Chanakya Niti: ಚಾಣಕ್ಯ ಹೇಳ್ತಾನೆ, ಮಗಳ ಮುಂದೆ ಗಂಡ- ಹೆಂಡತಿ ಹೀಗೆಲ್ಲ ಮಾಡಬೇಡಿ!
ಚಾಣಕ್ಯ ನೀತಿಯಲ್ಲಿ ದಾಂಪತ್ಯದಿಂದ ಹಿಡಿದು ರಾಜನ ಆಡಳಿತದವರೆಗೆ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ವಿಶೇಷವಾಗಿ ಮಗಳನ್ನು ಹೇಗೆ ಬೆಳೆಸಬೇಕು, ಯಾವ ರೀತಿ ನೋಡಿಕೊಳ್ಳಬೇಕು ಎಂಬ ಬಗ್ಗೆ ಚಾಣಕ್ಯ ಹೇಳುವ ಕೆಲವು ಮುಖ್ಯ ಸೂತ್ರಗಳು ಇಂದಿನ ತಂದೆಯರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತವೆ.
ಚಾಣಕ್ಯ ನೀತಿ ನಮಗೆ ನಿಮಗೆಲ್ಲ ಅಚ್ಚುಮೆಚ್ಚಿನದು ಅಲ್ಲವೇ. ಆತ ತುಂಬಾ ವಿಷಯಗಳ ಬಗ್ಗೆ ಮಾತನಾಡಿದ್ದಾನೆ. ಚಂದ್ರಗುಪ್ತ ಮೌರ್ಯನನ್ನು ಪಟ್ಟಕ್ಕೆ ಏರಿಸಿದಲ್ಲಿಂದ ಆರಂಭವಾದ ಈತನ ನೀತಿಯ ಅನಾವರಣ, ಆತ ಬದುಕಿದಷ್ಟೂ ಕಾಲ ಆಗುತ್ತಲೇ ಇತ್ತು. ನಂತರ ಆತನ ನೀತಿಗಳು ʼಅರ್ಥಶಾಸ್ತ್ರʼ ಎಂಬ ಹೆಸರಿನಿಂದ ಪ್ರಚಲಿತವಾದವು. ಇಂದು ಆ ಹೆಸರಿಗಿಂತಲೂ ಚಾಣಕ್ಯ ನೀತಿ ಎಂಬ ಹೆಸರಿನಿಂದಲೇ ಅವು ಖ್ಯಾತವಾಗಿರುವುದು ಕಂಡುಬರುತ್ತದೆ. ಈ ನೀತಿಯಲ್ಲಿ ಆತ ದಾಂಪತ್ಯದಿಂದ ಹಿಡಿದು ರಾಜನ ಆಡಳಿತದವರೆಗೆ, ಶತ್ರುರಾಜರನ್ನು ಹೇಗೆ ಗೆಲ್ಲಬೇಕು ಎಂಬಲ್ಲಿಂದ ಹಿಡಿದು ತರುಣಿಯನ್ನು ಹೇಗೆ ಒಲಿಸಿಕೊಳ್ಳಬೇಕು ಎಂಬಲ್ಲಿಯವರೆಗಿನ ಅನೇಕ ವಿಷಯಗಳನ್ನು ತಿಳಿಹೇಳುತ್ತಾನೆ.
ಚಾಣಕ್ಯ ಕುಟುಂಬಕ್ಕೆ ಸಂಬಂಧಿಸಿ ಹೇಳುವ ಮಾತುಗಳಲ್ಲಿ, ಮಗಳ ಜೊತೆಗೆ ಅಪ್ಪ ಹೇಗಿರಬೇಕು ಎಂದು ಹೇಳುವ ಮಾತುಗಳೂ ಮುಖ್ಯವಾಗಿವೆ. ಇದು ಆಧುನಿಕ ತಂದೆಯರಿಗೆ ಒಳ್ಳೆಯ ಕೌನ್ಸೆಲಿಂಗ್‌ನಂತಿವೆ. ಅವು ಹೀಗಿವೆ:
1) ಎಳೆಯ ಪ್ರಾಯದ ಮಗಳನ್ನು ಹೂವಿನಂತೆ ಜತನ ಮಾಡಬೇಕು. ಅಂದರೆ ಆಕೆಗೆ ಗದರಿಸಿ ಮಾತನಾಡಬಾರದು, ಹೊಡೆಯಬಾರದು. ಆಕೆಯ ಬಳಿ ಹೋಗುವಾಗ ಪಾನಮತ್ತನಾಗಿರಬಾರದು. ಯಾಕೆಂದರೆ ಪಾನಮತ್ತನಾಗಿದ್ದಾಗ ವಿವೇಚನೆ ಕಳೆದುಹೋಗುತ್ತದೆ. ಆಕೆಯ ಮುದ್ದಾದ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಈ ಕುಟುಂಬದಲ್ಲಿ ತನಗೂ ಪ್ರಮುಖ ಸ್ಥಾನವಿದೆ ಎಂಬ ಭಾವನೆ ಆಕೆಯಲ್ಲಿರಬೇಕು.
2) ಆದರೆ ಮುದ್ದು ಅತಿಯೂ ಆಗಬಾರದು. ಪ್ರೀತಿಸಬೇಕು, ಆದರೆ ಪ್ರೀತಿಯನ್ನು ವಿವೇಚನೆಯಿಂದ ಬಳಸಬೇಕು. ಆಕೆ ಕೇಳಿದ್ದನ್ನೆಲ್ಲಾ ಅಂಗಡಿಯಿಂದ ಕೊಡಿಸಬಾರದು. ನಿಮ್ಮ ಬಳಿ ಇರುವ ಭಂಡಾರವನ್ನೆಲ್ಲಾ ಚೆಲ್ಲಿ ಮಕ್ಕಳಿಗೆ ಸುವಸ್ತುಗಳನ್ನು ಕೊಡಿಸಿದರೂ ಅದೇನೂ ಅವರಿಗೆ ಅರ್ಥವಾಗುವುದಿಲ್ಲ. ಬದಲಾಗಿ, ಯಾವ ಸಮಯದಲ್ಲಿ ಯಾವುದು ಅಗತ್ಯವಾದ್ದೋ, ಅದನ್ನು ಕೊಡಿಸಿದರೆ ಸಾಕು.
3) ಎದೆಯುದ್ದಕ್ಕೆ ಬೆಳೆದ, ಪ್ರಾಯಕ್ಕೆ ಬಂದ ಮಗಳಿಗೆ ಅತಿ ಸಲಿಗೆ ಕೊಡಬಾರದು. ಆಕೆಯನ್ನು ಮೊದಲಿನಂತೆ ಮಡಿಲಿನಲ್ಲಿ ಕೂರಿಸಿಕೊಳ್ಳಬಾರದು. ಆಕೆಯನ್ನು ಹುಡುಗರ ನಡುವೆ ಒಂಟಿಯಾಗಿ ಬಿಡಬಾರದು. ಆಕೆಯ ಸ್ನೇಹಿತ/ತೆಯರು ಯಾರು, ಅವರ ನಡತೆ ಹೇಗೆ ಎಂಬುದನ್ನು ಆಗಾಗ ಪರೀಕ್ಷಿಸುತ್ತಿರಬೇಕು. ಅವರನ್ನು ಮನೆಗೆ ಕರೆದು ಪರಿಚಯ ಮಾಡಿಕೊಳ್ಳಬಹುದು.
4) ಮಗಳ ಕಲಿಕೆಗೆ ಎಂದೂ ತಡೆ ಒಡ್ಡಬಾರದು. ಆಕೆ ಏನನ್ನು ಎಷ್ಟು ಕಾಲ ಕಲಿಯಲು ಬಯಸುತ್ತಾಳೋ ಅದಕ್ಕೆ ಆಸ್ಪದ ಮಾಡಿಕೊಡಬೇಕು. ಒಳ್ಲೆಯ ಗುರುಗಳಲ್ಲಿ ಆಕೆಗೆ ಶಿಕ್ಷಣ ಕೊಡಿಸಬೇಕು. ಲಲಿತಕಲೆಗಳಲ್ಲಿ ಆಸಕ್ತಿ ತೋರಿಸಿದರೆ ಅವಕಾಶ ಮಾಡಿಕೊಡಬೇಕು.
5) ಮಗಳನ್ನು ನಿಮಗಿಂತ ಶ್ರೀಮಂತ ಬಂಧುಗಳ ಮನೆಯಲ್ಲಿ ಬಿಟ್ಟುಹೋಗಬಾರದು. ಅಲ್ಲಿ ಅವರು ಆಕೆಯ ಮುಂದೆ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೀನಾಯವಾದ ಮಾತುಗಳನ್ನಾಡಿದರೆ ಆಕೆಗೆ ಮುಖಭಂಗವಾಗಬಹುದು.
6) ಮಗಳನ್ನು ನಿಮಗಿಂತ ಅತಿ ಶ್ರೀಮಂತರು ಅಥವಾ ನಿಮಗಿಂತ ಅತಿ ಬಡವರ ಮನೆಗೆ ಮದುವೆ ಮಾಡಿ ಕಳಿಸಬಾರದು. ಅತಿ ಶ್ರೀಮಂತರ ಮನೆಯಲ್ಲಿ ಅವರು ಸೇವೆಯ ಆಳುವ ಆಗುವ ಸಾಧ್ಯತೆ ಇದೆ. ಬಡವರ ಮನೆಯಲ್ಲಿ ಅವಳು ಮನೆ ನಡೆಸಲು ನಿಮ್ಮ ಮನೆಯಿಂದಲೇ ಹಣಕಾಸು ಒಯ್ಯಬೇಕಾದ ಪರಿಸ್ಥಿತಿ ಬರಬಹುದು. ನಿಮಗೆ ಸಮನಾದ ಸ್ಥಿತಿಗತಿಯ ಮನೆತನ ಸೂಕ್ತ. ಆದರೆ ವರನನ್ನು ಆರಿಸುವಾಗ ಮಗಳ ಅಭಿಪ್ರಾಯವೇ ಮುಖ್ಯ.
ಗಂಡ ಹೆಂಡತಿ ಈ ಕೆಲಸ ಜೊತೆಯಾಗಿ ಮಾಡಲೇ ಬಾರದಂತೆ
7) ಬೆಳೆಯುತ್ತಿರುವ ಮಗಳ ಮುಂದೆ ಗಂಡ- ಹೆಂಡತಿ ಸರಸ ಆಡಬಾರದು. ಅದು ಆಕೆಯ ಮನಸ್ಸನ್ನು ಚಂಚಲಗೊಳಿಸಬಹುದು. ಮನಸ್ಸಿನಲ್ಲೇ ಮಂಡಿಗೆ ತಿನ್ನುವಂತಾಗಬಹುದು. ತಾನೂ ಹೀಗೆ ಮಾಡಿದರೆ ತಪ್ಪೇನು ಎಂಬ ಭಾವನೆ ಆಕೆಯಲ್ಲಿ ಮೂಡಬಹುದು. ಮಗು ಸಣ್ಣವಳಾಗಿದ್ದಾಗ ಕೂಡ, ಆಕೆಯ ಮುಂದೆ ಲೈಂಗಿಕ ಕ್ರಿಯೆ ನಡೆಸಬಾರದು. ಇದು ಆಕೆಯ ಮನದಲ್ಲಿ ಅಪಕಲ್ಪನೆಗಳನ್ನು, ಮಾನಸಿಕ ವಿಕಲ್ಪಗಳನ್ನು ಬಿತ್ತಬಹುದು.
8) ಮಗಳ ಮುಂದೆ ಅಪ್ಪ ಅಮ್ಮ ಜಗಳ ಕೂಡ ಆಡಬಾರದು. ಒಬ್ಬರನ್ನೊಬ್ಬರು ಬೈದಾಡಬಾರದು. ಇದು ಕೂಡ ದಾಂಪತ್ಯದ ಬಗ್ಗೆ ಆಕೆಯಲ್ಲಿ ಕಹಿ ಭಾವನೆ ಮೂಡಿಸುತ್ತದೆ. ಮಾತ್ರವಲ್ಲ ನಿಮ್ಮ ಬಗ್ಗೆಯೂ ದ್ವೇಷ ಭಾವನೆ ಮೂಡಿಸುತ್ತದೆ.
ದೇವಿ ದುರ್ಗೆಯ 10 ಕೈಗಳು ಹಾಗೂ ಅದರಲ್ಲಿನ ಆಯುಧಗಳ ಅರ್ಥವೇನು?