ಶಿಲುಬೆಯನ್ನು ತಾನೇ ಹೊತ್ತು ನಡೆದ ಕ್ರಿಸ್ತನ ಜನ್ಮದಿನ ಇಂದು: ಕ್ರಿಸ್‌ಮಸ್ ಎಂಬ ಬೆಳಕಿನ ಪರ್ವ
‘ತನ್ನ ಶಿಲುಬೆಯ ತಾನೇ ಹೊತ್ತನಲ್ಲ ಗುರು ಯೇಸು, ನಿನ್ನ ಕರ್ಮದ ಹೊರೆಯ ಬಿಡದೆ ನೀನೇ ಹೊರು...’ ಇದು ದಾರ್ಶನಿಕ ಕವಿ ಡಿ.ವಿ.ಜಿ. ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವ ಕಾವ್ಯನುಡಿಗಳು. ಇದಿಷ್ಟೇ ಸಾಕು ದೇವಪುತ್ರ ಯೇಸುವಿನ ಬ್ರಹ್ಮಾಂಡ ವ್ಯಕ್ತಿತ್ವದ ಮಹಾದರ್ಶನಕೆ.
ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ
ಯೇಸು ಎಂದರೆ ಕರುಣೆಯ ಕಡಲು, ಕಾರುಣ್ಯದ ಒಡಲು, ಮನುಷ್ಯತ್ವದ ಮಡಿಲು. ಸಕಲರಿಗೂ ಲೇಸನ್ನೇ ಬಯಸಬೇಕೆನ್ನುವ, ಹಾಗೆಯೇ ಬಯಸಿ ಬದುಕುವ ಜೀವಾತ್ಮ. ಸರ್ವ ಜೀವ-ಜೀವಿಗಳಲ್ಲೂ ಇರುವ ಪರಮಾತ್ಮ. ಕ್ಷಮೆಯೇ ಎಲ್ಲರೊಳಗಿನ ದೇವಾತ್ಮವೆಂದು ಕೂಡಿ ಬಾಳುವ ಮಹತ್ತಿನ ಮಹತ್ವ ಹೇಳಿದ ಮಹಾತ್ಮ. ನಿಜವಾಗಿಯೂ ದೇವರೇ ಆಗಿ ಹೋದ ದೇವದೂತ. ಜಗದ ತಮವನ್ನು ಕಳೆಯಲು ಬೆಳಕಿನ ಪರ್ವವಾಗಿ ಅವತರಿಸಿದ ಅವತಾರ ಪುರುಷ. ‘ತನ್ನ ಶಿಲುಬೆಯ ತಾನೇ ಹೊತ್ತನಲ್ಲ ಗುರು ಯೇಸು, ನಿನ್ನ ಕರ್ಮದ ಹೊರೆಯ ಬಿಡದೆ ನೀನೇ ಹೊರು...’ ಇದು ದಾರ್ಶನಿಕ ಕವಿ ಡಿ.ವಿ.ಜಿ. ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವ ಕಾವ್ಯನುಡಿಗಳು. ಇದಿಷ್ಟೇ ಸಾಕು ದೇವಪುತ್ರ ಯೇಸುವಿನ ಬ್ರಹ್ಮಾಂಡ ವ್ಯಕ್ತಿತ್ವದ ಮಹಾದರ್ಶನಕೆ.
‘ಪಾಪಿಗಳನ್ನು ರಕ್ಷಿಸುವುದೇ ತನ್ನ ಜೀವನದ ಉದ್ದೇಶ’ ಇದು ಯೇಸುವಿನ ಸ್ಪಷ್ಟ ಸಂದೇಶ. ನರಕದ ದಾರಿ ಸುಗಮ. ಆದರೆ ಸ್ವರ್ಗದ ದಾರಿ ದುರ್ಗಮ. ದುರ್ಗಮವಾದರೂ ಸರಿಯೇ ಸ್ವರ್ಗದ ದಾರಿಯಲ್ಲಿ ಸಾಗುವುದೇ ಬದುಕಿನ ಗುರಿಯಾಗಬೇಕು. ಅದರಿಂದಲೇ ಬದುಕು ಸಾರ್ಥಕವೆಂಬ ಯೇಸುವಿನ ಒಡಲು ಶಾಂತಿಯ ಮಹಾಕಡಲು. ಅಷ್ಟೇ ಕ್ಷಮೆಯ ಮಹಾಮಡಿಲು. ‘ಓರ್ವ ಶ್ರೀಮಂತ ಸ್ವರ್ಗಕ್ಕೆ ಹೋಗುವುದಕ್ಕಿಂತ ಒಂದು ಒಂಟೆ ಸೂಜಿಯ ಕಣ್ಣಲ್ಲಿ ಹಾದು ಹೋಗುವುದು ಸುಲಭದಾಯಕ’ ಅದೆಷ್ಟೋ ಇಂಥ ಮಾರ್ಮಿಕ ನುಡಿಮುತ್ತುಗಳು ಯೇಸುವಿನ ಬೋಧನೆಯ ಬೃಹತ್ ಭಂಡಾರದಲ್ಲಿ ತುಂಬಿ ತುಳುಕಿವೆ. ಯೇಸುವಿನ ಬೋಧನೆಗಳೆಂದರೆ ಅವು ಬರೀ ಉಪದೇಶಗಳಲ್ಲ ಕಾರ್ಗತ್ತಲಲ್ಲಿ ಕಾಣುವ ಬೆಳಕಿನ ಕಿರಣಗಳು.
ಸ್ಯಾಂಡಲ್‌ವುಡ್ ಒಗ್ಗಟ್ಟಾಗಿ ಇರಬೇಕು ಅಂತ ಬಯಸೋನು ನಾನು: ಮ್ಯಾಕ್ಸ್ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದ ಸುದೀಪ್
ಇಂಥ ಮಹಾ ಶಾಂತಿದೂತ ದೇವಪುರುಷ ಯೇಸುಕ್ರಿಸ್ತನು ಜೋಸೆಫ್ ಮತ್ತು ಮೇರಿಯ ಸುಪುತ್ರನಾಗಿ ಜನಿಸಿದ್ದು ‘ಡಿಸೆಂಬರ್ ೨೫’. ಇದೇ ದಿನ ಕ್ರಿಸ್ತನ ಜನನವಾಯಿತೆಂಬುದಕ್ಕೆ ನಿಖರವಾಗಿ ಯಾವ ಆಧಾರಗಳೂ ಇಲ್ಲದಿದ್ದರೂ ಕ್ರೈಸ್ತ ಧರ್ಮೀಯರ ಸಾಂಪ್ರದಾಯಿಕ ನಂಬಿಕೆಯಿದೆ. ಹಾಗಾಗಿ ಅಂದು ಯೇಸುವಿನ ಜನ್ಮದಿನೋತ್ಸವದ ‘ಕ್ರಿಸ್‌ಮಸ್’ ಆಚರಣೆ ಜಗತ್ತಿನಾದ್ಯಂತ ಜರುಗುತ್ತದೆ. ಕ್ರಿಸ್‌ಮಸ್ ಡೇಗೆ ಜಾಗತಿಕ ವೈಭವವಿದೆ. ಒಟ್ಟಿನಲ್ಲಿ ಕ್ರಿಸ್‌ಮಸ್ ಎಂಬುದು ಕ್ರಿಶ್ಚಿಯನ್ನರಿಗೆ ಒಂದು ಪವಿತ್ರ ದಿನ. ಅವರಿಗೆ ಅದೊಂದು ಸಂತಸ ಸಂಭ್ರಮಗಳ ಮಹಾಹಬ್ಬ. ಇದರ ಕೇಂದ್ರ ಬಿಂದು ‘ಕ್ರಿಸ್ತಶಕ’ದ ಹುಟ್ಟಿಗೆ ಕಾರಣವಾಗಿ ಶಕಾರಂಭ ಮಾಡಿದ ಶಕಪುರುಷ ಯೇಸುಕ್ರಿಸ್ತ.
ಸೋಜಿಗದ ವಿಷಯವೆಂದರೆ ಯೇಸುಕ್ರಿಸ್ತ ಹುಟ್ಟಿದ್ದು ಕನ್ಯೆ ಮೇರಿಯಲ್ಲಿ. ಆಗಷ್ಟೇ ಜೋಸೆಫ್‌ನೊಡನೆ ವಿವಾಹ ನಿಶ್ಚಯವಾಗಿದ್ದ ಮೇರಿ ವಿವಾಹವಾಗಿ ಅವನನ್ನು ಕೂಡುವ ಮುನ್ನವೇ ತನ್ನ ಗರ್ಭದಲ್ಲಿ ಯೇಸುವನ್ನು ಪವಿತ್ರಾತ್ಮನಿಂದ ಹೊತ್ತಿದ್ದಳು. ದೇವವಾಣಿಯಿಂದ ಆ ಮಗುವಿನ ಮಹತ್ವ ಅರಿತ ಜೋಸೆಫನು ಮೇರಿಯ ಕೈಬಿಡದೆ ಮದುವೆಯಾಗಿ ಅವಳಿಗೆ ಹೆರಿಗೆಯಾಗುವ ತನಕವೂ ಬಹಳ ಜೋಪಾನ ಮಾಡಿದ್ದ. ಅದೇ ಆದೊಂದು ಶುಭ ದಿನ, ಜನಗಣತಿಗಾಗಿ ಜೋಸೆಫ್-ಮೇರಿ ಜೊತೆಯಾಗಿ ಬೆತ್ಲೆ ಹೇಮ್‌ಗೆ ಹೋಗಿದ್ದಾಗ ಅಲ್ಲಿ ಮೇರಿ ಮಾತೆಯಾಗಿ, ಕುರಿಕೊಟ್ಟಿಗೆಯಲ್ಲಿ ಜಗದ ಬೆಳಕಾದ ಯೇಸುಕ್ರಿಸ್ತನಿಗೆ ಜನ್ಮ ನೀಡಿದ್ದಳು. ಆಗ ಒಂದು ಕ್ಷಣ ಇಡೀ ಬೆತ್ಲೆಹೇಮ್ ನಗರದಲ್ಲಿ ಮಿಂಚು ಹೊಳೆದಂತಹ ಅನುಭವವಾಗಿತ್ತಂತೆ.
ಯೇಸು ಮೂಲತಃ ಒಬ್ಬ ಯಹೂದಿ. ಪ್ಯಾಲೆಸ್ಟೈನ್ ದೇಶ ಅಂದರೆ ಈಗಿನ ಇಸ್ರೇಲ್ ಅವನ ಮೂಲನೆಲೆ. ಯೇಸು ಜನಿಸಿದ ಆ ಕಾಲದಲ್ಲಿ ಪ್ಯಾಲೆಸ್ಟೈನ್ ದೇಶದ ಬದುಕು ಸಂಪೂರ್ಣ ಯಹೂದಿ ಸಂಸ್ಕೃತಿಯದ್ದಾಗಿತ್ತು. ಮಾನವ ಕುಲಕ್ಕೆ ಮಾರಕವಾದ ಕಂದಾಚಾರ, ಮೂಢನಂಬಿಕೆಯಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಸರ್ವರ ಉದ್ಧಾರದ ಸಮಾಜ ನಿರ್ಮಿಸುವತ್ತ ಯೇಸು ನಡೆದ. ಸಕಲರಿಗೂ ಲೇಸನ್ನು ಬಯಸುವ ಮಾನವೀಯತೆಯ ತಳಹದಿಯಲ್ಲಿ ಅವನು ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ. ಇದೇ ಯೇಸುವಿಗೆ ಮುಳುವಾದದ್ದು. ಒಳ್ಳೆಯದನ್ನು ಮಾಡಲು ಹೋಗಿ ಕೆಟ್ಟವರ ಕೆಂಗಣ್ಣಿಗೆ ಯೇಸು ಗುರಿಯಾದದ್ದಷ್ಟೇ ಅಲ್ಲ ಬಹು ಮುಖ್ಯವಾಗಿ ಯಹೂದಿ ಪುರೋಹಿತಷಾಹಿಗಳನ್ನು ವಿರೋಧ ಕಟ್ಟಿಕೊಂಡ. ಯಹೂದಿ ಧರ್ಮಗುರುಗಳಿಗಂತೂ ಯೇಸು ಬೇಡವೇ ಬೇಡವಾಗಿದ್ದ. ಪರಿಣಾಮ ರಾಜದ್ರೋಹದ ಆಪಾದನೆ ಇವನ ಹೆಗಲೇರಿತ್ತು.
ಇದರಿಂದಾಗಿ ನ್ಯಾಯ, ನೀತಿ, ಧರ್ಮ, ಸತ್ಯ, ನಿಷ್ಠೆ, ಪ್ರಾಮಾಣಿಕತೆ, ತ್ಯಾಗಗಳ ಸಂಗಮವೇ ಆಗಿ ಮನುಷ್ಯತ್ವದ ಮೇರು ಪರ್ವವೇ ಆಗಿದ್ದ ಇಂಥ ದೈವೀಕ ಪುರುಷ ಯೇಸುವನ್ನು ಕಠಿಣ ಚಿತ್ರಹಿಂಸೆಗೊಳಪಡಿಸಿ ದೇಶಾಧಿಕಾರಿ ಪಿಲಾತನು ಮರಣದಂಡನೆಯ ಶಿಲುಬೆಗೇರಿಸಿದ. ಯೇಸುವಿನ ಬಲಿದಾನ ಹೀಗಾಗಿತ್ತು. ಅದು ಎಷ್ಟೊಂದು ಘೋರ ದುರಂತವಾಗಿತ್ತೆಂಬುದನ್ನು ಹೇಳಲು ಅಕ್ಷರಗಳೂ ಕಣ್ಣೀರಿಡುವಂಥ ಮಹಾ ದುರಂತವದು. ಆದರೆ, ಯೇಸು ಶಿಲುಬೆಗೇರಿದ ಮೂರನೆಯ ದಿನ ಪುನರುತ್ಥಾನಗೊಂಡು ತನ್ನ ಆಪ್ತೇಷ್ಟರನೇಕರಿಗೆ ದರ್ಶನಕೊಟ್ಟರು. ಆಮೇಲೆ ನಲವತ್ತು ದಿನಗಳ ಕಾಲ ತಮ್ಮ ಶಿಷ್ಯಕೋಟಿಯ ಜೊತೆಯಲ್ಲಿದ್ದು ಅವರ ಸಮ್ಮುಖದಲ್ಲೇ ಒಂದು ದಿನ ಸ್ವರ್ಗದತ್ತ ಪಯಣ ಬೆಳೆಸಿದರು. ಆ ಮಹಾದಿನವೇ ಯೇಸುವಿನ ಸ್ವರ್ಗಾರೋಹಣ ದಿನ. ಯೇಸುವಿನ ಜನನ, ಮರಣ, ಪುನರುತ್ಥಾನ ಹಾಗೂ ಸ್ವರ್ಗಾರೋಹಣ ದಿನಗಳು ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ದಿನಗಳಾಗಿವೆ.
ನಜರೇತ್ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ ಯೇಸು ತನ್ನ ೧೨ನೇ ವಯಸ್ಸಿನಲ್ಲೇ ಮತಗ್ರಂಥಗಳನ್ನೆಲ್ಲಾ ಅಧ್ಯಯನ ಮಾಡಿ ಅಗಾಧ ಪಾಂಡಿತ್ಯ ಪಡೆದು ಪುಟ್ಟ ವಯಸ್ಸಿನಲ್ಲೇ ಗಲಿಲೇಯದಲ್ಲಿ ಬೋಧನೆ ಮಾಡಿ ಎಲ್ಲರನ್ನೂ ಆಕರ್ಷಿಸಿದ್ದ. ಅಷ್ಟೇ ಅಲ್ಲ ಜೆರುಸಲೇಮ್ ಪಟ್ಟಣದ ತುಂಬಾ ಪ್ರಸಿದ್ಧಿಗಳಿಸಿದ್ದ. ೧೩ನೇ ವಯಸ್ಸಿಗೆ ಯಾರಿಗೂ ಕಾಣಿಸದೆ ಎತ್ತಲೋ ಮಾಯವಾಗಿ ಹೊರಟು ಹೋಗಿದ್ದ ಯೇಸು ಮತ್ತೆ ಜನರೆದುರು ಕಾಣಿಸಿಕೊಂಡದ್ದು ತನ್ನ ೩೧ನೇ ವಯಸ್ಸಿನಲ್ಲಿ. ಈ ನಡುವೆ ಸುಮಾರು ೧೯ ವರ್ಷಗಳು ಪ್ರಪಂಚ ಪ್ರದಕ್ಷಿಣೆ ಮಾಡಿದ್ದ ಯೇಸು ಜ್ಞಾನಾರ್ಜನೆಯಲ್ಲಿ ತೊಡಗಿ ಜ್ಞಾನದ ಮಹಾವೃಕ್ಷವೇ ಆಗಿದ್ದ. ಆ ಸಮಯದಲ್ಲೇ ಯೇಸು ಭಾರತಕ್ಕೂ ಭೇಟಿ ನೀಡಿದ್ದನೆಂದು ಹೇಳುವುದುಂಟು. ಹಾಗಾಗಿ ಯೇಸು ಹಿಂದೂ ಧರ್ಮ ಮತ್ತು ಬೌದ್ಧಧರ್ಮಗಳು ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳನ್ನೂ ಅವಲೋಕಿಸಿದ್ದನೆಂದು ಹೇಳಲಾಗುತ್ತದೆ.
ಯೇಸುಗೆ ಜೆರುಸಲೇಮ್ ಅತ್ಯಂತ ಪ್ರಿಯವಾಗಿತ್ತು. ಹಾಗಾಗಿ ಅದನ್ನು ಅವನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ. ಕ್ರೈಸ್ತ, ಇಸ್ಲಾಂ, ಯಹೂದ್ಯ ಮತಗಳ ತ್ರಿವೇಣಿ ಸಂಗಮವಿದು. ಎಲ್ಲಕ್ಕಿಂತ ಮಿಗಿಲಾಗಿ ಯೇಸು ಶಿಲುಬೆಗೇರಿದ್ದು ಇದೇ ಜೆರುಸಲೇಮ್‌ನಲ್ಲೇ. ಯೇಸುವಿಗೆ ದೀಕ್ಷೆಕೊಟ್ಟ ಗುರು ಜಾನ್ ಜನಿಸಿದ್ದು ಕೂಡ ಇಲ್ಲಿಯೇ. ಡಿ.ವಿ.ಜಿ. ಹೇಳುವಂತೆ ತನ್ನ ಶಿಲುಬೆಯನ್ನು ತಾನೇ ಹೊತ್ತು ನಡೆದ ಕ್ರಿಸ್ತನ ದುಃಖಸಾಗರದ ದಾರಿ ಜೋರ್ಡಾನ್ ನದಿ ಕೂಡ ಇಲ್ಲಿಯೇ ಹರಿಯುವುದು. ಅಷ್ಟೇ ಅಲ್ಲ, ಯೇಸುವಿನ ಕಳೇಬರ ಇರುವ ಸಮಾಧಿ ಇರುವುದು ಇದೇ ಪುಣ್ಯಸ್ಥಳದಲ್ಲಿ. ಕ್ರಿಸ್‌ಮಸ್‌ನಲ್ಲಿ ಇದರ ವೈಭವ ವರ್ಣಿಸಲಸದಳ. ಈ ಲೌಕಿಕ ಲೋಕದಲ್ಲಿ ಯೇಸು ಜೀವಿಸಿದ್ದು ಕೇವಲ ೩೩ ವರ್ಷಗಳು ಮಾತ್ರ. ಆದರೆ ಅವನ ಸಾಧನೆ ಲೋಕವಿರುವ ತನಕವೂ ಬೆಳಕಿನ ತೋರು ಮಾರ್ಗವಾಗುಳಿದಿದೆ.
ನಮ್ ದೇಶಕ್ಕೊಬ್ಬರೇ ರೀ.. ಅಟಲ್ ಬಿಹಾರೀ..: 10 ಘಟನೆಗಳೊಂದಿಗೆ ಅಜಾತಶತ್ರು ಸ್ಮರಿಸುವ ಹೊತ್ತು!
ಯೇಸುವಿನ ತತ್ವಾದರ್ಶಗಳ ಬೋಧನೆಯ ‘ಬೈಬಲ್’ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲದೆ ಒಳಿತನ್ನು ಪ್ರೀತಿಸುವವರೆಲ್ಲರಿಗೂ ಸದ್ಭಾವನಾ ಗ್ರಂಥವಾಗಿದೆ. ಕ್ರಿಸ್‌ಮಸ್ ಆಚರಣೆಯೂ ಸಹ ಭಾವೈಕ್ಯತೆಯ ಬೆಳಕನ್ನು ಚೆಲ್ಲುವುದೇ ಆಗಿದೆ. ಹಾಗೆಯೇ ಯೇಸುವಿನ ಮರಣ ಮತ್ತು ಪುನರುತ್ಥಾನ ಹಾಗೂ ಸ್ವರ್ಗಾರೋಹಣ ದಿನಗಳು ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ಎನಿಸುವ ಬಹು ಮಹತ್ವವಾದ ದಿನಗಳಾಗಿವೆ. ‘ನಿನ್ನನ್ನು ನೀನು ಪ್ರೀತಿಸುವಂತೆ ನಿನ್ನ ನೆರೆ ಹೊರೆಯವರನ್ನೂ ಪ್ರೀತಿಸು’ ಎಂದು ಹೇಳಿದ ಯೇಸುವಿನ ಪ್ರೀತಿ, ಪ್ರೇಮ, ತ್ಯಾಗ, ಸಹನೆ, ಮಾನವೀಯ ಮೌಲ್ಯಗಳನ್ನು ಬಿತ್ತುವ ಸದಾಶಯದಿಂದ ಯೇಸು ಸ್ಮರಣೆಯಲ್ಲಿ ಪುಟ್ಟ ಹಳ್ಳಿಯಿಂದ ಹಿಡಿದು ನಗರ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲೆಲ್ಲಾ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಡೆನ್ಮಾರ್ಕ್, ಐರ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ರೋಮ್, ಲ್ಯಾಪ್ ಲ್ಯಾಂಡ್, ಎಡಿನ್ ಬರ್ಗ್, ಹಾಂಗ್ ಕಾಂಗ್ ನಂಥ ಕೆಲವು ದೇಶಗಳು ಕಣ್ಣಿಗೆ ಮಹಾ ಹಬ್ಬವಾಗುವಂತೆ ಜೋರಾಗಿ ‘ಕ್ರಿಸ್ ಮಸ್’ ಆಚರಿಸುವುದುಂಟು.