Adi Shankaracharya Jayanti 2026 ಆಚಾರ್ಯ ಶಂಕರರನ್ನು 'ಪ್ರಚ್ಛನ್ನ ಬುದ್ಧ' ಎಂದು ಕರೆಯುವುದರ ಹಿಂದಿನ ತಾತ್ವಿಕ ಕಾರಣಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ. ಶಂಕರರ ಅದ್ವೈತ ಸಿದ್ಧಾಂತ ಮತ್ತು ಬುದ್ಧನ ಶೂನ್ಯವಾದದ ನಡುವಿನ ಸಾಮ್ಯತೆ ಹಾಗೂ ಸೂಕ್ಷ್ಮ ಭೇದಗಳನ್ನು ಇದು ಚರ್ಚಿಸುತ್ತದೆ.

-ನಾರಾಯಣ ಯಾಜಿ, ಚಿಂತಕರು

(ಇಂದು ಶಂಕರರ ಜಯಂತಿ) (ಸೀಲ್‌ ಮಾಡಿ)

--

ಆಚಾರ್ಯ ಶಂಕರರ ಮೇಲಿರುವ ಬಹುದೊಡ್ಡ ಆಪಾದನೆ ಎಂದರೆ ಅವರು ‘ಪ್ರಚ್ಛನ್ನ ಬುದ್ಧ’ ಎನ್ನುವುದಾಗಿ. ವೇದದ ಸಾರವನ್ನು ತಿಳಿದು ಪ್ರಸ್ಥಾನತ್ರಯಗಳಾದ ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆದ ಅವರು ಈ ಎಲ್ಲ ತತ್ತ್ವಗಳ ಹಿಂದಿರುವ ತತ್ತ್ವವನ್ನು ಸಮಗ್ರೀಕರಿಸಿ ಉದ್ಘೋಷಿಸಿದ ವಾಕ್ಯವೇ ‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ’ ಎನ್ನುವುದು. ಭಾರತೀಯ ಸನಾತನ ಧರ್ಮದ ಪುನರುತ್ಥಾನದ ಇತಿಹಾಸದಲ್ಲಿ ಆದಿ ಶಂಕರಾಚಾರ್ಯರ ಹೆಸರು ಮಹತ್ವದ್ದು. ಅವರನ್ನು ಮತಸ್ಥಾಪಕರು ಎಂದರೆ ಭಾರತೀಯ ತತ್ತ್ವಶಾಸ್ತ್ರಕ್ಕೇ ಅಪಚಾರವೆಸಗಿದಂತೆ. ಶಂಕರರು ಯಾವ ಮತವನ್ನೂ ಸ್ಥಾಪಿಸಿಲ್ಲ. ಬದಲಾಗಿ ಕಾಲಪ್ರವಾಹದಲ್ಲಿ ಹರಿದು ಹಂಚಿ ಹೋಗಿದ್ದ ಸನಾತನ ಸಿದ್ಧಾಂತಗಳ ಮೂಲ ರೂಪವನ್ನು ತೋರಿಸಿಕೊಟ್ಟರು.

ಅವರಿಗಿಂತ ಹಿಂದೆ ಇದ್ದ ಜೈಮಿನಿ, ಬಾದರಾಯಣ, ಔದುಲೋಮಿ, ಕಾಶಕೃತ್ಸ್ನ, ಭರ್ತೃಹರಿ ಇದೇ ವಿಚಾರಗಳನ್ನು ಹೇಳಿದ್ದರು. ಆದರೆ ಕೇವಲ ಉಪದೇಶದಂತಿದ್ದ ಪೂರ್ವಸೂರಿಗಳ ವಿಚಾರಧಾರೆಗಳಿಗೆ ತರ್ಕಬದ್ಧವಾದ ಭಾಷ್ಯವನ್ನು ಬರೆದು ಅದನ್ನು ತತ್ತ್ವಶಾಸ್ತ್ರದ ನೆಲೆಯಲ್ಲಿ ಸ್ಥಾಪಿಸಿದ ಕೀರ್ತಿ ಶಂಕರರದ್ದು. ನಂತರ ಬಂದ ಕೆಲ ಟೀಕಾಕಾರರಿಗೆ ಅವರ ಚಿಂತನೆಗಳು ಬುದ್ಧನ ಉಪದೇಶದ ಮತ್ತೊಂದು ಭಾಗವಾಗಿ ಕಂಡ ಕಾರಣದಿಂದ ಅವರನ್ನು ‘ಪ್ರಚ್ಛನ್ನ ಬುದ್ಧ’ ಎಂದು ಕರೆದರು. ಈ ಉಲ್ಲೇಖ ಮೊಟ್ಟಮೊದಲು ಕಂಡುಬರುವುದು ಪದ್ಮ ಪುರಾಣದ ಉತ್ತರ ಖಂಡದಲ್ಲಿ. ಶಿವನು ಪಾರ್ವತಿಗೆ ತಾಮಸ ಶಾಸ್ತ್ರದ ವಿವರಣೆಯನ್ನು ನೀಡುತ್ತಾ ‘ಜಗತ್ತನ್ನು ಮೋಹಗೊಳಿಸಲು ಮತ್ತು ಅಸುರರನ್ನು ಹಾದಿ ತಪ್ಪಿಸಲು ಕೆಲ ಶಾಸ್ತ್ರಗಳನ್ನು ರಚಿಸಿದ್ದೇನೆ’ ಎನ್ನುತ್ತಾನೆ.

ಮಾಯಾವಾದಮಸಚ್ಛಾಸ್ತ್ರಂ ಪ್ರಚ್ಛನ್ನಂ ಬೌದ್ಧಮೇವ ಚ

ಮಯೈವ ಕಥಿತಂ ದೇವಿ ಕಲೌ ಬ್ರಾಹ್ಮಣರೂಪಿಣಾ

-‘ಎಲೈ ದೇವಿಯೇ, ಕಲಿಯುಗದಲ್ಲಿ ನಾನೇ ಬ್ರಾಹ್ಮಣ ರೂಪದಲ್ಲಿ ಬಂದು ಈ ಅಸತ್‌ ಶಾಸ್ತ್ರವಾದ ಮಾಯಾವಾದವನ್ನು ಸಾರಿದ್ದೇನೆ. ಇದು ವಾಸ್ತವವಾಗಿ ಮರೆಮಾಚಲ್ಪಟ್ಟ ಬೌದ್ಧ ಧರ್ಮವೇ (ಪ್ರಚ್ಛನ್ನ ಬೌದ್ಧ) ಆಗಿದೆ’ ಎನ್ನುವ ಈ ಶ್ಲೋಕ ಮತ್ತು ನಂತರ ಬಂದ ಅನೇಕ ವೈಷ್ಣವ ಸಿದ್ಧಾಂತಗಳು ಶಂಕರ ಮತ್ತು ಬುದ್ಧ ಇಬ್ಬರನ್ನೂ ಸಮಾನವಾಗಿ ಟೀಕಿಸುತ್ತವೆ.

ಅದ್ವೈತಿಗಳು ಎಂದರೆ ನಿತ್ಯ ನಾರಕಿಗಳು ಎನ್ನುವ ದೂಷಣೆಯನ್ನು ಇಂದಿಗೂ ಕಾಣಬಹುದು. ಸುಮಾರು ನಾಲ್ಕನೆಯ ಶತಮಾನದಲ್ಲಿ ರಚಿಸಲ್ಪಟ್ಟ ಪದ್ಮಪುರಾಣ ಸಾತ್ವಿಕ ಪುರಾಣಗಳಲ್ಲೊಂದು. ಅದರಲ್ಲಿರುವ ಈ ಭಾಗವನ್ನು ಸುಮಾರು ಹತ್ತನೆಯ ಶತಮಾನದ ಹೊತ್ತಿಗೆ ಸೇರಿಸಿದ ಪ್ರಕ್ಷಿಪ್ತ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಬುದ್ಧ, ಶಂಕರ ಮತಸ್ಥಾಪಕರಲ್ಲ:

ಬುದ್ಧ ಮತ್ತು ಶಂಕರ ಇಬ್ಬರನ್ನೂ ಮತಸ್ಥಾಪಕರು ಎಂದರೆ ಮಹಾನ್ ಸಾಗರವನ್ನು ಕೇವಲ ಒಂದು ಸಣ್ಣ ತಂಬಿಗೆಯಲ್ಲಿ ಬಂಧಿಸಿಟ್ಟಂತೆ. ಏಕೆಂದರೆ ಬುದ್ಧ ಬೌದ್ಧ ಧರ್ಮವನ್ನು, ಶಂಕರರು ಅದ್ವೈತ ಮತವನ್ನು ಸ್ಥಾಪಿಸಿದವರಲ್ಲ. ಬದಲಾಗಿ ಇವರಿಬ್ಬರೂ ಮನುಷ್ಯನ ಆತ್ಮೋನ್ನತಿಗಾಗಿ ‘ನಾನು’ ಎನ್ನುವ ಪ್ರಜ್ಞೆಯನ್ನು ಹುಡುಕುವ ವಿಧಾನ ತೋರಿಸಿಕೊಟ್ಟರು. ಅದನ್ನು ಜಗತ್ತಿಗೆ ತೋರಿದ ಮಾರ್ಗ ಮತ್ತು ನಿರಂತರವಾಗಿ ಸಾಗಬೇಕಾದ ಗುರಿಯನ್ನು ತಿಳಿಸುವ ‘ದರ್ಶನ’ ಎನ್ನಬಹುದು. ಶುಕ್ಲ ಯಜುರ್ವೇದದ ವಾಜಸೇನಿಯ ಸಂಹಿತೆಯಲ್ಲಿ ಬರುವ ಮಂತ್ರ-

ವೇನಸ್ತತ್ಪಶ್ಯನ್ನಿಹಿತಂ ಗುಹಾಸದ್ । ಯತ್ರ ವಿಶ್ವಂ ಭವತ್ಯೇಕ ನೀಡಮ್ । ತಸ್ಮಿನ್ನಿದಂ ಸಂ ಚ ವಿಚೈತಿ ರ‍್ವಂ । ಸ ಓತಃ ಪ್ರೋತಶ್ಚ ವಿಭೂಃ ಪ್ರಜಾಸು ॥

‘ಗುಹೆಯಲ್ಲಿ (ಅಂತರಂಗದಲ್ಲಿ) ನೆಲೆಸಿರುವ ಆ ಪರಮ ತತ್ತ್ವವನ್ನು ಋಷಿಯು ಕಾಣುತ್ತಾನೆ. ಅಲ್ಲೇ ಈ ಸಮಸ್ತ ವಿಶ್ವವು ಒಂದೇ ಗೂಡಿನಂತೆ ನೆಲೆಸಿದೆ. ಎಲ್ಲವೂ ಅದರಿಂದಲೇ ಉದ್ಭವಿಸಿ, ಅದರಲ್ಲಿ ಲೀನವಾಗುತ್ತವೆ. ಅದೇ ತತ್ತ್ವವು ಎಲ್ಲಾ ಜೀವಿಗಳನ್ನು ಒಳಗೊಳ್ಳುವ (ಓತಪ್ರೋತ) ಸರ್ವವ್ಯಾಪಿ ಸತ್ಯ. ಇದರಲ್ಲಿನ ‘ಯತ್ರ ವಿಶ್ವಂ ಭತ್ಯೇಕ ನೀಡಮ್’ ವಿಶ್ವವೆಂಬ ಅನಂತ ವೈವಿಧ್ಯವು ಒಂದು ‘ನೀಡ’, ‘ಗೂಡು’ ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿರುವವರು ಶಂಕರಾಚಾರ್ಯರು. ಅವರ ಪ್ರಕಾರ ವಿಶ್ವವು ಬೇರೆ ಬೇರೆ ವಸ್ತುಗಳ ಸಮೂಹವಲ್ಲ; ಅದು ಒಂದೇ ತತ್ತ್ವದ ವಿಭಿನ್ನ ಪ್ರತ್ಯಯಗಳು. ನಾವು ನೋಡುತ್ತಿರುವ ಭೇದಗಳು ಹೆಸರು-ರೂಪಗಳ ಆಟ. ಆದರೆ ಅವುಗಳ ಹಿಂದೆ ಇರುವ ಅಸ್ತಿತ್ವ ಒಂದೇ. ಆ ಅಸ್ತಿತ್ವವನ್ನು ಶಬ್ದದ ಮೂಲಕ ಸೂಚಿಸಬೇಕಾದರೆ, ಅದು ‘ಓಂ’ ಎಂಬ ಸಂಕೇತದಲ್ಲಿ ವ್ಯಕ್ತವಾಗುತ್ತದೆ’.

ಚಿಂತನೆಗಳಲ್ಲಿನ ಭೇದ - ಸಾಮ್ಯ:

ಬುದ್ಧ ಇದನ್ನು ‘ಪ್ರತ್ಯೀತಸಮುತ್ಪಾದ’ ಎಂದು ಕರೆದಿದ್ದಾನೆ. ಆತ ಪ್ರತಿಯೊಂದು ವಸ್ತುವಿಗೂ ಕಾರ್ಯಕಾರಣ ಸಂಬಂಧವನ್ನು ವಿವರಿಸುತ್ತಾ, ಅವುಗಳ ನಡುವಿನ ಪರಸ್ಪರ ಅವಲಂಬನ ಕ್ರಿಯೆಯನ್ನು ವಿವರಿಸುತ್ತಾನೆ. ‘ಇದು ಇದ್ದುದರಿಂದ ಅದು ಇದೆ; ಇದು ಇಲ್ಲದಿದ್ದರೆ ಅದು ಇಲ್ಲ’ ಈ ಒಂದು ಸಾಲಿನಲ್ಲಿ ಸಮಗ್ರ ವಿಶ್ವದ ವಿವರಣೆಯಿದೆ. ಇದು ಪರಸ್ಪರ ಸಂಬಂಧದ ಅವಿಭಾಜ್ಯತೆಯನ್ನು ವಿವರಿಸುತ್ತದೆ. ಎಲ್ಲವೂ ಒಂದನ್ನು ಅವಲಂಬಿಸಿ, ಒಂದರಿಂದ ಒಂದಾಗಿ ಉದಯಿಸುತ್ತಿವೆ ಎಂದು ಹೇಳುವುದು ಬೌದ್ಧ ದೃಷ್ಟಿ. ವೇದದ ಏಕನೀಡದಲ್ಲಿ ವಿಶ್ವವೆಲ್ಲವೂ ಒಂದೇ ಆಶ್ರಯದಲ್ಲಿ ನೆಲೆಸಿದೆ ಎಂಬ ಭಾವವಿದ್ದರೆ, ಬುದ್ಧನ ದೃಷ್ಟಿಯಲ್ಲಿ ಆಶ್ರಯ ಎಂಬ ಕಲ್ಪನೆಗೂ ಸ್ವತಂತ್ರ ಅಸ್ತಿತ್ವವಿಲ್ಲ. ಎಲ್ಲವೂ ಪರಸ್ಪರ ಅವಲಂಬಿತ. ಆದರೆ, ಈ ಭೇದದ ಮಧ್ಯೆಯೂ ಅಡಕವಾದ ಸತ್ಯ ಒಂದೇ. ವೇದದ ಏಕನೀಡ ನಮಗೆ ಭೇದಗಳ ಹಿಂದೆ ಇರುವ ಏಕತೆಯನ್ನು ತೋರಿಸುತ್ತದೆ. ಇವು ತೋರಿಕೆಗೆ ವಿರುದ್ಧವಾಗಿ ಕಾಣಿಸುತ್ತವೆ. ಶಂಕರರ ಪ್ರಕಾರ ಒಂದು ಗೂಡಿನ ರೂಪಕದಲ್ಲಿ ವಿಶ್ವವನ್ನು ನೋಡಿದರೆ, ನಾವು ಅದರ ಕೇಂದ್ರವನ್ನು ಹುಡುಕುತ್ತೇವೆ. ಬುದ್ಧನ ರೂಪಕದಲ್ಲಿ ಅವುಗಳ ನಡುವಿನ ಸಂಬಂಧಗಳನ್ನು ಅರಿಯುತ್ತೇವೆ. ಒಂದು ಸ್ಥಿರತೆಯನ್ನು ನೀಡುತ್ತದೆ; ಮತ್ತೊಂದು ಜಂಗಮದ ಸತ್ಯವನ್ನು ಅನಾವರಣಗೊಳಿಸುತ್ತದೆ.

ಈ ಹಿನ್ನೆಲೆಯಲ್ಲಿ ನೀಡ ಎಂಬ ರೂಪಕವನ್ನು ಬುದ್ಧನ ದೃಷ್ಟಿಯಲ್ಲಿ ಪುನರ್‌ ವ್ಯಾಖ್ಯಾನಿಸಿದಾಗ ಅದು ‘ಶೂನ್ಯತೆ’ಯ ರೂಪಕವಾಗುತ್ತದೆ. ಶೂನ್ಯತೆ ಎಂದರೆ ಖಾಲಿತನ ಅಲ್ಲ; ಅದು ಸ್ವತಂತ್ರ ಅಸ್ತಿತ್ವದ ಅಭಾವ. ಯಾವುದೇ ವಸ್ತುವನ್ನು ಹಿಡಿದು ‘ಇದು ಇದೇ’ ಎಂದು ಹೇಳಲು ಸಾಧ್ಯವಿಲ್ಲ. ಈ ತತ್ತ್ವವೇ ಶೂನ್ಯವಾದ. ಇಲ್ಲಿ ವಿಶ್ವವು ಒಂದು ಗೂಡು ಅಲ್ಲ; ಅದು ನಿರಂತರವಾಗಿ ಬದಲಾಗುತ್ತಿರುವ, ಸ್ಥಿರತೆಯಿಲ್ಲದ ಪ್ರವಾಹ. ವೇದದ ಏಕನೀಡ ನಮಗೆ ಭೇದಗಳ ಹಿಂದೆ ಇರುವ ಏಕತೆಯನ್ನು ತೋರಿಸುತ್ತದೆ. ಬುದ್ಧನ ಪ್ರತೀತ್ಯಸಮುತ್ಪಾದ ನಮಗೆ ಭೇದಗಳೇ ಸ್ವತಂತ್ರವಲ್ಲ ಎಂಬುದನ್ನು ತೋರಿಸುತ್ತದೆ. ಎರಡೂ ದೃಷ್ಟಿಗಳು ಅಹಂಕಾರದ ಕೇಂದ್ರವನ್ನು ಕರಗಿಸುತ್ತವೆ.

ಆದರೆ ಇಲ್ಲಿ ಒಂದು ಸೂಕ್ಷ್ಮ ಸಾಮ್ಯವನ್ನೂ ಕಾಣಬಹುದು. ವೇದವು ಎಲ್ಲವೂ ಒಂದೇ ಎಂದು ಹೇಳಿದರೆ, ಬುದ್ಧನು ಎಲ್ಲವೂ ಬೇರೆ ಬೇರೆ ಅಲ್ಲ ಎಂದು ಹೇಳುತ್ತಾನೆ. ಎರಡೂ ಭೇದವನ್ನು ಕರಗಿಸುತ್ತವೆ; ಆದರೆ ಒಂದು ಏಕತ್ವದ ಮೂಲಕ, ಮತ್ತೊಂದು ಅನಾತ್ಮತ್ವದ ಮೂಲಕ. ಶಂಕರರಲ್ಲಿ ಬುದ್ಧನ ಈ ಸಾಮ್ಯತೆಯ ತತ್ತ್ವವನ್ನು ಕಂಡ ಮುಂದಿನ ಟೀಕಾಕಾರರು ಅವರನ್ನು ಪ್ರಚ್ಛನ್ನ ಬುದ್ಧ ಎಂದು ಕರೆದಿದ್ದಾರೆ. ನಂತರ ಬಂದ ಭಾಸ್ಕರಾಚಾರ್ಯರು ಚೈತನ್ಯ ಪಂಥದವರು. ಶಂಕರರನ್ನು ವಿರೋಧಿಸುವ ನೆಲೆಯಲ್ಲಿ ಬುದ್ಧ ಪ್ರತಿಪಾದಿಸಿದ ತತ್ತ್ವವನ್ನು ಅವೈದಿಕ ಮತವನ್ನು ಟೀಕಿಸುತ್ತಾ ಬುದ್ಧನ ಶೂನ್ಯವಾದ ಮತ್ತು ಶಂಕರರ ಬ್ರಹ್ಮ ಸತ್ಯ ಜಗನ್ಮಿಥ್ಯವನ್ನು ಸಮೀಕರಿಸಿದ್ದಾರೆ.

ವಾಸ್ತವವಾಗಿ ಇವೆರಡೂ ಬೇರೆ ಬೇರೆಯಾಗಿವೆ. ಬೌದ್ಧರು ಜಗತ್ತನ್ನು ಕ್ಷಣಿಕ ಅಥವಾ ಶೂನ್ಯ ಎಂದರೆ, ಶಂಕರರು ಇದನ್ನು ಮಾಯೆ ಅಥವಾ ಮಿಥ್ಯ ಎನ್ನುತ್ತಾರೆ. ಈ ಎರಡೂ ಸಿದ್ಧಾಂತಗಳು ವೇದವಿಹಿತವಾದ \Bರ‍್ಮಗಳನ್ನು\B ನಿರಾಕರಿಸುತ್ತವೆ ಎನ್ನುವ ನೆಲೆಯಲ್ಲಿ ಶಂಕರರನ್ನು ನಿಂದನೆಗಳಿಗೆ ಬಳಸಿಕೊಂಡರು. ವಾಸ್ತವಾಗಿ ಬುದ್ಧ ನಿರೀಶ್ವರವಾದವನ್ನು ಪ್ರತಿಪಾದಿಸಿಲ್ಲ. ವೇದಾಂತದ ತತ್ತ್ವವನ್ನು ಮೊಗೆಮೊಗೆದು ಲೋಕಕ್ಕೆ ಹಂಚಿದವ ಎಂದು ಸ್ವಾಮಿ ವಿವೇಕಾನಂದರು ಕೃತಿಶ್ರೇಣಿಯಲ್ಲಿ ಹೇಳುತ್ತಾರೆ. (4-38). ಬುದ್ಧ ಮತ್ತು ಶಂಕರರು ಪ್ರತಿಪಾದಿಸಿದ ತತ್ತ್ವವನ್ನು ವಿಭಿನ್ನ ದಾರಿಯನ್ನು ಕಂಡುಕೊಳ್ಳುವುದು ಶೂನ್ಯವಾದ ಮತ್ತು ಬ್ರಹ್ಮ ಸತ್ಯ ಜಗನ್ಮಿಥ್ಯ ಎನ್ನುವಲ್ಲಿ.

ಈ ಎರಡರ ನಡುವೆ ಒಂದು ಸೂಕ್ಷ್ಮ ಸಾಮ್ಯ ಇದೆ. ಬುದ್ಧನ ಪ್ರಕಾರ ವಿಶ್ವವು ನಾಶವಾಗುವುದು. ಎಂದರೆ, ಸಂಪೂರ್ಣವಾಗಿ ಅರಿತಾಗ, ಹಿಡಿತವೇ ಕರಗುತ್ತದೆ; ಹಿಡಿತ ಕರಗಿದಾಗ ದುಃಖವೂ ಕರಗುತ್ತದೆ. ಶಂಕರರು ಅದನ್ನೇ ‘ವಿಶ್ವವು ನಾಶವಾಗುವುದು ಎನ್ನುವುದನ್ನು ಅರಿತು ಬ್ರಹ್ಮದಲ್ಲಿ ನೆಲೆಸಿದವನೇ ಶಾಂತನಾಗುತ್ತಾನೆ’ ಎನ್ನುತ್ತಾರೆ. ಶಾಂತಿ ಎಂಬ ಫಲ ಎರಡೂ ಸಿದ್ದಾಂತದಲ್ಲಿಯೂ ಒಂದೇ ಆಗಿದೆ. ಶಾಂತಿಯ ಸ್ವರೂಪ ವಿಭಿನ್ನ. ಅದ್ವೈತದಲ್ಲಿ, ಅದು ಬ್ರಹ್ಮನಿಷ್ಠೆಯಿಂದ ಬರುವ ಸ್ಥಿತಿ; ನಿತ್ಯ ಚೈತನ್ಯದ ಅನುಭವ. ಬೌದ್ಧ ದರ್ಶನದಲ್ಲಿ, ಅದು ನಿರಾಸಕ್ತಿ ಮತ್ತು ನಿರಾಧಾರತೆಯಿಂದ ಬರುವ ಸ್ಥಿತಿ; ನಿರ್ವಾಣ.

ಭಾರತೀಯ ಚಿಂತನೆಯ 2 ಶಿಖರಗಳು:

ಒಂದು ‘ಏಕತೆಯಲ್ಲಿ ಲೀನವಾಗುವ ಶಾಂತಿ’, ಮತ್ತೊಂದು ‘ಆಸಕ್ತಿಯಿಲ್ಲದ ಶೂನ್ಯತೆಯಲ್ಲಿ ವಿಶ್ರಾಂತಿ’. ಇವೆರಡಕ್ಕೂ ಮೂಲಬೇರು ಉಪನಿಷತ್ತು ಎಂದು ಬೇರೆ ಹೇಳಬೇಕಿಲ್ಲ. ಶಂಕರರ ಅದ್ವೈತ ಮತ್ತು ಬೌದ್ಧ ತತ್ತ್ವಗಳೆರಡೂ ಭಾರತೀಯ ಚಿಂತನೆಯ ಎರಡು ಶಿಖರಗಳು. ಒಂದರಲ್ಲಿ ಸತ್ಯವು ‘ನಾನು’ ಎಂಬುದಾಗಿ ಬೆಳಗುತ್ತದೆ; ಮತ್ತೊಂದರಲ್ಲಿ ‘ನಾನು’ ಎಂಬುದೇ ಕರಗುತ್ತದೆ. ಶಂಕರರ ಪ್ರಕಾರ ‘ಮೋಕ್ಷ’ ಎಂದರೆ ಯಾವುದೋ ಭವಿಷ್ಯದ ಸಾಧನೆ ಅಲ್ಲ; ಅದು ಸ್ವರೂಪದ ಅರಿವು. ಅದನ್ನು ಪಡೆಯಲು ಜ್ಞಾನವೂ ಬೇಕು, ಅನುಭವವೂ ಬೇಕು. ಅದ್ವೈತ ವೇದಾಂತದಲ್ಲಿ ‘ಶ್ರವಣ, ಮನನ, ನಿದಿಧ್ಯಾಸನ’ ಎಂಬ ಕ್ರಮಗಳ ಮೂಲಕ ಅದನ್ನು ಸಾಧಿಸಬಹುದಾಗಿದೆ. ಇಲ್ಲಿ ‘ಮನನ’ ಅಂದರೆ ಕರ್ಮವೇ. ಭಾರತೀಯ ದರ್ಶನವು ಕರ್ಮವನ್ನು ಜಿಜ್ಞಾಸೆಯ ರೂಪದಲ್ಲಿ ಸತ್ಯವನ್ನು ಕಂಡುಹಿಡಿಯುವ ಸಾಧನವನ್ನಾಗಿ ಬಳಸುತ್ತದೆ.

ಬುದ್ಧನ ‘ಪ್ರತೀತ್ಯಸಮುತ್ಪಾದ’ (ಪರಸ್ಪರ ಅವಲಂಬನೆ) ಜಗತ್ತಿನ ಚಲನೆಯನ್ನು ವಿವರಿಸಿದರೆ, ಶಂಕರರ ‘ಬ್ರಹ್ಮ ಸತ್ಯ’ ಆ ಚಲನೆಯ ಹಿಂದೆ ಇರುವ ಸ್ಥಿರವಾದ ಕೇಂದ್ರವನ್ನು ತೋರಿಸುತ್ತದೆ. ಬುದ್ಧನು ‘ಹಾವೂ ಇಲ್ಲ, ಹಗ್ಗವೂ ಇಲ್ಲ. ಇರುವುದು ಕೇವಲ ಹಾವಿನಿಂದ ಹಗ್ಗಕ್ಕೆ ಬದಲಾಗುವ ಪ್ರಕ್ರಿಯೆ ಮತ್ತು ಶೂನ್ಯತೆ’ ಎನ್ನುತ್ತಾನೆ. ಶಂಕರರು ‘ಬದಲಾಗುವ ಹಾವಿನ ಹಿಂದೆ ಬದಲಾಗದ ಹಗ್ಗವಿದೆ’ ಎನ್ನುತ್ತಾರೆ.

ಈ ‘ಬ್ರಹ್ಮ ಸತ್ಯ ಜಗನ್ಮಿಥ್ಯ’ ಎಂಬ ತತ್ತ್ವವೇ ‘ಏಕನೀಡ’ (ಒಂದೇ ಆಶ್ರಯ) ಎಂಬ ಕಲ್ಪನೆಗೆ ಬಲವಾದ ತಾರ್ಕಿಕ ಅಡಿಪಾಯ ನೀಡುತ್ತದೆ. ಈ ಅದ್ವೈತ ದೃಷ್ಟಿಕೋನವನ್ನು ಅರ್ಥಮಾಡಿಕೊಂಡರೆ ‘ನಾನು’ ಎಂಬ ಅಹಂಕಾರವನ್ನು ಕರಗಿಸಿ, ಎಲ್ಲರಲ್ಲೂ ಒಂದೇ ಚೈತನ್ಯವನ್ನು ಕಾಣುತ್ತೇವೆ.