ಚಿರು ಸಾವಿಗೆ ಕಾರಣವೇ ಅಷ್ಟಮ ಕುಜ ದೋಷ? ಇದಕ್ಕೇನು ಪರಿಹಾರ?
ಚಿರಂಜೀವಿ ಸರ್ಜಾ ಅವರ ಸಾವಿನ ಹಿನ್ನೆಲೆಯಲ್ಲಿ ಅವರಿಗೆ ಅಷ್ಟಮ ಕುಜ ದೋಷವಿತ್ತು ಎಂದು ಜಗ್ಗೇಶ್ ಹೇಳಿರುವುದು ವೈರಲ್ ಆಗಿದೆ. ಈ ದೋಷ ನಮ್ಮಲ್ಲಿ ಹತ್ತರಲ್ಲಿ ಏಳು ಮಂದಿಗೆ ಇರುತ್ತೆ ಎಂಬುದು ನಿಮಗೆ ಗೊತ್ತಾ?
ಚಿರಂಜೀವಿ ಸರ್ಜಾ ಅವರ ಮದುವೆಯಾಗುವ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಜಗ್ಗೇಶ್ ತಮ್ಮ Instagram ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ, ಚಿರು ಹಾಗೂ ಮೇಘನಾ ನಡುವೆ ಮದುವೆ ಮಾಡುವ ಕಾಲಕ್ಕೆ ಇಬ್ಬರ ಸಂಬಂಧಕ್ಕೆ ಹಾನಿಕಾರಕವಾದ ಅಷ್ಟಮ ಕುಜ ದೋಷ ಕಾಣಿಸಿಕೊಂಡಿತ್ತಂತೆ. ಜಗ್ಗೇಶ್ ಹೇಳೋದು ಹೀಗೆ:
'ಒಂದು ದಿನ ರಾತ್ರಿ 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಅಂದೆ. ನಾನು ಮಾಮ ಚಿರು ಅಂದ. ವಿಷಯ ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಅಂದ. ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಣಾಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅವರು ಹೇಳಿದ್ದು ಜಗ್ಗೇಶ್, ಅಷ್ಟಮ ಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ. ಅದು ಮಾಡಿ ಮುಂದುವರೆಯಿರಿ ಎಂದರು. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು.'
ಇದರ ಪ್ರಕಾರ ಅಷ್ಟಮ ಕುಜ ದೋಷ ಕಾಣಿಸಿಕೊಂಡಿರುವದು ಖಚಿತ. ಇದಕ್ಕೆ ಸೂಕ್ತ ಪರಿಹಾರೋಪಾಯ ಮಾಡಿಸಬೇಕಿತ್ತು. ಅಷ್ಟೆಮ ಕುಜ ದೋಷ ಇದ್ದವರೆಲ್ಲರೂ ಸಾಯುವುದಿಲ್ಲ. ಅದರೊಂದಿಗೆ ಇನ್ಯಾವುದಾದರೂ ಗ್ರಹ ಚಲನೆಗಳು, ವಕ್ರಗಳು, ವಕ್ರ ದೃಷ್ಟಿ ಸೇರಿಕೊಂಡರೆ ಸಾವು ಸಂಭವಿಸಬಹುದು. ಚಿರು ವಿಷಯದಲ್ಲಿ ಏನಾಗಿದೆ ಎಂಬುದನ್ನು ಜಾತಕದ ವಿವರವಾದ ಪರಿಶೀಲನೆಯಿಂದಲಷ್ಟೇ ಹೇಳಲು ಸಾಧ್ಯ. ಸದ್ಯ ನಾವೀಗ ಅಷ್ಟಮ ಕುಜ ದೋಷ ಎಂಬುದನ್ನು, ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿಯೋಣ.
ಅಷ್ಟಮ ಕುಜ ದೋಷ
ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ 2, 4, 7, 8 ಅಥವಾ 12ನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವೆ.
ಈ ರಾಶಿಗಳ ಹುಡುಗಿಯರಿಗೆ ಇಂತಹ ಹುಡುಗರೇ ಬೇಕಂತೆ! ...
ಸಮಸ್ಯೆಗಳೇನು?
ಸಕಾಲದಲ್ಲಿ ಕುಜ ದೋಷಕ್ಕೆ ಪರಿಹಾರ ಮಾಡಿಕೊಳ್ಳದಿದ್ದರೆ ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ.
ಜೂನ್ 21ರ ಸೂರ್ಯಗ್ರಹಣದಿಂದ ಈ ರಾಶಿಗಳಿಗೆ ಗಜಕೇಸರಿ ಯೋಗ ...
ಯಾರಿಗಿಲ್ಲ ದೋಷ?
ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.
ದೃಷ್ಟಿ ಹಾಯಿಸಿದಲ್ಲೆಲ್ಲ ಕೆಟ್ಟದಾಗಲಿ; ಶನಿಗೆ ಪತ್ನಿ ಕೊಟ್ಟ ಶಾಪ ...
ಪರಿಹಾರವೇನು?
ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಂಡು ದೋಷ ಪರಿಹಾರ ಮಾಡಿಸಿಕೊಳ್ಳಿ.