ಅಪ್ಪಿ ತಪ್ಪಿಯೂ ಈ ರಾಶಿಯವರು ಸಾಲ ಕೊಟ್ಟು ಕೋಡಂಗಿ ಆಗ್ಬೇಡಿ
ಓಲೆ ಮಾಡಿಸೋಕೆ ಸಾಲ ಮಾಡಿದ, ಸಾಲ ತೀರಿಸೋಕೆ ಮನೆ ಮಾರಿದ ಎಂಬ ಗಾದೆಯಿದೆ. ಸಾಲದ ಸುದ್ದಿಗೆ ಹೋದ್ರೆ ಕಥೆ ಮುಗಿದಂತೆ. ಸಾಲ ತೆಗೆದುಕೊಳ್ಳುವಾಗ ಮಾತ್ರವಲ್ಲ ಸಾಲ ನೀಡುವಾಗ ಕೂಡ ನಾವು ನೂರಾರು ಬಾರಿ ಆಲೋಚನೆ ಮಾಡ್ಬೇಕು. ಇಲ್ಲ ಅಂದ್ರೆ ಕೊನೆಯಲ್ಲಿ ಕೈ ಬರಿದಾಗುತ್ತೆ.
ಸಾಲ ಕೊಟ್ಟು ಕೈ ಸುಟ್ಟುಕೊಳ್ಳಬಾರದು. ಯಾರಿಂದಲೂ ಸಾಲ ಪಡೆಯಬೇಡ ಹಾಗೆ ಯಾರಿಗೂ ಸಾಲ ನೀಡಬೇಡ ಎಂದು ದೊಡ್ಡವರು ಹೇಳೋದನ್ನು ನಾವು ಕೇಳಿರ್ತೇವೆ. ಸಾಲ ಶೂಲಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅನಿವಾರ್ಯ ಕಾರಣಕ್ಕೆ ಸಾಲ ತೆಗೆದುಕೊಂಡಿರ್ತೇವೆ. ಇಲ್ಲವೆ ಆಪ್ತರು ಎನ್ನುವ ಕಾರಣಕ್ಕೆ ಸಾಲವನ್ನು ನೀಡಿರ್ತೇವೆ. ಇದೇ ಸಾಲ ಸಂಬಂಧವನ್ನು ಹಾಳು ಮಾಡುತ್ತದೆ. ಕೊಟ್ಟ ಸಾಲ ವಾಪಸ್ ಪಡೆಯಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಪಡೆದ ಸಾಲ ಮರುಪಾವತಿಸಲು ಕೆಲವರಿಗೆ ಮನಸ್ಸಿರೋದಿಲ್ಲ. ಒಟ್ಟಿನಲ್ಲಿ ಕೊಟ್ಟವ ಕೋಡಂಗಿ, ಇಸ್ಗಂಡವ ಈರಭದ್ರ ಎನ್ನುವಂತಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಲದ ಬಗ್ಗೆಯೂ ಹೇಳಲಾಗಿದೆ. ಕೆಲ ರಾಶಿಯವರು ಎಂದಿಗೂ ಸಾಲವನ್ನು ನೀಡಬಾರದು. ಸಾಲವನ್ನು ನೀಡುವಾಗ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಸಾಧ್ಯವಾದರೆ ಯಾರಿಗೂ ಸಾಲ ಕೊಡಬೇಡಿ. ತುಂಬಾ ಮುಖ್ಯವಾಗಿದ್ದರೆ ಕಾಗದದ ಮೇಲೆ ದಾಖಲೆಯಿಟ್ಟು ಸಾಲ ನೀಡಿ. ಯಾವ ರಾಶಿಯವರು ಸಾಲ ಕೊಡುವಾಗ ಜಾಗ್ರತೆ ವಹಿಸಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಅಪ್ಪಿತಪ್ಪಿಯೂ ಈ ರಾಶಿ (Zodiac Signs) ಯವರು ಸಾಲ (Loan) ನೀಡಬೇಡಿ :
ಮಿಥುನ ರಾಶಿ (Gemini) : ಮಿಥುನ ರಾಶಿಯವರು ಸ್ವಭಾವತಃ ಸ್ವಲ್ಪ ಭಾವುಕರಾಗಿರುತ್ತಾರೆ. ಅವರಿಗೆ ಸಂಕೋಚ ಹೆಚ್ಚು. ಅವರ ಈ ಸ್ವಭಾವದಿಂದ ಕೊಟ್ಟ ಸಾಲ ವಾಪಸ್ ಬರುವುದಿಲ್ಲ. ಸಾಲದ ಹಣ (Money) ವಾಪಸ್ ನೀಡುವಂತೆ ಅವರು ಸಾಲ ನೀಡಿದ ವ್ಯಕ್ತಿಯ ಮುಂದೆ ಮಾತನಾಡುವುದಿಲ್ಲ. ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವ ಕಾರಣ ಅವರು ಸಾಲಕ್ಕಾಗಿ ಜಗಳ ಮಾಡೋದಿಲ್ಲ. ಹಾಗಾಗಿ ಅವರ ಸಾಲ ವಾಪಸ್ ಬರೋದು ಕಷ್ಟ. ಇದ್ರಿಂದ ಅವರ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಎಂದೂ ಮಿಥುನ ರಾಶಿಯವರು ಯಾರಿಗೂ ಸಾಲ ನೀಡಬಾರದು.
7 ವರ್ಷ ನಡೆಯಲಿದೆ ಕೇತು ಮಹಾದಶಾ; ಪರಿಣಾಮ, ಪರಿಹಾರವೇನು?
ಕರ್ಕ ರಾಶಿ (Cancer) : ಕರ್ಕ ರಾಶಿಯ ಜನರು ಉದಾರ ಸ್ವಭಾವದವರು. ಕೈನಲ್ಲಿ ಇರುವುದೆಲ್ಲವನ್ನೂ ದಾನ ಮಾಡುತ್ತಾರೆ. ಹಾಗೆ ಭಾವನೆಗೆ ಹೆಚ್ಚು ಬೆಲೆ ನೀಡ್ತಾರೆ. ಯಾರು ಬಂದು ಸಾಲ ಕೇಳಿದ್ರೂ ಸಾಧ್ಯವಾದಷ್ಟು ಹಣವನ್ನು ಅವರು ನೀಡ್ತಾರೆ. ಸಾಲ ನಿರಾಕರಿಸುವ ಗುಣ ಅವರದ್ದಲ್ಲ. ಆದರೆ ಕೊಟ್ಟ ಸಾಲವನ್ನು ಅವರು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಕೊಟ್ಟ ಸಾಲದ ಹಣವನ್ನು ಮರಳಿಸುವಂತೆ ಕೇಳಲು ಇವರು ಹಿಂಜರಿಯುತ್ತಾರೆ. ಇದ್ರಿಂದ ತೊಂದರೆಗೆ ಸಿಲುಕುತ್ತಾರೆ. ಸಾಲ ಪಡೆದ ವ್ಯಕ್ತಿ ಮೂರ್ನಾಲ್ಕು ಬಾರಿ ಕೇಳಿದ್ರೂ ಹಣ ವಾಪಸ್ ನೀಡಿಲ್ಲವೆಂದ್ರೆ ನಿರಾಶೆಗೊಳ್ಳುವ ಇವರು ಮತ್ತೆ ಅವರ ಬಳಿ ಹಣ ಕೇಳುವ ಗೋಜಿಗೆ ಹೋಗೋದಿಲ್ಲ. ಕರ್ಕ ರಾಶಿಯವರು ಭಾವನೆಯನ್ನು ನಿಯಂತ್ರಿಸುವುದು ಮುಖ್ಯ. ಹಾಗೆ ಸಾಲ ನೀಡುವ ಮುನ್ನ ದಾಖಲೆ ಇಟ್ಟುಕೊಳ್ಳುವುದು ಒಳ್ಳೆಯದು.
ತುಲಾ ರಾಶಿ (Libra) : ತುಲಾ ರಾಶಿಯ ಜನರು ಬಂಧು – ಮಿತ್ರರ ಜೊತೆ ವಹಿವಾಟು ಇಟ್ಟುಕೊಳ್ಳದಿರುವುದು ಒಳ್ಳೆಯದು. ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಈ ಜನರು ಸಂಬಂಧದ ವಿಷ್ಯದಲ್ಲಿ ಭಾವುಕರಾಗಿರ್ತಾರೆ. ಕೊಟ್ಟ ಸಾಲವನ್ನು ಅವರು ವಾಪಸ್ ಕೇಳುವ ಸ್ಥಿತಿಯಲ್ಲಿ ಇರೋದಿಲ್ಲ. ಹಾಗಾಗಿ ಸಾಲದ ಸುದ್ದಿಗೆ ಹೋಗದಿದ್ರೆ ಒಳ್ಳೆಯದು.
ಧನು ರಾಶಿ (Sagittarius) : ಈ ರಾಶಿಯವರು ಸಾಲ ನೀಡಿದ್ರೆ ಆ ಹಣ ವಾಪಸ್ ಬರೋದು ಕಷ್ಟಸಾಧ್ಯ. ಸಾಲ ತೆಗೆದುಕೊಂಡವರು ಹಣವನ್ನು ವಾಪಸ್ ನೀಡದೆ ಹೋದಾಗ ಇಬ್ಬರ ಮಧ್ಯೆ ಗಲಾಟೆಯಾಗುವ ಸಾಧ್ಯತೆಗಳಿರುತ್ತವೆ. ಇದ್ರಿಂದ ಸಂಬಂಧ ಹಾಳಾಗುತ್ತದೆ. ಈ ರಾಶಿಯವರು ಅಪ್ಪಿತಪ್ಪಿಯೂ ಗುರುವಾರ ಯಾರಿಗೂ ಸಾಲ ನೀಡಬಾರದು. ಆ ದಿನ ಸಾಲ ನೀಡಿದ್ರೆ ಹಣವನ್ನು ಹೊಳೆಯಲ್ಲಿ ಬಿಟ್ಟಂತೆ.
ಕುಂಭ ರಾಶಿ (Capricorn) : ಕುಂಭ ರಾಶಿಯವರು ಗಂಭೀರ ಸ್ವಭಾವದವರು. ಇವರು ಸಾಲವನ್ನು ಮೈಮೇಲೆ ಎಳೆದುಕೊಳ್ಳುವುದು ಅಪರೂಪ. ಒಂದ್ವೇಳೆ ಸಾಲ ನೀಡಿದ್ರೆ ಅದನ್ನು ವಾಪಸ್ ಕೇಳಲು ಹಿಂಜರಿಯುತ್ತಾರೆ. ಹಾಗಾಗಿ ಸಾಲ ಕೊಡುವ ಮೊದಲು ಕಾಗದದ ಮೇಲೆ ಸಹಿ ತೆಗೆದುಕೊಂಡ್ರೆ ಒಳ್ಳೆಯದು.
ಚಾಣಕ್ಯ ನೀತಿ: ಈ ವಿಷ್ಯಗಳು ಸಾವಿಗಿಂತಲೂ ಹೆಚ್ಚಿನ ನೋವು ನೀಡುತ್ತೆ
ಮೀನ ರಾಶಿ (Pisces) : ಮೀನ ರಾಶಿಯವರು ಕೂಡ ಸಾಲ ನೀಡದಿದ್ದರೆ ಒಳ್ಳೆಯದು. ಈ ರಾಶಿಯವರು ಕೂಡ ಕೊಟ್ಟ ಹಣವನ್ನು ವಾಪಸ್ ಕೇಳಲು ಹಿಂಜರಿಯುತ್ತಾರೆ. ಭಾವನೆಗೆ ಬೆಲೆ ಕೊಡುವ ಜನರಿಗೆ ಹಣ ವಾಪಸ್ ಕೇಳೋದು ಕಷ್ಟವಾಗುತ್ತದೆ. ಆದ್ರೆ ಇದು ಅವರ ಚಿಂತೆಯನ್ನು ಹೆಚ್ಚು ಮಾಡುತ್ತದೆ. ಮೀನ ರಾಶಿಯವರ ಆರ್ಥಿಕ ಪರಿಸ್ಥಿತಿ ಮೇಲೆ ಈ ಸಾಲ ಪ್ರಭಾವ ಬೀರುತ್ತದೆ. ಸಾಲ ನೀಡಲು ನಿರ್ಧರಿಸಿದ್ರೆ ಆಲೋಚನೆ ಮಾಡಿ ಹಣ ನೀಡಿ.