Asianet Suvarna News Asianet Suvarna News

ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!

ಸ್ನಾನವು ಪ್ರತಿನಿತ್ಯದ ಒಂದು ಪ್ರಕ್ರಿಯೆ ಇಲ್ಲವೇ ಭಾಗ ಮಾತ್ರವಲ್ಲ, ಇದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವೂ ಇದೆ. ಪ್ರತಿ ದಿನ ಸ್ನಾನ ಮಾಡುವುದರಿಂದ ಇರುವ ಪ್ರಯೋಜನಗಳ ಜೊತೆಗೆ ಇಂಥ ಸಮಯಕ್ಕೇ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಜೊತೆಗೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಅಶುಭವೆಂಬುದೂ ತಿಳಿಯಬೇಕಿದ್ದು, ಸ್ನಾನದ ಪ್ರಕಾರಗಳ ಬಗ್ಗೆ ನೋಡೋಣ…

Bathing types and Correct procedure to clean your physical body
Author
Bangalore, First Published Jul 27, 2021, 12:16 PM IST

ಸ್ನಾನ ನಿತ್ಯವೂ ಮಾಡುವ ಕರ್ಮಗಳಲ್ಲಿ ಒಂದಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ, ಶುಚಿಯಾಗಿರಲು ಹೀಗೆ ಅನೇಕ ಕಾರಣಗಳಿಗಾಗಿ ನಿತ್ಯ ಸ್ನಾನ ಮಾಡುವುದು ರೂಢಿಯಲ್ಲಿರುವ ಪದ್ಧತಿ. ಸ್ನಾನ ಮಾಡುವುದರಿಂದ ಸ್ವಾಸ್ಥ್ಯದ ದೃಷ್ಟಿಯಿಂದ  ಅನೇಕ ಲಾಭಗಳಾದರೆ, ಧರ್ಮದ ದೃಷ್ಟಿಯಿಂದ ಸಹ ಉತ್ತಮ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಧರ್ಮ ಶಾಸ್ತ್ರಗಳ ಪ್ರಕಾರ ಸೂರ್ಯೋದಯದ ಸಮಯಕ್ಕೆ ಸ್ನಾನ ಮಾಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಹಾಗಾಗಿ ಪುರಾಣ ಕಾಲದಿಂದಲೂ ಋಷಿ ಮುನಿಗಳು ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಸ್ನಾನದ ನಂತರ ಸೂರ್ಯದೇವನಿಗೆ ಜಲವನ್ನು ಅರ್ಪಿಸುತ್ತಿದ್ದರು. ಇದರಿಂದ ಸೂರ್ಯದೇವನ ಕೃಪೆಯ ದೊರೆಯುವುದಲ್ಲದೆ, ಅಂದಿನ ದಿನ ಮಾಡುವ ಕಾರ್ಯಗಳೆಲ್ಲ ಸಫಲತೆಯನ್ನು ಕಾಣುತ್ತವೆ. ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. 

ಇದನ್ನು ಓದಿ: ಜಗತ್ತು ಗುರುತಿಸುವಂಥ ವ್ಯಕ್ತಿತ್ವ ಈ ರಾಶಿ- ನಕ್ಷತ್ರದವರದ್ದು...!!

ಧರ್ಮ ಶಾಸ್ತ್ರದಲ್ಲಿ ಸ್ನಾನದ ಅನೇಕ ವಿಧಗಳನ್ನು ತಿಳಿಸಿದ್ದಾರೆ. ಆ ಪ್ರಕಾರಗಳು ಸಮಯದ ಅನುಸಾರ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ ಸ್ನಾನ ಮಾಡುವ ಸರಿಯಾದ ನಿಯಮವನ್ನು ಸಹ ಉಲ್ಲೇಖಿಸಿದ್ದಾರೆ. ಹಾಗಾದರೆ ಸ್ನಾನದ ಸರಿಯಾದ ಪ್ರಕಾರ ಮತ್ತು ಯಾವ ಸಮಯಕ್ಕೆ ಸ್ನಾನ ಮಾಡಿದರೆ ಏನು? ಎಂಬುದರ ಬಗ್ಗೆ ತಿಳಿಯೋಣ...

ಪುರಾಣ ಶಾಸ್ತ್ರಗಳಲ್ಲಿ ನಿತ್ಯ ಮಾಡುವ ಕ್ರಿಯೆಗಳಿಗೆ ಮಂತ್ರಗಳನ್ನು ತಿಳಿಸಲಾಗಿದೆ. ಬೆಳಗ್ಗೆ ಎದ್ದಾಗ ಒಂದು ಮಂತ್ರ, ಭೋಜನ ಸೇವಿಸುವ ಮುನ್ನ ಮಂತ್ರ ಹೀಗೆ ಅನೇಕ ಮಂತ್ರಗಳನ್ನು ಸ್ತೋತ್ರಗಳನ್ನು ಪುರಾಣದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಸ್ನಾನ ಮಾಡುವಾಗ ಸಹ ಹೇಳಬೇಕಾದ ಮಂತ್ರವನ್ನು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ದೇವರ ನಾಮ – ಕೀರ್ತನೆ ಮತ್ತು ಭಜನೆಗಳನ್ನು ಸಹ ಸ್ನಾನ ಮಾಡುವ ಸಮಯದಲ್ಲಿ ಮಾಡಬಹುದಾಗಿದೆ.

Bathing types and Correct procedure to clean your physical body


ಸ್ನಾನದ ನಿಯಮ:
ಸ್ನಾನ ಮಾಡುವ ಸಮಯದಲ್ಲಿ ಮೊದಲಿಗೆ ತಲೆ ಮೇಲೆ ನೀರನ್ನು ಹಾಕಿಕೊಳ್ಳುವುದು ಶಾಸ್ತ್ರದ ಪ್ರಕಾರ ಅತ್ಯುತ್ತಮ ಅಭ್ಯಾಸವಾಗಿದೆ. ಅಲ್ಲದೆ, ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಏನೆಂದರೆ, ತಲೆಯಲ್ಲಿ ಉಷ್ಣತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಮೊದಲು ನೀರನ್ನು ತಲೆ ಮೇಲೆ ಸುರಿದುಕೊಂಡಾಗ ಆ ಉಷ್ಣತೆಯು ನೀರಿನ ಜೊತೆ ಜೊತೆಗೆ ಪಾದದವರೆಗೆ ಇಳಿದು ಶಮನವಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಶರೀರದ ಒಳಗೆ ಉಷ್ಣದ ಪ್ರಮಾಣವು ಕಡಿಮೆಯಾಗುತ್ತದೆ. 

ಸ್ನಾನ ಪ್ರಕ್ರಿಯೆಗೂ ಸಹ ಅನೇಕ ವಿಧಗಳಿವೆ. ಪ್ರಮುಖವಾಗಿ 4 ವಿಧಾನಗಳಿದ್ದು, ಅವುಗಳನ್ನು ಈ ಪ್ರಕಾರವಾಗಿ ವಿಂಗಡಿಸಲಾಗಿದೆ. ಶಾಸ್ತ್ರಾನುಸಾರ ಈ ರೀತಿಯಲ್ಲಿ ಪ್ರತಿನಿತ್ಯ ಸ್ನಾನ ಮಾಡಿದರೆ ಶುಭವಾಗುತ್ತದೆ. 

ದೇವ ಸ್ನಾನ
ಕಾಲ ಬದಲಾದಂತೆ ಆಚರಣೆ ಸಹ ಬದಲಾಗಿ, ಸ್ನಾನದ ಸಮಯವೂ ಸಹ ವಿಳಂಬವಾಗುತ್ತಲೇ ಹೋಗುತ್ತಿವೆ. ಶಾಸ್ತ್ರದ ಅನುಸಾರ ಸೂರ್ಯೋದಯವಾದ ತಕ್ಷಣ ನದಿಯಲ್ಲಿ ಸ್ನಾನ ಮಾಡುವುದು ಅಥವಾ ಮನೆಯಲ್ಲಿಯೇ ನದಿಯ ಹೆಸರು ಮತ್ತು ಮಂತ್ರವನ್ನು ಪಠಿಸುತ್ತಾ ಸ್ನಾನ ಮಾಡುವ ವಿಧವನ್ನು ದೇವ ಸ್ನಾನ ಎಂದು ಕರೆಯುತ್ತಾರೆ. 

ಇದನ್ನು ಓದಿ: ಈ ಮೂರು ರಾಶಿಯವರ ಯಶಸ್ಸಿಗೆ ಕಾರಣ ಶುಕ್ರ ಗ್ರಹ...!!

ಬ್ರಹ್ಮ ಸ್ನಾನ
ಮುಂಜಾನೆ 4ರಿಂದ 5 ಗಂಟೆಯೊಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಸ್ಮರಣೆ ಮಾಡುತ್ತಾ ಸ್ನಾನ ಮಾಡಬೇಕು. ಹೀಗೆ ಮಾಡುವುದನ್ನು ಬ್ರಹ್ಮ ಸ್ನಾನವೆಂದು ಕರೆಯುತ್ತಾರೆ. ಈ ಪ್ರಕಾರವಾಗಿ ಸ್ನಾನ ಮಾಡುವ ವ್ಯಕ್ತಿಯ ಮೇಲೆ ಇಷ್ಟ ದೇವರ ವಿಶೇಷ ಕೃಪೆ ಇರುತ್ತದೆ. ಜೊತೆಗೆ ದುಃಖ ಶಮನವೂ ಆಗಿ, ಸಕಲ ಸಮೃದ್ಧಿ ಪ್ರಾಪ್ತವಾಗುತ್ತದೆ. 

ಋಷಿ ಸ್ನಾನ
ಸೂರ್ಯೋದಕ್ಕೆ ಮುನ್ನ ಆಗಸದಲ್ಲಿ ನಕ್ಷತ್ರಗಳು ಕಾಣುತ್ತಿರುವಂತೆಯೇ ಸ್ನಾನ ಮಾಡಿದರೆ, ಅದನ್ನು ಋಷಿ ಸ್ನಾನ ಎನ್ನಲಾಗುವುದು. ಜೊತೆಗೆ ಇದನ್ನು ಮಾನವ ಸ್ನಾನವೆಂದೂ ಕರೆಯಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಮಾಡುವ ಸ್ನಾನವನ್ನು ಸರ್ವಶ್ರೇಷ್ಠವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಇದನ್ನು ಓದಿ: ಆರೋಗ್ಯಕರ ಜೀವನ, ನೆಮ್ಮದಿಯ ನಿದ್ರೆಗೆ ವಾಸ್ತು ಮುದ್ರೆ.. !

ದಾನವ ಸ್ನಾನ
ಸಾಮಾನ್ಯವಾಗಿ ಈಗ ಚಾಲ್ತಿಯಲ್ಲಿರುವಂತೆ ಬೆಳಗ್ಗೆ ಎದ್ದೊಡನೆ ಚಹಾ, ಉಪಾಹಾರ ಸೇವನೆ ಬಳಿಕ ನಿಧಾನವಾಗಿ ಸ್ನಾನವನ್ನು ಮಾಡುತ್ತಾರೆ. ಇದನ್ನು ದಾನವ (ರಾಕ್ಷಸ) ಸ್ನಾನ ಎಂದು ಕರೆಯಲಾಗುತ್ತದೆ. ಆದರೆ, ಈ ಸಮಯವು ಸ್ನಾನಕ್ಕೆ ಸೂಕ್ತವಲ್ಲ ಎಂದು ಹೇಳುವ ಜ್ಯೋತಿಷ್ಯ ಶಾಸ್ತ್ರವು, ಸ್ನಾನಕ್ಕಿಂತ ಮೊದಲು ಯಾವುದೇ ಆಹಾರವನ್ನು ಸೇವಿಸಬಾರದು ಎಂದು ತಿಳಿಸುತ್ತದೆ. 

ಹೀಗಾಗಿ ಶಾಸ್ತ್ರದ ಪ್ರಕಾರ, ದೇವ ಸ್ನಾನ, ಋಷಿ ಸ್ನಾನ ಹಾಗೂ ಬ್ರಹ್ಮ ಸ್ನಾನಗಳು ಶ್ರೇಷ್ಠ ಎನ್ನಲಾಗಿದ್ದು, ಈ ಸಮಯದಲ್ಲಿ ಮಾಡಿದಾಗ ಶುಭ ಫಲವನ್ನು ಪಡೆದುಕೊಳ್ಳಬಹುದಾಗಿದೆ. ಮುಖ್ಯವಾಗಿ ರಾತ್ರಿ ಹಾಗೂ ಸಂಜೆ ಸ್ನಾನವನ್ನು ಮಾಡಲೇಬೇಕು. 

Follow Us:
Download App:
  • android
  • ios