ರಾತ್ರಿ ಉಗುರು ಕತ್ತರಿಸಿದ್ರೆ ಏನು ಪ್ರಾಬ್ಲಂ ಅನ್ನೋರು ಇದನ್ನೊಮ್ಮೆ ಓದಿ!
ರಾತ್ರಿ ಹೊತ್ತು ಉಗುರು ಕತ್ತರಿಸಿ ಮನೆಯ ಹಿರಿಯರಿಂದ ನೀವು ಬೈಗುಳ ತಿಂದಿದ್ದೀರಾ? ಉಗುರು ಕತ್ತರಿಸೋದ್ರಿಂದ ಏನೂ ಪ್ರಾಬ್ಲಂ ಇಲ್ಲ. ಅದೆಲ್ಲ ಸುಮ್ಮನೆ ಮೂಢನಂಬಿಕೆ ಎನ್ನುವವರ ಗುಂಪಿನಲ್ಲಿ ನೀವೂ ಸೇರಿದ್ದೀರಾ? ಹಾಗಾದ್ರೆ ಇದನ್ನೊಮ್ಮೆ ಓದಿ.
ಕಳೆದ ವಾರವಷ್ಟೇ ಉಗುರು ಕತ್ತರಿಸಿದೆ. ಇವತ್ತು ನೋಡಿದ್ರೆ ಮತ್ತೆ ಬೆಳೆದು ನಿಂತಿದೆ. ಹಾಗಾದ್ರೆ ತಡವೇಕೆ ಕತ್ತರಿಸಿ ಬಿಡುವ ಎಂದು ನೇಲ್ ಕಟರ್ ಹಿಡಿದುಕೊಂಡು ಹಾಲ್‍ನ ಒಂದು ಮೂಲೆಯಲ್ಲಿ ಕುಳಿತೆ. ಟಿವಿ ನೋಡುತ್ತಿದ್ದ ಅಜ್ಜನ ಕಣ್ಣು ನನ್ನ ಮೇಲೆ ಬಿತ್ತು. ‘ನಿಂಗೆ ಉಗುರು ಕಟ್ ಮಾಡೋಕೆ ರಾತ್ರಿ ಮಾತ್ರ ಟೈಮ್ ಸಿಗೋದಾ? ಎಷ್ಟು ಬಾರಿ ಹೇಳಿದ್ದೇನೆ ರಾತ್ರಿ ಹೊತ್ತು ಉಗುರು ಕತ್ತರಿಸಬೇಡ, ಮನೆಗೆ ದಾರಿದ್ರ್ಯ ಎಂದು’ ಅಜ್ಜನ ಬೈಗುಳ ಹೀಗೆ ಸಾಗಿತ್ತು.
ಕುಂಕುಮವಿಡುವ ಬಿಂದುವಿನಲ್ಲಡಗಿದೆ ಆರೋಗ್ಯದ ಗುಟ್ಟು!
ರಾತ್ರಿ ಹೊತ್ತು ಉಗುರು ಕತ್ತರಿಸಲು ಮುಂದಾದ ನಿಮಗೂ ಕೂಡ ಇಂಥದ್ದೇ ಅನುಭವಗಳು ಮನೆಯ ಹಿರಿಯರಿಂದ ಖಂಡಿತಾ ಆಗಿರುತ್ತವೆ. ಭಾರತದಲ್ಲಿ ಮತ್ರವಲ್ಲ, ಜಪಾನ್‍ನಲ್ಲಿ ಕೂಡ ರಾತ್ರಿ ಹೊತ್ತು ಉಗುರು ಕತ್ತರಿಸುವುದು ನಿಷಿದ್ಧ. ಇದರಿಂದ ಕೇಡುಂಟಾಗುತ್ತದೆ, ನಕಾರಾತ್ಮಕ ಶಕ್ತಿಗಳು ಮನೆಯನ್ನು ಆವರಿಸಿಕೊಳ್ಳುತ್ತವೆಂಬ ಅನೇಕ ನಂಬಿಕೆಗಳು ಅಲ್ಲಿನ ಜನರಲ್ಲಿ ಕೂಡ ಇವೆ. ಇವೆಲ್ಲ ಬರೀ ಮೂಢನಂಬಿಕೆ ಎಂದು ನಾವು ಸುಲಭವಾಗಿ ತಳ್ಳಿ ಹಾಕಬಹುದು. ಆದರೆ, ನಮ್ಮ ಹಿರಿಯರು ಇಂಥ ನಿಯಮ ರೂಪಿಸಿರುವುದರ ಹಿಂದೆ ಅಂದಿನ ಕಾಲಕ್ಕೆ ಹೊಂದಿಕೆಯಾಗುವ ಕೆಲವು ವೈಜ್ಞಾನಿಕ ಕಾರಣಗಳು ಕೂಡ ಅಡಗಿವೆ.
1.ಆರೋಗ್ಯ ಹಾನಿಯ ಭಯ: ಇಂದಿನ ಆಧುನಿಕ ಯುಗದಲ್ಲಿ ಹಗಲಿಗೂ ರಾತ್ರಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಇದಕ್ಕೆ ಕಾರಣ ವಿದ್ಯುತ್. ಹೌದು ವಿದ್ಯುತ್‍ನಿಂದಾಗಿ ರಾತ್ರಿಯ ಕತ್ತಲು ಕರಗಿ ಎಲ್ಲೆಡೆಯೂ ಹಗಲಿನಂತೆಯೇ ಬೆಳಕು ಹರಡಿರುತ್ತದೆ. ಹೀಗಾಗಿ ಹಗಲಿನಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳನ್ನು ರಾತ್ರಿ ಸಮಯದಲ್ಲೂ ಮಾಡಲು ಸಾಧ್ಯವಿದೆ. ಆದರೆ, ವಿದ್ಯುತ್ ಅನ್ವೇಷಣೆಗೂ ಮುನ್ನದ ಸ್ಥಿತಿಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಆಗ ರಾತ್ರಿ ಹೊತ್ತಲ್ಲಿ ಕತ್ತಲು ಹೆಚ್ಚಿರುತ್ತಿತ್ತು. ಅಂಥ ಸಮಯದಲ್ಲಿ ಉಗುರು ಕತ್ತರಿಸುವುದರಿಂದ ನೆಲದ ಮೇಲೆ ಅಲ್ಲಿ ಇಲ್ಲಿ ಬಿದ್ದ ಉಗುರುಗಳನ್ನೆಲ್ಲ ಸಂಗ್ರಹಿಸಿ, ಹೊರಗೆ ಎಸೆಯುವುದು ಕಷ್ಟವೇ ಸರಿ. ಕೆಲವು ಉಗುರುಗಳು ನೆಲದ ಮೇಲೆ ಹಾಗೆಯೇ ಉಳಿದು ಹೋಗಬಹುದು. ಅವನ್ನು ಆಹಾರ ಪದಾರ್ಥಗಳೊಂದಿಗೆ ಬೆರೆತು ಹೊಟ್ಟೆಗೆ ಸೇರಿದರೆ ಅನಾರೋಗ್ಯ ಕಾಡುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಹಿರಿಯರು ರಾತ್ರಿ ಹೊತ್ತು ಮನೆಯೊಳಗೆ ಉಗುರು ಕತ್ತರಿಸಲು ಬಿಡುತ್ತಿರಲಿಲ್ಲ.
ಈ ರಾಶಿಯವರನ್ನು ಮದುವೆ ಆದರೆ ಲೈಫ್ ಜಿಂಗಾಲಾಲ!
2. ಗಾಯವಾಗುವ ಸಾಧ್ಯತೆ: ಹಿಂದಿನ ಕಾಲದಲ್ಲಿ ಉಗುರು ಕತ್ತರಿಸಲು ಈಗಿನಂತೆ ನೇಲ್ ಕ್ಲಿಪರ್ಸ್ ಅಥವಾ ಕಟರ್ಸ್ ಇರಲಿಲ್ಲ. ಚೂರಿ ಅಥವಾ ಇನ್ಯಾವುದೋ ಹರಿತವಾದ ಸಾಧನದ ಮೂಲಕ ಉಗುರು ಕತ್ತರಿಸುತ್ತಿದ್ದರು. ರಾತ್ರಿ ವೇಳೆ ಬೆಳಕು ಕಡಿಮೆಯಿರುವ ಕಾರಣ ಉಗುರು ಕತ್ತರಿಸುವ ಸಂದರ್ಭದಲ್ಲಿ ಗಾಯಗಳಾಗುವ ಸಾಧ್ಯತೆ ಅಧಿಕವಾಗಿತ್ತು. ಅಲ್ಲದೆ, ರಾತ್ರಿ ವೇಳೆ ಸೂಕ್ತ ವೈದ್ಯಕೀಯ ನೆರವು ದೊರೆಯುವುದು ಕೂಡ ಕಷ್ಟಕರವಾಗಿತ್ತು.
3. ಲಕ್ಷ್ಮೀಯ ಅವಕೃಪೆಗೆ ಗುರಿಯಾಗುವ ಭಯ: ರಾತ್ರಿ ಉಗುರು ಕತ್ತರಿಸಬಾರದು ಎಂಬುದರ ಹಿಂದೆ ಧಾರ್ಮಿಕ ಕಾರಣವೂ ಇದೆ. ಹಿಂದೂ ಸಂಪ್ರದಾಯದ ನಂಬಿಕೆಗಳ ಅನುಸಾರ ಸಂಜೆ ಗೋಧೂಳಿ ಸಮಯದಲ್ಲಿ ಅಂದರೆ ಸೂರ್ಯ ಮುಳುಗುವ ಹೊತ್ತಲ್ಲಿ ಲಕ್ಷ್ಮೀ ಮನೆಯನ್ನು ಪ್ರವೇಶಿಸುತ್ತಾಳೆ. ರಾತ್ರಿ ಮನೆಯಲ್ಲೇ ಉಳಿಯುವ ಲಕ್ಷ್ಮೀ ಸಮೃದ್ಧಿ ಹಾಗೂ ಸಂಪತ್ತನ್ನು ಅನುಗ್ರಹಿಸುತ್ತಾಳೆ. ಹೀಗಾಗಿ ರಾತ್ರಿ ವೇಳೆ ಕಸವನ್ನು ಹೊರಹಾಕುವುದು, ಹಣ ನೀಡುವುದು, ಸಾಲ ನೀಡುವುದ, ಉಗುರು ಹಾಗೂ ಕೂದಲು ಕತ್ತರಿಸುವುದರಿಂದ ಲಕ್ಷ್ಮೀಗೆ ಅವಮಾನ ಮಾಡಿದಂತಾಗುತ್ತದೆ ಎಂಬುದು ಆಸ್ತಿಕರ ಅಭಿಪ್ರಾಯ.
4. ಮಾಟ, ಮಂತ್ರದ ಹೆದರಿಕೆ: ಮಾಟ, ಮಂತ್ರ, ವಶೀಕರಣ ಮುಂತಾದ ಬ್ಲಾಕ್ ಮ್ಯಾಜಿಕ್‍ಗಳಿಗೆ ಕೂದಲು ಹಾಗೂ ಸಂಬಂಧಿಸಿದ ವ್ಯಕ್ತಿಯ ಬಟ್ಟೆಯ ಚೂರಿನ ಜೊತೆಗೆ ಉಗುರನ್ನು ಕೂಡ ಬಳಸಲಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ರಾತ್ರಿ ವೇಳೆ ಉಗುರು ಕತ್ತರಿಸವಾಗ ಕೆಳಗೆ ಬಿದ್ದ ಉಗುರಿನ ಚೂರನ್ನು ದುಷ್ಟ ಶಕ್ತಿಗಳು ಅಥವಾ ಮಾಂತ್ರಿಕರು ಸಂಗ್ರಹಿಸಿ ಕೆಟ್ಟದ್ದನ್ನು ಮಾಡಬಹುದು ಎಂಬ ಹೆದರಿಕೆ ಗ್ರಾಮೀಣ ಭಾಗದ ಜನರಲ್ಲಿ ಇಂದಿಗೂ ಇದೆ.
ಇಂದಿನ ಆಧುನಿಕ ಯುಗದಲ್ಲಿ ಎಲ್ಲರ ಮನೆಯಲ್ಲೂ ವಿದ್ಯುತ್ ದೀಪಗಳಿರುವ ಕಾರಣ ರಾತ್ರಿ ಹೊತ್ತು ಉಗುರು ಕತ್ತರಿಸುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ, ಉಗುರು ಕತ್ತರಿಸಿದ ಬಳಿಕ ಒಂದು ತುಂಡು ಕೂಡ ಉಳಿಯದಂತೆ ಆ ಜಾಗವನ್ನು ಸ್ವಚ್ಛ ಮಾಡಲು ಮರೆಯಬಾರದು. ಏಕೆಂದರೆ ಇದು ಬರೀ ನಂಬಿಕೆಯ ಪ್ರಶ್ನೆ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಉಗುರಿನಿಂದ ಸಾಕಷ್ಟು ಹಾನಿಯಿದೆ.
ಇನ್ನು ನೀವು ದೇವರ ಮೇಲೆ ನಂಬಿಕೆ ಹೊಂದಿರುವವರು, ಧಾರ್ಮಿಕ ಮನೋಭಾವದವರಾಗಿದ್ದರೆ ಸಂಜೆ ಸೂರ್ಯ ಮುಳುಗಿದ ಬಳಿಕ ಉಗುರು ಕತ್ತರಿಸಲು ಹೋಗಬೇಡಿ.ಏಕೆಂದರೆ ಮನೆಯಲ್ಲಿ ಏನಾದರೂ ತೊಂದರೆ ಎದುರಾದಾಗ ನಿಮ್ಮ ಮನಸ್ಸು ಮನೆಯಲ್ಲಿ ರಾತ್ರಿ ಹೊತ್ತು ಉಗುರು ಕತ್ತರಿಸಿದ ಕಾರಣ ಲಕ್ಷ್ಮೀ ಅವಕೃಪೆ ತೋರಿದ್ದಾಳೆ ಎಂದು ಭಾವಿಸಿ ನೆಮ್ಮದಿ ಕೆಡಿಸಿಕೊಳ್ಳುವುದು ಬೇಡ.