಲ್ಲಿ ಸುಖ, ಸಂಪತ್ತು ಸದಾ ಇರುತ್ತದೆ ಎಂಬ ನಂಬಿಕೆಯಿದೆ. ಲಕ್ಷ್ಮಿ ದೇವಿಯ ಪೂಜೆ ಜೊತೆ ಧನ ತ್ರಯೋದಶಿ ದಿನ ಕೆಲ ವಸ್ತುಗಳನ್ನು ಖರೀದಿಸಿ ಮನೆಗೆ ತರುವ ವಾಡಿಕೆಯಿದೆ. ಬಂಗಾರ, ಬೆಳ್ಳಿ ಆಭರಣದ ಜೊತೆ ಧನ ತ್ರಯೋದಶಿ ದಿನ ಜನರು ಲೋಹದ ವಸ್ತುಗಳನ್ನು ಮನೆಗೆ ತರ್ತಾರೆ.
ಈ ದಿನ ಹಿತ್ತಾಳೆ (Brass) ವಸ್ತು ಅಥವಾ ಹಿತ್ತಾಳೆ ಪಾತ್ರೆಗಳನ್ನು ಜನರು ಹೆಚ್ಚಾಗಿ ಖರೀದಿ ಮಾಡ್ತಾರೆ. ಹಿತ್ತಾಳೆ ಪಾತ್ರೆಗಳನ್ನು ಧನ ತ್ರಯೋದಶಿ ದಿನ ಖರೀದಿ ಮಾಡಿದ್ರೆ ಮಂಗಳಕರ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇದಕ್ಕೆ ಅನೇಕ ಕಾರಣವೂ ಇದೆ. ನಾವಿಂದು ಧನ ತ್ರಯೋದಶಿ (Dhanteras) ದಿನ ಏಕೆ ಹಿತ್ತಾಳೆ ಪಾತ್ರೆಗಳನ್ನು ಖರೀದಿ ಮಾಡ್ಬೇಕು ಎನ್ನುವ ಬಗ್ಗೆ ನಿಮಗೆ ಹೇಳ್ತೇವೆ.
ಧನ ತ್ರಯೋದಶಿಯಂದು ಹಿತ್ತಾಳೆ ಪಾತ್ರೆಗಳಿಗೆ ಪ್ರಾಮುಖ್ಯತೆ ಏಕೆ ?: ಪ್ರತಿ ವರ್ಷ ಕಾರ್ತಿಕ ಮಾಸದ ತ್ರಯೋದಶಿಯಂದು ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಹಿತ್ತಾಳೆ ಲೋಹವನ್ನು ಧನ್ವಂತರಿ (Dhanvantari) ಯ ಲೋಹವೆಂದು ಪರಿಗಣಿಸಲಾಗಿದೆ. ಹಾಗಾಗಿ ಧನ್ವಂತರಿ ಲೋಹವನ್ನು ಧನ ತ್ರಯೋದಶಿ ದಿನ ಖರೀದಿ ಮಾಡುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಧನ್ವಂತರಿ ಆರಾಧನೆಗೆ ವಿಶೇಷ ಮಹತ್ವವಿದೆ. ಹಿಂದೂ ಪುರಾಣಗಳ ಪ್ರಕಾರ, ಧನ್ವಂತರಿಯು ವಿಷ್ಣು (Vishnu) ವಿನ 12 ನೇ ಅವತಾರವಾಗಿದೆ. ಈ ದಿನ ಭಗವಂತ ಧನ್ವಂತರಿ ದೇವ ಜನಿಸಿದ ಎಂದು ಹೇಳಲಾಗುತ್ತದೆ. ಹಿತ್ತಾಳೆ ಖರೀದಿ ಮೂಲಕ ಧನ್ವಂತರಿ ದೇವನ ಕೃಪೆಗೆ ಜನರು ಪಾತ್ರರಾಗ್ತಾರೆ.
ಇದಲ್ಲದೆ ಧನ ತ್ರಯೋದಶಿಯಂದು ಹಿತ್ತಾಳೆ ಖರೀದಿಸುವುದರಿಂದ ಮನೆಗೆ ಅದೃಷ್ಟ ಒಲಿದು ಬರುತ್ತದೆ. ಉತ್ತಮ ಆರೋಗ್ಯವನ್ನು ಬಯಸುವವರು ಧನ ತ್ರಯೋದಶಿ ದಿನ ಹಿತ್ತಾಳೆ ಪಾತ್ರೆಯನ್ನು ಖರೀದಿಸಬೇಕು. ಆಯುರ್ವೇದ (Ayurveda) ದಲ್ಲೂ ಹಿತ್ತಾಳೆ ಪಾತ್ರೆಗೆ ಮಹತ್ವವಿದೆ. ಇದ್ರ ಪ್ರಕಾರ, ಹಿತ್ತಾಳೆಯ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುವುದು ತುಂಬಾ ಆರೋಗ್ಯಕರ ಎನ್ನಲಾಗಿದೆ.
ಈ ನಾಲ್ಕು ನಕ್ಷತ್ರಗಳಲ್ಲಿ ಮಗು ಹುಟ್ಟಿದರೆ ಬಹಳ ಶುಭ, ನಿಮ್ಮ ನಕ್ಷತ್ರ ಇದರಲ್ಲಿದ್ಯಾ?
ಹಿತ್ತಾಳೆ ಮಹತ್ವ ನಿಮಗೆ ಗೊತ್ತಾ ? : ಗುರು (Jupiter) ಗ್ರಹದ ಶಾಂತಿಗಾಗಿ ಜನರು ಹಿತ್ತಾಳೆಯನ್ನು ಖರೀದಿಸುತ್ತಾರೆ. ಹಿತ್ತಾಳೆಯನ್ನು ಅನೇಕ ಮಂಗಳ ಕಾರ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಧನ ತ್ರಯೋದಶಿ ದಿನ ಹಿತ್ತಾಳೆ ದೀಪವನ್ನು ಖರೀದಿಸುವ ಜನರು ಲಕ್ಷ್ಮಿ ಹಾಗೂ ಗಣೇಶನ ಪೂಜೆಗೆ ಇದೇ ದೀಪವನ್ನು ಬಳಸ್ತಾರೆ. ಪುರಾಣಗಳಲ್ಲಿಯೂ ಹಿತ್ತಾಳೆ ಬಗ್ಗೆ ಅನೇಕ ಉಲ್ಲೇಖವಿದೆ. ಇದರ ಪ್ರಕಾರ, ದ್ರೌಪದಿಗೆ ಹಿತ್ತಾಳೆಯ ಅಕ್ಷಯ ಪಾತ್ರೆ ವರವಾಗಿ ಸಿಕ್ಕತ್ತು ಎನ್ನಲಾಗುತ್ತದೆ. ದೇವಾನುದೇವತೆಗಳಿಗೆ ಆಹಾರವನ್ನು ಹಿತ್ತಾಳೆ ಪಾತ್ರೆಯಲ್ಲಿಯೇ ನೀಡಬೇಕು ಎನ್ನಲಾಗುತ್ತದೆ. ಹಿತ್ತಾಳೆ ಪಾತ್ರೆಯಲ್ಲಿ ಆಹಾರ ನೀಡಿದ್ರೆ ದೇವರ ಕೃಪೆ ನಿಮ್ಮ ಮೇಲಾಗುತ್ತದೆ ಎಂದು ನಂಬಲಾಗಿದೆ.
ಇನ್ನೇನು ದೀಪಾವಳಿ ಬಂತು, ಲಡ್ಡು ಗೋಪಾಲನ ಪೂಜೆ ಮಾಡೋದು ಹೇಗೆ?
ಧನ ತ್ರಯೋದಶಿ ದಿನ ದೇವರ ಕೃಪೆ ಸಿಗಬೇಕು, ಮನೆಯಲ್ಲಿ ಸದಾ ಸಂತೋಷ, ಸಂಪತ್ತು ನೆಲೆಸಿರಬೇಕೆಂದ್ರೆ ನೀವೂ ಹಿತ್ತಾಳೆ ಪಾತ್ರೆಯನ್ನು ಖರೀದಿಸಬಹುದು. ಧನ ತ್ರಯೋದಶಿ ದಿನ ನೀವು ಬಂಗಾರ ಅಥವಾ ಬೆಳ್ಳಿಯನ್ನು ಕೂಡ ಖರೀದಿ ಮಾಡಬಹುದು. ಬೆಳ್ಳಿ ಖರೀದಿ ಮಾಡಿದ್ರೆ ಕುಬೇರ ತೃಪ್ತನಾಗ್ತಾನೆ ಎನ್ನುವ ನಂಬಿಕೆಯೂ ಇದೆ. ಒಂದ್ವೇಳೆ ಧನ ತ್ರಯೋದಶಿ ದಿನ ಬಂಗಾರ, ಬೆಳ್ಳಿ ಖರೀದಿ ಮಾಡಲು ಸಾಧ್ಯವಿಲ್ಲ ಎನ್ನುವವರು ಪೊರಕೆ ಅಥವಾ ಹಿತ್ತಾಳೆ ಪಾತ್ರೆ ಅಥವಾ ಕೊತ್ತಂಬರಿ ಬೀಜವನ್ನು ನೀವು ಖರೀದಿ ಮಾಡಬಹುದು.