ಕುಂಕುಮವಿಡುವ ಬಿಂದುವಿನಲ್ಲಡಗಿದೆ ಆರೋಗ್ಯದ ಗುಟ್ಟು!
ಹಣೆಯ ಮೇಲೆ ಕುಂಕುಮವಿಡುವುದರಿಂದ ಮುಖದ ಅಂದ ಮಾತ್ರ ಹೆಚ್ಚುವುದಿಲ್ಲ, ಬದಲಿಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದು ಹೇಗೆ ಅಂತೀರಾ? ಹಣೆಯಲ್ಲಿರುವ ಚಕ್ರ ಬಿಂದು ಆರೋಗ್ಯದ ಗುಟ್ಟನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ.
ಭಾರತೀಯ ಸಂಪ್ರದಾಯದಲ್ಲಿ ಕುಂಕುಮಕ್ಕೆ ವಿಶೇಷವಾದ ಸ್ಥಾನಮಾನವಿದೆ. ಹಣೆಯ ಮೇಲೊಂದು ಬಿಂದಿಯಿಟ್ಟರೇನೆ ಹೆಣ್ಣಿನ ಮುಖದ ಮೇಕಪ್ನ ಮೆರುಗು ಹೆಚ್ಚುವುದು. ಆದರೆ, ಕುಂಕುಮ ಬರೀ ಅಂದ ಹೆಚ್ಚಿಸುವ ಪ್ರಸಾದನವಷ್ಟೇ ಅಲ್ಲ, ಅದರ ಬಳಕೆ ಹಿಂದೆ ಆರೋಗ್ಯದ ಗುಟ್ಟು ಅಡಗಿದೆ. ಕುಂಕುಮವನ್ನು ಹಣೆಯ ಮಧ್ಯಭಾಗದಲ್ಲಿಡುತ್ತೇವೆ. ಈ ಭಾಗದಲ್ಲಿ ಚಕ್ರ ಬಿಂದುವಿದ್ದು, ಅದನ್ನು ಒತ್ತಿ ಹಿಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.
ನಾನಾ ಸಮಸ್ಯೆಗಿದೆ ಪರಿಹಾರ: ಹುಬ್ಬುಗಳ ನಡುವೆ ಇರುವ ಭಾಗಕ್ಕೆ ಚಕ್ರ ಬಿಂದು ಎನ್ನುತ್ತಾರೆ. ಭಾರತೀಯ ವೈದ್ಯಶಾಸ್ತ್ರದ ಪ್ರಕಾರ ಅನೇಕ ಆರೋಗ್ಯ ಸಮಸ್ಯೆಗಳನ್ನು ಶಮನ ಮಾಡುವ ಸಾಮಥ್ರ್ಯ ಈ ಚಕ್ರಕ್ಕಿದೆ. ಯೋಗಶಾಸ್ತ್ರದಲ್ಲಿ ಚಕ್ರ ಬಿಂದುವಿಗೆ ‘ಆಜ್ಞಾ ಚಕ್ರ’ ಅಥವಾ ‘ಆಗ್ಯ ಚಕ್ರ’ ಎಂದು ಕರೆಯುತ್ತಾರೆ. ಈ ಚಕ್ರ ಅಂತರ್ದೃಷ್ಟಿ, ಬುದ್ಧಿವಂತಿಕೆ ಹಾಗೂ ಅರ್ಥೈಸಿಕೊಳ್ಳುವ ಸಾಮಥ್ರ್ಯದೊಂದಿಗೆ ಸಂಬಂಧ ಹೊಂದಿದೆ. ಇನ್ನು ಪೌರಾಣಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಶಿವನಿಗೆ ಮೂರನೇ ಕಣ್ಣಿರುವುದು ಚಕ್ರ ಬಿಂದುವಿರುವ ಸ್ಥಳದಲ್ಲೇ. ಹೀಗಾಗಿ ಈ ಬಿಂದುವು ಶಕ್ತಿ, ಸಾಮಥ್ರ್ಯ ಹಾಗೂ ಬುದ್ಧಿಶಕ್ತಿಯ ಕೇಂದ್ರಬಿಂದು ಎಂದು ಕೂಡ ಹೇಳಲಾಗುತ್ತದೆ. ಈ ಬಿಂದುವನ್ನು ಗುರಿಯಾಗಿಟ್ಟುಕೊಂಡು ವ್ಯಕ್ತಿ ತನ್ನ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಮೂಢನಂಬಿಕೆಯಲ್ಲ ಈ ಹಿಂದೂ ಆಚರಣೆಗಳು,ಇದರ ಬೆನ್ನಿಗಿದೆ ವಿಜ್ಞಾನ!
ಅಕ್ಯುಪ್ರೆಷರ್ ಪಾಯಿಂಟ್: ಅಕ್ಯುಪ್ರೆಷರ್ ಚಿಕಿತ್ಸೆಯಲ್ಲಿ ಶರೀರದ ಕೆಲವೊಂದು ನಿರ್ದಿಷ್ಟ ಬಿಂದುಗಳನ್ನು ಒತ್ತಿ ಹಿಡಿಯುವ ಮೂಲಕ ಅನೇಕ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಕ್ಯುಪ್ರೆಷರ್ ಚಿಕಿತ್ಸೆಯಲ್ಲಿ ಚಕ್ರ ಬಿಂದುವನ್ನು ಮೂರನೇ ಪ್ರಮುಖ ಬಿಂದುವಾಗಿ ಪರಿಗಣಿಸಲಾಗುತ್ತಿದ್ದು, ಇದರ ಮೇಲೆ ಒತ್ತಡ ಹೇರುವ ಮೂಲಕ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಸಹಿಸಲಾಸಾಧ್ಯವಾದ ತಲೆನೋವಿರುವಾಗ ಕೆಲವು ನಿಮಿಷಗಳ ಕಾಲ ಚಕ್ರ ಬಿಂದುವನ್ನು ಬೆರಳಲ್ಲಿ ಒತ್ತಿ ಹಿಡಿಯುವ ಮೂಲಕ ತಕ್ಷಣ ಪರಿಹಾರ ಪಡೆಯಬಹುದು. ಇದು ರಕ್ತದ ಹರಿವನ್ನು ಉತ್ತಮಪಡಿಸುವ ಮೂಲಕ ತಲೆನೋವಿನಿಂದ ಮುಕ್ತಿ ನೀಡುತ್ತದೆ.
ಉಸಿರಾಟವನ್ನು ಉತ್ತಮಪಡಿಸುತ್ತದೆ: ಚಕ್ರ ಬಿಂದುವಿನ ಮೇಲೆ ನಿರ್ದಿಷ್ಟ ಪ್ರಮಾಣದ ಒತ್ತಡ ಹೇರುವುದರಿಂದ ಉಸಿರಾಟದ ತೊಂದರೆಗಳು ದೂರವಾಗುತ್ತವೆ. ನಿಮ್ಮ ಉಸಿರಾಟ ಪ್ರಕ್ರಿಯೆಯನ್ನು ಇದು ಸುಧಾರಿಸುತ್ತದೆ. ಇದರಿಂದ ದೇಹದ ಎಲ್ಲ ಭಾಗಗಳಿಗೂ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುವ ಮೂಲಕ ಹೊಸ ಚೈತನ್ಯ ಒಡಮೂಡುತ್ತದೆ.
ಟ್ರಿಗೆಮಿನಲ್ ಎಂಬ ನರವೊಂದು ಚಕ್ರ ಬಿಂದುವಿನ ಮೂಲಕ ಹಾದು ಹೋಗುತ್ತದೆ. ನಮ್ಮ, ಮುಖಕ್ಕೆ ಸ್ಪರ್ಶದ ಅನುಭವ ತಿಳಿಯಲು ಈ ನರವೇ ಕಾರಣವಾಗಿದೆ. ಈ ಬಿಂದುವನ್ನು ಒತ್ತುವುದರಿಂದ ನರಕ್ಕೆ ಅಗತ್ಯ ಪ್ರಮಾಣದಲ್ಲಿ ಪ್ರಚೋದನೆ ಸಿಗುವ ಮೂಲಕ ಅದು ಮೂಗಿನ ಬ್ಲಾಕೇಜ್ಗಳನ್ನು ಸರಿಪಡಿಸುವ ಜೊತೆಗೆ ಸೈನಸ್ ತೊಂದರೆಯಿಂದ ಮುಕ್ತಿ ನೀಡುತ್ತದೆ.
ದೃಷ್ಟಿಗೆ ಶಕ್ತಿ: ಚಕ್ರ ಬಿಂದುವನ್ನು ಪ್ರತಿದಿನ ಕೆಲವು ನಿಮಿಷಗಳ ಕಾಲ ಒತ್ತಿ ಹಿಡಿಯುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ಕಣ್ಣಿಗೆ ಸಂಬಂಧಿಸಿದ ನರ ಈ ಬಿಂದುವಿನ ಮೂಲಕ ಹಾದು ಹೋಗುತ್ತದೆ. ಈ ನರವು ಇಡೀ ಮುಖವನ್ನು ಪ್ರಚೋದಿಸುವ ಗುಣ ಹೊಂದಿದೆ. ಹೀಗಾಗಿ ಈ ನರವನ್ನು ಒತ್ತಿ ಹಿಡಿಯುವುದರಿಂದ ಮುಖದಲ್ಲಿ ರಕ್ತ ಸಂಚಾರ ಉತ್ತಮಗೊಂಡು ತ್ವಚೆಯ ಕಾಂತಿ ಹೆಚ್ಚುವ ಜೊತೆಗೆ ವಯಸ್ಸಿನ ಕಾರಣಕ್ಕೆ ಮುಖದ ಮೇಲಾಗುವ ಬದಲಾವಣೆಗಳನ್ನು ದೂರ ಮಾಡಬಹುದಾಗಿದೆ.
ಖಿನ್ನತೆಯನ್ನು ಹೋಗಲಾಡಿಸುತ್ತದೆ: ಚಕ್ರ ಬಿಂದುವನ್ನು ಒತ್ತಿ ಹಿಡಿಯುವುದರಿಂದ ಖಿನ್ನತೆ, ಅಪಸ್ಮಾರ ಸೇರಿದಂತೆ ಕೆಲವೊಂದು ಮಾನಸಿಕ ಕಾಯಿಲೆಗಳು ದೂರವಾಗುತ್ತವೆ.
ಕಿವಿಯನ್ನು ಚುರುಕಾಗಿಸುತ್ತದೆ: ಈ ನರವನ್ನು ಒತ್ತಿ ಹಿಡಿಯುವುದರಿಂದ ಕಿವಿಯಲ್ಲಿನ ಅಡೆತಡೆಗಳು ದೂರವಾಗುತ್ತವೆ. ಜೊತೆಗೆ ಕಿವಿಯ ನಳಿಕೆಯಲ್ಲಿನ ರಂಧ್ರಗಳನ್ನು ತೆರೆಯುವ ಮೂಲಕ ಶಬ್ದಗಳು ನಿಮಗೆ ಸರಿಯಾಗಿ ಕೇಳಿಸುವಂತೆ ಮಾಡುತ್ತದೆ.
ಸುಖ ನಿದ್ರೆ: ಚಕ್ರ ಬಿಂದುವನ್ನು ಒತ್ತಿ ಹಿಡಿಯುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ರಾತ್ರಿ ಸುಖ ನಿದ್ರೆ ಮಾಡಲು ಪ್ರತಿದಿನ ಕೆಲವು ನಿಮಿಷಗಳ ಕಾಲ ಈ ಬಿಂದುವನ್ನು ಬೆರಳುಗಳಿಂದ ಒತ್ತಿ ಹಿಡಿದರಾಯಿತು. ಚಕ್ರ ಬಿಂದುವನ್ನು ಒತ್ತಿ ಹಿಡಿದಾಗ ಇದು ಮಿದುಳಿನಲ್ಲಿರುವ ಪುಟ್ಟ ಕಾಳಿನ ಗಾತ್ರದ ಬಿಂದುವನ್ನು ಪ್ರಚೋದಿಸುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
ಸ್ಮರಣಶಕ್ತಿ ಹೆಚ್ಚುತ್ತದೆ: ಚಕ್ರ ಬಿಂದುವನ್ನು ಒತ್ತಿ ಹಿಡಿಯುವ ಮೂಲಕ ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಬಿಂದುವನ್ನು ಒತ್ತಿ ಹಿಡಿಯುವ ಮೂಲಕ ನೀವೇನು ಕಲಿತಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಬಹುದು.
ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ