ಕಾರವಾರದಲ್ಲಿ ವಿಶೇಷ ಈ ದಿಂಡಿ ಜಾತ್ರೆ: ಗಮನ ಸೆಳೆದ ದೈವ ನರ್ತಕ, ಪಂಜುರ್ಲಿ

ಜಾತ್ರೆ ಅಂದ್ಮೇಲೆ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತದೆ. ಅಲ್ಲಿನ ಜನರ ಆಚಾರ, ವಿಚಾರಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಯನ್ನ ಸಹ ಮಾಡಲಾಗುತ್ತದೆ. ಕೆಲವೆಡೆ ಕೋಳಿ, ಕುರಿ ಬಲಿ ವಿಶೇಷತೆಯಾಗಿದ್ರೆ ಇನ್ನೂ ಕೆಲವೆಡೆ ನಡೆಯುವ ಆಚರಣೆಗಳೇ ವಿಶೇಷವಾಗಿರುತ್ತದೆ.

antaras Panjurli Attracts Attention At Dindi Festival Of Karwar gvd

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ನ.27): ಜಾತ್ರೆ ಅಂದ್ಮೇಲೆ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತದೆ. ಅಲ್ಲಿನ ಜನರ ಆಚಾರ, ವಿಚಾರಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಯನ್ನ ಸಹ ಮಾಡಲಾಗುತ್ತದೆ. ಕೆಲವೆಡೆ ಕೋಳಿ, ಕುರಿ ಬಲಿ ವಿಶೇಷತೆಯಾಗಿದ್ರೆ ಇನ್ನೂ ಕೆಲವೆಡೆ ನಡೆಯುವ ಆಚರಣೆಗಳೇ ವಿಶೇಷವಾಗಿರುತ್ತದೆ. ಅದರಂತೆ ಕರಾವಳಿ ನಗರಿ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲೊಂದು ವಿಭಿನ್ನ ಜಾತ್ರೆ ನಡೆಯಿತು. ಬೇರೆಲ್ಲಾ ಜಾತ್ರೆಗಿಂತ ಇಲ್ಲಿ ನಡೆಯುವ ಜಾತ್ರೆ ನಿಜಕ್ಕೂ ಡಿಫರೆಂಟ್. ಅಷ್ಟಕ್ಕೂ ಏನಪ್ಪಾ ಈ ಜಾತ್ರೆ ವಿಶೇಷತೆ ಅಂತೀರಾ. ಈ ಸ್ಟೋರಿ ನೋಡಿ. 

ಒಂದೆಡೆ ಬೃಹತ್ ಗಾತ್ರದ ಪಂಜುರ್ಲಿ, ತೋಳ, ಕೋಣ ಸೇರಿದಂತೆ ಬಗೆ ಬಗೆಯ ಮಾದರಿಗಳನ್ನು ಹೊತ್ತುಕೊಂಡು ಬರುತ್ತಿರುವ ವಿಭಿನ್ನ ವೇಷಭೂಷಣ ತೊಟ್ಟ ಜನರು. ಇನ್ನೊಂದೆಡೆ ಜ‌ನರನ್ನು ಆಕರ್ಷಿಸುತ್ತಿರುವ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ, ಯಕ್ಷಗಾನ ಪಾತ್ರಧಾರಿ ಸೇರಿದಂತೆ ವಿವಿಧ ವೇಷಧಾರಿಗಳು. ಮತ್ತೊಂದೆಡೆ ಇವೆಲ್ಲವನ್ನೂ ಕಣ್ತುಂಬಿಕೊಳ್ಳುತ್ತಾ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುತ್ತಿರುವ ಪ್ರೇಕ್ಷಕರು. ಅರೇ, ಇದೇನು ಛದ್ಮವೇಷ ಸ್ಪರ್ಧೆ ಅಂದುಕೊಂಡ್ರಾ, ಖಂಡಿತಾ ಇಲ್ಲ. ಇವೆಲ್ಲವೂ ಸಹ ಜಾತ್ರೆಯೊಂದರಲ್ಲಿ ಕಂಡುಬಂದ ಉತ್ಸವದಲ್ಲಿನ ದೃಶ್ಯಗಳು. ಈ ರೀತಿ ಭಿನ್ನ ವಿಭಿನ್ನ ಟ್ಯಾಬ್ಲೋ, ವೇಷಧಾರಿಗಳು ಕಾಣಿಸಿಕೊಂಡ ಜಾತ್ರೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದಲ್ಲಿ. 

Uttara Kannada: ಜಿಪಿಎಸ್ ಟ್ರ್ಯಾಕರ್ ಬಳಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಈ ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವ ಪ್ರತೀ ವರ್ಷ ವಿಜೃಂಭಣೆಯಿಂದ‌ ನಡೆಯುತ್ತದೆ. ಹಾಲಕ್ಕಿ ಬುಡಕಟ್ಟು ಸಮಾಜದವರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯನ್ನು ದಿಂಡಿ ಜಾತ್ರೆಯೆಂದೇ ಕರೆಯುತ್ತಾರೆ. ಈ ಜಾತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಹಗರಣ ಉತ್ಸವ ಆಯೋಜಿಸುವುದೇ ಇಲ್ಲಿನ ವಿಶೇಷ. ಬ್ರಿಟಿಷರ ಕಾಲದಿಂದ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಬ್ರಿಟಿಷರ ದಬ್ಬಾಳಿಕೆಯನ್ನು ತಿಳಿಸಲು ಇಂಗ್ಲೀಷ್ ಭಾಷೆ ಬಾರದ ಹಿನ್ನಲೆ ಹಾಲಕ್ಕಿ ಸಮುದಾಯವರು ಹಗರಣ ಉತ್ಸವದ ಮೂಲಕ ಅಣುಕು ಪ್ರದರ್ಶನದಂತೆ ವೇಷತೊಟ್ಟು ಬ್ರಿಟಿಷರಿಗೆ ತಿಳಿಸುತ್ತಿದ್ದರಂತೆ. 

ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದು ಪ್ರತಿವರ್ಷ ದಿಂಡಿ ಉತ್ಸವದಲ್ಲಿ ಆಕರ್ಷಣೆ ಉಂಟು ಮಾಡುತ್ತವೆ. ಈ ಬಾರಿಯ ಹಗರಣ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ ಹಾಗೂ ಬೃಹತ್ ಗಾತ್ರದ ಪಂಜುರ್ಲಿ ಮೂರ್ತಿ ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಬೃಹತ್ ಗಾತ್ರದ ತೋಳ, ಕೋಸ್ಟ್ ಗಾರ್ಡ್‌ನ ವಿಮಾನ, ವಿವಿಧ ದೇವರ ಮಾದರಿಗಳನ್ನು ಸಹ ಪ್ರದರ್ಶಿಸಲಾಯಿತು. ಜತೆಗೆ ಕೋಣ, ಯಕ್ಷಗಾನ, ಅಯ್ಯಪ್ಪಸ್ವಾಮಿ ಮಹಿಮೆ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನು ಮಾಡಲಾಯಿತು. ಈ ಹಗರಣ ಉತ್ಸವದಲ್ಲಿ ಮಾಡುವ ಅಣುಕು ಪ್ರದರ್ಶನಕ್ಕೆ ತಿಂಗಳಿನಿಂದ ತಯಾರಿ ಮಾಡಿಕೊಳ್ಳಬೇಕಿದ್ದು, ಯಾರ ಆರ್ಥಿಕ ಸಹಾಯವೂ ಇರುವುದಿಲ್ಲ. 

Uttara Kannada: ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್

ಆದರೆ, ಇಂದಿಗೂ ತಮ್ಮ ಸಮುದಾಯದ ಸಂಪ್ರದಾಯವನ್ನ ಬೆಳೆಸುವ ನಿಟ್ಟಿನಲ್ಲಿ ಹಾಲಕ್ಕಿ ಸಮುದಾಯದವರೇ ಈ ಉತ್ಸವವನ್ನ ನಡೆಸುತ್ತಾ ಬಂದಿದ್ದಾರೆ. ಇನ್ನು ಈ ಉತ್ಸವವನ್ನ ನೋಡುವುದಕ್ಕೆ ಅಂತಾನೇ ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಆಗಮಿಸುತ್ತಾರೆ. ಬಂದಂತಹ ಪ್ರೇಕ್ಷಕರು ಪ್ರತೀ ಬಾರಿ ಪ್ರದರ್ಶಿಸುವ ವಿಭಿನ್ನ ವೇಷಗಳನ್ನು ನೋಡಿ ಫೋಟೋ, ವೀಡಿಯೋ ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ವಿವಿಧ ಬಗ್ಗೆ ಅಣುಕು ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ಆಮದಳ್ಳಿ ಗ್ರಾಮದಲ್ಲಿ ನಡೆಯುವ ದಿಂಡಿ ಜಾತ್ರೆ ವಿಶೇಷವಾಗಿ ಗುರುತಿಸಿಕೊಳ್ಳುತ್ತಿದೆ. ಇಂದಿಗೂ ತಮ್ಮ ಸಂಪ್ರದಾಯವನ್ನು ಉಳಿಸಲು ಹಾಲಕ್ಕಿ ಸಮುದಾಯವರು ಮಾಡುತ್ತಿರುವ ಈ ಹಗರಣ ಉತ್ಸವ ನಿಜಕ್ಕೂ ಶ್ಲಾಘನೀಯ.

Latest Videos
Follow Us:
Download App:
  • android
  • ios