ಗೀತಾ ಜಯಂತಿಯಂದು 1 ಲಕ್ಷ ಗೀತಾ ಪ್ರೇಮಿಗಳಿಂದ ನಿರಂತರ 42 ಗಂಟೆ ಅಖಂಡ ಗೀತಾ ಪಾರಾಯಣ
1986ರಲ್ಲಿ ಸ್ಥಾಪನೆಯಾದ ಗೀತಾ ಪರಿವಾರವು ಲರ್ನ್‌ಗೀತಾ ಉಪಕ್ರಮದ ಅಡಿಯಲ್ಲಿ ಪ್ರಸ್ತುತ ವಿಶ್ವದ ಅತಿದೊಡ್ಡ ಗೀತಾ ತರಗತಿಯನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸುತ್ತಿದೆ.
ಬೆಂಗಳೂರು(ಡಿ.21): ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಗೀತಾ ಜಯಂತಿಯಂದು ಅಭೂತಪೂರ್ವ ಅದ್ಭುತ ಘಟನೆಯೊಂದು ಸಂಭವಿಸಲಿದೆ. ಗೀತಾ ಪರಿವಾರದ ಆಶ್ರಯದಲ್ಲಿ ಜಗತ್ತಿನ 180 ದೇಶಗಳ ಒಂದು ಲಕ್ಷ ಗೀತಾಭಕ್ತರು ನಿರಂತರವಾಗಿ 42 ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಅಖಂಡ ಅಷ್ಟಾದಶ ಗೀತಾ ಪಾರಾಯಣ ಮಾಡಲಿದ್ದು, ಸಂಪೂರ್ಣ ಶ್ರೀಮದ್ಭಗವದ್ಗೀತೆಯ 18 ಅಧ್ಯಾಯಗಳನ್ನು 18 ಬಾರಿ ಶುದ್ಧ ಸಂಸ್ಕೃತದಲ್ಲಿ ಪಾರಾಯಣ ಮಾಡಲಾಗುತ್ತದೆ.
ಶ್ರೀಮದ್ಭಗವದ್ಗೀತೆಯು 5160 ವರ್ಷಗಳ ಹಿಂದೆ ಮೋಕ್ಷದಾ ಏಕಾದಶಿಯ ದಿನದಂದು ಕೃಷ್ಣಾರ್ಜುನ ಸಂವಾದ ರೂಪದಲ್ಲಿ ಉದ್ಭವವಾಯಿತು. ಈ ವರ್ಷ ಮೋಕ್ಷದಾ ಏಕಾದಶಿ ಡಿ. 22-23 ರಂದು ಬಂದಿದೆ. ಈ ಶುಭ ಸಂದರ್ಭದಲ್ಲಿ, ಡಿ. 23ರ ಶನಿವಾರ, ಬೆಳಗ್ಗೆ 6 ಗಂಟೆಯಿಂದ ಭಾನುವಾರ, ಡಿ. 24, ಮಧ್ಯರಾತ್ರಿ 12 ಗಂಟೆಯವರೆಗೆ, ಗೀತಾ ಪರಿವಾರವು ಗೀತೆಯ ಸಂಪೂರ್ಣ 18 ಅಧ್ಯಾಯಗಳ ಅಖಂಡ ಪಾರಾಯಣವನ್ನು ಆನ್‌ಲೈನ್‌ನಲ್ಲಿ ಜೂಮ್ ಅಪ್ಲಿಕೇಶನ್‌ನಲ್ಲಿ 18 ಬಾರಿ, 180 ದೇಶಗಳ ಹಿಂದಿ, ಇಂಗ್ಲಿಷ್, ಮರಾಠಿ, ಗುಜರಾತಿ, ಬಂಗಾಳಿ, ಕನ್ನಡ, ತಮಿಳು, ತೆಲುಗು, ಒರಿಯಾ, ನೇಪಾಳಿ, ಅಸ್ಸಾಮಿ, ಮಲಯಾಳಂ, ಸಿಂಧಿ ಭಾಷೆಗಳ 1 ಲಕ್ಷಕ್ಕೂ ಹೆಚ್ಚು ಗೀತಾ ಪ್ರೇಮಿಗಳು ಮಾಡುತ್ತಾರೆ.
ಮಂತ್ರಾಲಯದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ
Learngeeta.com ಹಾಗೂ ಗೀತಾ ಪರಿವಾರದ ಯೂಟ್ಯೂಬ್ ಚಾನೆಲ್ ಮೂಲಕ ಭಕ್ತರು ತಮಗೆ ಅನುಕೂಲವಾದ ಸಮಯದಲ್ಲಿ ಅವರ ಸ್ಥಳದಿಂದಲೇ ಈ ಪಾರಾಯಣದೊಂದಿಗೆ ನೇರ ಸಂಪರ್ಕ ಪಡೆಯಬಹುದು.
ಶ್ರೀರಾಮಮಂದಿರ ಜನ್ಮಭೂಮಿ ಟ್ರಸ್ಟ್‌ನ ಖಜಾಂಚಿ ಹಾಗೂ ಗೀತಾ ಪರಿವಾರದ ಸಂಸ್ಥಾಪಕ ಪ. ಪೂ. ಸ್ವಾಮೀ ಶ್ರೀ ಗೋವಿಂದದೇವ ಗಿರಿ ಜೀ ಮಹಾರಾಜರವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. 1986ರಲ್ಲಿ ಸ್ಥಾಪನೆಯಾದ ಗೀತಾ ಪರಿವಾರವು ಲರ್ನ್‌ಗೀತಾ ಉಪಕ್ರಮದ ಅಡಿಯಲ್ಲಿ ಪ್ರಸ್ತುತ ವಿಶ್ವದ ಅತಿದೊಡ್ಡ ಗೀತಾ ತರಗತಿಯನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸುತ್ತಿದೆ. ಇದರಲ್ಲಿ ಹಿಂದಿ, ಇಂಗ್ಲಿಷ್, ಮರಾಠಿ, ಗುಜರಾತಿ, ಬಂಗಾಳಿ, ಕನ್ನಡ, ತಮಿಳು, ತೆಲುಗು, ಒಡಿಯಾ, ನೇಪಾಳಿ, ಅಸ್ಸಾಮಿ, ಮಲಯಾಳಂ, ಸಿಂಧಿ ಮುಂತಾದ 13 ಭಾಷೆಗಳಲ್ಲಿ 8 ಲಕ್ಷಕ್ಕೂ ಅಧಿಕ ಜನರು ಆನ್‌ಲೈನ್ ನಲ್ಲಿ ಜೂಮ್ ಮೂಲಕ ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗಿನ 19 ವಿವಿಧ ಸಮಯದಲ್ಲಿನ ತರಗತಿಗಳಲ್ಲಿ ಗೀತೆಯನ್ನು ಉಚಿತವಾಗಿ ಕಲಿಯುತ್ತಿರುವರು. 8000 ನಿಸ್ವಾರ್ಥ ಗೀತಾ ಸೇವಿಗಳಿಂದ ಪ್ರತಿದಿನ 2000 ಕ್ಕೂ ಹೆಚ್ಚು ಜೂಮ್ ತರಗತಿಗಳನ್ನು ನಡೆಸಲಾಗುತ್ತಿದೆ.
2020ರಲ್ಲಿ ಪ್ರಾರಂಭವಾದ ಲರ್ನ್ ಗೀತಾ ಉಪಕ್ರಮದಲ್ಲಿ, 3 ವರ್ಷಗಳಿಂದ 93 ವರ್ಷದವರೆಗಿನ ವಯಸ್ಸಿನ ಸಾವಿರಾರು ಜನರು ಕೇವಲ ಮೂರು ವರ್ಷಗಳಲ್ಲಿ ಸಂಪೂರ್ಣ ಗೀತೆಯನ್ನು ಕಂಠಪಾಠ ಮಾಡಿದ್ದಾರೆ. ಆಸಕ್ತರು Learngeeta ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡು ಅವರ ಗೀತಾ ಪ್ರಯಾಣವನ್ನು ಪ್ರಾರಂಭಿಸಬಹುದು. ಈ ಉಪಕ್ರಮದ ವಿಶೇಷತೆಯೆಂದರೆ, ಸಂಸ್ಕೃತದಲ್ಲಿ ಗೀತೆಯ ಶುದ್ಧ ಉಚ್ಚಾರವನ್ನು ತರಬೇತಿ ಪಡೆದ ಬೋಧಕರು ಅತ್ಯಂತ ಸರಳವಾದ ರೀತಿಯಲ್ಲಿ, ಆನ್‌ಲೈನ್‌ನಲ್ಲಿ ಮತ್ತು ಯಾವುದೇ ಶುಲ್ಕವಿಲ್ಲದೆ, ವೈದಿಕ ವಿಧಾನವನ್ನು ಬಳಸಿಕೊಂಡು ಮನೆಯಲ್ಲಿ ಕುಳಿತು ಕಲಿಸುತ್ತಾರೆ.
ಅಮೆರಿಕದಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ; ಗಿನ್ನೆಸ್ ದಾಖಲೆ
ಗೀತೆಯ 18ನೆಯ ಅಧ್ಯಾಯದ 68ನೆಯ ಮತ್ತು 69ನೆಯ ಶ್ಲೋಕಗಳಲ್ಲಿ “ಗೀತೆಯನ್ನು ಓದುವ ಮತ್ತು ಕಲಿಸುವ ಜನರೆಲ್ಲರೂ ನನಗೆ ಬಹಳ ಪ್ರಿಯರಾಗುತ್ತಾರೆ" ಎಂದು ಸ್ವತಃ ಕೃಷ್ಣಪರಮಾತ್ಮನೇ ಹೇಳಿದ್ದಾನೆ. ಗೀತಾ ಜಯಂತಿಯ ಶುಭ ಸಂದರ್ಭದಲ್ಲಿ, ನೀವು ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ Learngeeta.com ಮೂಲಕ ಸೇರಿಕೊಳ್ಳಬಹುದು ಮತ್ತು ಈ ಮಹಾಯಜ್ಞದಲ್ಲಿ ಗೀತೆಯ ಅಧ್ಯಾಯಗಳನ್ನು ಓದುವ ಮೂಲಕ ಅಲೌಕಿಕ ಆನಂದವನ್ನು ಅನುಭವಿಸಬಹುದು. ಪರದೆಯ ಮೇಲೆ ಲಿಖಿತ ರೂಪದಲ್ಲಿ ಶ್ಲೋಕಗಳು ಕಾಣಸಿಗುತ್ತವೆ.
ಆನ್‌ಲೈನ್‌ನ ಹೊರತಾಗಿ, ಭಕ್ತರು ಆಫ್‌ಲೈನ್‌ನಲ್ಲಿ ಕೂಡ ಸೇರಲಿದ್ದಾರೆ ಹಾಗೂ ದೇಶ ವಿದೇಶಗಳಲ್ಲಿ 1000ಕ್ಕೂ ಅಧಿಕ ಸ್ಥಳಗಳಲ್ಲಿ ಗೀತಾ ಪಠಣ ಮಾಡಲಿದ್ದಾರೆ. ನಿಮಗೆ ಹತ್ತಿರವಾದ ಸ್ಥಳದಲ್ಲಿ ನಡೆಯುತ್ತಿರುವ ಗೀತಾ ಪಾರಾಯಣದಲ್ಲಿ ನೀವೂ ಸಹ ಭಾಗವಹಿಸಬಹುದು. ಗೀತಾ ಜಯಂತಿ ಕಾರ್ಯಕ್ರಮದ ಕುರಿತು ಇತರ ಮಾಹಿತಿಯನ್ನು learngeeta.com/geetajayanti ತಾಣಕ್ಕೆ ಭೇಟಿ ನೀಡುವ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆ 1800 203 6500 ಗೆ ಕರೆ ಮಾಡುವ ಮೂಲಕ ಪಡೆಯಬಹುದು.