ಆಷಾಢ ಮಾಸದ ಕೊನೆಯ ದಿನವೇ ಭೀಮನ ಅಮಾವಾಸ್ಯೆ. ಇದಕ್ಕೆ ಜ್ಯೋತಿರ್ಭೀಮೇಶ್ವರ ವ್ರತವೆಂದು, ಕೊಡೆ ಅಮಾವಾಸ್ಯೆ, ಆಷಾಢ ಅಮಾವಾಸ್ಯೆ ಎಂದೂ ಹಲವು ಕಡೆ ಕರೆಯುತ್ತಾರೆ. ಆಷಾಢ ಮಾಸದಲ್ಲಿ ಯಾವುದೇ ಹಬ್ಬವಿರುವುದಿಲ್ಲ ಮತ್ತು ಯಾವುದೇ ಶುಭ ಕಾರ್ಯಗಳನ್ನು, ಮದುವೆ ಸಮಾರಂಭಗಳನ್ನು ನಡೆಸುವುದಿಲ್ಲ. ದೇವರ ಪ್ರತಿಷ್ಠೆ, ಉತ್ಸವ ಇತ್ಯಾದಿ ಕೆಲವು ಕಾರ್ಯಕ್ರಮಗಳನ್ನು ನಡೆಸುತ್ತಾರಷ್ಟೆ.

ಭೀಮನ ಅಮಾವಸ್ಯೆಯಂದು ಶಿವ-ಪಾರ್ವತಿಯರನ್ನು ಭಕ್ತಿಯಿಂದ ಆರಾಧಿಸಿ ಕೃಪೆ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಮುಖ್ಯವಾಗಿ ಅಂದು ವಿವಾಹಿತ ಮಹಿಳೆಯರು ಪತಿಯ ಪಾದಗಳನ್ನು ತೊಳೆದು ಪೂಜೆ ಮಾಡುತ್ತಾರೆ. ಪತಿಗೆ ದೀರ್ಘಾಯುಷ್ಯ, ಆರೋಗ್ಯ, ಅಭಿವೃದ್ಧಿ, ಯಶಸ್ಸನ್ನು ಕರುಣಿಸಲೆಂದು ಶಿವ-ಪಾರ್ವತಿಯರಲ್ಲಿ ಬೇಡಿಕೊಳ್ಳುತ್ತಾರೆ.  ಅವಿವಾಹಿತ ಮಹಿಳೆಯರು ಸದ್ಗುಣ ಸಂಪನ್ನ ವರನನ್ನು ವರಿಸುವ ಸಲುವಾಗಿ ವ್ರತ ಮಾಡುತ್ತಾರೆ.

ಇದನ್ನು ಓದಿ: ಈ ಐದು ರಾಶಿಯವರ ಹೆಂಡತಿಯರು ಅದೃಷ್ಟವಂತರು..!

ಭೀಮೇಶ್ವರನ ರೂಪದಲ್ಲಿ ಆಷಾಢ ಅಮಾವಾಸ್ಯೆಯಂದು ಶಿವ-ಪಾರ್ವತಿಯರನ್ನು ಪೂಜಿಸಲಾಗುತ್ತದೆ. ಪಾರ್ವತಿಯು ಪರಶಿವನನ್ನು ವರಿಸಿದ ಶುಭದಿನವು ಇದಾದ ಕಾರಣ ಈ ದಿನವನ್ನು ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಆಷಾಢ ಅಮಾವಾಸ್ಯೆಯ ಹಿಂದೆ ಪುರಾಣದ ಒಂದು ಕಥೆಯಿದೆ.

ಭೀಮನ ಅಮಾವಾಸ್ಯೆಯ ವ್ರತ ಕಥೆ
ಈ ವ್ರತದ ಹಿಂದೆ ಅನೇಕ ಕಥೆಗಳಿವೆ, ಅದರಲ್ಲಿ ಮುಖ್ಯವಾದ ಕಥೆ ಮರಣ ಹೊಂದಿದ ರಾಜಕುಮಾರನನ್ನು ವರಿಸಿದ್ದು. ಒಮ್ಮೆ ಬ್ರಾಹ್ಮಣ ದಂಪತಿಗಳು ಕಾಶಿ ಯಾತ್ರೆಗೆ ಹೋಗಲು ಇಚ್ಚಿಸಿದ್ದರು. ಮಗಳಿಗೆ ಮದುವೆಯನ್ನು ಮಾಡದೇ ಈ ಯಾತ್ರೆಗೆ ಹೋಗಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಹಲವು ಸಮಯ ಕಳೆದರೂ ಮಗಳಿಗೆ ಯೋಗ್ಯ ವರ ಸಿಗದ ಕಾರಣ ಮಗ ಮತ್ತು ಸೊಸೆಯೊಂದಿಗೆ ಮಗಳನ್ನು ಬಿಟ್ಟು ದಂಪತಿ ಕಾಶಿಯಾತ್ರೆಗೆ ಹೊರಡುತ್ತಾರೆ.

ತಿಂಗಳುಗಳು ಕಳೆದರೂ ದಂಪತಿ ವಾಪಾಸ್ಸಾಗದ್ದನ್ನು ಕಂಡು, ಕನ್ಯೆಯ ಸಹೋದರ ಆಕೆಯ ವಿವಾಹ ಮಾಡಲು ಅಣಿಯಾಗುತ್ತಾನೆ. ಹಣ-ಸಂಪತ್ತು, ಐಶ್ವರ್ಯದ ಆಸೆಗೆ ಸತ್ತ ರಾಜಕುಮಾರನೊಂದಿಗೆ ತಂಗಿಯ ವಿವಾಹವನ್ನು ಮಾಡಿಸುತ್ತಾನೆ. ನಂತರ ರಾಜ ಕುಮಾರನ ಮನೆಯವರು ಮತ್ತು ಸೈನಿಕರೊಂದಿಗೆ ಶವ ಸಂಸ್ಕಾರಕ್ಕೆಂದು ಕರೆದೊಯ್ಯುವಾಗ ಮಳೆ ಬಂದ ಕಾರಣ ಎಲ್ಲರೂ ಅಲ್ಲಿಂದ ತೆರಳುತ್ತಾರೆ. ಆಗ ಪತಿಯೊಂದಿಗೆ ಇದ್ದ ಈಕೆ ತಂದೆ-ತಾಯಿ ಹೇಳಿದ್ದ ಅಮಾವಾಸ್ಯೆಯ ವ್ರತದ ಬಗ್ಗೆ ನೆನಪಿಸಿಕೊಳ್ಳುತ್ತಾಳೆ.

ಇದನ್ನು ಓದಿ: ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು?

ಮಣ್ಣಿನಿಂದ ಮೂರ್ತಿಯನ್ನು ಮಾಡಿ, ಶಿವ-ಪಾರ್ವತಿಯನ್ನು ಧ್ಯಾನಿಸುತ್ತಾಳೆ, ಆಗ ಅಲ್ಲಿಗೆ ನವ ದಂಪತಿಗಳು ಬಂದು ವ್ರತದ ಮಹಿಮೆಯನ್ನು ಕೇಳುತ್ತಾರೆ. ಅವರಿಗೆ ಸಂಪೂರ್ಣ ವ್ರತದ ಕಥೆಯನ್ನು ವಿವರಿಸಿ ಆ ದಂಪತಿಗಳ ಆಶೀರ್ವಾದ ಪಡೆಯುತ್ತಾಳೆ. ಆಗ ಅವರು ಧೀರ್ಘ ಸುಮಂಗಲಿ ಭವ ಎಂದು ಆಶೀರ್ವದಿಸುತ್ತಾರೆ ಮತ್ತು ಗಂಡನನ್ನು ಎಬ್ಬಿಸುವಂತೆ ಆಜ್ಞಾಪಿಸುತ್ತಾರೆ. ರಾಜಕುಮಾರ ಬದುಕುತ್ತಾನೆ. ಈ ಹಿನ್ನೆಲೆಯಲ್ಲಿ ಶಿವ-ಪಾರ್ವತಿಯರ ಕೃಪೆಯನ್ನು ಈ ವ್ರತದಿಂದ ಪಡೆಯಬಹುದಾಗಿದೆ. ಮದುವೆಯಾಗಿ ಒಂಭತ್ತು ವರ್ಷಗಳ ಕಾಲ ಈ ವ್ರತವನ್ನು ತಪ್ಪದೇ ಮಾಡಬೇಕೆಂಬ ಸಂಪ್ರದಾಯ ಕೆಲವು ಕಡೆ ಇದೆ.ಭೀಮನ ಅಮಾವಾಸ್ಯೆಯ ಪೂಜಾ ವಿಧಾನ
ಮಹಿಳೆಯರು ಪ್ರಾತಃಕಾಲದಲ್ಲಿ ಎದ್ದು, ಶುಚಿರ್ಭೂತರಾಗಿ ಹೊಸ ವಸ್ತ್ರವನ್ನು ಧರಿಸಿ, ದೇವರ ಪೂಜೆಗೆ ಅಣಿ ಮಾಡಿಕೊಳ್ಳಬೇಕು. ವ್ರತವನ್ನು ಪ್ರಾರಂಭಿಸುವಾಗ ಕೈಗೆ ಕಂಕಣವನ್ನು ಧರಿಸಿ ಭೀಮೇಶ್ವರನನ್ನು ಆರಾಧಿಸಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನಿಟ್ಟು ಅದರ ಮೇಲೆ ಎರಡು ಎಣ್ಣೆಯ ದೀಪವನ್ನಿಡಬೇಕು. ಶಿವ-ಪಾರ್ವತಿಯನ್ನು ಆವಾಹನೆ ಮಾಡಿ ಪೂಜಿಸಬೇಕು. ನಂತರ ಗೌರಿ ದಾರವನ್ನು ಕಟ್ಟಿಕೊಳ್ಳಬೇಕು. ಪ್ರಥಮ ಪೂಜಕ ಗಣಪನನ್ನು ಪೂಜಿಸಿ, ನಂತರ ಶಿವ-ಪಾರ್ವತಿಯನ್ನು ಪೂಜಿಸಬೇಕು. ನೈವೇದ್ಯವನ್ನು ಮಾಡಿದ ನಂತರ ಪತಿಯ ಪಾದವನ್ನು ಪೂಜಿಸಿ ಆಶೀರ್ವಾದವನ್ನು ಪಡೆಯಬೇಕು. ಪಾರ್ವತಿಯ ಆರಾಧನೆಯಿಂದ ಸುಖ, ಸಂಪತ್ತು, ಸಂತಾನ ಪ್ರಾಪ್ತಿಯಾಗುತ್ತದೆ.

ಇದನ್ನು ಓದಿ: ನಿಮ್ಮ ರಾಶಿ ನೋಡಿ ವಾರದ ಈ ದಿನವೇ ವ್ರತ ಮಾಡಿ..!

ಕೊಡೆ ಅಮಾವಾಸ್ಯೆ
ಆಷಾಢ ಅಮಾವಾಸ್ಯೆಯಂದು ನವ ವಿವಾಹಿತ ದಂಪತಿಯನ್ನು ತವರು ಮನೆಯವರು ಕರೆದು ಹಬ್ಬವನ್ನಾಚರಿಸಿ ಕೊಡೆ (ಛತ್ರಿ) ಕೊಡುವ ಸಂಪ್ರದಾಯ ಕೆಲವು ಕಡೆ ಇರುವ ಕಾರಣ ಈ ದಿನವನ್ನು ಕೊಡೆ ಅಮಾವಾಸ್ಯೆ ಎಂದು ಸಹ ಕರೆಯುತ್ತಾರೆ.