ದೇವೀರಮ್ಮ ದೇವಸ್ಥಾನ; ಬರಿಗಾಲಲ್ಲಿ 3800 ಅಡಿ ಬೆಟ್ಟವೇರಿ ಹರಕೆ ತೀರಿಸಲು ಭಕ್ತರು ಸಜ್ಜು
ಬಿಂಡಿಗದಲ್ಲಿ ದೀಪೋತ್ಸವಕ್ಕೆ ಸಿದ್ಧತೆ
ಬೆಟ್ಟದಲ್ಲಿ ನೆಲೆಸಿರುವ ದೇವಿ, ಗಾಳಿ ರೂಪದಲ್ಲಿ ದೇಗುಲ ಪ್ರವೇಶ
ಹುಣ್ಣಿಮೆಗೆ ಬೆಟ್ಟವೇರಿ , ಅಮವಾಸ್ಯೆಗೆ ಗಡಿ ಪ್ರವೇಶ
ದೇವಿಯನ್ನ ನೋಡಲು ಭಾನುವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಜನ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿಯಲ್ಲಿ ದೇವರ ಮೊರೆ ಹೋಗ್ತಾರೆ. ಆದ್ರೆ, ಚಿಕ್ಕಮಗಳೂರಿನ ದೇವಿರಮ್ಮನ ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ದೇವರೆದುರು ದೇಹವನ್ನು ದಂಡಿಸಿಸ್ತಾರೆ. ಬರಿಗಾಲಲ್ಲೇ 3800 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸ್ತಾರೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳೋ ನಿರೀಕ್ಷೆ ಇದೆ. ದೀಪಾವಳಿ ಹಬ್ಬದ ಮುನ್ನ ದಿನಂದು ಬೆಟ್ಟವನ್ನೇರಿ ಲಕ್ಷಾಂತರ ಮಂದಿ ದೇವಿ ದರ್ಶನವನ್ನು ಪಡೆಯುತ್ತಾರೆ.
ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ಗಿರಿ ದೇವಿರಮ್ಮನ ದೇವಸ್ಥಾನ
ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನೆಲೆ ನಿಂತಿರೋ ಶಕ್ತಿದೇವತೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ಬೆಟ್ಟ ಹತ್ತಲು ಕ್ಷಣಗಣನೆ ಆರಂಭವಾಗಿದೆ. ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆಸಿರುವ ಆ ದೇವಿಯನ್ನ ನೋಡಲು ಇಂದು (ಭಾನುವಾರ) ಮಧ್ಯರಾತ್ರಿಯಿಂದಲೇ ಸಾವಿರಾರು ಜನ ಬೆಟ್ಟ ಹತ್ತಿ ಬೆಳಗ್ಗಿನ ಜಾವದ ಹೊತ್ತಿಗೆ ಗುಡ್ಡದ ತುದಿಯಲ್ಲಿ ನಿಂತಿರುತ್ತಾರೆ. ಪ್ರತಿ ವರ್ಷ ಈ ಬೆಟ್ಟವನ್ನ 50 ಸಾವಿರಕ್ಕೂ ಅಧಿಕ ಭಕ್ತರು ಹತ್ತಿ ದೇವಿಯನ್ನ ಕಂಡು ಪುಳಕಿತರಾಗುತ್ತಿದ್ದರು. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಹಾಗೂ ಕೊರೋನಾ ಕಾರಣದಿಂದ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಕೂಡ ಹೆಚ್ಚಿನ ಭಕ್ತರು ಬರದಂತೆ ಮನವಿ ಮಾಡಿತ್ತು. ಕೊನೆಗೆ ಜಿಲ್ಲಾಡಳಿತ ಸ್ಥಳಿಯರು ಮಾತ್ರ ಹತ್ತಬೇಕೆಂದು ಆದೇಶಿಸಿತ್ತು. ಆದರೆ, ಈ ವರ್ಷ ಮಳೆ ಹಾಗೂ ಕೊರೋನಾ ಎರಡೂ ಇಲ್ಲದ ಕಾರಣ ಈ ವರ್ಷ ಸುಮಾರು 80 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಬಹುದು ಎಂದು ಅಂದಾಜಿಸಲಾಗಿದೆ.
Mole day 2022: ಮಹತ್ವ ಮತ್ತು ಹೇಗೆ ಆಚರಿಸಬಹುದು ಎಂಬ ಮಾಹಿತಿ ಹೀಗಿದೆ
ಜಿಲ್ಲಾಡಳಿತದಿಂದ ಸಕಲ ಸಿದ್ದತೆ
ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಬೆಟ್ಟ ಹತ್ತುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುಂಜಾಗೃತ ಕ್ರಮಗಳನ್ನ ಕೈಗೊಂಡಿದೆ. ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿಗೆ ಹೆಚ್ಚುವರಿ ಬಸ್‍ಗಳನ್ನೂ ಬಿಟ್ಟಿದೆ. ಪೊಲೀಸ್ ಇಲಾಖೆ ಕೂಡ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಒಂದು ಡಿ.ವೈ.ಎಸ್.ಪಿ, ಎಂಟು ಸರ್ಕಲ್ ಇನ್ಸ್‍ಪೆಕ್ಟರ್, 32 ಪಿ.ಎಸ್.ಐ, 87 ಎ.ಎಸ್.ಐ, 500ಕ್ಕೂ ಅಧಿಕ ಪೇದೆಗಳು, 62 ಹೋಂಗಾರ್ಡ್ ಹಾಗೂ 6 ಡಿ.ಎ.ಆರ್.ತುಗಡಿಗಳನ್ನ ನಿಯೋಜಿಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ಕಾಫಿನಾಡು ಭಕ್ತರು ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತೆ.ಭಕ್ತರಿಗೆ ಮಾರ್ಗದರ್ಶನ ಮಾಡಲು ಧ್ವನಿ ವರ್ಧಕ ಅಳವಡಿಸಲಾಗಿದೆ. ಕೆಂಡದಾರ್ಚನೆಗೆ ಕುಂಡಗಳನ್ನು ನಿರ್ಮಿಸಲಾಗುತ್ತಿದೆ. ಭಕ್ತರು ನುಗ್ಗಿ ಬಾರದಂತೆ ಬೇಲಿ ನಿರ್ಮಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಬೆಟ್ಟದ ಮೇಲ್ಭಾಗದಲ್ಲೂ ಗೊಂದಲ ಉಂಟಾಗದಂತೆ ಎಚ್ಚರ ವಹಿಸಲಾಗಿದೆ.
800 ವರ್ಷ ಇತಿಹಾಸ ಇರುವ ಬಿಂಡಿಗ ದೇವಿರಮ್ಮ ದೇವಾಲಯದಲ್ಲಿ ನಿತ್ಯ ಬೆಳಿಗ್ಗೆ ಪೂಜೆ ನಡೆಯುತ್ತದೆ. ಅಧಿದೇವತೆ ದೇವಿರಮ್ಮ, ಅನ್ನಪೂರ್ಣೆ ಸ್ವರೂಪಿ ಹಾಲಮ್ಮ, ಲಕ್ಷಿ ಸ್ವರೂಪಿ ಚಿಕ್ಕಮ್ಮ, ಶಕ್ತಿಗಣಪತಿ ಇಲ್ಲಿ ನೆಲೆಸಿದ್ದು, ದೇವಿ ಮೈಮೇಲೆ ಬರುವುದಿಲ್ಲ. ಹೂವಿನ ಪ್ರಸಾದ ರೂಪದಲ್ಲಿ ಇಷ್ಟಾರ್ಥ ನೆರವೇರಿಸುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಎಲ್ಲ ದೇವತೆಗಳಿಂದ ಆಯುಧಗಳನ್ನು ಪಡೆದು ಕಾಳಿರೂಪ ತಳೆದ ರಾಕ್ಷಸನನ್ನು ಸಂಹಾರ ಮಾಡಿ ನರಕ ಚತುರ್ದಶಿಯಂದು ತಾನು ಪ್ರಪಂಚಕ್ಕೆ ಕಾಣಬೇಕೆಂಬ ಉದ್ದೇಶದಿಂದ ಬೆಟ್ಟದಲ್ಲಿ ದೇವಿ ಸ್ವರೂಪದಲ್ಲಿ ನೆಲೆಸಿ ರಕ್ಷಣೆ ನೀಡುತ್ತಿದ್ದಾಳೆ ಎನ್ನುವುದು ಇಲ್ಲಿನ ಸ್ಥಳ ಮಹಾತ್ಮೆಯಾಗಿದೆ.
ದೀಪಾವಳಿ ಸಂಭ್ರಮಕ್ಕೆ ಬತ್ತದ ತೋರಣದ ಸೊಬಗು!
ನರಕ ಚತುರ್ಥಿಯಂದು ಮಾತ್ರ ಬೆಟ್ಟದಲ್ಲಿ ಅಮ್ಮನವರಿಗೆ ಪೂಜೆ ಸಲ್ಲುತ್ತದೆ. ದೀಪಾವಳಿಗೆ 15 ದಿನ ಮೊದಲು ಹುಣ್ಣಿಮೆಯಂದು ಗ್ರಾಮದ ಮನೆಗೊಬ್ಬರು ಸೇರಿ ಅಮ್ಮನವರ ಗದ್ದುಗೆಂಂದಿಗೆ ಹೋಗಿ ಎಲೆ ಕಟ್ಟಿ ಬರುತ್ತಾರೆ. ಗಾಳಿ ರೂಪದಲ್ಲಿ ತೆರಳುವ ಅಮ್ಮನವರು 15 ದಿನ ಅಲ್ಲಿ ನೆಲೆಸಿ ಅಮಾವಾಸ್ಯೆಯಂದು ದೇವಸ್ಥಾನದ ಗರ್ಭಗುಡಿ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುವ ದೃಶ್ಯ ಕೌತುಕವನ್ನು ಹುಟ್ಟುಸುತ್ತೇದೆ. ದೀಪಾವಳಿ ಅಮಾಮಾಸ್ಯೆಯಂದು ಬೆಟ್ಟದ ಕೆಳಗಿನ ದೇವಾಲಯದ ಗರ್ಭಗುಡಿ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುವ ದೃಶ್ಯ ನೋಡಲು ಭಕ್ತರು ಆಗಮಿಸುತ್ತಾರೆ. ಒಟ್ಟಾರೆ, ಕಾಫಿನಾಡಲ್ಲಿ ನೆಲೆಸಿರುವ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಅಗಣಿತ ಮಂದಿ ಭಕ್ತರ ಪಾಲಿಗೆ ಬೇಡಿಕೆಯನ್ನೆಲ್ಲಾ ಈಡೇರಿಸೋ ಕರುಣಾಳು ಅಂದ್ರೆ ತಪ್ಪಲ್ಲ. ಜನರು ತಮ್ಮ ಆಸೆ, ಆಶೋತ್ತರಗಳನ್ನು ಈಡೇರಿಸುವ ದೇವಿಯಾಗಿ ದೇವಿರಮ್ಮನನ್ನು ನಂಬಿ ವರ್ಷಕ್ಕೊಂದು ಭಾರಿ ನಿಷ್ಕಲ್ಮಷ ಮನಸ್ಸಿನಿಂದ ತಮ್ಮ ಕೈಲಾದಷ್ಟು ಮಟ್ಟಿಗೆ ಭಕ್ತಿ ಸಮರ್ಪಿಸಿ ಪಾವನರಾಗ್ತಾರೆ.