Asianet Suvarna News Asianet Suvarna News

ದೇವಾಲಯಗಳಲ್ಲಿ ಫೋನ್ ನಿಷೇಧ ಮಾಡಲೇಬೇಕು, ಏಕೆ ಗೊತ್ತಾ?

ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯು ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ, ಅದನ್ನು ನಿಷೇಧಿಸಬೇಕು ಎಂದು ಅರ್ಚಕರ ಒಕ್ಕೂಟ ಮನವಿ ಮಾಡಿದೆ. ಇದು ಸರಿಯಾದ ಮನವಿಯೇ ಆಗಿದೆ.. ನೀವೇನಂತೀರಾ?

banning Phones in temple is much needed here are the reasons skr
Author
First Published Dec 18, 2022, 3:48 PM IST

ಓಂ ಕೇಶವಾಯ ನಮಃ, ಓಂ ದಾಮೋದರಾಯ ನಮಃ, ಓಂ... ಮುಂದೆ ಮಂತ್ರ ಹೇಳುವಷ್ಟರಲ್ಲಿ ಅರ್ಚಕರಿಗೆ ಫೋನ್‌ನಲ್ಲಿ ಬಂದ ಮೆಸೇಜ್ ಗಮನ ಸೆಳೆಯುತ್ತದೆ. ಮತ್ತೆ ಕೆಲ ಕಡೆ ಅರ್ಚಕರು ಭಕ್ತರಿಗಾಗಿ ಅವರ ಹೆಸರಲ್ಲಿ ಅರ್ಚನೆ ಮಾಡುತ್ತಿರುತ್ತಾರೆ, ಆ ಭಕ್ತ ಮಾತ್ರ ಮೊಬೈಲ್‌ನಲ್ಲಿ ಅರ್ಚನಳೊಂದಿಗೆ ಮಾತಾಡುವಲ್ಲಿ ಮುಳುಗಿರುತ್ತಾನೆ. ಇನ್ನೂ ಕೆಲ ಕಡೆ ಅರ್ಚಕರು ಮಂತ್ರ ಹೇಳುವ ತೊಂದರೆಯೇ ತಪ್ಪಿತೆಂದು ಫೋನ್‌‌ನಲ್ಲಿಯೇ ಶ್ಲೋಕ ಹಾಕಿ ತಮ್ಮ ಪಾಡಿಗೆ ತಾವು ಆರತಿ ಎತ್ತುತ್ತಾರೆ. ಉಳಿದಂತೆ ಬಹುತೇಕ ಭಕ್ತರು ದೇವಸ್ಥಾನಕ್ಕೆ ಬಂದು ಧ್ಯಾನಸ್ಥರಾಗಿ ಮನಸ್ಸಿನ ಶಾಂತಿ ಪಡೆಯುವ ಬದಲು, ಫೋನ್ ನೋಡುತ್ತಲೋ, ಫೋಟೋಗಳನ್ನು ತೆಗೆದುಕೊಳ್ಳುತ್ತಲೋ ಅಥವಾ ಮತ್ಯಾರ ಬಳಿಯೋ ದೊಡ್ಡದಾಗಿ ಮಾತಾಡುತ್ತಲೋ ಸಮಯ ಕಳೆಯುತ್ತಾರೆ. 

ಈ ಎಲ್ಲ ವಿಷಯಗಳು ದೇವಾಲಯದ ಪಾವಿತ್ರ್ಯತೆ, ಶಾಂತತೆ, ಗಂಭೀರತೆಗೆ ಧಕ್ಕೆ ತರುತ್ತಿರುವುದಂತೂ ಸ್ಪಷ್ಟ. ಇದೇ ಕಾರಣಕ್ಕೆ ಡಿಸೆಂಬರ್ ಆರಂಭದಲ್ಲಿ ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡಬೇಕೆಂದು ಅಲ್ಲಿನ  ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿತ್ತು. ಇದೀಗ ಇದೇ ಕಾರಣ ನೀಡಿ ಕರ್ನಾಟಕದ ಅರ್ಚಕರ ಒಕ್ಕೂಟ ಕೂಡಾ ಇಲ್ಲಿಯ ದೇವಾಲಯಗಳಲ್ಲೂ ಮೊಬೈಲ್ ಫೋನ್ ನಿಷೇಧ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ದೇವಸ್ಥಾನಕ್ಕೇಕೆ ಹೋಗುತ್ತೇವೆ?
ದೇವಾಲಯವು ಜನರು ದೇವರನ್ನು ಪ್ರಾರ್ಥಿಸಲು ಮತ್ತು ತಮ್ಮ ನೋವು/ದುಃಖ ಹಂಚಿಕೊಳ್ಳಲು ಹೋಗುವ ಸ್ಥಳವಾಗಿದೆ. ಜನರು ಸಾಮಾನ್ಯವಾಗಿ ದೇವರ ಬಳಿ ಮನಸ್ಸಿನಲ್ಲಿ ಮಾತಾಡುವಾಗ ನಕಾರಾತ್ಮಕ ವಿಷಯಗಳೊಂದಿಗೆ ಪ್ರಾರಂಭಿಸುತ್ತಾರೆ ಮತ್ತು ನಿಧಾನವಾಗಿ ಅಲ್ಲಿಂದ ಹೊರಡುವಾಗ ಧನಾತ್ಮಕ ಯೋಚನೆಗಳೊಂದಿಗೆ, ದೇವರು ಎಲ್ಲ ಸರಿ ಮಾಡುತ್ತಾನೆಂಬ ನಂಬಿಕೆಯೊಂದಿಗೆ ಹೊರಡುತ್ತಾರೆ. ದೇವಸ್ಥಾನಗಳು ನಮಗೆ ಚಾರ್ಜಿಂಗ್ ಸ್ಟೇಷನ್ ಆಗಿ ಕಾರ್ಯನಿರ್ವಹಿಸುತ್ತದೆ.

Shani dev ವಿಗ್ರಹ ಮನೆಗಳಲ್ಲಿಡುವುದಿಲ್ಲ ಏಕೆ?

ದೇವಸ್ಥಾನಗಳು ತುಂಬಾ ಮೌನವಾದ ವಾತಾವರಣವನ್ನು ಹೊಂದಿರುವುದರಿಂದ, ನಿಮ್ಮ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಲು ನೀವು ನಿಜವಾಗಿಯೂ ಕಲಿಯಬಹುದು. ನೀವು ಸಹ ಕುಳಿತು ಸ್ವಲ್ಪ ಸಮಯವನ್ನು ಏಕಾಂಗಿಯಾಗಿ ಕಳೆಯಬಹುದು ಮತ್ತು ನಿಮಗೆ ಸಂಭವಿಸಿದ ಎಲ್ಲಾ ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸಬಹುದು. 

ಜನರು ದೇವಸ್ಥಾನಕ್ಕೆ ಭೇಟಿ ನೀಡಲು ಮತ್ತೊಂದು ಪ್ರಮುಖ ಕಾರಣವೆಂದರೆ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ದೇವರಿಗೆ ದೂರು ನೀಡುವುದು ಮಾತ್ರವಲ್ಲ, ಪರಿಹಾರ ಮತ್ತು ಭರವಸೆಯ ಸಂಕೇತವನ್ನು ಪಡೆಯುವುದು. ಜೀವನದಲ್ಲಿ, ನಾವು ಸಮಸ್ಯೆಗಳಿಗೆ ಸಿಲುಕಿದಾಗ, ನಮ್ಮನ್ನು ನಿಜವಾಗಿಯೂ ನಂಬುವ ಮತ್ತು ನಮ್ಮನ್ನು ಎಂದಿಗೂ ಕೈ ಬಿಡದ ಯಾರಾದರೂ ನಮಗೆ ಯಾವಾಗಲೂ ಬೇಕು. ನಮ್ಮ ಸುತ್ತಲೂ ಬಹಳಷ್ಟು ಜನರು ಇರಬಹುದು, ಆದರೆ ಎಲ್ಲಕ್ಕಿಂತ ದೊಡ್ಡವನು ದೇವರು. ದೇವರು ಯಾವಾಗಲೂ ನಮ್ಮೊಂದಿಗಿದ್ದಾನೆ ಎಂಬ ಸತ್ಯವನ್ನು ನಾವು ತಿಳಿದಿರುವ ಕಾರಣ, ನಮ್ಮ ಕೆಟ್ಟ ದಿನಗಳಲ್ಲಿಯೂ ನಾವು ನಗುವ ಭರವಸೆಯನ್ನು ಪಡೆಯುತ್ತೇವೆ.

ದೇವಾಲಯಗಳೆಂದರೆ ಮನಸ್ಸಿಗೆ ಶಾಂತಿ ಕೊಡುವ ಶಾಂತಿ ಪೀಠಗಳು. ಅಲ್ಲಿ ಕೊಂಚ ಹೊತ್ತು ಕುಳಿತೆದ್ದು ಬಂದರೂ ಬಹುತೇಕರಿಗೆ ಮನಸ್ಸಿಗೆ ಸಮಾಧಾನ ದೊರೆಯುತ್ತದೆ. ದೇವರ ಬಳಿ ತಮ್ಮ ಅಹವಾಲು ಹೇಳಿಕೊಂಡು, ಧ್ಯಾನ ಮಾಡಿಕೊಂಡು ಬರುವಾಗ ಮನಸ್ಸಿನ ಯೋಚನೆಗಳೆಲ್ಲ ಸ್ಪಷ್ಟವಾಗುವ ಜೊತೆಗೆ, ಮನೋಬಲ ವೃದ್ಧಿಸುತ್ತದೆ. ದೇವಾಲಯಗಳ ಉದ್ದೇಶ ಕೂಡ ಇದೇ ಆಗಿದೆ. ನಂಬಿ ಬಂದ ಭಕ್ತರಿಗೆ ಸಮಾಧಾನ, ಶಾಂತಿ ನೀಡುವುದು.\

Billionaires zodiac 2022: ವಿಶ್ವದ ಅತಿ ಶ್ರೀಮಂತರು ಹೆಚ್ಚಾಗಿ ಯಾವ ರಾಶಿಗೆ ಸೇರಿದ್ದಾರೆ ಗೊತ್ತಾ?

 ಆದರೆ, ಮೊಬೈಲ್ ಫೋನ್‌ಗಳು ಮನೆಯಲ್ಲಿ, ಕಚೇರಿಯಲ್ಲಿ ಸಾಲದೆಂಬಂತೆ ದೇವಾಲಯಗಳಲ್ಲಿ ಕೂಡಾ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿವೆ. ಈ ಶಕ್ತಿಕೇಂದ್ರಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವುದರಿಂದ ಭಕ್ತರು ನಿಜವಾಗಿಯೂ ಏಕಾಗ್ರ ಚಿತ್ತರಾಗಿ ಯೋಚಿಸಲು ಸಾಧ್ಯವಾಗುತ್ತದೆ. ದೇವರ ದರ್ಶನವನ್ನು ಮನತುಂಬಿ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ, ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಬೇಕೆಂಬ ಅಹವಾಲು ಸರಿಯಾಗಿಯೇ ಇದೆ ಅಲ್ಲವೇ?

Follow Us:
Download App:
  • android
  • ios