Christmas 2025 The Fascinating History of Christmas Cake:ಇಂದು ನಾವು ಸವಿಯುವ ಕ್ರಿಸ್‌ಮಸ್ ಕೇಕ್ ಆರಂಭದಲ್ಲಿ ಕೇವಲ ಒಂದು ಪೌಷ್ಟಿಕ ಗಂಜಿಯಾಗಿತ್ತು. 16ನೇ ಶತಮಾನದಲ್ಲಿ ಮೊಟ್ಟೆ, ಬೆಣ್ಣೆ, ಹಿಟ್ಟು ಸೇರಿ ಕೇಕ್ ರೂಪ ಪಡೆದು, ಕೈಗಾರಿಕಾ ಕ್ರಾಂತಿಯ ನಂತರ ಆಧುನಿಕ ಕೇಕ್ ಹಬ್ಬದ ಪ್ರಮುಖ ಭಾಗವಾಯಿತು.

Christmas 2025: ಡಿಸೆಂಬರ್ 25 ಎಂದರೆ ಸಾಕು ಕಣ್ಣಮುಂದೆ ಬರುವುದು ಸುಂದರವಾಗಿ ಅಲಂಕರಿಸಿದ ಕ್ರಿಸ್‌ಮಸ್ ಮರ ಮತ್ತು ಬಾಯಲ್ಲಿ ನೀರೂರಿಸುವ ಕೇಕ್‌ಗಳು. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಕ್ರಿಸ್‌ಮಸ್ ಕೇಕ್ ಎಂದರೆ ಅಚ್ಚುಮೆಚ್ಚು. ಆದರೆ, ಇಂದು ನಾವು ಸವಿಯುವ ಈ ಸುಂದರ, ಸಿಹಿ ಕೇಕ್‌ಗಳ ಹಿಂದೆ ಒಂದು ಕುತೂಹಲಕಾರಿ ಇತಿಹಾಸವಿದೆ. ಆರಂಭದಲ್ಲಿ ಕ್ರಿಸ್‌ಮಸ್ ಸಿಹಿತಿಂಡಿ ಕೇಕ್ ಆಗಿರಲಿಲ್ಲ, ಬದಲಾಗಿ ಅದೊಂದು ಪೌಷ್ಟಿಕಾಂಶಯುಕ್ತ ಗಂಜಿಯಾಗಿತ್ತು!

ಪ್ಲಮ್ ಗಂಜಿ: ಕ್ರಿಸ್‌ಮಸ್ ಕೇಕ್‌ನ ಮೂಲ ರೂಪ

ಇಂದು ನಾವು ರಮ್, ಒಣದ್ರಾಕ್ಷಿ, ಬಾದಾಮಿ ಮತ್ತು ಮಸಾಲೆಗಳಿಂದ ಕೂಡಿದ ಶ್ರೀಮಂತ ಫ್ರೂಟ್ ಕೇಕ್‌ಗಳನ್ನು ಸವಿಯುತ್ತೇವೆ. ಆದರೆ ಪ್ರಾಚೀನ ಕಾಲದಲ್ಲಿ ಕ್ರಿಸ್‌ಮಸ್ ಆಚರಣೆಯು ಡಿಸೆಂಬರ್ 6 ರಿಂದ ಜನವರಿ 6 ರವರೆಗೆ ಒಂದು ತಿಂಗಳ ಕಾಲ ನಡೆಯುತ್ತಿತ್ತು. ಆ ಸಮಯದಲ್ಲಿ 'ಅಡ್ವೆಂಟ್' (ಉಪವಾಸದ ಅವಧಿ) ಮುಗಿದ ನಂತರ, ಜನರು ಪ್ಲಮ್ ಗಂಜಿಯನ್ನು ತಯಾರಿಸುತ್ತಿದ್ದರು. ಇದು ಓಟ್ ಮೀಲ್, ಜೇನುತುಪ್ಪ, ಮಸಾಲೆಗಳು ಮತ್ತು ಒಣಗಿದ ಪ್ಲಮ್‌ಗಳಿಂದ ಕೂಡಿದ ಅತ್ಯಂತ ಸರಳ ಹಾಗೂ ಪೌಷ್ಟಿಕ ಆಹಾರವಾಗಿತ್ತು.

16ನೇ ಶತಮಾನದಲ್ಲಿ ಬದಲಾದ ರುಚಿ ಮತ್ತು ರೂಪ

ಕಾಲಕ್ರಮೇಣ 16ನೇ ಶತಮಾನದಲ್ಲಿ ಈ ಸಾಂಪ್ರದಾಯಿಕ ಪ್ಲಮ್ ಗಂಜಿ ಹೊಸ ರೂಪವನ್ನು ಪಡೆದುಕೊಂಡಿತು. ಗಂಜಿಗೆ ಮೊಟ್ಟೆ, ಬೆಣ್ಣೆ, ಹಿಟ್ಟು ಮತ್ತು ಸುಗಂಧಿತ ಮಸಾಲೆಗಳನ್ನು ಸೇರಿಸಲು ಪ್ರಾರಂಭಿಸಿದರು. ಇದು ಗಂಜಿಯ ರೂಪದಿಂದ ಹಂತ ಹಂತವಾಗಿ ಕೇಕ್ ರೂಪಕ್ಕೆ ಬದಲಾಯಿತು. ಶ್ರೀಮಂತ ಕುಟುಂಬಗಳು ಈ ಮಿಶ್ರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಣ ಹಣ್ಣುಗಳು ಮತ್ತು ಸಕ್ಕರೆಯ ಲೇಪನವನ್ನು ಸೇರಿಸಿ ಆಕರ್ಷಕವಾಗಿಸಲು ಶುರು ಮಾಡಿದರು. ಇದೇ ಮುಂದೆ ವಿಶ್ವಪ್ರಸಿದ್ಧ 'ಕ್ರಿಸ್‌ಮಸ್ ಕೇಕ್' ಆಗಿ ಮಾರ್ಪಟ್ಟಿತು.

ಕೈಗಾರಿಕಾ ಕ್ರಾಂತಿ, ಬದಲಾದ ಆಚರಣೆ

18 ಮತ್ತು 19ನೇ ಶತಮಾನದಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯು ಕ್ರಿಸ್‌ಮಸ್ ಆಚರಣೆಯ ಶೈಲಿಯನ್ನೇ ಬದಲಿಸಿತು. ಜನರು ಕೆಲಸದ ಒತ್ತಡದಲ್ಲಿ ನಿರತರಾದ ಕಾರಣ, ಒಂದು ತಿಂಗಳ ಕಾಲ ನಡೆಯುತ್ತಿದ್ದ ಸುದೀರ್ಘ ಹಬ್ಬವು ಕೇವಲ ಒಂದು ದಿನಕ್ಕೆ ಅಂದರೆ ಡಿಸೆಂಬರ್ 25ಕ್ಕೆ ಸೀಮಿತವಾಯಿತು. ಇದರೊಂದಿಗೆ ಅಂದು ತಯಾರಿಸುತ್ತಿದ್ದ ಪ್ಲಮ್ ಗಂಜಿ ಸಂಪೂರ್ಣವಾಗಿ ಮರೆಯಾಗಿ, ಆಧುನಿಕ ಶೈಲಿಯ ಕೇಕ್‌ಗಳು ಹಬ್ಬದ ಅವಿಭಾಜ್ಯ ಅಂಗವಾದವು.