Asianet Suvarna News Asianet Suvarna News

Temple of Trijata: ಕಾಶಿ ದೇವಾಲಯದ ಪಕ್ಕದಲ್ಲೇ ಇದೆ ರಾಕ್ಷಸಿ ಆಲಯ!

ಕಾಶಿಯ ಶ್ರೀ ವಿಶ್ವನಾಥನ ದೇವಾಲಯದ ಸಮೀಪದಲ್ಲೇ ತ್ರಿಜಟಾ ಎಂಬ ರಾಕ್ಷಸಿಗಾಗಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಯಾರೀಕೆ? ಈಕೆಯ ಕುತೂಹಲಕಾರಿ ಕತೆಯನ್ನು ತಿಳಿಯೋಣ.

 

 

Abode of Vishwanata Kashi worships demoness Trijata too
Author
Bengaluru, First Published Dec 16, 2021, 2:51 PM IST

ಮೊನ್ನೆ ತಾನೇ ವಿಶಾಲವಾಗಿ ಅಭಿವೃದ್ಧಿಗೊಂಡು ಪ್ರಧಾನ ಮಂತ್ರಿಗಳಿಂದ ಉದ್ಘಾಟನೆಗೊಂಡ ಕಾಶಿ ಶ್ರೀ ವಿಶ್ವನಾಥ ಕಾರಿಡಾರ್‌ನ (KAshi corridor) ಪಕ್ಕದಲ್ಲಿಯೇ ತ್ರಿಜಟಾ ದೇವಾಲಯ (Temple of Trijata) ಎಂಬ ಗುಡಿ ಇದೆ. ಇದರ ಗರ್ಭಗುಡಿಯಲ್ಲಿದ್ದುಕೊಂಡು ಪೂಜೆ ಪಡೆಯುತ್ತಿರುವವಳು ದೇವತೆಯಲ್ಲ, ತ್ರಿಜಟೆ ಎಂಬ ರಾಕ್ಷಸಿ. ವಿಶ್ವನಾಥನ ಸನ್ನಿಧಿಗೆ ಹೋದವರು ಈಕೆಗೂ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಈಕೆ ಯಾರು?

ತ್ರಿಜಟಾ ಎಂಬ ರಾಕ್ಷಸಿ ನಮಗೆ ಕಾಣಿಸಿಕೊಳ್ಳುವುದು ರಾಮಾಯಣದಲ್ಲಿ. ಲಂಕಾಧಿಪತಿ ರಾವಣನು (Ravana) ಶ್ರೀರಾಮನ (Sri Rama) ಪತ್ನಿ ಸೀತಾದೇವಿಯನ್ನು (Seethadevi) ಅಪಹರಿಸಿಕೊಂಡು ಬಂದು ಅಶೋಕವನದಲ್ಲಿ ಇಡುತ್ತಾನೆ. ನಂತರ ಈ ಸೀತೆಯನ್ನು ನೋಡಿಕೊಳ್ಳಲೆಂದು ಕೆಲವು ರಾಕ್ಷಸಿಯರನ್ನು ನೇಮಿಸುತ್ತಾನೆ. ಅವರಲ್ಲಿ ಒಬ್ಬಾಕೆ ತ್ರಿಜಟೆ, ಇನ್ನೊಬ್ಬಳು ಸರಮೆ. ಇವರಲ್ಲಿ ತ್ರಿಜಟೆ ವಿಭೀಷಣನ ಪತ್ನಿ ಎಂದೂ ಹೇಳಲಾಗುತ್ತದೆ. ವಿಭೀಷಣನು ರಾಮನ ಕಡೆ ಹೋದರೂ, ತ್ರಿಜಟೆ ಲಂಕೆಯಲ್ಲೇ ಇರುತ್ತಾಳೆ. ಆದರೆ ಆಕೆ ವಿಭೀಷಣ- ಶ್ರೀರಾಮರ ಪರವಾಗಿ ಲಂಕೆಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿರುತ್ತಾಳೆ.

Kashi Vishwanath Dham: ಶಿವನೇ ಸ್ಥಾಪಿಸಿದ ಮೋಕ್ಷ ನಗರಿ ಕಾಶಿ, ಇಲ್ಲಿನ ವಿಸ್ಮಯಗಳ ಬಗ್ಗೆ ತಿಳಿಯಿರಿ

ತನ್ನನ್ನು ಮದುವೆಯಾಗುವಂತೆ ಸೀತೆಯ ಮನವೊಲಿಸಲು ರಾವಣ ರಾಕ್ಷಸಿಯರನ್ನು ನಿಯೋಜಿಸುತ್ತಾನೆ. ಇವರ ಕೆಲಸ ರಾವಣನ ಬಗ್ಗೆ ಬಗೆಬಗೆಯಾಗಿ ಬಣ್ಣಿಸಿ ಆಕೆಯ ಮನವೊಲಿಸುವುದು. ಆದರೆ ಸೀತೆ ಇದನ್ನು ಅಚಲವಾಗಿ ನಿರಾಕರಿಸುತ್ತಾಳೆ ಮತ್ತು ಪತಿ ರಾಮನಿಗೆ ನಿಷ್ಠಳಾಗಿರುತ್ತಾಳೆ. ಆದರೆ ರಾಕ್ಷಸಿಯರು ಆಕೆಯನ್ನು ಒತ್ತಾಯಿಸುವುದು, ಭಯಗೊಳಿಸುವುದು ಮಾಡುತ್ತಿರುತ್ತಾರೆ. ಇದರಿಂದ ಭೀತಳಾದ ಸೀತೆ, ರಾವಣನ ಕೈ ಮೇಲಾಗುತ್ತದೆಂದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾಳೆ. ಆಗ ತ್ರಿಜಟೆ ಮಧ್ಯೆ ಪ್ರವೇಶಿಸಿ, ಆಕೆಯನ್ನು ಸಮಾಧಾನಿಸುತ್ತಾಳೆ.

ನಂತರ ಲಂಕೆಯಲ್ಲಿ ರಾಮ- ರಾವಣರ ನಡುವೆ ಯುದ್ಧ ಆರಂಭವಾಗುತ್ತದೆ. ರಾಮ ಲಕ್ಷ್ಮಣ ವಾನರ ಸೈನ್ಯದೊಂದಿಗೆ ಬಂದಿರುತ್ತಾರೆ. ಯುದ್ಧದ ಮೊದಲ ದಿನದಂದು, ರಾವಣನ ಮಗ ಇಂದ್ರಜಿತು ಈ ಸಹೋದರರನ್ನು ನಾಗಪಾಶ (ಸರ್ಪ-ಕುಣಿಕೆ) ಯಿಂದ ಬಂಧಿಸುತ್ತಾನೆ ಮತ್ತು ಸಹೋದರರು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ರಾವಣನು ರಾಕ್ಷಸಿಯರ ಮೂಲಕ ಸೀತೆಗೆ ರಾಮನು ಸತ್ತನೆಂಧು ಸುದ್ದಿ ಕಳುಹಿಸುತ್ತಾನೆ. ಆದರೆ ಹನುಮಂತನು ಸಂಜೀವಿನಿಯನ್ನು ತಂದು ಇವರನ್ನು ಬದುಕಿಸುತ್ತಾನೆ. ಇತ್ತ ತನ್ನ ಪತಿ ಸತ್ತನೆಂದೇ ಭಾವಿಸಿ ಸೀತೆ, ಇನ್ನು ರಾವಣನು ನನ್ನನ್ನು ತನ್ನ ಕೈವಶ ಮಾಡಿಕೊಳ್ಳುವುದು ಖಚಿತ ಎಂದು ಭಾವಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾಳೆ. ಆದರೆ ರಾಮ ಲಕ್ಷ್ಮಣರು ಸತ್ತಿಲ್ಲ. ಇನ್ನೂ ಜೀವಂತವಾಗಿದ್ದಾಋಎ ಎಂದು ತ್ರಿಜಟೆ ಆಕೆಗೆ ಭರವಸೆ ತುಂಬುತ್ತಾಳೆ. ತ್ರಿಜಟೆ ಸೀತೆಯ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ.

ಗುರು ಮತ್ತು ಬುಧಗ್ರಹ ಪರಸ್ಪರ ವೈರಿಗಳೇಕೆ?

ಹಾಗೆಯೇ ಆಕೆ, ತನಗೆ ಕಂಡ ಕನಸೊಂದನ್ನು ವಿವರಿಸುತ್ತಾಳೆ. ಆ ಕನಸಿನಲ್ಲಿ ರಾಮ ಲಕ್ಷ್ಮಣರು ರಾವಣನನ್ನು ಕೊಲ್ಲುತ್ತಾರೆ. ರಾಮನು ಸೀತೆಯನ್ನು ತನ್ನ ಮಡಿಲಲ್ಲಿ ತೆಗೆದುಕೊಂಡು ಆಕಾಶದಲ್ಲಿ ಎತ್ತರಕ್ಕೆ ಏರುತ್ತಾನೆ. ಮತ್ತು ಉತ್ತರದ ಕಡೆಗೆ ಹಾರಲು ಪುಷ್ಪಕ ವಿಮಾನವನ್ನು (ರಾವಣನ ವೈಮಾನಿಕ ರಥ) ಏರುತ್ತಾರೆ. ರಾವಣನು ಎಣ್ಣೆಯಲ್ಲಿ ಮುಳುಗಿದ ಮತ್ತು ಕೆಂಪು ರಕ್ತ ಚೆಲ್ಲಿದ ನೆಲದ ಮೇಲೆ ಮಲಗಿದ್ದಾನೆ. ನಂತರ ರಾವಣನು ಕತ್ತೆಯ ಮೇಲೆ ದಕ್ಷಿಣಕ್ಕೆ ಹೋಗಿ ಸಗಣಿಯ ಗುಂಡಿಯಲ್ಲಿ ಬೀಳುತ್ತಾನೆ. ಕೆಂಪು ಸೀರೆಯುಟ್ಟ ಕಪ್ಪು ಮಹಿಳೆ ಅವನನ್ನು ದಕ್ಷಿಣಕ್ಕೆ ಎಳೆಯುತ್ತಾಳೆ. ರಾವಣನ ಕುಟುಂಬದ ಇತರ ಸದಸ್ಯರು, ಅವನ ಸಹೋದರ ಕುಂಭಕರ್ಣ ಮತ್ತು ಮಗ ಇಂದ್ರಜಿತ್‌ ಸಹ ಹೀಗೇ ಮಾಡುತ್ತಾರೆ. ರಾವಣನ ಸಹೋದರ ವಿಭೀಷಣನು ಪುಷ್ಪಕ ವಿಮಾನದ ಬಳಿ ನಾಲ್ಕು ದಂತಗಳ ಆನೆಯ ಮೇಲೆ ಸವಾರಿ ಮಾಡುತ್ತಾ ಬಿಳಿಯ ವಸ್ತ್ರಗಳನ್ನು ಧರಿಸಿದ್ದಾನೆ. ಇದೆಲ್ಲವೂ ರಾಮನ ಗೆಲುವು ಹಾಗೂ ರಾವಣನ ಸಾವನ್ನು ಸೂಚಿಸುವ ಸಂಕೇತಗಳಾಗಿವೆ.

ನಂತರ ತ್ರಿಜಟೆ, ಸೀತೆಯನ್ನು ಆಶ್ರಯಿಸಲು ಮತ್ತು ಅವಳಲ್ಲಿ ಕ್ಷಮೆ ಕೇಳಲು ರಾಕ್ಷಸಿಗಳಿಗೆ ಸಲಹೆ ನೀಡುತ್ತಾಳೆ. ಇದರಿಂದ ಸೀತೆ ಸಂಪ್ರೀತಳಾಗುತ್ತಾಳೆ. ಮುಂದೆ ರಾಮನು ರಾವಣನನ್ನು ಸಾಯಿಸುತ್ತಾನೆ. ಸೀತೆಯನ್ನು ಮರಳಿ ಪಡೆಯುತ್ತಾನೆ. ಇಡೀ ರಾಕ್ಷಸ ಸಾಮ್ರಾಜ್ಯ ರಾವಣನ ಸಹೋದರ ವಿಭೀಷಣನ ಪಾಲಾಗುತ್ತದೆ. ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ವಾನರರು ಪುಷ್ಪಕ ವಿಮಾನವನ್ನು ಏರಿ ಅಯೋಧ್ಯೆಯತ್ತ ಹೊರಡುತ್ತಾರೆ. ಆಗ ತ್ರಿಜಟೆ ತಾನೂ ಅಯೋಧ್ಯೆಗೆ ಬರುತ್ತೇನೆ ಎನ್ನುತ್ತಾಳೆ. ಆದರೆ ರಾಕ್ಷಸಿಯಾದ ಆಕೆಯನ್ನು ಅಯೋಧ್ಯೆಯ ನರರು ಸಹಾನುಭೂತಿಯಿಂದ ನೋಡಲಿಕ್ಕಿಲ್ಲ ಎಂದು ಸೀತೆ, ಅಯೋಧ್ಯೆಗೆ ಬರಬೇಡವೆಂದೂ, ಕಾಶಿಗೆ ಹೋಗಿ ಅಲ್ಲಿ ಮೋಕ್ಷೆ ಪಡೆ ಎಂದೂ ಉಪದೇಶಿಸುತ್ತಾಳೆ. ತ್ರಿಜಟೆ ಹಾಗೇ ಮಾಡುತ್ತಾಳೆ. ಮುಂದೆ ಅಲ್ಲಿನ ಭಕ್ತಾದಿಗಳು ಈಕೆಗಾಗಿ ಒಂದು ಮಂದಿರವನ್ನು ಕಟ್ಟಿಸುತ್ತಾರೆ.

Feeding black Dog : ಸಮಸ್ಯೆಗಳಿಂದ ದೂರವಾಗಲು ನಾಯಿಗೆ ಆಹಾರ ನೀಡಿ

ಕಾಶಿಯಲ್ಲಿರುವ ತ್ರಿಜಟಾ ಮಂದಿರಕ್ಕೆ ತುಂಬಾ ಮಹತ್ವ ಇದೆ. ಕಾರ್ತಿಕ ಪೂರ್ಣಿಮೆಯಂದು ಇಲ್ಲಿ ಪೂಜೆ ಸಲ್ಲಿಸುವ ಭಕ್ತಾದಿಗಳಿಗೆ ತುಂಬಾ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ, ಒಂದು ವಾರದ ಉಪವಾಸ ವ್ರತವನ್ನು ಈಕೆಯ ಹೆಸರಿನಲ್ಲಿ ನೆರವೇರಿಸಿ, ಕಾರ್ತಿಕ ಹುಣ್ಣೀಮೆಯಂದು ಇಲ್ಲಿ ಪೂಜೆ ಸಲ್ಲಿಸಲು ಬರುವ ಮಹಿಳೆಯರಿದ್ದಾರೆ. ಇವರಿಗೆ ಸಕಲ ಫಲಗಳು ದೊರೆಯುತ್ತವೆ ಎಂಬ ಪ್ರತೀತಿ. ಈಕೆಯನ್ನು ನೆನೆಪು ಗಂಗಾ ಸ್ನಾನ ಮಾಡುವವರಿಗೆ ಸಕಲ ಪುಣ್ಯಗಳು ಲಭ್ಯವಾಗಲಿ ಎಂದು ಶ್ರೀರಾಮನ ವರವಿದೆ. ರಾವಣನ ಸೆರೆಯಲ್ಲಿದ್ದ ಸೀತೆಗೆ ದುಃಖವೆನಿಸದಂತೆ ಆಕೆಯನ್ನು ಪ್ರೀತಿಯಿಂದ ನೋಡಿಕೊಂಡದ್ದಕ್ಕಾಗಿ ತ್ರಿಜಟೆಗೆ ಈಗ ದೇವತೆಯ ಸ್ಥಾನ ಲಭ್ಯವಾಗಿದೆ. ಉಜ್ಜಯಿನಿಯಲ್ಲೂ ಈಕೆಯ ಹೆಸರಿನಲ್ಲಿ ಒಂದು ದೇವಾಲಯ ಇದೆ. ಇದೇ ರೀತಿ ಮನಾಲಿಯಲ್ಲಿ ಒಂದು ದೇವಾಲಯದಲ್ಲಿ ಪೂಜೆಗೊಳ್ಳುತ್ತಿರುವ ಇನ್ನೊಬ್ಬ ರಾಕ್ಷಸಿ ಎಂದರೆ ಹಿಡಿಂಬೆ, ಭೀಮನ ಪತ್ನಿ.

Follow Us:
Download App:
  • android
  • ios