ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಮಹೋತ್ಸವವನ್ನು ಅರ್ಥಪೂರ್ಣ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಅ.16): ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಮಹೋತ್ಸವವನ್ನು ಅರ್ಥಪೂರ್ಣ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಾಮುಂಡಿಬೆಟ್ಟದಲ್ಲಿ ಭಾನುವಾರ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಸರಾ ಮೂಲಕನಾಡಿನ ಕಲೆ, ಸಂಸ್ಕೃತಿಯನ್ನು ದೇಶಕ್ಕೆ ತಿಳಿಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ದಸರಾ ಮೆರವಣಿಗೆ ಮೂಲಕ ಮಾಡುತ್ತೇವೆ. ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ ಎಂದರು.
ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದು. ನಮ್ಮ ಜನ ಬಹಳ ಸುಸಂಸ್ಕೃತರು. ಪ್ರೀತಿ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತ್ಯಂತ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು. ರಾಜ್ಯದಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲದ ಸ್ಥಿತಿ ಇದೆ. ಮಳೆ ಇಲ್ಲದೆ ನಾಡಿನ ರೈತ ಕುಲ , ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ದೂರಿ ಇಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರಾ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು. ಬರದ ನಡುವೆಯೂ ದಸರಾ ಮಹತ್ವ ಕಡಿಮೆಯಾಗದಂತೆ ರಾಜ್ಯ ಸರಕಾರ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಆಚರಣೆ ಮಾಡುತ್ತಿದೆ.
BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 30 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದರು. 4860 ಕೋಟಿ ಬೆಳೆ ನಷ್ಟ ಪರಿಹಾರವನ್ನು ಕೇಂದ್ರದಿಂದ ನಿರೀಕ್ಷೆ ಮಾಡುತ್ತಿದ್ದೇವೆ. ಕೇಂದ್ರದ ಅನುದಾನವನ್ನೇ ನಂಬಿಕೊಳ್ಳದೇ ರೈತರಿಗೆ ನೆರವಾಗುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ ಎಂದರು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿದರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ ವೆಂಕಟೇಶ್, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಇಂಧನ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಟಿ.ಎಸ್. ಶ್ರೀವತ್ಸ, ಜಿ.ಡಿ. ಹರೀಶ್ ಗೌಡ, ಡಿ ರವಿಶಂಕರ್, ಕೆ. ಹರೀಶ್ ಗೌಡ, ದರ್ಶನ್ ದ್ರುವ ನಾರಾಯಣ್, ಎಚ್.ಎಂ. ಗಣೇಶಪ್ರಸಾದ್, ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ.
ಬಿಜೆಪಿಯೇ ಮುಳುಗುತ್ತಿರುವ ಹಡಗು: ಎಂ.ಪಿ.ರೇಣುಕಾಚಾರ್ಯ
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಚಾಮುಂಡಿಬೆಟ್ಟ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಉಫಾಧ್ಯಕ್ಷ ವೈ.ಎಸ್, ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್, ದಕ್ಷಿಣ ವಲಯ ಡಿಐಜಿ ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಸೀಮಾ ಲಾಟ್ಕರ್, ಪಾಲಿಕ ಆಯುಕ್ತ ಆಶಾದ್ ರೆಹಮಾನ್ ಷರೀಫ್, ಎಂಡಿಎ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮೊದಲಾದವರು ಇದ್ದರು. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸ್ವಾಗತಿಸಿದರು. ಜಿಪಂ ಸಿಇಒ ಕೆ.ಎಂ. ಗಾಯತ್ರಿ ವಂದಿಸಿದರು. ರೂಪಶ್ರೀ, ಯತೀಶ್ ನಿರೂಪಿಸಿದರು. ಅಮ್ಮ ರಾಮಚಂದ್ರ ಮತ್ತು ತಂಡದವರು ನಾಡಗೀತೆ, ಸಂವಿಧಾನ ಪೀಠಿಕೆ ಗೀತೆ ಹಾಡಿದರು.
