ದೀಪಾವಳಿ ಸಂಭ್ರಮಕ್ಕೆ ಬತ್ತದ ತೋರಣದ ಸೊಬಗು ಗಂಗಾವತಿ ಕಲಾಕಾರನ ಕೈಯಲ್ಲಿ ಅರಳಿದ ತೋರಣ ಭೀಮರಾಯಗೆ ಪೂರೈಕೆ ಮಾಡಲಾಗದಷ್ಟುಬೇಡಿಕೆ

ಸೋಮರಡ್ಡಿ ಅಳವಂಡಿ

ಕೊಪ್ಪಳ (ಅ.23) : ಪ್ಲಾಸ್ಟಿಕ್‌ ಅಲಂಕಾರಿಕ ವಸ್ತುಗಳೇ ಈಗ ಮನೆಯವನ್ನು ಆವರಿಸುತ್ತಿವೆ. ಸಂಪ್ರದಾಯ ಸೊಬಗು ಮಾಯವಾಗುತ್ತಿರುವ ಹೊತ್ತಿನಲ್ಲಿ ಗಂಗಾವತಿ ತಾಲೂಕಿನ ವಡ್ಡರಟ್ಟಿಗ್ರಾಮದ ಕಲಾಕಾರನ ಕೈಯಲ್ಲಿ ಈ ಬಾರಿ ಬತ್ತದ ತೆನೆಯ ತೋರಣಗಳು ಸಿದ್ಧವಾಗಿದ್ದು, ದೀಪಾವಳಿಯ ಸೊಬಗು ಹೆಚ್ಚಿಸಿವೆ. ತುಂಬಿದ ಬತ್ತದ ತೆನೆಯ ಮೂಲಕವೇ ನಾನಾ ಬಗೆಯ ತೋರಣಗಳನ್ನು ಸಿದ್ಧ ಮಾಡಿದ್ದು, ಭಾರಿ ಬೇಡಿಕೆ ಬಂದಿದೆ. ಬೇಡಿಕೆಗೆ ತಕ್ಕಷ್ಟುಪೂರೈಕೆ ಮಾಡಲು ಆಗುತ್ತಿಲ್ಲ. ಕಲಾಕಾರ ಭೀಮರಾಯ ದೇವಿಕೇರಿ ಇಂಥದ್ದೊಂದು ಹೊಸ ಪ್ರಯೋಗ ಮಾಡಿದ್ದು, ಜನರು ಸಹ ಬಹಳ ಮೆಚ್ಚಿಕೊಂಡು, ಸಾಕಷ್ಟುಆರ್ಡರ್‌ಗಳನ್ನು ನೀಡಿದ್ದಾರೆ.\

ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?

ಏನಿದು ಬತ್ತದ ತೋರಣ?:

ಈ ಹಿಂದೆ ಮಾವಿನ ತೋರಣ, ಹೂ, ಮೊದಲಾದ ನೈಸರ್ಗಿಕವಾಗಿಯೇ ಇರುವ ವಸ್ತುಗಳ ಮೂಲಕ ಅಲಂಕಾರ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಅಲಂಕಾರಿಕಗಳು ತುಂಬಿಕೊಳ್ಳುತ್ತಿವೆ. ಇದಕ್ಕೆ ಪರ್ಯಾಯವಾಗಿ ಭೀಮರಾಯ ಅವರು ಈ ಬಾರಿ ಬತ್ತದ ತೋರಣ ತಯಾರಿಸಿದ್ದಾರೆ.

ಕೇವಲ ಮನೆಗೆ ಮತ್ತು ಸ್ನೇಹಿತರ ಮನೆಗಳಿಗಾಗಿ ಎಂದು ಪ್ರಯೋಗ ಮಾಡಿದ ಭೀಮರಾಯ ಅವರು ತಮ್ಮ ಫೋಟೋ ಸ್ಟುಡಿಯೋದಲ್ಲಿ ಅಂದಕ್ಕಾಗಿ ಹಾಕಿದ್ದರು. ಬತ್ತದ ತೆನೆಯಿರುವಾಗಲೇ ಕೊಯ್ಲು ಮಾಡಿಕೊಂಡು ಬಂದು, ಬಾಗಿಲು ತೋರಣಗಳು, ದೇವರ ಮನೆ ತೋರಣಗಳು ಸೇರಿದಂತೆ ನಾನಾ ರೀತಿಯ ತೋರಣಗಳನ್ನು ಸಿದ್ಧ ಮಾಡಿದ್ದಾರೆ. ಇದಕ್ಕಾಗಿ ದರಗಳನ್ನು ನಿಗದಿ ಮಾಡಿದ್ದು, ಅಪಾರ ಬೇಡಿಕೆ ಬಂದಿದೆ.

ಹೀಗಾಗಿ ಈಗ ಅವರು ಸ್ನೇಹಿತನ ಹೊಲದಲ್ಲಿ ಕಾಲು ಎಕರೆಯಲ್ಲಿನ ಬತ್ತವನ್ನೇ ಗುತ್ತಿಗೆ ರೂಪದಲ್ಲಿ ಖರೀದಿಸಿದ್ದಾರೆ. ಅದರಿಂದ ಈಗ ತಾವಲ್ಲದೆ ನಾಲ್ಕಾರು ಮಹಿಳೆಯರ ಮೂಲಕವೂ ಸಿದ್ಧ ಮಾಡಿ, ಬೇಡಿಕೆಗೆ ಅನುಸಾರವಾಗಿ ಪೂರೈಕೆ ಮಾಡುತ್ತಿದ್ದಾರೆ. ಆದರೂ ಬೇಡಿಕೆಯಷ್ಟುಪೂರೈಕೆ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಅವರು.

ವರ್ಷಪೂರ್ತಿ ಸೊಬಗು:

ಬತ್ತದ ತೋರಣ ತೆನೆ ಸಮೇತ ಮಾಡಲಾಗುತ್ತಿದ್ದು, ಅದು ವರ್ಷಪೂರ್ತಿ ಮನೆಯ ಅಂದವನ್ನು ಹೆಚ್ಚಿಸಲಿದೆ. ಅಲ್ಲದೆ ಧನಾತ್ಮಕ ವಾತಾವರಣಕ್ಕೆ ತೆನೆಯ ಬೆಳೆ ಕಾರಣವಾಗುತ್ತದೆ. ಅಲ್ಲದೆ ಈಗಾಗಲೇ ಮೊಬೈಲ್‌ ಬಳಕೆಯಿಂದ ದೂರವಾಗಿರುವ ಗುಬ್ಬಿಗಳು ಮತ್ತೆ ಮನೆಯತ್ತ ಬರಲಿವೆ. ಅವುಗಳಿಗೆ ಇದು ಆಹಾರವೂ ಆಗುತ್ತದೆ. ಮನೆಯ ಹೊರಬಾಗಿಲಿಗೆ ಹಾಕಿರುವ ತೋರಣವನ್ನು ಅವು ತಿನ್ನಲು ಬರುತ್ತವೆ. ಅದು ಸಹ ಮತ್ತಷ್ಟುಖುಷಿಯನ್ನು ನೀಡುತ್ತದೆ. ಹೀಗಾಗಿಯೇ ಬತ್ತದ ತೆನೆ ತೋರಣಕ್ಕೆ ಭಾರಿ ಬೇಡಿಕೆ ಬರುತ್ತಿದೆ.

ಕಲೆಗಳಲ್ಲಿ ಪರಿಣತ...

ಚಿತ್ರಕಲೆಯಲ್ಲಿ ಮಾಸ್ಟರ್‌ ಆಫ್‌ ಫೈನ್‌ ಆಟ್ಸ್‌ರ್‍ ಪದವಿ ಪೂರೈಸಿರುವ ಭೀಮರಾಯ ದೇವಿಕೇರಿ ಅವರ ಕ್ಯಾನ್ವಾಸ್‌ ಪೇಂಟಿಂಗ್‌ಗಳಿಗೆ ಬೆಂಗಳೂರು, ಮುಂಬಯಿ, ಗೋವಾ, ಕೋಲ್ಕತ್ತಾ ಇನ್ನಿತರೆಡೆ ಭಾರೀ ಬೇಡಿಕೆ ಇದೆ. ಚಿತ್ರಕಲೆಯಲ್ಲದೆ ಟೆರ್ರಾಕೋಟ, ಆ್ಯಂಬೋಜಿಂಗ್‌ ಇನ್ನಿತರ ಕರಕುಶಲ ಕಲೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಫೈನ್‌ ಆರ್ಚ್‌ಗಾಗಿ ಕೇಂದ್ರೀಯ ಸಚಿವಾಲಯದಿಂದ ಫೆಲೋಶಿಪ್‌ ದೊರೆತಿದೆ.

ದೀಪಾವಳಿಯಂದು ಇವುಗಳನ್ನು ನೋಡಿದ್ರೆ ಹಣೆಬರಹವೇ ಬದಲಾಗುತ್ತೆ!

ಪ್ಲಾಸ್ಟ್‌ ಬಳಕೆಗೆ ಕಡಿವಾಣ ಬೀಳಬೇಕು. ಮನೆಯಲ್ಲಿಯೂ ನೈಸರ್ಗಿಕವಾಗಿಯೇ ಸೊಬಗು ಹೆಚ್ಚಿಸುವಂತಾಗಬೇಕು ಎನ್ನುವ ಸದಾಶಯದಿಂದ ಬತ್ತದ ತೋರಣಗಳನ್ನು ಮಾಡಲು ಪ್ರಾರಂಭಿಸಿದ್ದು, ಇಷ್ಟೊಂದು ಬೇಡಿಕೆ ಬರುತ್ತದೆ ಎಂದು ನಾನು ಸಹ ಅಂದುಕೊಂಡಿರಲಿಲ್ಲ.

ಭೀಮರಾಯ ದೇವಿಕೇರಿ, ಕಲಾವಿದ