Chaitra Navratri 2023: 9 ದಿನಗಳ ಕಾಲ ಉಪವಾಸ ಇರುವ ಪ್ರಧಾನಿ ಮೋದಿ!
ಮಾರ್ಚ್ 22ರಿಂದ ಚೈತ್ರ ನವರಾತ್ರಿ ಪ್ರಾರಂಭವಾಗುತ್ತಿದೆ. ಈ ಮುಂದಿನ 9 ದಿನಗಳ ಕಾಲ ತಾಯಿ ದುರ್ಗೆಯ 9 ಅವತಾರಗಳನ್ನು ಪೂಜಿಸುವ ಜೊತೆಗೆ ಉಪವಾಸ ಆಚರಿಸಲಾಗುವುದು. ವಿಶೇಷವೆಂದರೆ ನಮ್ಮ ಪ್ರದಾನಿ ನರೇಂದ್ರ ಮೋದಿ ಕೂಡಾ ಈ ಹಬ್ಬದ ಸಂದರ್ಭದಲ್ಲಿ ಉಪವಾಸ ಆಚರಿಸುತ್ತಾರೆ.
ವಸಂತ ನವರಾತ್ರಿ ಎಂದೂ ಕರೆಯಲ್ಪಡುವ ಚೈತ್ರ ನವರಾತ್ರಿಯು ಈ ವರ್ಷ ಮಾರ್ಚ್ 22, 2023 ರಿಂದ ಮಾರ್ಚ್ 30, 2023 ರವರೆಗೆ ಇರಲಿದೆ. ಮಾ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲು ಈ ದಿನಗಳನ್ನು ಮೀಸಲಿಡಲಾಗಿದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಅವತಾರಗಳಾಗಿದ್ದು, ಆಚರಣೆಯ ಪ್ರತಿ ದಿನವೂ ಮಹತ್ವದ್ದಾಗಿದೆ. ಈ ದಿನಗಳಲ್ಲಿ ಭಕ್ತರು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಉಪವಾಸವನ್ನು ಆಚರಿಸುತ್ತಾರೆ.
ಅನೇಕ ಜನರು ಹಣ್ಣುಗಳನ್ನು ಮಾತ್ರ 9 ದಿನಗಳ ಕಾಲ ಸೇವಿಸುತ್ತಾರೆ ಮತ್ತು ಕೆಲವರು ನೀರನ್ನು ಕೂಡಾ ಸೇವಿಸದ ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ವರ್ಷದಲ್ಲಿ ಎರಡು ನವರಾತ್ರಿಗಳನ್ನೂ ಆಚರಿಸಲಿದ್ದು, ಎರಡೂ ಬಾರಿ 9 ದಿನಗಳ ಕಾಲ ಉಪವಾಸ(Fast) ಕೈಗೊಳ್ಳುತ್ತಾರೆ. ಪ್ರಧಾನಿ ಮೋದಿ ನವರಾತ್ರಿಯನ್ನು(Chaitra Navaratri) ಹೇಗೆ ಆಚರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದರೆ ನಾವು ಹೇಳುತ್ತೇವೆ ಕೇಳಿ..
ಮೋದಿಯಿಂದ ನವರಾತ್ರಿ ಆಚರಣೆ
ಪ್ರಧಾನಿ ಮೋದಿಯವರು(PM Modi) ಕಳೆದ 40 ವರ್ಷಗಳಿಂದ ಚೈತ್ರ ಮತ್ತು ಶಾರದೀಯ ನವರಾತ್ರಿ ಎರಡರಲ್ಲೂ ಉಪವಾಸ ಆಚರಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಪ್ರತಿಪದ ಮತ್ತು ನವಮಿಯಂದು ಮಾತ್ರ ಉಪವಾಸ ಮಾಡುವುದಿಲ್ಲ, ಆದರೆ ಇಡೀ ಒಂಬತ್ತು ದಿನಗಳವರೆಗೆ ಉಪವಾಸ ಮಾಡುತ್ತಾರೆ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಮೋದಿ ಈ ಎರಡೂ ನವರಾತ್ರಿಗಳಲ್ಲಿ ನೀರಿನ ಮೇಲೆ ಮಾತ್ರ ಉಪವಾಸ ಮಾಡುತ್ತಾರೆ. ಪ್ರಧಾನಿ ಮೋದಿ ಉಪವಾಸದ ಸಮಯದಲ್ಲಿ ನೀರು ಮಾತ್ರ ಕುಡಿಯುತ್ತಾರೆ. ಮತ್ತೇನೂ ಆಹಾರ ಸೇವಿಸುವುದಿಲ್ಲ. ನೀರಿನ ಮೇಲೆ ಮಾತ್ರ ಉಪವಾಸ ಮಾಡುವುದು ತುಂಬಾ ಕಷ್ಟ ಮತ್ತು ಅವರು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ಸಮಯದಲ್ಲಿ, ಅವರು ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ತಾಯಿಯನ್ನು ಪೂಜಿಸುತ್ತಾರೆ. ಸಂಜೆ ಪೂಜೆಯ ಬಳಿಕ ಕೆಲ ಹಣ್ಣುಗಳನ್ನು ಸೇವಿಸುತ್ತಾರೆ.
ಯುಗಾದಿ ವರ್ಷ ಭವಿಷ್ಯ; ದ್ವಾದಶ ರಾಶಿಗಳ ಈ ವರ್ಷದ ಫಲವೇನಿದೆ?
ಮೋದಿ ಅವರು ನಿಯಮಗಳನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬುದಕ್ಕೆ ಉದಾಹರಣೆ 2014ರಲ್ಲಿ ಮುನ್ನೆಲೆಗೆ ಬಂದಿತು. ಪ್ರಧಾನಿ ಮೋದಿ ಅವರು ನವರಾತ್ರಿಯ ಸಮಯದಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಯುಎಸ್ ಪ್ರವಾಸಕ್ಕೆ ಹೋದಾಗ ಅಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಿದ್ದರು. ಆ ವೇಳೆ ಹಬ್ಬದ ಉಪವಾಸ ನಿಯಮಗಳನ್ನು ಪಾಲಿಸಿದ ಪ್ರಧಾನಿ ಮೋದಿ ನಿಂಬೆ ನೀರನ್ನು ಮಾತ್ರ ಸೇವಿಸಿದ್ದರು! ಇದರಿಂದಾಗಿ ಅವರ ಅನುಕೂಲಕ್ಕಾಗಿ ಹೆಚ್ಚಿನ ಟೇಬಲ್‌ಗಳಲ್ಲಿನ ಮೆನುವನ್ನು ಟ್ವೀಕ್ ಮಾಡಬೇಕಾಗಿತ್ತು.
ಯೋಗಿ ಆದಿತ್ಯನಾಥ್‌ರಿಂದಲೂ ಆಚರಣೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅವರು ದುರ್ಗಾ ಮಾತೆಯನ್ನು ಗೌರವಿಸುವ ವಸಂತ ಹಬ್ಬವಾದ ಚೈತ್ರ ನವರಾತ್ರಿಯ ಉಪವಾಸವನ್ನು ಆಚರಿಸುತ್ತಾರೆ.
Chaitra Navratri: ಯಾರಿಗೆ ಶುಭ ನೀಡಲಿದೆ ಚೈತ್ರ ನವರಾತ್ರಿ?
ರಾಮ ಜಯಂತಿ ಆಚರಣೆ
ಈ ಚೈತ್ರ ನವರಾತ್ರಿಯನ್ನು ಕೇವಲ ದುರ್ಗಾರಾಧನೆಯಾಗಿ ಅಲ್ಲ, ರಾಮನ ಜನ್ಮ ಜಯಂತಿಯಾಗಿಯೂ ಆಚರಿಸಲಾಗುತ್ತದೆ. ರಾಮ ಹುಟ್ಟಿದ್ದು ಚೈತ್ರ ನವರಾತ್ರಿಯ ಮೊದಲ ದಿನವಾಗಿದ್ದು, 9 ದಿನಗಳ ಆಚರಣೆ ಬಳಿಕ ರಾಮ ನವಮಿ(Ram Navami) ಹಬ್ಬವನ್ನು ಆಚರಿಸಲಾಗುತ್ತದೆ. ಭಗವಾನ್ ರಾಮನ ಜನ್ಮಕತೆಯೊಂದಿಗೆ ಸಂಬಂಧಿಸಿದ ಸ್ಥಳಗಳನ್ನು ಅಲಂಕರಿಸಲಾಗುತ್ತದೆ ಮತ್ತು ಜನರು ಈ ಸ್ಥಳಗಳಿಗೆ ಭೇಟಿ ನೀಡಿ ರಾಮನ ಆಗಮನದ ಸಂಭ್ರಮವನ್ನು ಮತ್ತೆ ಮತ್ತೆ ಆಚರಿಸುತ್ತಾರೆ.
ಚೈತ್ರ ನವರಾತ್ರಿಯ ದಿನವನ್ನು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಯುಗಾದಿಯಾಗಿ ಆಚರಿಸಿದರೆ, ಮಹಾರಾಷ್ಟ್ರ, ಗೋವಾಗಳಲ್ಲಿ ಗುಡಿ ಪಾಡ್ವಾ ಆಚರಣೆ ನಡೆಯುತ್ತದೆ.