ಸುಂದರ ತುಟಿಗಳಿಗಾಗಿ ಹಸಿ ಮೆಣಸಿನಕಾಯಿ ಉಜ್ಜಿದ ಯುವತಿ: ಆಮೇಲೇನಾಯ್ತು?
ಸುಂದರವಾದ ದಪ್ಪ ತುಟಿಗಳಿಗಾಗಿ ಇನ್ಫ್ಲುಯೆನ್ಸರ್ ಒಬ್ಬರು ಹಸಿಮೆಣಸಿನಕಾಯಿಯನ್ನು ತುಟಿಗೆ ಉಜ್ಜಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸುಂದರವಾದ ತುಟಿಗಳನ್ನು ಹೊಂದಿರಬೇಕು ಎಂಬುದು ಬಹುತೇಕ ಹೆಂಗೆಳೆಯರ ಆಸೆ. ದಪ್ಪನೆ ತುಟಿ ಹೊಂದಬೇಕೆಂದು ಕೆಲವರು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಇನ್ನು ಕೆಲವರು ಇದಕ್ಕಾಗಿ ಇಂಟರ್ನೆಟ್, ಸೋಶಿಯಲ್ ಮಿಡಿಯಾ ಜಾಲತಾಣಗಳಾದ ಯೂಟ್ಯೂಬ್ ಚಾನೆಲ್‌ಗಳು, ಇನ್ಸ್ಟಗ್ರಾಮ್ ಮುಂತಾದೆಡೆ ಸಿಕ್ಕುವ ಬ್ಯೂಟಿ ಟಿಪ್ಸ್‌ಗಳನ್ನು ಫಾಲೋ ಮಾಡ್ತಾರೆ. ಆದರೆ ಅದು ಎಷ್ಟು ಯಶಸ್ವಿಯಾಗುವುದೋ ತಿಳಿಯದು. ಆದರೆ ಇಲ್ಲೊಬ್ಬಳು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚೆಂದದ ತುಟಿಗಳಿಗಾಗಿ ಯಾರು ಮಾಡದಂತಹ ಸಾಹಸವನ್ನು ಮಾಡಲು ಹೋಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ನೋಡುಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಹಸಿ ಮೆಣಸು, ಅಥವಾ ಕಾಯಿಪಲ್ಲೆ (Green chillis) ಬಹಳ ಖಾರ, ಅಡುಗೆಗೆ ಬೇಕೆಂದು ಅನಿವಾರ್ಯವಾಗಿ ಅದನ್ನು ಕತ್ತರಿಸುವಾಗಲೇ ಕೆಲವೊಮ್ಮೆ ಕೈ ಹೊಗೆಯಲು ಶುರುವಾಗುತ್ತದೆ. ಕಾಯಿ ಮೆಣಸಿನ ರಸ ತಾಗಿದರೆ ದೇಹದ ಯಾವ ಭಾಗವಾದರೂ ಉರಿಯಲಾರಂಭಿಸುತ್ತದೆ. ಹೀಗಿರುವಾದ ದೆಹಲಿ ಮೂಲದ ಬ್ಯೂಟಿ ಇನ್‌ಫ್ಲುಯೆನ್ಸರ್ ಶುಭಾಂಗಿ ಆನಂದ್ ಎಂಬುವವರು ತುಟಿಗಳಿಗೆ ಸುಂದರ ರೂಪ ಕೊಡಲು ಈ ಮೆಣಸಿನ ಕಾಯಿಯ ಬ್ಯೂಟಿ ಟಿಪ್ಸ್ ನೀಡಿ ನೋಡುಗರನ್ನು ಆಕ್ರೋಶಕ್ಕೊಳಗಾಗುವಂತೆ ಮಾಡಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವೀಡಿಯೋದಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶುಭಾಂಗಿ ಆನಂದ್ ಅವರು ಅವರೇ ಸ್ವತಃ ತಮ್ಮ ತುಟಿಗಳಿಗೆ ಹಸಿಮೆಣಸಿನಕಾಯಿಗಳನ್ನು ತುಂಡು ಮಾಡಿ ಹಚ್ಚುತ್ತಾರೆ. ಬಳಿಕ ಇದಾದ ಬಳಿಕ ತುಟಿಗಳಿಗೆ ಹೊಳಪು ಬರುವಂತೆ ಏನೋ ಬಣ್ಣವನ್ನು (glossy layer) ಹಚ್ಚಿದ್ದಾರೆ. ನೈಸರ್ಗಿಕವಾಗಿ ತುಟಿಯನ್ನು ದಪ್ಪಗೊಳಿಸುವಿಕೆ ಎಂದು ಬರೆದು ನೀವು ಇದನ್ನು ಪ್ರಯತ್ನಿಸಲು ಬಯಸುವಿರಾ ಎಂದು ಕೇಳಿ ಶುಭಾಂಗಿ ಆನಂದ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು 21 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಇನ್‌ಫ್ಲುಯೆನ್ಸರ್‌ನ ಹುಚ್ಚುತನಕ್ಕೆ ಬೆರಗಾಗಿದ್ದಾರೆ.
ವೀಡಿಯೋದಲ್ಲಿ ಎರಡು ಹಸಿರು ಮೆಣಸಿಕಾಯಿಯನ್ನು ಹಿಡಿದುಕೊಂಡಿರು ಶುಭಾಂಗಿ ಆನಂದ್ ಅದನ್ನು ಕತ್ತರಿಸಿ ತುಟಿಗೆ ಉಜ್ಜಿಕೊಳ್ಳುತ್ತಾಳೆ. ಮೆಣಸಿನಕಾಯಿ ಉಜ್ಜಿದ್ದರಿಂದ ಆಕೆಗೂ ತುಟಿ ಉರಿಯಲು ಶುರುವಾಗಿದ್ದು, ಡೀಪ್ ಆಗಿ ಉಸಿರು ತೆಗೆದುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಅಪಾಯಕಾರಿ ಬ್ಯೂಟಿ ಹ್ಯಾಕ್ಸ್‌ಗೆ ಜನ ಅಚ್ಚರಿ ವ್ಯಕ್ತಪಡಿಸಿದ್ದು, ಈಗ ನೀವು ಬಿಸಿಲಿಗೆ ಹೋಗಿ ನಂತರ ಹೈಪರ್ಪಿಗ್ಮೆಂಟೇಶನ್ (hyperpigmentation)ಶಾಶ್ವತವಾಗಿ ನಿಮ್ಮದಾಗುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದೊಂದು ಮೂರ್ಖತನದ ನಿರ್ಧಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಂಟೆಂಟ್‌ಗಾಗಿ ಏನು ಬೇಕಾದರು ಮಾಡಲು ಕೆಲವರು ಸಿದ್ಧರಿರುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅತೀ ಸೂಕ್ಷ್ಮವಾದ ಚರ್ಮವನ್ನು ಹೊಂದಿರುವವರು ಈ ಟ್ರಿಕ್ ಪ್ರಯತ್ನಿಸಬೇಡಿ ಇದರಿಂದ ಹಾನಿಯಾಗಲಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮಗೆ ಮೆಣಸು ಹಾಕಿದ ಹಾಗೆ ಆದರೆ ನಾ ಏನು ಮಾಡಲಿ ಎಂಬ ಅರ್ಥ ನೀಡುವ ಹಿಂದಿಯ ಜನಪ್ರಿಯ ಹಾಡಾದ 'ತುಜ್ಕೊ ಮಿರ್ಚಿ ಲಗಿ ತೋ ಮೇ ಕ್ಯಾ ಕರು' ಎಂಬುದನ್ನು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಕಂಟೆಂಟ್‌ಗೋಸ್ಕರ ಜನ ಏನ್ ಬೇಕಾದರೂ ಮಾಡ್ತಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.