Asianet Suvarna News Asianet Suvarna News

Merry Christmas 2021: ಪ್ರೀತಿಯೇ ದೇವರೆಂದ ಶಾಂತಿದೂತ ಏಸು, ಜನನದ ಕತೆಗಳು

ದೇವರು ಸೂರ್ಯನ ಬೆಳಕನ್ನು ಕೆಟ್ಟವರಿಗೂ ನೀಡುತ್ತಾನೆ, ಅನೀತಿವಂತರ ಮೇಲೂ ಮಳೆ ಸುರಿಸುತ್ತಾನೆ ಎನ್ನುವ ಮೂಲಕ ಸಾಮರಸ್ಯದಿಂದ ಬದುಕುವ ಮಾರ್ಗವನ್ನು ಏಸು ಹೇಳಿಕೊಟ್ಟರು. ಇದು ಕೇವಲ ಬೋಧನೆಯಾಗಿರಲಿಲ್ಲ. ಏಸು ಸ್ವತಃ ಇವುಗಳನ್ನು ಪಾಲಿಸಿ ತೋರಿಸಿದರು. ಶಿಲುಬೆಗೆ ಏರಿಸಿದವರನ್ನೂ ಕ್ಷಮಿಸಿದರು.

-

Christmas 2021 Know about this Day celebrating Jesus Christ Birth hls
Author
Bengaluru, First Published Dec 25, 2021, 2:11 PM IST

ವಿಶ್ವದಾದ್ಯಂತ ಡಿಸೆಂಬರ್‌ 25ರಂದು ಜಾತಿ, ಧರ್ಮಗಳನ್ನು ಮೀರಿ ಆಚರಿಸಲಾಗುವ ಕ್ರಿಸ್‌ಮಸ್‌ ಅನ್ನು ಭಾರತದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ರಿಸ್‌ ಎಂಬುದು ಏಸುವಿನ ಹೆಸರಾದರೆ, ಮಾಸ್‌ ಎಂಬುದು ಪ್ರಾರ್ಥಿಸುವ ಸಮೂಹವನ್ನು ಪ್ರತಿನಿಧಿಸುತ್ತದೆ. ಇವೆರಡು ಪದಗಳ ಸಂಯೋಜನೆಯೇ ಕ್ರಿಸ್‌ಮಸ್‌.

ಭಾರತದಲ್ಲಿ ಕ್ರಿಸ್‌ಮಸ್‌ ಆಚರಣೆ ಪ್ರಾರಂಭವಾದದ್ದು ಸರ್ವ ಧರ್ಮಗಳಲ್ಲೂ ಆಸಕ್ತಿಯನ್ನು ಹೊಂದಿದ್ದ ಮೊಘಲ್‌ ದೊರೆ ಅಕ್ಬರನ ಆಳ್ವಿಕೆಯ ಕಾಲದಲ್ಲಿ. ಆಗ್ರಾದಲ್ಲಿ ಸಹಸ್ರಾರು ಇಟಲಿಯ ಅಕ್ಕಸಾಲಿಗರಿದ್ದರು. ಡಚ್‌, ಫ್ರಾನ್ಸ್‌, ಇರಾನ್‌, ಪೋರ್ಚುಗಲ್ ಮತ್ತಿತರ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು, ವಿದ್ವಾಂಸರು ಭಾರತಕ್ಕೆ ಬರುತ್ತಿದ್ದ ಕಾಲ ಅದು. ಅದಾಗಲೇ ಆಗ್ರಾದಲ್ಲಿ ಭವ್ಯವಾದ ಚರ್ಚ್ ನಿರ್ಮಿಸಲು ಅಕ್ಬರ್‌ ಅನುಮತಿಯನ್ನೂ ನೀಡಿದ್ದ. ಪ್ರತಿ ಕ್ರಿಸ್‌ಮಸ್‌ ದಿನದಂದು ಆತ ಚರ್ಚ್‌ ಭೇಟಿ ನೀಡಿದಾಗ, ಅವನಿಗೆ ಬಿಷಪ್‌ನಂತೆ ಅದ್ಧೂರಿ ಸ್ವಾಗತವನ್ನು ನೀಡಲಾಗುತ್ತಿತ್ತು. ದೊರೆ ಶಾ ಆಲಂನ ಕಾಲದವರೆಗೂ ಮೊಘಲರು ಕ್ರಿಸ್‌ಮಸ್‌ ಆಚರಣೆಯಲ್ಲಿ ಭಾಗವಹಿಸುತ್ತಿದ್ದರು.

ಸರಳ ಸಂದೇಶಗಳು

ಏಸು ತನ್ನ ಹನ್ನೆರಡನೇ ವಯಸ್ಸಿನಲ್ಲೇ ದೇವಾಲಯದ ಬೋಧಕರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ತೊಡಗುತ್ತಿದ್ದ. ಹದಿನೆಂಟಕ್ಕೆ ದೀಕ್ಷೆ ಪಡೆದು, ಬೋಧನೆಯಲ್ಲಿ ತೊಡಗಿಸಿಕೊಂಡ. ಸಂದೇಶವನ್ನು ನೀಡುವ ಜೊತೆಗೇ ಏಸು ಅನೇಕ ಪವಾಡಗಳನ್ನು ಮಾಡಿದ. ರೋಗಿಗಳನ್ನು ಗುಣಪಡಿಸಿದ, ಆಹಾರ ಸಾಮಗ್ರಿಗಳ ಕೊರತೆಯಿದ್ದರೂ ಅದನ್ನೇ ಅಕ್ಷಯವಾಗಿಸಿ ಸಾವಿರಾರು ಜನರಿಗೆ ಊಟ ನೀಡಿದ. ಸತ್ತವರನ್ನು ಜೀವಿತಗೊಳಿಸಿದ. ಇವುಗಳಿಂದಾಗಿ ಆತ ಸಾಮಾನ್ಯನಲ್ಲವೆಂದು ಜನರು ಮನಗಂಡರು.

ಏಸುಕ್ರಿಸ್ತನ ಸಂದೇಶ ಅತ್ಯಂತ ನೇರ ಮತ್ತು ಸರಳವಾಗಿತ್ತು. ಆತ ಹೇಳುತ್ತಿದ್ದ ನೀತಿ ಕತೆಗಳು ಮತ್ತು ಸ್ಮರಣೀಯ ಹೇಳಿಕೆಗಳು ಜನರನ್ನು ಆಕರ್ಷಿಸಿದವು. ಆತ ಬೋಧಿಸಿದ ಪ್ರೀತಿಯೇ ಮಹಾ ಸಂದೇಶವಾಯಿತು. ದೇವರು ಸೂರ್ಯನಂತೆ ಮತ್ತು ಮಾನವರು ಸೂರ್ಯನ ಕಿರಣಗಳಂತೆ ಎಂದಿಗೂ ಬೇರ್ಪಡಿಸಲಾಗದವರು. ಈ ಎಳೆಯ ಮೂಲಕ ನಮ್ಮಲ್ಲಿ ಅವಿನಾಭಾವ ಸಂಬಂಧವಿದೆ. ಭಗವಂತನನ್ನು ಹೃದಯದಿಂದ ಪ್ರೀತಿಸಿ, ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ. ಪ್ರೀತಿಯೇ ಜೀವನ. ಇದರಿಂದಲೇ ಭಗವಂತನನ್ನು ತಲುಪಲು ಸಾಧ್ಯ ಎಂದರು.

ಸಾಮರಸ್ಯ ಮಾರ್ಗ ತೋರಿದ

ಮಾನವ ಕುಲದ ಸೇವೆಯೇ ಪರಮೋ ಧರ್ಮವೆಂದ ಏಸು. ಕ್ಷಮೆಯ ಮಾರ್ಗ ತೋರಿದ. ಭೌತಿಕಕ್ಕಿಂತ ಆಧ್ಯಾತ್ಮಿಕತೆಯು ಹೆಚ್ಚು ಮುಖ್ಯವೆಂದ. ಪಾಪವನ್ನು ದ್ವೇಷಿಸಿ ಆದರೆ ಪಾಪಿಯನ್ನಲ್ಲ ಎಂದ. ಶಾಂತಿದೂತನಾದ. ದೇವರು ನಮ್ಮ ಅಸ್ತಿತ್ವ, ಒಳ್ಳೆಯತನ ಮತ್ತು ಸಂತೋಷದ ಮೂಲ. ನಮ್ಮ ಮನಸ್ಸನ್ನು ದೇವರ ಮೇಲೆ ಇರಿಸಿದರೆ, ನಾವು ಪರಿಪೂರ್ಣ ಶಾಂತಿಯಿಂದ ಇರುತ್ತೇವೆ ಎಂಬ ಸಂದೇಶ ನೀಡಿದ. ಶತ್ರುಗಳನ್ನು ಪ್ರೀತಿಸಿ, ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿ. ಯಾರಾದರೂ ನಿಮ್ಮ ಒಂದು ಕೆನ್ನೆಗೆ ಬಾರಿಸಿದರೆ, ಇನ್ನೊಂದು ಕೆನ್ನೆಯನ್ನು ನೀಡಿ. ದೇವರು ಸೂರ್ಯನ ಬೆಳಕನ್ನು ಕೆಟ್ಟವರಿಗೂ ನೀಡುತ್ತಾನೆ, ಅನೀತಿವಂತರ ಮೇಲೂ ಮಳೆ ಸುರಿಸುತ್ತಾನೆ ಎನ್ನುವ ಮೂಲಕ ಸಾಮರಸ್ಯದಿಂದ ಬದುಕುವ ಮಾರ್ಗವನ್ನು ಹೇಳಿಕೊಟ್ಟ. ಇದು ಕೇವಲ ಬೋಧನೆಯಾಗಿರಲಿಲ್ಲ. ಆತ ಸ್ವತಃ ಇವುಗಳನ್ನು ಪಾಲಿಸಿ ತೋರಿಸಿದ. ಶಿಲುಬೆಗೆ ಏರಿಸಿದವರನ್ನೂ ಕ್ಷಮಿಸಿದ.

ಏಸುವಿನ ಜನನದ ಕತೆಗಳು

ಏಸುಕ್ರಿಸ್ತನ ಜನನಕ್ಕೆ ಸಂಬಂಧಿಸಿದಂತೆ ಕೆಲವು ಕತೆಗಳಿವೆ. ಹೊಸ ಒಡಂಬಡಿಕೆಯ ಪ್ರಕಾರ, ದೇವದೂತ ಗೇಬ್ರಿಯಲ್ ಏಸುವಿನ ತಾಯಿ ಮೇರಿಯನ್ನು ಭೇಟಿಯಾಗುತ್ತಾನೆ. ತಮ್ಮ ಪಾಪಗಳಿಂದ ಜನರನ್ನು ರಕ್ಷಿಸಲು ಪವಿತ್ರಾತ್ಮವು ಅವಳ ಮಗನಾಗಿ ಜನಿಸುವುದಾಗಿಯೂ, ಆ ಮಗುವಿಗೆ ಏಸು ಎಂದು ಹೆಸರಿಡಬೇಕೆಂದೂ ಸೂಚಿಸುತ್ತಾನೆ. ಅದೇ ವೇಳೆಗೆ, ಪ್ರತಿಯೊಬ್ಬ ಪ್ರಜೆಯೂ ತಾವು ಹುಟ್ಟಿದ ಸ್ಥಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ರೋಮನ್‌ ಚಕ್ರವರ್ತಿ ಮಾಡಿದ್ದ ಆದೇಶವನ್ನು ಪಾಲಿಸಲು, ಬೆಥ್ಲೆಹೆಮ್‌ನಲ್ಲಿ ಜನಿಸಿದ್ದ ಜೋಸೆಫ್‌, ನಜರೇತ್‌ ಪಟ್ಟಣದಿಂದ ಅಲ್ಲಿಗೆ ಪ್ರಯಾಣಿಸಬೇಕಾಯಿತು. ಆತನೊಂದಿಗೆ ಗರ್ಭವತಿ ಪತ್ನಿ ಮೇರಿಯೂ ಇದ್ದಳು. ದಂಪತಿ ಅಲ್ಲಿಗೆ ಆಗಮಿಸಿದಾಗ ರಾತ್ರಿಯಾಗಿತ್ತು. ಅವರಿಗೆ ಉಳಿದುಕೊಳ್ಳಲು ಸ್ಥಳ ಸಿಗಲಿಲ್ಲ. ಬೇರೆ ಉಪಾಯ ಕಾಣದೆ ಕುದುರೆ ಲಾಯದಲ್ಲಿ ಉಳಿದುಕೊಂಡರು. ಆಗಲೇ ಏಸುವಿನ ಜನನವಾಯಿತು ಎನ್ನಲಾಗುತ್ತದೆ.

ಆ ಪ್ರದೇಶದಲ್ಲಿ ಕುರುಬರು ವಾಸಿಸುತ್ತಿದ್ದರು. ಕಣ್ಕುಕ್ಕುವ ಬೆಳಕಿನೊಂದಿಗೆ ಅವರೆದುರು ದೇವದೂತ ಕಾಣಿಸಿಕೊಂಡು ‘ಇಗೋ, ನಾನು ನಿಮಗಾಗಿ ಸುವಾರ್ತೆಯನ್ನು ತಂದಿದ್ದೇನೆ. ರಕ್ಷಕನಾದ ಏಸು ನಿಮ್ಮ ಊರಲ್ಲಿ ಜನಿಸಿದ್ದಾನೆ. ಲಾಯದಲ್ಲಿ ಮಲಗಿರುವ ಶಿಶುವನ್ನು ನೀವು ಕಾಣುವಿರಿ’ ಎಂದು ಹೇಳಿ ಮಾಯವಾದ. ಕುರುಬರು ತಕ್ಷಣವೇ ಅಲ್ಲಿಗೆ ತೆರಳಿ, ಏಸುವಿನ ದರ್ಶನ ಪಡೆದು ಧನ್ಯರಾದರು. ಬಳಿಕ ಈ ಸುದ್ದಿಯನ್ನು ಎಲ್ಲೆಡೆ ಹರಡಿದರು. ಏಸು ಹುಟ್ಟಿದ ಸಮಯಕ್ಕೆ ಮಾಗಿ ಎಂದು ಕರೆಯಲಾಗುತ್ತಿದ್ದ ಮೂವರು ಬುದ್ಧಿವಂತರು ಅದ್ಭುತವಾದ ನಕ್ಷತ್ರವೊಂದನ್ನು ಕಂಡರು. ಇದು ಭೂಮಿಯ ಮೇಲೆ ದಿವ್ಯಾತ್ಮನ ಆಗಮನದ ಸಂಕೇತವೆಂದು ಅರಿತರು. ಅವನನ್ನು ಕಾಣಲು ಆ ನಕ್ಷತ್ರದ ದಿಕ್ಕಿಗೆ ಪ್ರಯಾಣ ಬೆಳೆಸಿದರು ಎಂಬ ಪ್ರತೀತಿ ಇದೆ.

ಅಕ್ಕರೆಯ ಸಾಂತಾಕ್ಲಾಸ್‌

ಕ್ರಿಸ್‌ಮಸ್‌ ಎಂದಾಕ್ಷಣ ನೆನಪಾಗುವವನು ಸಾಂತಾಕ್ಲಾಸ್‌. ಸದಾ ಹರ್ಷಚಿತ್ತದಿಂದ ಕೂಡಿದ, ಉದ್ದನೆಯ ಬಿಳಿಗಡ್ಡದ, ಕೆಂಪು ಕೋಟಿನ ಸಾಂತಾ ಪ್ರಪಂಚದಾದ್ಯಂತ ಮಕ್ಕಳಿಗೆ ಅಚ್ಚುಮೆಚ್ಚಿನ ವ್ಯಕ್ತಿ. ನಾಲ್ಕನೇ ಶತಮಾನದಲ್ಲಿ ಟರ್ಕಿಯಲ್ಲಿ ಜನಿಸಿದ ನಿಕೋಲಸ್‌ಗೆ ಕ್ಯಾಥೋಲಿಕ್‌ ಚಚ್‌ರ್‍ ಸಂತನೆಂದು ಬಿರುದು ನೀಡಿದ್ದರಿಂದ ಸಾಂತಾಕ್ಲಾಸ್‌ ಎಂದು ಕರೆಯಲ್ಪಟ್ಟ. ಜೀವನದುದ್ದಕ್ಕೂ ಜಾತಿ, ಜನಾಂಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದೇ ಪ್ರತಿಯೊಬ್ಬರಿಗೂ ಏಸುವಿನ ಬೋಧನೆಯಂತೆ ಪ್ರೀತಿ ಹಂಚಿದ. ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದಕ್ಕೆ ತನ್ನ ಜೀವನವನ್ನೇ ಮುಡುಪಾಗಿಟ್ಟ.

ಮಕ್ಕಳೆಂದರೆ ಇವನಿಗೆ ಅಪಾರ ಪ್ರೀತಿ. ಅವರನ್ನು ಖುಷಿಪಡಿಸಲು ತನ್ನ ಹೆಂಡತಿಯೊಂದಿಗೆ ವರ್ಷವಿಡೀ ಆಟಿಕೆಗಳನ್ನು ತಯಾರಿಸಿ, ಕ್ರಿಸ್‌ಮಸ್‌ ಹಿಂದಿನ ರಾತ್ರಿ ತನ್ನ ಎಂಟು ಹಿಮಸಾರಂಗಗಳನ್ನು ಹೊಂದಿದ ಬಂಡಿಯಲ್ಲಿ ಪ್ರಪಂಚದಾದ್ಯಂತ ಸುತ್ತುತ್ತಾನೆ. ಮನೆಯ ಚಿಮಣಿಗಳ ಮೂಲಕ ಮನೆಯೊಳಗೆ ಪ್ರವೇಶಿಸಿ, ಕ್ರಿಸ್‌ಮಸ್‌ ಮರದ ಕೆಳಗೆ ಮಕ್ಕಳಿಗೆ ಚಾಕೊಲೇಟ್‌, ಹಣ್ಣು, ಆಟಿಕೆಗಳು ಮತ್ತಿತರ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ.

ಈಗ ನಾವು ಕಾಣುತ್ತಿರುವ ಸಾಂತಾಕ್ಲಾಸ್‌ನ ಚಿತ್ರ 1863ರಲ್ಲಿ ಥಾಮಸ್‌ ನಾಸ್ಟ್‌ ಹಾರ್ಪರ್ಸ್‌ ವಾರಪತ್ರಿಕೆಗಾಗಿ ಚಿತ್ರಿಸಿದ್ದು. ಕಪ್ಪು ಬೂಟುಗಳು ಮತ್ತು ಕೆಂಪು ಟೋಪಿಯೊಂದಿಗೆ ಕೆಂಪು ಸೂಟ್‌ನಲ್ಲಿರುವ ಬಿಳಿ ಗಡ್ಡದ ಸಾಂತಾನನ್ನು 1931ರಲ್ಲಿ ಕೋಕಾಕೋಲಾ ಜಾಹೀರಾತಿಗಾಗಿ ಹ್ಯಾಡನ್‌ ಸುಂಡ್‌ಬ್ಲಮಿ ಚಿತ್ರಿಸಿದರು.

ವಿವಿಧೆಡೆ ಆಚರಣೆ ಹೇಗೆ?

ಕ್ರಿಸ್‌ಮಸ್‌ನಲ್ಲಿ ಬಳಕೆಯಾಗುವ ಒಂದೊಂದು ವಸ್ತುವಿಗೂ ತನ್ನದೇ ಆದ ಮಹತ್ವವಿದೆ. ಕ್ರಿಸ್ಮಸ್‌ ಸಂಭ್ರಮದ ಭಾಗವಾಗಿರುವ ಕ್ರಿಸ್ಮಸ್‌ ವೃಕ್ಷಕ್ಕೂ ಒಂದು ಐತಿಹ್ಯವಿದೆ. ಕ್ರಿಸ್ಮಸ್‌ ದಿನ ಈ ವೃಕ್ಷವು ಎಲ್ಲ ಕ್ರೈಸ್ತರ ಮನೆಯಲ್ಲೂ ಅಲಂಕೃತಗೊಳ್ಳುತ್ತದೆ. ಆಟಿಕೆ ಬಲೂನು ಮತ್ತು ಸಿಹಿತಿಂಡಿಗಳನ್ನು ಈ ವೃಕ್ಷದ ಕೊಂಬೆಗಳ ಮೇಲೆ ತೂಗು ಹಾಕಲಾಗುತ್ತದೆ. ಮನೆ ಮನೆಗೆ ತೆರಳಿ ಪರಸ್ಪರ ಶುಭಾಶಯ ಕೋರುತ್ತಾರೆ. ಏಸು ಪ್ರಪಂಚದ ಬೆಳಕು ಎಂಬುದನ್ನು ಸಂಕೇತಿಸಲು ಮೇಣದ ಬತ್ತಿಗಳನ್ನು ಬೆಳಗಲಾಗುತ್ತದೆ. ಶಿಶು ಏಸುವಿಗೆ ಮಾಗಿಯ ಕಡೆಯಿಂದ ದೊರೆತ ಉಡುಗೊರೆಗಳ ಸ್ಮರಣಾರ್ಥವಾಗಿ ಕ್ರಿಸ್‌ಮಸ್‌ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

- ನಾಗೇಶ ಜಿ. ವೈದ್ಯ, ಬೆಂಗಳೂರು

Follow Us:
Download App:
  • android
  • ios