ಜನರ ಸಂಕಷ್ಟ ಪರಿಹರಿಸುವ ಆ ವಿಘ್ನವಿನಾಶಕನಿಗೆ ಹಾಗೂ ಪೋರ್ಚುಗೀಸರಿಗೆ ವಿಶೇಷ ಸಂಬಂಧವಿದೆ. ನೂರಾರು ವರ್ಷಗಳ ಹಿಂದೆ ಗೋವಾದ ಮೇಲೆ ಪೋರ್ಚುಗೀಸರು ದಾಳಿ ನಡೆಸಿದಾಗ ಗಣಪನ ಮೂರ್ತಿಯನ್ನು ರಕ್ಷಿಸಿಕೊಂಡು ಉತ್ತರಕನ್ನಡ ಜಿಲ್ಲೆಗೆ ಓಡಿ ಬಂದ ಭಕ್ತರು, ಗಣಪನನ್ನು ಕಾರವಾರದಲ್ಲಿ ಪ್ರತಿಷ್ಠಾಪಿಸಿದ್ದರು. ದಿನನಿತ್ಯ ಮಹಾಪೂಜೆ, ಅಭಿಷೇಕ, ಹೋಮ-ಹವನ ಹಾಗೂ ವಿವಿಧ ಸೇವೆಗಳ ಮೂಲಕ ಭಕ್ತರ ಪ್ರೀತಿಯನ್ನು ಪಡೆಯುತ್ತಿರುವ ಈ ಗಣಪ ಬೇಡಿದ್ದನ್ನು ಈಡೇರಿಸುತ್ತಾ ಬರುತ್ತಿದ್ದಾನೆ. ಈ ವಿಶೇಷ ಗಣಪತಿ ದೇವಸ್ಥಾನ ಕುರಿತ ಒಂದು ಸ್ಟೋರಿ ಇಲ್ಲಿದೆ... 

ಭರತ್‌ರಾಜ್ ಕಲ್ಲಡ್ಕ, ಗಿರೀಶ್ ನಾಯ್ಕ್, ಕಾರವಾರ

ಉತ್ತರಕನ್ನಡ ಜಿಲ್ಲೆಯ ಕಾರವಾರ(karwar)ದ ಹೊರಭಾಗದ ಆರಾವ(Arava) ಗ್ರಾಮದಲ್ಲಿರುವ ಗಣಪತಿ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಗೋವಾ(Goa)ದಲ್ಲಿದ್ದ ಈ ಗಣಪತಿ ದೇವಸ್ಥಾನ ಕಾಲಾನಂತರ ಕರ್ನಾಟಕದ ಕಾರವಾರಕ್ಕೆ ಬಂದಿದ್ದು, ಎರಡೂ ರಾಜ್ಯಗಳ ಭಕ್ತರ ಅತೀ ಪ್ರಿಯ ಧಾರ್ಮಿಕ ಕೇಂದ್ರವಾಗಿ ಪರಿವರ್ತಿತಗೊಂಡಿದೆ. ಈ ಗಣಪ ಕಾರವಾರದ ಆರಾವದಲ್ಲಿ ನೆಲೆಸುವ ಹಿಂದೆ ಒಂದು ರೋಚಕ ಕಥೆಯೂ ಇದೆ. ಯಾವಾಗ ಪೋರ್ಚುಗೀಸ(portuguese)ರು ಗೋವಾ ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅಲ್ಲಿ ಆಳ್ವಿಕೆ ಮಾಡಲು ಪ್ರಾರಂಭಿಸುತ್ತಾರೋ ಆ ಸಂದರ್ಭದಲ್ಲಿ ಅಲ್ಲಿಯ ಜನರಿಗೆ ತೆರಿಗೆ(tax)ಯ ಕಾಟ ಹಾಗೂ ಧರ್ಮಕ್ಕೆ ಮತಾಂತರವಾಗುವಂತೆ ಹಿಂಸೆ ಮಾಡುತ್ತಿದ್ದರು. 

ಪೋರ್ಚುಗೀಸರ ಈ ಹಿಂಸೆ ತಡೆಯಲಾಗದೆ ಜನರು ತಮ್ಮ ಕುಲ ದೇವರು ಗಣೇಶ(Lord ganesh)ನ ಕಲ್ಲಿನ ಮೂರ್ತಿಯೊಂದಿಗೆ ಕಾರವಾರಕ್ಕೆ ಬಂದು ನೆಲೆ ಕಂಡುಕೊಳ್ಳುತ್ತಾರೆ. ಗಣೇಶನ ಮೂರ್ತಿಯನ್ನು ಹೊತ್ತು ತಂದ ಬಳಿಕ ಆಸ್ನೋಟಿಯ ಆರಾವ(Arava)ದಲ್ಲಿ ಸಣ್ಣ ಗುಡಿ ಕಟ್ಟುವ ಮೂಲಕ ಗಣೇಶನನ್ನು ಸ್ಥಾಪನೆ ಮಾಡಿದ್ದಾರೆ. ಗೋವಾದಿಂದ ತಂದ ಗಣಪನ ಕಲ್ಲಿನ ಮೂರ್ತಿ ಭಗ್ನವಾದ ನಂತರ ಶ್ವೇತ ಶಿಲೆಯಲ್ಲಿ ಮಾಡಿದ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಅಂದ ಹಾಗೆ, ಈ ಕ್ಷೇತ್ರ ತನ್ನದೇ ಆದ ಕಾರ್ಣಿಕವನ್ನು ಹೊಂದಿದ್ದು, ಇಲ್ಲಿನ ಗಣಪ ತನ್ನ ಬಳಿ ಬೇಡಿ ಬಂದ ಭಕ್ತರಿಗೆ ಹರಸಿ ಅವರ ಇಷ್ಟಾರ್ಥಗಳನ್ನ ಬಹು ಬೇಗ ಈಡೇರಿಸಿ, ಅವರ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುತ್ತಾನೆ. ವಿಶೇಷವಾಗಿ ಇಲ್ಲಿ ಬರುವ ಭಕ್ತರು ಸಂತಾನ ಭಾಗ್ಯ, ಮಕ್ಕಳ ವಿದ್ಯೆ, ವಿಘ್ನಗಳ ನಿವಾರಣೆ, ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳ‌ನ್ನು ಗಣಪನ ಮುಂದಿಡುತ್ತಿದ್ದು, ಅಷ್ಟೇ ಬೇಗ ದೇವರು ಫಲ ನೀಡುತ್ತಾನೆ ಅನ್ನೋದು ಇಲ್ಲಿನ ಜನರ ನಂಬಿಕೆ.‌ 

ಮತ್ತೆ ಸತ್ಯವಾಯ್ತು ಬೆಂಕಿ ಬಬಲಾದಿ ಅಜ್ಜನ ಭವಿಷ್ಯ: ಜಗತ್ತಿನಲ್ಲಿ ಶುರುವಾಗಲಿದೆ ಕಲಿಪುರುಷನ ಅಸಲಿ ಆಟ..!

ಇನ್ನು ಈ ದೇವಸ್ಥಾನ(temple)ಕ್ಕೆ ಪಕ್ಕದ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ. 
ವಿಶೇಷವಾಗಿ ಸಂಕಷ್ಟಿ, ಚತುರ್ಥಿ, ಗಣೇಶನ ಜಾತ್ರೆ ಹೀಗೆ ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತ ಸಮೂಹವೇ ಹರಿದು ಬರುತ್ತದ್ದಲ್ಲದೆ, ಸಂಕಷ್ಟ ಹರ ಗಣಪನ ದರ್ಶನ ಪಡೆದು ಭಕ್ತರು ಪುನೀತರಾಗುತ್ತಾರೆ‌. ಇಲ್ಲಿ ವಿಶೇಷವಾಗಿ ಗಣಪತಿಯ ಬಿಳಿ ಬಣ್ಣದ ಮೂರ್ತಿಯಿದ್ದು, ಮೋದಕ ಪ್ರಿಯ ಈ ಗಣೇಶ ತನ್ನ ಬಳಿ ಬೇಡಿ ಬಂದ ಭಕ್ತರನ್ನು ಹರಸಿ ಅವರ ಬೇಡಿಕೆಗಳನ್ನು ಈಡೇರಿಸುತ್ತಾನೆ. ಇನ್ನೊಂದು ಪ್ರಮುಖ ವಿಚಾರವೆಂದರೆ, ಈ ದೇವಳದ ಆಡಳಿತ ಸಮಿತಿಯಲ್ಲಿರುವ ಹೆಚ್ಚಿನ ಸದಸ್ಯರು ನಿವೃತ್ತ ಯೋಧರು. ದೇಶ ರಕ್ಷಣೆಯಲ್ಲಿ ತಮ್ಮ ಜೀವನ ಸಮರ್ಪಿಸಿದ ಬಳಿಕ ತಮ್ಮ ನಿವೃತ್ತ ಜೀವನದಲ್ಲಿ ದೇವಳದ ವ್ಯವಸ್ಥೆಯನ್ನು ಈ ನಿವೃತ್ತ ಸೈನಿಕ ಸಮಿತಿ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವುದರಿಂದ ದೇವಳದಲ್ಲಿ ಯಾವುದೇ ಕಾರ್ಯಕ್ರಮಗಳು ಕೂಡಾ ಸೂಕ್ತ ವ್ಯವಸ್ಥೆಯೊಂದಿಗೆ ನಡೆಯಲು ಈ ನಿವೃತ್ತ ಸೈನಿಕರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. 

ಕಲಾವಾ ಎಂಬ ಶ್ರೀ ರಕ್ಷೆ, ಕೈಗೆ ಧರಿಸಿದರೆ ದುಷ್ಟ ಶಕ್ತಿಗಳೆಲ್ಲ ದೂರ ದೂರ

ಒಟ್ಟಿನಲ್ಲಿ ಪೋರ್ಚುಗೀಸರ ಕಾಲದಲ್ಲಿ ಗೋವಾದಿಂದ ಕಾರವಾರಕ್ಕೆ ಬಂದ ಗಣಪ ಇಲ್ಲಿನ ಭಕ್ತರನ್ನ ವಿಶೇಷವಾಗಿ ಹರಸಿ ಅವರ ಮನದಲ್ಲಿ ನೆಲೆಯೂರಿದ್ದಾನೆ. ಗಣಪನ ಪವಾಡದಿಂದಾಗಿ ಈ ಕ್ಷೇತ್ರದಲ್ಲಿ ಬೇಡಿದ್ದೆಲ್ಲವೂ ಈಡೇರುತ್ತದೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ಈ ಕಾರಣದಿಂದ ನೀವು ಕೂಡಾ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಗಣಪನ ದರ್ಶನ ಪಡೆಯಬೇಕಿದೆ. 


ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.