ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, 30 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಲಾಗಿದೆ. 2,100 ಡ್ರೋನ್‌ಗಳ ಮೂಲಕ ರಾಮಾಯಣದ ದೃಶ್ಯಾವಳಿ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.

ಅಯೋಧ್ಯಾ (ಉತ್ತರ ಪ್ರದೇಶ): ದೀಪಾವಳಿ ಆರಂಭವಾಗಿದೆ. ಅಯೋಧ್ಯೆಯಲ್ಲಿನ ರಾಮಲಲ್ಲಾ ದೇಗುಲವೂ ಹಬ್ಬಕ್ಕೆ ಸಜ್ಜಾಗಿ ನಿಂತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತಿದೆ. ಸರಯೂ ನದಿಯ 56 ಘಾಟ್‌ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ 10ನೇ ಆವೃತ್ತಿಯ ದೀಪೋತ್ಸವಕ್ಕೆ ಇದಾಗಲೇ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ರಸ್ತೆಗಳು, ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ವಿದ್ಯುತ್ ದೀಪಗಳು ಹಾಗೂ ಹೂವಿನ ಅಲಂಕಾರಗಳಿಂದ ಸಿಂಗರಿಸಲಾಗಿದೆ. ರಾಮಜನ್ಮಭೂಮಿ ದೇವಸ್ಥಾನವೂ ವಿಶೇಷ ಬೆಳಕಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಭವ್ಯ ಸರಯೂ ಮಹಾ ಆರತಿ, 2,100ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ರಾಮಾಯಣದ ದೃಶ್ಯಾವಳಿ ಹಾಗೂ ಐದು ದೇಶಗಳ ಕಲಾವಿದರ ಸಾಂಸ್ಕೃತಿಕ ಪ್ರದರ್ಶನಗಳು ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

ಸೂರ್ಯವಂಶದ ರಾಜ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯಲ್ಲಿ ದೀಪಾವಳಿಗೆ ವಿಶೇಷ ಮಹತ್ವವಿದೆ. ಈ ಪವಿತ್ರ ಸಂದರ್ಭದಲ್ಲಿ, ದೇವತೆಗಳ ಹೆಸರುಗಳು ಮತ್ತು ಸಂಖ್ಯೆಗಳಿಗೆ ಅನುಗುಣವಾಗಿ ದೀಪಗಳನ್ನು ಬೆಳಗಿಸುವ ಸಂಪ್ರದಾಯವು ನಂಬಿಕೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ಅಯೋಧ್ಯೆಯ ಭವ್ಯ ನೋಟವು ಕೇವಲ ಕಣ್ಣುಗಳನ್ನು ಆಕರ್ಷಿಸುವ ದೃಶ್ಯವಲ್ಲ, ಬದಲಾಗಿ ಭಾರತೀಯ ಸಂಸ್ಕೃತಿ ಮತ್ತು ಸನಾತನ ಸಂಪ್ರದಾಯಗಳ ಜೀವಂತ ಅಭಿವ್ಯಕ್ತಿಯಾಗಿದೆ.

ಆಗಸದಲ್ಲಿ ಚಿತ್ತಾರ

ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣ ಅವರ ನೇತೃತ್ವದಲ್ಲಿ, ಸುಮಾರು 2,147 ಮಂದಿ ಜನಪ್ರತಿನಿಧಿಗಳು, ಸ್ಥಳೀಯ ಸದಸ್ಯರು ಹಾಗೂ ಸಾರ್ವಜನಿಕರು ಸಾಮೂಹಿಕ ಮಹಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಮಂತ್ರಗಳ ಪಠಣದೊಂದಿಗೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಸರಯೂ ತೀರಕ್ಕೆ ವಿಶೇಷ ಮೆರುಗು ನೀಡಲಿದೆ. ರಾತ್ರಿ 2,100 ಡ್ರೋನ್‌ಗಳ ಪ್ರದರ್ಶನದಲ್ಲಿ ರಾಮಾಯಣದ ಪ್ರಮುಖ ಪ್ರಸಂಗಗಳನ್ನು ಆಕಾಶದಲ್ಲಿ ಮೂಡಿಸಲಾಗುತ್ತದೆ. ಐದು ದೇಶಗಳ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಭಕ್ತರು ಮತ್ತು ಪ್ರವಾಸಿಗರ ಹೆಚ್ಚಿನ ಆಗಮನ ನಿರೀಕ್ಷಿಸಿ ಬಿಗಿ ಪೊಲೀಸ್ ಭದ್ರತೆಯನ್ನೂ ಕೈಗೊಳ್ಳಲಾಗಿದೆ.

ಅಯೋಧ್ಯೆಗೆ ಜಗದ್ಗುರು ಆಗಮನ

ಜಗದ್ಗುರು ಸ್ವಾಮಿ ಸತಿಶಾಚಾರ್ಯ ಜಿ ಮಹಾರಾಜ್ ಅವರು ಆಚರಣೆಗಳನ್ನು ವೀಕ್ಷಿಸಲು ಮತ್ತು ಸಿದ್ಧತೆಗಳನ್ನು ಪರಿಶೀಲಿಸಲು ಅಯೋಧ್ಯೆಗೆ ಆಗಮಿಸಿದ್ದಾರೆ. ಹಬ್ಬದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಮಾತನಾಡಿದ ಸತಿಶಾಚಾರ್ಯರು, "ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನ ಆಗಮನದ ಸಮಯದಲ್ಲಿ ಅಯೋಧ್ಯೆಯನ್ನು ದೀಪಗಳಿಂದ ಬೆಳಗಿಸಿದಂತೆಯೇ, ಇಂದು, ಯೋಗಿ ಆದಿತ್ಯನಾಥ್ ಜಿ ಅವರ ಪ್ರಯತ್ನಗಳ ಮೂಲಕ, ಭಗವಾನ್ ರಾಮನ ಅದೇ ನಗರವು ಮತ್ತೊಮ್ಮೆ ಇಡೀ ಜಗತ್ತಿಗೆ ಬೆಳಕಿನ ಸಂದೇಶವನ್ನು ರವಾನಿಸುತ್ತಿದೆ" ಎಂದು ಹೇಳಿದರು.