Asianet Suvarna News Asianet Suvarna News

ಕರ್ನಾಟಕದ ಈ ಭಾಗದಲ್ಲಿ ಹುಲಿ ಕುಣಿತ, ಜಂಬೂ ಸವಾರಿಗಿಂತ ದಾಂಡಿಯಾ ನೃತ್ಯವೇ ಫೇಮಸ್ಸು!

ಕರ್ನಾಟಕದ ಈ ಭಾಗದಲ್ಲಿ ನವರಾತ್ರಿ ವೇಳೆ ಹುಲಿ ಕುಣಿತ, ಜಂಬೂ ಸವಾರಿ ಹಾಗೂ ಗೊಂಬೆ ಪ್ರದರ್ಶನಕ್ಕಿಂತ ದಾಂಡಿಯಾ ನೃತ್ಯ ಪ್ರದರ್ಶನವೇ ಪ್ರಸಿದ್ಧಿಯಾಗಿದೆ.

Coastal Karnataka Navratri Celebration Dandiya dance is more famous than tiger jump and jumbo ride sat
Author
First Published Oct 23, 2023, 7:56 PM IST

ವರದಿ- ಭರತ್‌ರಾಜ್‌ ಕಲ್ಲಡ್ಕ, ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಉತ್ತರ ಕನ್ನಡ (ಅ.23): ನವರಾತ್ರಿಯ ಸಂದರ್ಭ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹುಲಿವೇಷ ಖ್ಯಾತಿ ಪಡೆದ್ರೆ, ಉತ್ತರಕನ್ನಡ ಜಿಲ್ಲೆಯಲ್ಲಿ ದಾಂಡಿಯಾ ಸಕ್ಕತ್ ಫೇಮಸ್. ನವರಾತ್ರಿಯ ಒಂಭತ್ತು ದಿನಗಳ ಕಾಲ ಕಾರವಾರದ ವಿವಿಧೆಡೆ ದಾಂಡಿಯಾ ಆಡುವ ಮೂಲಕ ನವರಾತ್ರಿಯನ್ನು ಜನರು ಅದ್ಧೂರಿಯಾಗಿ ಆಚರಿಸುತ್ತಾರೆ. ಕೇವಲ ಗುಜರಾತ್, ರಾಜಸ್ಥಾನ ನಂತಹ ರಾಜ್ಯಗಳಲ್ಲಿ ಮಾತ್ರ ಪ್ರಚಲಿತದಲ್ಲಿರುವ ದಾಂಡಿಯಾ, ಗರ್ಬಾ ನೃತ್ಯವನ್ನು ನವರಾತ್ರಿ ಸಂದರ್ಭದಲ್ಲಿ ಆಡುವ ಮೂಲಕ ಕಾರವಾರಿಗರು ಕೂಡಾ ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ.

ಒಂದೆಡೆ ದೀಪಾಲಂಕೃತಗೊಂಡಿರುವ ಆವರಣದಲ್ಲಿ ಬಣ್ಣ ಬಣ್ಣದ ಸೀರೆಯನ್ನುಟ್ಟು, ಕೈಯಲ್ಲಿ ಕೋಲನ್ನು ಹಿಡಿದು ನೃತ್ಯದಲ್ಲಿ ಭಾಗಿಯಾಗಿರುವ ಮಹಿಳೆಯರು. ಇನ್ನೊಂದೆಡೆ ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಿರುವ ಪುರುಷರು, ಯುವಕರು ಹಾಗೂ ಯುವತಿಯರು. ಮತ್ತೊಂದೆಡೆ ದಾಂಡಿಯಾ ನೃತ್ಯವನ್ನು ಕಣ್ತುಂಬಿಕೊಂಡು ಮೊಬೈಲಿನಲ್ಲೂ ಸೆರೆಹಿಡಿಯುತ್ತಾ ಸಂಭ್ರಮಿಸುತ್ತಿರುವ ಪ್ರೇಕ್ಷಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. 

'ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್': ದೇವರಗುಡ್ಡ ಕಾರ್ಣಿಕ

ಗೋವಾ ಗಡಿ ತಾಲೂಕಾದ ಕಾರವಾರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ರಾಜಸ್ಥಾನ, ಪಂಜಾಬ್ ಹಾಗೂ ಗುಜರಾತ್ ಸಂಸ್ಕೃತಿಯಾದ ದಾಂಡಿಯ ಹಾಗೂ ಗರ್ಬಾ ನೃತ್ಯವನ್ನು ಆಡುವ ಮೂಲಕ ಇಲ್ಲಿನ ಜನರು ಸಂಭ್ರಮಿಸುತ್ತಿದ್ದಾರೆ. ನವರಾತ್ರಿ ಬಂತೆಂದರೆ ಸಾಕು ಕಾರವಾರ ತಾಲೂಕಿನ ವಿವಿಧೆಡೆ ರಾತ್ರಿ ವೇಳೆಗೆ ದಾಂಡಿಯಾ ಹಾಗೂ ಗರ್ಬಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಕಾರವಾರದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ದಾಂಡಿಯಾ ಆಟವನ್ನು ಆಯೋಜಿಸಲಾಗುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. 

ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್ ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ, ಗರ್ಬಾ ನೃತ್ಯವನ್ನು ಹಲವಾರು ವರ್ಷದಿಂದ ಕಾರವಾರದ ಜನರೂ ಆಡುತ್ತಾ ಬರುತ್ತಿದ್ದಾರೆ. ಕಾರವಾರ ಸೋನಾರವಾಡ, ದೇವಳಿವಾಡ, ಕಳಸವಾಡ ಮುಂತಾದೆಡೆ ಸುಮಾರು ಹತ್ತರಿಂದ ಹದಿನೈದು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿರೋ ದಾಂಡಿಯಾ ಈ ವರ್ಷ ಕೂಡಾ ಅದ್ಧೂರಿಯಾಗಿ ನಡೆದಿದೆ. ಯಾವುದೇ ಜಾತಿ, ಧರ್ಮ, ಪ್ರಾಯದ ಮಿತಿಯಿಲ್ಲದೇ, ಪ್ರತಿಯೊಬ್ಬರೂ ಜತೆಗೂಡಿ ಸಂಪ್ರದಾಯಗಳೊಂದಿಗೆ ಸಂಭ್ರಮವನ್ನಾಚರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವುದೇ ಇದರ ವಿಶೇಷತೆ. 

ನವರಾತ್ರಿ ಉತ್ಸವದ ಒಂಭತ್ತೂ ದಿನಗಳಲ್ಲಿ ಕಾರವಾರ ತಾಲ್ಲೂಕಿನಲ್ಲಿ ದಾಂಡಿಯಾ ನೃತ್ಯವನ್ನು ಆಯೋಜನೆ ಮಾಡಲಾಗುತ್ತದೆ. ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿಮಾತಾ, ಕುಂಠಿ ಮಹಾಮಾಯಿ, ವಿಠೋಬಾ, ಗಣಪತಿ ಸೇರಿದಂತೆ ಅನೇಕ ದೇವಾಲಯಗಳ ಆವರಣದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡಲಾಗುತ್ತದೆ. ಇದರೊಂದಿಗೆ ಕೊನೇ ದಿನ ಸ್ತ್ರೀಯರು ಹಾಗೂ ಪುರುಷರಿಗಾಗಿ ಸಾಂಪ್ರದಾಯಿಕ‌ ಉಡುಗೆಗಳ‌ ಫ್ಯಾಶನ್ ಶೋ, ಕ್ರೀಡೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸುವುದರಿಂದ ಎಲ್ಲರೂ‌ ಸಂಭ್ರಮಿಸುತ್ತಾರೆ. 

ಭಾರತೀಯ ಸೇನೆಗೆ ಸೇರಿಸುವುದಾಗಿ 150 ಯುವಕರಿಗೆ 1 ಕೋಟಿ ವಂಚಿಸಿದ ಶಿವರಾಜ್‌ ವಟಗಲ್

ನವರಾತ್ರಿಯ ಒಂಭತ್ತು ದಿನಗಳಲ್ಲೂ ಕಾರವಾರದ ದೇವಳಿವಾಡ, ಸೋನಾರವಾಡ, ಬಾಂಡಿಶಿಟ್ಟಾ, ಸದಾಶಿವಗಡ ಸೇರಿದಂತೆ ವಿವಿಧೆಡೆ ದಾಂಡಿಯಾ ಆಯೋಜನೆ ಮಾಡುವುದರಿಂದ ಎಲ್ಲಾ ವರ್ಗದ ಜನರು, ಜಾತಿ ಭೇದವಿಲ್ಲದೇ ಬೇರೆಯುತ್ತಾರೆ. ಯಾವುದೇ ವ್ಯಕ್ತಿ ಕುಡಿದು, ಪಾನ್ ಹಾಕಿಕೊಂಡು, ಚುಯಿಂಗ್ ಜಗಿದುಕೊಂಡು, ಚಪ್ಪಲಿ ಹಾಕಿ ದಾಂಡಿಯಾ ಆಡುವಂತಿಲ್ಲ.‌ ಅಲ್ಲದೇ, ಯಾವುದೇ ಅಸಭ್ಯ ವರ್ತನೆಗೆ ಇಲ್ಲಿ ಅವಕಾಶಗಳು ಇರೋದಿಲ್ಲ. ಈ ದಾಂಡಿಯಾ ವೀಕ್ಷಣೆಗೆ ಅಂತಾನೇ ತಾಲ್ಲೂಕಿನ ವಿವಿಧೆಡೆಯಿಂದ ನೂರಾರು ಜನರು ತಡರಾತ್ರಿವರೆಗೂ ಆಗಮಿಸಿ ದಾಂಡಿಯಾ ವೀಕ್ಷಣೆ ಮಾಡಿದ ಬಳಿಕ ತೆರಳುತ್ತಾರೆ. ಈ ಕಾರ್ಯಕ್ರಮಕ್ಕಾಗಿ ಬಣ್ಣ ಬಣ್ಣದ ಸೀರೆಯುಟ್ಟು, ಬಟ್ಟೆ ತೊಟ್ಟೆ ಅದ್ಭುತವಾಗಿ ಹೆಜ್ಜೆ ಹಾಕುವುದರಲ್ಲಿ ಮಹಿಳೆಯರು, ಹೆಣ್ಣುಮಕ್ಕಳದ್ದೇ ಮೇಲುಗೈ ಎಂದರೆ ತಪ್ಪಾಗಾರದು.

 ಒಟ್ಟಿನಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆ ಕಾರವಾರದಲ್ಲಿ ದಾಂಡಿಯಾ ನೃತ್ಯದಲ್ಲಿ ಭಾಗವಹಿಸುವ ಮೂಲಕ ಜನರು ನವರಾತ್ರಿ ಹಬ್ಬವನ್ನು ಭರ್ಜರಿಯಾಗಿ ಸಂಭ್ರಮಿಸುತ್ತಿದ್ದಾರೆ. ಜನರಲ್ಲಿ ಸೌಹಾರ್ದತೆ, ಪ್ರೀತಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಪ್ರತಿಬಾರಿ ಎಲ್ಲೆಡೆ ಆಯೋಜನೆ ಆಗುವಂತಾಗಲಿ ಅನ್ನೋದು ಜನರ ಅಭಿಪ್ರಾಯ.

Follow Us:
Download App:
  • android
  • ios