ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 11 ಯುವಕ ಯುವತಿಯರು ಜೈನ ದೀಕ್ಷೆ ಪಡೆಯುತ್ತಿದ್ದಾರೆ

ವರದಿ‌: ರಕ್ಷಾ ಕಟ್ಟೆಬೆಳಗುಳಿ, ಬೆಂಗಳೂರು 

ಬೆಂಗಳೂರು (ಮೇ 23): ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 11 ಯುವಕ ಯುವತಿಯರು ಜೈನ ದೀಕ್ಷೆ (Jain Diksha) ಪಡೆಯುತ್ತಿದ್ದಾರೆ. ಮೂರು ಜನ ಯುವತಿಯರು ಹಾಗೂ ಒಂಬತ್ತು ಯುವಕರು ಜೈನ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ಇದೇ 25ರಂದು ಆರ್ಚಾಯ ಶ್ರೀ ನರರತ್ನ ಸೂರಿಜಿ ಮಹಾರಾಜ್ (Suri Maharaj) ಅವರ ನೇತೃತ್ವದಲ್ಲಿ ದೀಕ್ಷೆ ಪಡೆಯಲಿದ್ದಾರೆ. ದೀಕ್ಷೆ ಸ್ವೀಕರಿಸುತ್ತಿರುವವರನ್ನು ಸೋಮವಾರ ಬೆಂಗಳೂರು ಜೈನ್ಸ್ ಸಂಘಟನೆಯು ಸನ್ಮಾನಿಸಿ, ಶುಭ ಹಾರೈಸಿತು. ಶುಭಹಾರೈಕೆಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಸಂಸದ ಪಿ.ಸಿ‌ ಮೋಹನ್ , ಶಾಸಕ ಉದಯ್ ಗರುಡಾಚಾರ್ ಭಾಗಿಯಾದರು.

ಉತ್ತರ ಭಾರತದಲ್ಲಿ ಜೈನ ಮುನಿಗಳ ದೀಕ್ಷೆ ತೆಗೆದುಕೊಳ್ತಾ ಇರುತ್ತಾರೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಭಾರಿಗೆ 11 ಜನ ಯುವಕ ಯುವತಿಯರು ದೀಕ್ಷೆ ಪಡೆಯುತ್ತಿದ್ದಾರೆ. ಇವರೆಲ್ಲರೂ 2 ವರ್ಷದಿಂದ ಜೈನ ಧರ್ಮದ ಆಚಾರ ವಿಚಾರಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಎಲ್ಲರು ಸ್ಥಿತಿವಂತ ಕುಟುಂಬದವರು. ತಮ್ಮ ಆಸ್ತಿ ಪಾಸ್ತಿ ಕುಟುಂಬ ಆಸೆಗಳನ್ನು ತೊರೆದು ದೀಕ್ಷೆ ಪಡೆಯುತ್ತಿದ್ದಾರೆ ಎಂದು ಬೆಂಗಳೂರು ಜೈನ್ಸ್ ಸಂಘಟನೆ ಅಧ್ಯಕ್ಷ ಪ್ರಕಾಶ್ ಹೇಳಿದರು.

"

ಯಾರ ಒತ್ತಡವು ಇಲ್ಲದೇ ಮನೆಯವರ ಒಪ್ಪಿಗೆ ನಂತರ ದೀಕ್ಷೆ ನೀಡಲಾಗುತ್ತಿದೆ. ದೀಕ್ಷೆ ನಂತರ ಇವರ ದಿನಚರಿ , ಜೀವನ ಕ್ರಮ ಎಲ್ಲವು ಬದಲಾಗುತ್ತದೆ. ಎಲ್ಲ ಆಸೆಗಳನ್ನು ತೊರೆದು ಬಿಳಿ ಬಟ್ಟೆ ತೊಟ್ಟು ಬರಿಕಾಲಿನಲ್ಲಿ ಜೀವನ ನಡೆಸುತ್ತಾರೆ. ಕಠಿಣ ಕ್ರಮಗಳನ್ನು ಜೀವನ ಪೂರ್ತಿ ಅನುಸರಿಸುತ್ತ ದೇವರಿಗೆ ಹತ್ತಿರವಾಗಿ ಬದುಕುತ್ತಾರೆ ಎಂದು ಪ್ರಕಾಶ್ ವಿವರಿಸಿದರು.

25 ವರ್ಷದ ಯುವತಿಗೆ ದೀಕ್ಷೆ: ಬಿಎಸ್ ಸಿ ಕಂಪ್ಲೀಟ್ ಮಾಡಿದ್ದೀನಿ. ಗುರುಗಳ ಬಳಿ ಎರಡು ವರ್ಷದಿಂದ ಧರ್ಮದ (Religion) ಬಗ್ಗೆ, ಧರ್ಮ‌ಪಾಲನೆಯ ಬಗ್ಗೆ ತಿಳಿದುಕೊಂಡಿದ್ದೇನೆ‌. ನಮ್ಮ ಮನೆಯಲ್ಲಿ ಈಗಾಗ್ಲೆ ನನ್ನ ತಂಗಿ ದೀಕ್ಷೆ ಪಡೆದಿದ್ದಾಳೆ. ಆಕೆ ದೀಕ್ಷೆ ಪಡೆದ ನಂತರ ನಮ್ಮೆಲ್ಲರಿಗಿಂತಲೂ ಬಹಳ ಸಂತೋಷವಾಗಿದ್ದಾಳೆ. ಹಾಗಾಗಿ ನಾನು ಸಹ ದೀಕ್ಷೆ ಪಡೆಯುತ್ತಿದ್ದೇನೆ ಎಂದು ಬಿಹಾರ ಮೂಲದ 25 ವರ್ಷದ ಯುವತಿ ಹೇಳಿದರು.

ಇದನ್ನೂ ಓದಿ:ಸ್ವ ಅರಿವೇ ಮೋಕ್ಷಕ್ಕೆ ದಾರಿ ಎಂದ ಮಹಾವೀರ

ಫ್ಯಾಷನ್ ಡಿಸೈನರ್ ಗೂ ದೀಕ್ಷೆ: ನಾನು ಫ್ಯಾಷನ್ ಡಿಸೈನರ್ ಕೋರ್ಸ್ ಮುಗಿಸಿದ್ದೇನೆ. ನನ್ನ ಸ್ನೇಹಿತೆಯ ಮನೆಯಲ್ಲಿ ನಡೆದ ಕೆಟ್ಟ ಘಟನೆಗಳಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಆಕೆ ಬ್ರೈನ್ ಟ್ಯೂಮರ್ ನಿಂದ ನನ್ನೆದುರಿನಲ್ಲೆ ಮರಣ ಹೊಂದಿದಳು.

ಯಾವುದು ಶಾಶ್ವತವಲ್ಲ ಇರುವಷ್ಟು ದಿನ ದೇವರ ಆರಾಧನೆಯಲ್ಲಿದ್ದು ಯಾರಿಗೂ ಹಾನಿ ಮಾಡದಂತೆ ಬದುಕಲು ಇಚ್ಚಿಸುತ್ತೇನೆ. ಹಾಗಾಗಿ ಜೈನ (Jain) ಮುನಿಗಳ ಆರ್ಶೀವಾದದಲ್ಲಿ ದೀಕ್ಷೆ ಪಡೆಯುತ್ತಿದ್ದೇನೆ ಎಂದು 25 ವರ್ಷದ ಸಾಥ್ವಿಕ ಹೇಳಿದರು.

ಇದನ್ನೂ ಓದಿ: ಜೈನ, ಶೈವರ ಜನಪ್ರಿಯ ದೇಗುಲ ಧರ್ಮಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?