ತಾಲೂಕಿನ ಬಿಳಿಕೆರೆ ಹೋಬಳಿ ಬೆಟ್ಟದೂರಿನ 200 ಅಡಿ ಎತ್ತರದ ಕಲ್ಲುಬಂಡೆಯ ಮೇಲೆ ನಿಂತಿರುವ ಶಾಂತಮೂರ್ತಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಜೈನಸಂಪ್ರದಾಯದಂತೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು. 

ಹುಣಸೂರು (ನ.27): ತಾಲೂಕಿನ ಬಿಳಿಕೆರೆ ಹೋಬಳಿ ಬೆಟ್ಟದೂರಿನ 200 ಅಡಿ ಎತ್ತರದ ಕಲ್ಲುಬಂಡೆಯ ಮೇಲೆ ನಿಂತಿರುವ ಶಾಂತಮೂರ್ತಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಜೈನಸಂಪ್ರದಾಯದಂತೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಶ್ರೀಕ್ಷೇತ್ರ ಗೊಮ್ಮಟಗಿರಿ ಸೇವಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ 73ನೇ ಮಹಾಮಸ್ತಕಾಭಿಷೇಕ ಪೂಜಾ ಮಹೋತ್ಸವದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಮಠದ ಶ್ರೀದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಮಧ್ಯಾಹ್ನ 12.30ಕ್ಕೆ ಆರಂಭಗೊಂಡು ಮಹಾಮಸ್ತಕಾಭಿಷೇಕ ಕಾರ್ಯದ ವೇಳೆ ಮುಗ್ಧ, ಸ್ತಿಗ್ಧ ಗೊಮ್ಮಟೇಶ್ವರ ಮುಖ ಒಮ್ಮೆ ರಕ್ತಚಂದನವಾಯಿತು, ಮತ್ತೊಮ್ಮೆ ಹಾಲು ಬಿಳುಪಿನಿಂದ ಕಂಗೊಳಿಸಿತು, ಮಗದೊಮ್ಮೆ ಅರಿಶಿನ, ಕೇಸರಿ ಬಣ್ಣಗಳ ಅಭಿಷೇಕದೊಂದಿಗೆ ಭಕ್ತರ ಮನದಲ್ಲಿ ಸ್ಪುರದ್ರೂಪಿಯಾಗಿ ನೆಲೆಸಿದನು. ನಾಲ್ಕು ಬಗೆಯ ಚಷ್ಕೋನ, ಅಷ್ಟಗಂಧ, ಶ್ರೀಗಂಧ, ಕೇಸರಿ, ಭಸ್ಮ, ಮುಂತಾದ ದ್ರವ್ಯಗಳನ್ನು, ಜೇನುತುಪ್ಪ, ತುಪ್ಪ, ಎಳನೀರುವ, ಕಬ್ಬಿನ ಹಾಲು ಕಲ್ಮಚೂರ್ಣ, ಕಷಾಯ ಚಂದನ, ರಕ್ತಚಂದನ ಮುಂತಾದವುಗಳನ್ನು 16 ಅಡಿ ಎತ್ತರದ ಸುಂದರ ಏಕಶಿಲಾಮೂರ್ತಿಯ ಶಿರದಿಂದ ಒಂದೊಂದಾಗಿ ಅಭಿಷೇಕ ಮಾಡಿದಂತೆ ಸುಂದರ ಮೂರ್ತಿ ಕ್ಷಣಕ್ಕೊಂದು ಬಣ್ಣದೊಂದಿಗೆ ಕಂಗೊಳಿಸಿದನು. 108 ಪೂರ್ಣ ಕಳಶಗಳು, 5 ಕುಂಭ ಕಳಶಗಳ ಅಭಿಷೇಕ, ಪಂಚಾಮೃತ ಅಭಿಷೇಕ ನಡೆಸಲಾಯಿತು.

ಕಾರವಾರದಲ್ಲಿ ವಿಶೇಷ ಈ ದಿಂಡಿ ಜಾತ್ರೆ: ಗಮನ ಸೆಳೆದ ದೈವ ನರ್ತಕ, ಪಂಜುರ್ಲಿ

ವೈರಾಗ್ಯಮೂರ್ತಿಯ, ಶಾಂತ ಸ್ವರೂಪವದನದ ಬಾಹುಬಲಿಯ ಅವರ್ಣನೀಯ ಸೌಂದರ್ಯವನ್ನು ಬೆಟ್ಟದ ತಪ್ಪಲಿನಲ್ಲಿ ವೀಕ್ಷಿಸುತ್ತಿದ್ದ ಭಕ್ತಗಣ ಜೈ ಬಾಹುಬಲಿ, ಜೈ ಶಾಂತಿದೂತ ಮುಂತಾದ ಘೋಷಣೆಗಳನ್ನು ಮೊಳಗಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ನೆರೆದ ಭಕ್ತಗಣ ಭಾವವೇಶದಲ್ಲಿ ಹೋ ಎಂದು ಕೂಗಿ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರು.

ಅಂತಿಮವಾಗಿ ಪುಷ್ಪಾರ್ಚನೆ, ಪೂರ್ಣಕುಂಬ ಜಲಾಭಿಷೇಕ ನೆರವೇರಿಸಿದ ನಂತರ ದೃಷ್ಟಿತೆಗೆದು ಮಹಾಮಂಗಳಾರತಿ ಬೆಳಗಿಸಲಾಯಿತು. ಮಸ್ತಕಾಭಿಷೇಕದ ನಂತರ ಭಕ್ತರು ಬೆಟ್ಟದ ತಪ್ಪಲಿನ 24 ತೀರ್ಥಂಕರರ ಪಾದುಕೆಗಳ ಸ್ಥಳಕ್ಕೆ ಭೇಟಿ ನೀಡಿ ಪೂಜಾ ಕಾರ್ಯಗಳನ್ನು ಸಲ್ಲಿಸಿದರು. ಹೊಂಬುಜಮಠದ ಶ್ರೀದೇವೇಂದ್ರ ಕೀರ್ತಿ ಭಟ್ಟಾರಕಸ್ವಾಮೀಜಿ ಮಾತನಾಡಿ, ಶಾಂತಿಯ ಸಂಕೇತ ಬಾಹುಬಲಿಯ ಜೀವನಾದರ್ಶಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು, ಸರ್ವ ಜನರ ಕಲ್ಯಾಣಕ್ಕಾಗಿ ಬಾಹುಬಲಿ ಸರ್ವಸಂಗ ಪರಿತ್ಯಾಗಿಯಾಗಿದನು ಎಂದರು.

ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ತಾಕತ್ತು ಪ್ರದರ್ಶಿಸ​ಲಿ: ಮಧು ಬಂಗಾರಪ್ಪ

ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತಾಜೀ 105 ಸಮ್ಯಕ್‌ ಶ್ರೀಮಾತಾಜೀ, ಟ್ರಸ್ಟ್‌ ಅಧ್ಯಕ್ಷ ಡಾ. ಶಾಂತಕುಮಾರ್‌, ಅಖಿಲಭಾರತ ತೀರ್ಥಕ್ಷೇತ್ರ ಸಮಿತಿಯ ಮೈಸೂರು ವಿಭಾಗದ ಅಧ್ಯಕ್ಷ ವಿನೋದ್‌ ಜೈನ್‌, ಎಸ್‌.ಎನ್‌. ಪ್ರಕಾಶ್‌ಬಾಬು, ಎ.ಎನ್‌. ದೇವೇಂದ್ರ, ರಾಜೇಶ್‌, ಮಾಸ್ಟರ್‌ ಪದ್ಮರಾಜ್‌, ಜಿ.ಡಿ. ಸಂತೋಷ್‌, ಮನ್ಮಥರಾಜ್‌, ಜೀನೇಂದ್ರ ಮೊದಲಾದವರು ಇದ್ದರು.