Asianet Suvarna News Asianet Suvarna News

New Year 2022: ಭಾರತಕ್ಕೆ ಶುಭಕರ ಸಂಯೋಜನೆಯ ವರ್ಷ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ!

ಈ ವರ್ಷ ಭಾರತಕ್ಕೆ ಒಟ್ಟಾರೆಯಾಗಿ ಹೇಗಿರಲಿದೆ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ, ಆಯಾ ರಾಶಿಗಳಿಗೆ ಯಾವ ರೀತಿ ಇರಲಿದೆ ಎಂಬುದನ್ನು ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ. 

2022 will be a good year for India
Author
Bangalore, First Published Jan 1, 2022, 10:15 AM IST

ಗೋಚಾರ ವಿಶೇಷ:
ಪ್ಲವನಾಮ ಸಂವತ್ಸರದ ದಕ್ಷಿಣಾಯನದ ಕೊನೆಯಲ್ಲಿ ಉತ್ತರಾಯಣದ ಶುಭ ಪರ್ವದಲ್ಲಿ ಹೊಸ ವರ್ಷ ಹೊಸ ನಿರೀಕ್ಷೆಗಳಲ್ಲಿ ಇದ್ದೇವೆ. ಆಂಗ್ಲ ವರ್ಷವೇ ವ್ಯಾವಹಾರಿಕವಾಗಿ ನಡೆಯುವುದರಿಂದ ಜೊತೆಗೆ ಅಯನ ಬದಲಾವಣೆಯ ಸ್ತ್ರೀಯ ಕಾರಣವೂ ಇರುವುದರಿಂದ ಹೊಸ ವರ್ಷದ ಗೋಚಾರ ರಾಶಿ ಫಲಗಳನ್ನು ವಿಹಂಗಮ ದೃಷ್ಟಿಯಿಂದ ತಿಳಿಯುವುದು ಒಳ್ಳೆಯದೇ ಆಗಿದೆ. ನೂತನ ಶುಭ ದೇವತಾಶೀರ್ವಾದ ಕೋರುತ್ತಾ, ದಿನದ ಗ್ರಹಚಾರ ಪ್ರಕಾರ ಮಾರ್ಗಶೀರ್ಷ ಮಾಸ ಬಹುಳ ಚತುರ್ದಶೀ ಶನಿವಾರ (ಧನುರವಿ) ಜ್ಯೇಷ್ಠಾ ಚಂದ್ರನಿಂದ ಆರಂಭವಾಗಿದೆ. ಪ್ರಾತಃ ಧನುರ್ ಲಗ್ನ-ರವಿ-ಶುಕ್ರರು- ‘ಸತ್ಪೂಜ್ಯೋ ಧನವಾನ್ ಧನುರ್ಧರಗತೇ ತೀಕ್ಷ್ಣೋ ಭಿಷಕ್ಕಾರುಕೋ’ ಎಂಬ ಹೋರಾ ಪ್ರಮಾಣದಂತೆ ಧರ್ಮ ಸ್ಥಾನವಂತರು, ಪೂಜ್ಯರು, ಧನಾನುಕೂಲ ಉಳ್ಳವರೂ ರಾಜರಿಗೆ ಬಿರುಸುತನವೂ ದಕ್ಷತೆಯೂ ಹೆಚ್ಚಿ, ಆಡಳಿತಾಧಿಕಾರಿಗಳಿಂದ ಪ್ರಜೆಗಳು ನಾನಾ ಅನುಕೂಲ ಅಭಯಗಳನ್ನು ಪಡೆವರು. ಶುಕ್ರನೂ ಶುಭಸ್ಥ ಸ್ಥಾನದಲ್ಲಿ ಇರುವುದರಿಂದ ಕಲೆ, ಮನೋರಂಜನೆ, ಕವಿ, ಲೇಖಕ, ಉಪನ್ಯಾಸಕ, ಔಪಾಸಕ ಕ್ಷೇತ್ರಗಳೂ, ಜನರು ಅಭಿವೃದ್ಧಿ ಶುಭಗಳನ್ನು ಪಡೆವರು. ವೃಶ್ಚಿಕದಲ್ಲಿ ಚಂದ್ರ, ಮಂಗಳ ಯೋಗ ಅತ್ಯುತ್ತಮವಿದ್ದು, ತೃತೀಯ ಶನಿಯೂ ಬುಧರೂ ಅನೇಕ ವ್ಯವಹಾರಿಕ ಏಳಿಗೆಗೆ ಕಾರಣವಾಗುವರು.

ಕುಂಭದ ಗುರು, ವೃಷಭದ ಉಚ್ಚ ರಾಹು ಶುಭಕಾರಕರೇ ಆಗಿ, ಒಟ್ಟಾರೆ ಶನಿವಾರ ಅಶುಭವಾರ ಎಂಬುದನ್ನೂ ಹೊರತುಪಡಿಸಿ ಹೊಸ ವರ್ಷದ ಸಂಯೋಜನೆಯು ಶುಭಕಾರಕವಾಗಿದೆ. ಈ ಸಂವತ್ಸರದ ಕೊನೆಯ ತಿಂಗಳಾದ ಏಪ್ರಿಲ್‌ನಲ್ಲಿ ಗುರು ಮೀನ ರಾಶಿಯನ್ನು, ರಾಹು ಮೇಷ ರಾಶಿಗೂ ಪ್ರವೇಶಿಸುವುದು ವಿಶೇಷವಾಗಿದೆ. ಮಾರ್ಚ್‌ವರೆಗೂ ವರ್ಷನಾಥ ಕುಜನು ಮಕರವನ್ನು ದಾಟಿ ಹೋಗುವುದರಿಂದ ಜನಾಂಗೀಯ ಕಲಹ, ಉತ್ತರ ದೇಶಗಳಿಗೆ ಭಯೋತ್ಪಾದನೆ ಭೀತಿ, ಮರಣಗಳು, ಜನನಾಯಕ ವೃದ್ಧರ ಅವಸಾನ, ಪಶ್ಚಿಮ ದೇಶಗಳಲ್ಲಿ ರೋಗ ಉಪದ್ರವಗಳು ಹೆಚ್ಚಾಗುತ್ತವೆ.

ರವಿ ಗುರುಗಳ ಬಲವೃದ್ಧಿಯಿದ್ದು, ಭಾರತಕ್ಕೆ ೨೦೨೨ ಶುಭದಾಯಕ ಆಗಲಿದೆ. ಕೊರೋನಾ ಮಹಾಮಾರಿಯಿಂದ ಕಂಗೆಟ್ಟ ವ್ಯಾಪಾರ ವ್ಯವಹಾರಗಳು ಪುನಃ ಕೈಗೂಡಲಿವೆ. ದೇವಸ್ಥಾನ, ಧರ್ಮಸ್ಥಾನಗಳ ಅಭಿವೃದ್ಧಿ, ಪ್ರಾಚೀನ ಉತ್ಖನನ ಕಾರ್ಯ, ಸಂಪತ್ತು ದೊರೆಯುವುದು. ರಾಜ- ಸೈನ್ಯ- ರೈತಾಪಿಗಳಿಗೆ ಅನುಕೂಲಕರವಾಗಲಿದೆ. ಪರಸ್ಪರರಲ್ಲಿ ಕೊಡುಕೊಳ್ಳುವಿಕೆಯ ಭಾವ ಬೆಳೆಯಲಿದೆ. ಕರ್ನಾಟಕ ಸರ್ಕಾರದಲ್ಲಿ ಪುನಃ ನಾಯಕತ್ವ ಬದಲಾವಣೆ ಆಗುವುದು. ಜಲ, ಸಮುದ್ರ, ಪರ್ವತಗಳ ಮೂಲದ ನಾಯಕರು ಅಧಿಕಾರಕ್ಕೆ ಪ್ರವರ್ಧಮಾನರಾಗುವರು. ವ್ಯವಹಾರಗಳು ಉತ್ತಮಗೊಂಡರೂ ಹಣಕಾಸಿನ ಬಿಕ್ಕಟ್ಟು ಯುಗಾದಿಯ ನಂತರವೇ ಕಡಿಮೆಯಾಗುವುದು.
ಶ್ರೀ ನಂಜುಂಡೇಶ್ವರ ಕ್ಷೇತ್ರ ಅಭಿವೃದ್ಧಿ, ಯಜ್ಞ-ಯಾಗಗಳಿಂದ ರಾಜ್ಯಕ್ಕೆ ಶುಭವಾಗಲಿದೆ. ಆಡಳಿತಾರೂಢ ಸರ್ಕಾರಕ್ಕೆ ದೋಷಹರಣವಾಗಲಿದೆ.
ಶುಭ ದಿಕ್ಕು- ಉತ್ತರ
ಶುಭ ವಾರ- ಗುರುವಾರ
ಶುಭ ಬಣ್ಣ- ಶ್ವೇತ

Nostradamus 2022 Prediction: ವಿಶ್ವನಾಯಕರ ಸಾವು, ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ!

ಮೇಷ(Aries)
ಹೊಸತನ, ಹೊಸ ಹುರುಪು

ಉತ್ತರಾಯಣದ ಪರ್ವಮಾಸ ಹೊಸತನ, ಹೊಸ ಹುರುಪು ಮೂಡಿಸುವುದು. ರೋಗಗಳು ನಿವಾರಣೆಯಾಗಿ ವ್ಯವಹಾರ ಚಟುವಟಿಕೆ ಲಾಭದಾಯಕವಾಗುವುದು. ಕುಟುಂಬದ ಹಿರಿಯರಲ್ಲಿ ಮನಸ್ತಾಪ ಉಂಟಾಗುವುದು. ಅದನ್ನು ಸಾವಾಧಾನವಾಗಿ ಶಾಂತ ಮಾಡುವತ್ತ ನಿಮ್ಮ ನಡೆಯಿರಲಿ. ವಿದ್ಯಾರ್ಥಿಗಳು, ಬೋಧಕರು, ವೈದ್ಯಕೀಯ ರಂಗದವರಿಗೆ ಪ್ರಗತಿಯಾಗುವುದು. ಶ್ರೀ ಆಂಜನೇಯ ಸೀತಾರಾಮರ ಪೂಜಿಸಿ.
ಶುಭವಾರ: ಗುರುವಾರ

ವೃಷಭ(Taurus)
ಶುಭಕಾರ‌್ಯಗಳಿಂದ ಲಾಭ

ವರ್ಷದ ಆರಂಭ ಮತ್ತು ನಂತರವೂ ಗುರುಬಲವಿದ್ದು ಶುಭಕಾರ್ಯಗಳು ಲಾಭಗಳನ್ನು ತರುತ್ತವೆ. ದಾಂಪತ್ಯದಲ್ಲಿ, ಮನೆಯ ಹಿರಿಯರೊಂದಿಗೆ ವೈಮನಸ್ಯ ತಲೆದೋರಿ ಅದು ವಿಕೋಪಕ್ಕೆ ಹೋಗುವ ಅಪಾಯವಿದೆ. ಹಾಗಾಗಿ ಸುಧಾರಿಸಿಕೊಂಡು ನಡೆಯಿರಿ. ಗುರು ನೀಡುವ ಒಳ್ಳೆ ಫಲಗಳನ್ನು ಅವಿವೇಕದ ನಡೆಗಳು ಹಾಳು ಮಾಡಬಾರದು. ಜಾಗೃತರಾಗಿರಿ. ಕುಲದೇವರ ಪೂಜೆ ಮತ್ತು ಹಿರಿಯರ ಶ್ರಾದ್ಧಗಳನ್ನು ತಪ್ಪದೇ ಮಾಡಿ.
ಶುಭವಾರ: ಗುರುವಾರ ಮತ್ತು ಶುಕ್ರವಾರ

ಮಿಥುನ(Gemini)
ಶ್ರಮ ಹೆಚ್ಚು, ಫಲ ಕಮ್ಮಿ

ಹೆಚ್ಚು ಶ್ರಮ, ಕಡಿಮೆ ಫಲದಂತೆ ಇಡೀ ವರ್ಷ ಸಾಗುವುದು. ಏಪ್ರಿಲ್ ನಂತರ ಈ ಪರಿಸ್ಥಿತಿ ಉತ್ತಮಗೊಳ್ಳುವುದು. ವಿವಾಹ ಸಂಬಂಧಗಳು ಕೂಡುವುದು. ಶುಭಕಾರ್ಯಗಳು ನಡೆಯುವುದು. ವಾತದೋಷವಿರುವವರು ನಿಧಾನವಾಗಿ ಆರೋಗ್ಯದೆಡೆ ಸಾಗುವಿರಿ. ವಿಶೇಷವಾಗಿ ವೃದ್ಧರು ಶ್ರೀನಿವಾಸ ದೇವರ ದರ್ಶನ, ಸಹಸ್ರನಾಮ ಪೂಜೆಗಳನ್ನು ಮಾಡಿ.
ಶುಭವಾರ: ರವಿವಾರ

Varshada Bhavishya 2022: ಯಾರಿಗಿದೆ ದೋಷ, ಯಾವ ಪೂಜೆ ಮಾಡಿದರೊಳಿತು?

ಕಟಕ(Cancer)
ವಾತದೋಷ ಬಗ್ಗೆ ಎಚ್ಚರ

ಅಧಿಕಾರಿಗಳು ಮತ್ತು ರಾಜಕೀಯ ವರ್ಗದವರು ಹೆಚ್ಚು ಉತ್ಸಾಹ, ಪ್ರಾಮುಖ್ಯತೆ ಪಡೆಯುವರು. ವರ್ಷಾರಂಭದಲ್ಲಿ ಶುಭಕಾರ್ಯಗಳಿಗೆ ತಡೆ, ಹಿನ್ನಡೆಯಾಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ಬೇಕು, ಮನೋಗೊಂದಲ ನಿವಾರಿಸಿಕೊಂಡು ಅಧ್ಯಯನ ಮಾಡಬೇಕು. ಸಂಚಾರ, ಪಾನೀಯ, ವಾತದೋಷ ಬಂದೀತು ಜಾಗ್ರತೆ. ಶ್ರೀದುರ್ಗಾ ಪೂಜೆ ಮಾಡಿ.
ಶುಭವಾರ: ಮಂಗಳವಾರ

ಸಿಂಹ(Leo)
ಆರೋಗ್ಯ ಸುಧಾರಣೆ
ರವಿ-ಗುರುಗಳ ಅನುಕೂಲದಿಂದ ಶುರುವಾದ ಹೊಸ ವರ್ಷ ನಿಮ್ಮದು. ಆರೋಗ್ಯ ಉತ್ತಮಗೊಳ್ಳುವುದು. ಕೆಲಸ, ಕಾರ್ಯ, ಪ್ರವಾಸ, ಸಂಚಾರ ಹೆಚ್ಚಾಗುವುದು. ಮಾನಸಿಕ ಗೊಂದಲಗಳು ಪರಿಹಾರವಾಗುವುದು. ಬಂಧುಮಿತ್ರರ ಜೊತೆಗೆ ಮೈತ್ರಿಕೂಟಗಳಲ್ಲಿ ಬೆರೆಯುವಿರಿ. ಶ್ರೀ ಸುಬ್ರಹ್ಮಣ್ಯ ದರ್ಶನ, ನಾಗಶಾಂತಿ ಪೂಜೆಗಳನ್ನು ಮಾಡಿಸಿ.
ಶುಭವಾರ: ಗುರುವಾರ

ಕನ್ಯಾ(Virgo)
ಹೊಸ ಕೆಲಸ, ಬಡ್ತಿ ಭಾಗ್ಯ

ಶುಭಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವುದು. ಹೊಸ ಕೆಲಸ, ಬಡ್ತಿಗೆ ರವಿ, ಗುರುಗಳು ದುಡಿದರೆ, ಶನಿಯು ನಾನಾ ಅವಕಾಶಗಳನ್ನು ತೆರೆವನು. ಸಾವಾಧಾನವಾಗಿ ಪರಿಸ್ಥಿತಿಯನ್ನು ಅವಲೋಕಿಸಿ, ಹಿರಿಯರಲ್ಲಿ ವಿಚಾರ ಮಾಡುತ್ತಾ ಮುಂದುವರೆಯಿರಿ. ಗುರುರಾಯರ ಸೇವೆ ಮಾಡಿ.
ಶುಭವಾರ: ಬುಧವಾರ

ತುಲಾ(Libra)
ಭೂಮಿ ಲಾಭ, ವಿವಾಹ

ಭೂ ಸಂಬಂಧಿ, ವಿವಾಹ, ಶುಭಕಾರ್ಯ ಮಾತುಕತೆ ನಡೆಯುವುದು. ಹಿರಿಯರ ಆಸ್ತಿವಿಚಾರದಲ್ಲಿನ ತೊಂದರೆ ಪರಿಹಾರವಾಗುವುದು. ಶೃಂಗೇರಿ ಅಮ್ಮನವರ ದರ್ಶನ ಮಾಡಿ.
ಶುಭವಾರ: ಶನಿವಾರ

ಯಾವ ರಾಶಿಯ ಅವಿವಾಹಿತರಿಗೆ 2022ರಲ್ಲಿ Life Partner ಸಿಗ್ತಾರೆ?

ವೃಶ್ಚಿಕ(Scorpio)
ರಾಜಕಾರಣಿಗಳಿಗೆ ಉತ್ಸಾಹ

ನಿಮಗೆ ಹೊಸ ವರ್ಷ ರಾಜಯೋಗಗಳಿಂದ ಕೂಡಿರಲಿದೆ. ಕುಜನು ಯಾರಿಗೆಲ್ಲಾ ಬಲಿಷ್ಠನಾಗಿರುವನೋ ಅವರಿಗೆಲ್ಲಾಇದು ಅನ್ವಯ. ರಾಜರಿಗೆ ರಣರಂಗದ ಉತ್ಸಾಹ, ಶತ್ರುದಮನ, ಅಹಂಕಾರ ಊರ್ಜೆ ಪಡೆದು ವಿಖ್ಯಾತರಾಗುವರು. ನಾನಾ ಪ್ರಕಾರದ ವ್ಯಾವಹಾರಿಕ ಏಳಿಗೆಯ ವರ್ಷವಿದು. ಶ್ರೀ ಚಂಡಿಕಾ ಪಾರಾಯಣ ಗುರುಜನ ಸೇವಾದಿಗಳನ್ನು ನಡೆಸಿ.
ಶುಭವಾರ: ಗುರುವಾರ

ಧನು(Saggitarius)
ಹೂಡಿಕೆಯಲ್ಲಿ ಏಳ್ಗೆ

ವರ್ಷದ ಆರಂಭದಲ್ಲಿ ರಾಶಿಗತ ರವಿಯೋಗ ದೈವಾನುಗ್ರಹಕ್ಕೆ ಕಾರಣವಾಗುವುದು. ತಂತ್ರಜ್ಞರು, ಆರ್ಥಿಕ ತಜ್ಞರು, ಹೂಡಿಕೆಯ ಉದ್ದಿಮೆ ಅನೇಕ ತೀವ್ರ ಬೆಳವಣಿಗೆಗೆ ಕಾರಣವಾಗುವುದು. ಧರ್ಮಕಾರ್ಯಾಸಕ್ತಿ ಬೆಳೆಯುವುದು. ನಿಮಗಿಂತ ಕೆಳಗಿನವರಲ್ಲಿ ಸೌಜನ್ಯ, ತಾಳ್ಮೆಯಿರಲಿ. ಗುರೂಪದೇಶ ಆಶೀರ್ವಾದ ಪಡೆಯಿರಿ.
ಶುಭವಾರ: ಬುಧವಾರ

ಮಕರ(Capricorn)
ಎಲ್ಲಾ ಚಿಂತೆಗಳಿಂದ ಮುಕ್ತ

ಎಲ್ಲಾ ಚಿಂತೆಗಳಿಂದ ದೂರವಾಗುವಿರಿ. ಉಪದ್ರವಗಳು ಕಳೆದು ಹೊಸತನಕೆ ವರ್ಷ ತೆರೆಯುವುದು. ಜನ್ಮ ಶನಿ ಜಾತಕದಲ್ಲೂ ಬಾಧೆಯಿದ್ದರೆ ಮಾತ್ರ ಸಾಡೇ ಸಾತಿ ತೊಂದರೆ. ಉತ್ತಮ ಗುರುಬಲವಿದೆ. ಶ್ರೀ ನರಸಿಂಹ ದೇವರ ದರ್ಶನ, ಹೋಮಾದಿಗಳನ್ನು ನಡೆಸಿರಿ.
ಶುಭವಾರ: ಗುರುವಾರ

ಕುಂಭ(aquarius)
ಮನಸ್ಸಿನ ಬಗ್ಗೆ ಎಚ್ಚರ
ದೇವರ ನಾಮ ಜಪ, ವ್ಯಾಯಾಮ, ಸಕಾಲಕ್ಕೆ ಆಹಾರ ಸೇವಿಸಿ ಸಮಾಧಾನ ತಂದುಕೊಳ್ಳಿ. ಯುಗಾದಿಯ ನಂತರ ಏಳಿಗೆ ಪಡೆಯುವಿರಿ. ಶ್ರೀರಂಗನಾಥ ಸ್ವಾಮಿಯ ದರ್ಶನ ಮಾಡಿ.
ಶುಭವಾರ: ಭಾನುವಾರ

ಮೀನ(pieces)
ಅನಿರೀಕ್ಷಿತ ಬೆಳವಣಿಗೆ
ದಶಮ ಏಕಾದಶದಲ್ಲಿ ಎಲ್ಲಾ ಗ್ರಹಗಳೂ ಸೇರುವ ವರ್ಷ ೨೦೨೨ನೇ ಇಸ್ವಿ. ಅನೂಹ್ಯ ಕರ್ಮಗಳು ಜರುಗುವುದು. ಶುಭ ಅಶುಭಗಳನ್ನು ಸಮಾಧಾನದಿಂದ ನೋಡುವ ಪ್ರಯಾಸ ಮಾಡಬೇಕಾಗುವುದು. ವ್ಯವಹಾರ ಉತ್ತಮ, ಹಣಕಾಸು ಸಮಾಧಾನಕರ, ವಿದ್ಯಾರ್ಥಿಗಳಿಗೆ ಅನುಕೂಲಕರ ವರ್ಷಾರಂಭ, ಶ್ರೀದುರ್ಗಾ ಪೂಜೆಯನ್ನು ಮಾಡುವುದನ್ನು ಮರೆಯಬೇಡಿ. 
ಶುಭವಾರ: ಸೋಮವಾರ

ದೈವಜ್ಞ ಡಾ. ಹರೀಶ್ ಕಾಶ್ಯಪ

Follow Us:
Download App:
  • android
  • ios