Shivamogga: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ತಾಕತ್ತು ಪ್ರದರ್ಶಿಸಲಿ: ಮಧು ಬಂಗಾರಪ್ಪ
ಶರಾವತಿ ಸಂತ್ರಸ್ತರ ಸಮಸ್ಯೆಯನ್ನು 15 ದಿನಗಳಲ್ಲಿ ಬಗೆಹರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದು, ಅವರು ಹೇಳಿದ ಗಡುವು ಪೂರ್ಣಗೊಂಡಿದೆ. ಈಗ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
ಶಿವಮೊಗ್ಗ (ನ.27): ಶರಾವತಿ ಸಂತ್ರಸ್ತರ ಸಮಸ್ಯೆಯನ್ನು 15 ದಿನಗಳಲ್ಲಿ ಬಗೆಹರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದು, ಅವರು ಹೇಳಿದ ಗಡುವು ಪೂರ್ಣಗೊಂಡಿದೆ. ಈಗ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಎಸ್‌ವೈ ಸಿಎಂ ಆಗಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಮಸ್ಯೆ ಪರಿಹರಿಸದೆ, ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ 15 ದಿನದಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಶುಕ್ರವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಸ್ಯೆ ಬಗೆಹರಿಸುವ ಕುರಿತು ಜಿಲ್ಲಾಧಿಕಾರಿ ಅವರಿಗೆ ವರದಿ ಕೇಳಿದ್ದೇನೆ. ವರದಿ ಬಂದ ಬಳಿಕ ಪ್ರಧಾನಿ ಬಳಿ ಚರ್ಚೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿಲ್ಲ, ಕೇವಲ ಆಶ್ವಾಸನೆ ಕೊಟ್ಟು ಹೋಗಿದ್ದಾರೆ ಎಂದು ಕುಟುಕಿದರು.
ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ: ಸಚಿವ ಸುಧಾಕರ್
ಒಂದು ಕಡೆ ಮಾಜಿ ಸಿಎಂ ಬಿಎಸ್‌ವೈ ಗಡುವು ಕೊಡುತ್ತಾರೆ, ಇನ್ನೊಂದು ಕಡೆ ಸಿಎಂ ಬೊಮ್ಮಾಯಿ ನೋಡುತ್ತೇವೆ, ಪ್ರಯತ್ನ ಮಾಡುತ್ತೇವೆ ಎಂದು ಆಶ್ವಾಸನೆ ಕೊಡುತ್ತಾರೆ. ಮಾತೆತ್ತಿದ್ದರೆ ಧಮ್ಮು, ತಾಕತ್ತು ಎನ್ನುವ ಸಿಎಂ ಅವರು ಅದೇ ಧಮ್ಮು, ತಾಕತ್ತು ಪ್ರದರ್ಶನ ಮಾಡಿ ಯಾಕೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಮೂಲಕ ನ್ಯಾಯಲಯಕ್ಕೆ ಸಂತ್ರಸ್ತರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ. ಮಲೆನಾಡು ಭಾಗದ ರೈತರು ಮನೆ, ಕೃಷಿ ಭೂಮಿ ಹಕ್ಕು ಪತ್ರಕ್ಕಾಗಿ ವಿವಿಧ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ವಜಾಗೊಳಿಸುವ ಕೆಲಸ ಈ ಸರ್ಕಾರದಿಂದ ಆಗಿದೆ. ಕಸ್ತೂರಿ ರಂಗನ್ ವರದಿ ತೂಗು ಕತ್ತಿಯಾಗಿದೆ. ಮುಖ್ಯಮಂತ್ರಿಯಿಂದಲೂ ರೈತರಿಗೆ ಧೈರ್ಯ ತುಂಬುವ ಕೆಲಸವಾಗಿಲ್ಲ ಎಂದರು.
ಜನಾಕ್ರೋಶ ಹೋರಾಟಕ್ಕೆ ಸಜ್ಜು: ಕಾಂಗ್ರೆಸ್ ಪಕ್ಷದ ವತಿಯಿಂದ ಶರಾವತಿ ಸಂತ್ರಸ್ತರ ಪರವಾಗಿ ಜನಾಕ್ರೋಶ ಹೋರಾಟ ನಡೆಸಲಾಗುತ್ತಿದೆ. ನ. 28ರಂದು ಬೆಳಗ್ಗೆ ಆಯನೂರಿನಿಂದ ಪಾದಯಾತ್ರೆ ನಡೆಸಲಾಗುತ್ತದೆ. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯು ಆಯನೂರಿನಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್ ಮೂಲಕ ಎನ್‌ಇಎಸ್ ಮೈದಾನ ತಲುಪಲಿದೆ. ಸಂಜೆ 4ಕ್ಕೆ ಎನ್‌ಇಎಸ್ ಮೈದಾನದಲ್ಲಿ ಸಮಾವೇಶ ನಡೆಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.
ಮಂಚೇನಹಳ್ಳಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಸಚಿವ ಅಶೋಕ್ ಘೋಷಣೆ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ. ಪ್ರಸನ್ನಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಎಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಕಲಗೋಡು ರತ್ನಾಕರ್, ಎನ್.ರಮೇಶ್, ಇಸ್ಮಾಯಿಲ್ ಖಾನ್, ಎಸ್.ಪಿ. ದಿನೇಶ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ, ಇಕ್ಕೇರಿ ರಮೇಶ್, ದೀಪಕ್ ಸಿಂಗ್, ಮಂಜುನಾಥ ಬಾಬು ಮತ್ತಿತರರು ಇದ್ದರು.