ಇಲ್ಲಿ ಮನೆಗಳಿಗಷ್ಟೇ ಅಲ್ಲ, ಅಂಗಡಿ, ಶೌಚಾಲಯಕ್ಕೂ ಬಾಗಿಲಿಲ್ಲ; ಆದರೂ ಯಾರಿಗೂ ಭಯವಿಲ್ಲ!
ಈ ಗ್ರಾಮದಲ್ಲಿ ಯಾವ ಮನೆಗೂ ಬಾಗಿಲಿಲ್ಲ. ಅಷ್ಟೇ ಏಕೆ, ಸಾರ್ವಜನಿಕ ಶೌಚಾಲಯಗಳಿಗೂ ಬಾಗಿಲಿಲ್ಲ! ಖಾಸಗಿತನಕ್ಕಾಗಿ ಸಣ್ಣ ಪರದೆಯೊಂದನ್ನು ಹಾಕಲಾಗಿರುತ್ತದೆಯಷ್ಟೇ. ಯಾರ ಮನೆಯಲ್ಲೂ ವಾರ್ಡ್ರೋಬ್ ಸಹ ಇಲ್ಲ. ಹಾಗಿದ್ದೂ ಇಲ್ಲಿ ಒಂದೂ ಕಳ್ಳತನ ನಡೆದ ಉದಾಹರಣೆ ಇಲ್ಲ.
ಈ ಗ್ರಾಮದಲ್ಲಿ ಯಾವೊಂದು ಮನೆಗೂ ಬಾಗಿಲಿಲ್ಲ. ಹೊಸದಾಗಿ ಕಟ್ಟಿಸುವ ಮನೆಗೂ ಬಾಗಿಲು ಹಾಕಿಸುವುದಿಲ್ಲ. ಇನ್ನು ಬೀಗ ಹಾಕುವ ಮಾತು ದೂರವೇ ಉಳಿಯಿತು. ಹಾಗಿದ್ದೂ ನೆಂಟರಿಷ್ಟರ ಮನೆಗೆ ಹೋಗಬೇಕೆಂದರೆ ಯಾರೊಬ್ಬರಿಗೂ ತಮ್ಮ ಮನೆಯ ಬಗ್ಗೆ, ಕಳ್ಳಕಾಕರ ಬಗ್ಗೆ ಭಯವಿಲ್ಲ. ಇದೆಲ್ಲ ಹೋಗಲಿ, ಇಲ್ಲಿನ ಸಾರ್ವಜನಿಕ ಶೌಚಾಲಯದಲ್ಲಿ ಕೂಡಾ ಬಾಗಿಲಿಲ್ಲ! ಬದಲಿಗೆ ಖಾಸಗಿತನಕ್ಕಾಗಿ ಸಣ್ಣ ಪರದೆ ಹಾಕಲಾಗಿದೆ ಅಷ್ಟೇ. ಇಷ್ಟೆಲ್ಲ ಆದರೂ ಊರಿನಲ್ಲಿ ಕೆಟ್ಟದೊಂದು ಘಟನೆ ನಡೆದ ಉದಾಹರಣೆ ಇಲ್ಲ.
ಕಳ್ಳರನ್ನು ಹುಡುಕಿ ಕರೆ ತಂದು ತಮ್ಮ ಮನೆಯನ್ನೇ ಬಿಟ್ಟುಕೊಟ್ಟರೂ ಕಳ್ಳರು ಕದಿಯುವ ಧೈರ್ಯ ಮಾಡಲಾರರು. ಏಕೆಂದರೆ ಈ ಎಲ್ಲ ಮನೆಗಳನ್ನು ಕಾಯುತ್ತಿರುವುದು ಶನಿ. ಶನಿಯ ಭಯ ಯಾರಿಗೆ ತಾನೇ ಇಲ್ಲ ಹೇಳಿ? ಹೌದು, ಇದೇ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಶನಿ ಶಿಂಗ್ಣಾಪುರ.
ಶನಿ ದೇವಾಲಯಕ್ಕಾಗಿ ಹೆಸರುವಾಸಿಯಾಗಿರುವ ಈ ಊರು ಕೆಲ ವರ್ಷಗಳ ಹಿಂದೆ ಮಹಿಳೆಯರಿಗೆ ಈ ದೇವಾಲಯದಲ್ಲಿ ಗರ್ಭಗುಡಿ ಪ್ರವೇಶಿಸಲು ಅನುಮತಿ ಇಲ್ಲವೆಂಬ ಕಾರಣಕ್ಕೆ ವಿವಾದಕ್ಕೆ ಈಡಾದದ್ದು ನಿಮಗೆ ನೆನಪಿರಬಹುದು. ಕಡೆಗೆ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಲಾಯಿತು. ಆದರೆ, ಇಂದಿಗೂ ಸ್ಥಳೀಯ ಮಹಿಳೆಯರು ದೇವಾಲಯದೊಳಗೆ ಕಾಲಿಡುವ ಧೈರ್ಯ ಮಾಡಿಲ್ಲ. ಅದೆಲ್ಲ ಹೋಗಲಿ ಊರಿನ ಹಲವು ವಿಶೇಷತೆಗಳ ಬಗ್ಗೆ ನೋಡೋಣ.
'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್
ಶನಿ ದೇವನಿಂದ ಸ್ವತಃ ರಕ್ಷಣೆ
ಶನಿ ದೇವನ ಜನನ ಸ್ಥಳ ಎಂದೇ ಶನಿ ಶಿಂಗ್ಣಾಪುರವನ್ನು ಪರಿಗಣಿಸಲಾಗುತ್ತದೆ. ಹಾಗಾಗಿ, ಶನಿ ಶಿಂಗ್ಣಾಪುರವು ಶನಿದೇವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಶನಿ ಶಿಂಗ್ಣಾಪುರದ ಜನರು ಈ ಗ್ರಾಮವನ್ನು ಸ್ವತಃ ಶನಿದೇವರು ರಕ್ಷಿಸುತ್ತಾನೆ ಮತ್ತು ತಮಗೆ ಯಾವುದೇ ರೀತಿಯ ರಕ್ಷಣೆ ಅಗತ್ಯವಿಲ್ಲ ಎಂದು ನಂಬುತ್ತಾರೆ. ಇಲ್ಲಿರುವ ಪ್ರತಿಯೊಂದು ಮನೆಯ ಮೇಲೂ ಶನಿದೇವನೇ ಕಣ್ಣಿಡುತ್ತಾನೆ ಎಂಬ ನಂಬಿಕೆ ಇರುವುದರಿಂದ ಇಲ್ಲಿ ಯಾವುದೇ ರೀತಿಯ ಕಳ್ಳತನ ನಡೆಯುವುದಿಲ್ಲ. ಯಾರಾದರೂ ಕಳ್ಳತನ ಮಾಡಿದರೂ, ಶನಿದೇವನೇ ಅವನಿಗೆ ಶಿಕ್ಷೆ ಕೊಡುತ್ತಾನೆ. ಇಲ್ಲಿ ತಪ್ಪು ಕೆಲಸ ಮಾಡುವವರು ಶನಿದೇವನ ಹೆಸರಿನಿಂದಲೇ ಹೆದರುತ್ತಾರೆ.
ಶನಿ ಶಿಂಗ್ಣಾಪುರದ ಮನೆಗಳಲ್ಲಿ ಮಾತ್ರವಲ್ಲ, ಅಂಗಡಿಗಳಿಗೂ ಬೀಗ ಹಾಕಲ್ಲ. ಇಲ್ಲಿನ ಜನರು ತಮ್ಮ ಬೆಲೆ ಬಾಳುವ ಚಿನ್ನಾಭರಣ, ಬಟ್ಟೆ, ಹಣ ಮುಂತಾದ ವಸ್ತುಗಳನ್ನು ಇಡಲು ಬ್ಯಾಗ್ ಮತ್ತು ಬಾಕ್ಸ್ ಗಳನ್ನು ಬಳಸುತ್ತಾರೆ. ಇಲ್ಲಿ ಪ್ರಾಣಿ ಪಕ್ಷಿಗಳಿಂದ ರಕ್ಷಣೆಗಾಗಿ ಮಾತ್ರ ಬಾಗಿಲನ್ನು ಬಿದಿರಿನಿಂದ ಮುಚ್ಚಲಾಗುತ್ತದೆ. ಇಟ್ಟಿಗೆ-ಕಲ್ಲು ಮತ್ತು ಸಿಮೆಂಟ್‌ನಿಂದ ಮಾಡಿದ ಮನೆಗಳಿವೆ, ಆದರೆ ಇನ್ನೂ ಬಾಗಿಲುಗಳಿಗೆ ಬೀಗಗಳಿಲ್ಲ.
ಶನಿಯ ಕೋಪದಿಂದ ಮುಕ್ತಿ
ಶನಿಯ ಧೈಯ ಅಥವಾ ಸಾಡೆ ಸತಿಯಂತಹ ಶನಿಯ ಕೋಪದಿಂದ ಬಳಲುತ್ತಿರುವವರು ಶನಿ ಜಯಂತಿಯಂದು ಶನಿ ಶಿಂಗ್ಣಾಪುರ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬುದು ನಂಬಿಕೆ. ಇಲ್ಲಿಗೆ ಬರುವುದರಿಂದ ಶನಿದೇವನ ದರ್ಶನದಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಇಲ್ಲಿಗೆ ಬಂದು ಶನಿದೇವನನ್ನು ಸರಿಯಾದ ರೀತಿಯಲ್ಲಿ ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಹಾಸು ಹೊಕ್ಕಾಗಿದೆ.
ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವ ದೇವಾಲಯ; ಪುರಾತತ್ವ ಇಲಾಖೆ ಎಚ್ಚರಿಕೆ
ಶನಿ ಶಿಂಗ್ಣಾಪುರದ ಕಥೆ
ಶನಿ ಶಿಂಗ್ಣಾಪುರದ ಕಥೆಯು ಸುಮಾರು 300 ವರ್ಷಗಳ ಹಿಂದಿನದು. ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ, ಭಾರೀ ಮಳೆಯ ನಂತರ, ಪನಸನಾಳ ನದಿಯ ದಡದಲ್ಲಿ ಭಾರೀ ಬಂಡೆಯ ಚಪ್ಪಡಿ ಕೊಚ್ಚಿ ಬಂದಿರುತ್ತದೆ. ಗ್ರಾಮಸ್ಥರು ಬಂಡೆಯನ್ನು ಕಂಡು ಕೋಲಿನಿಂದ ಚುಚ್ಚಿದಾಗ, ಇದ್ದಕ್ಕಿದ್ದಂತೆ ರಕ್ತವು ಹೊರಬರಲು ಪ್ರಾರಂಭಿಸುತ್ತದೆ. ಈ ವಿದ್ಯಮಾನದಿಂದಾಗಿ, ಎಲ್ಲರೂ ದಿಗ್ಭ್ರಮೆಗೊಂಡು ಇದು ಏನಾದರೂ ಪವಾಡ ಎಂದುಕೊಳ್ಳುತ್ತಾರೆ.
ನಂತರ ಅದೇ ರಾತ್ರಿ, ಗ್ರಾಮದ ಮುಖ್ಯಸ್ಥನ ಕನಸಿನಲ್ಲಿ ಶನಿದೇವನು ಕಾಣಿಸಿಕೊಂಡು ಹಿಂದಿನ ದಿನ ಗ್ರಾಮಸ್ಥರು ಕಂಡುಕೊಂಡ ಚಪ್ಪಡಿ ತನ್ನ ಸ್ವಂತ ವಿಗ್ರಹವಾಗಿದೆ ಎಂದು ಹೇಳಿದನು. ನಂತರ ಆ ಬಂಡೆಯ ಚಪ್ಪಡಿಯನ್ನು ಗ್ರಾಮದಲ್ಲಿ ಇಟ್ಟುಕೊಳ್ಳುವಂತೆ ಮತ್ತು ಅದನ್ನು ವಿಲೇವಾರಿ ಮಾಡದಂತೆ ಗ್ರಾಮದ ಮುಖ್ಯಸ್ಥರಿಗೆ ಆದೇಶಿಸಿದನು. ಜೊತೆಗೆ, ಇನ್ನು ಮುಂದೆ ಗ್ರಾಮವನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುತ್ತೇನೆ ಎಂದು ಹೇಳಿದನು.
ಶನಿಯೇ ಹೀಗೆ ಭರವಸೆ ನೀಡಿದ ಮೇಲೆ ಊರವರಿಗೇನು ಭಯ? ಆ ಚಪ್ಪಡಿಯನ್ನೇ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸತೊಡಗಿದರು. ಮತ್ತು ಶನಿಯ ಆಶ್ರಯದಲ್ಲಿ ಭಯವಿಲ್ಲದ ವಾತಾವರಣದಲ್ಲಿ ಜೀವನ ಸಾಗಿಸತೊಡಗಿದರು.