ಬಿಲ್ ಪೇ ಮಾಡಲು ಕ್ಯೂಗಾಗಿ ನಿಲ್ಲುವುದು, ತುಂಬಿದ ಬಜಾರ್‌ನಲ್ಲಿ ನುಗ್ಗುತ್ತಾ ಸಾಗಿ  ಶಾಪಿಂಗ್  ಮಾಡುವುದು, ವಸ್ತುಗಳನ್ನು ಹೋಲಿಸುತ್ತಾ ನಿಂತುಕೊಳ್ಳುವುದು- ಇಂಥ ಕಿರಿಕಿರಿಗಳು ಯಾರಿಗೂ ಇಷ್ಟವಾಗುವುದಿಲ್ಲ.  ಆದರೆ, ಶಾಪಿಂಗ್ ಎಂದ ಮೇಲೆ  ಅಲ್ಲಿ ಕೆಲವೊಂದು ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಕೆಲವೊಮ್ಮೆ ದೈನಂದಿನ ಕೆಲಸವೊಂದಕ್ಕೆ ಇಷ್ಟೊಂದು ಪ್ರಯತ್ನ ಹಾಕಬೇಕಾ ಎನಿಸದಿರದು. ಶಾಪಿಂಗ್ ಹೋದಾಗ ಸುಖಾಸುಮ್ಮನೆ ಸಣ್ಣ ಪುಟ್ಟದ್ದಕ್ಕೂ ಸಿಟ್ಟು ಬರಲು ನಮ್ಮ ದೈನಂದಿನ ಬ್ಯುಸಿ ಲೈಫ್ ಕಾರಣವಿರಬಹುದು. ಆದರೆ, ಯಾವುದೋ ಸಿಟ್ಟನ್ನು ಮತ್ತೆಲ್ಲೋ ತೋರುವುದು ಸರಿಯಲ್ಲ. ಪ್ರತಿ ಶಾಪ್‌ನಲ್ಲೂ ಗ್ರಾಹಕರು ಹಾಗೂ ಸ್ಟೋರ್ ಉದ್ಯೋಗಿಗಳು ಇರುತ್ತಾರೆ. ಎಲಲ್ಲರೂ ತಮ್ಮ ಸಮಯ, ಎನರ್ಜಿ ವಿನಿಯೋಗಿಸುತ್ತಿರುತ್ತಾರೆ. ನಿಮ್ಮ ಒಂದು ಸಿಟ್ಟಿನ ಮಾತಿನಿಂದ, ಮುಖಚರ್ಯೆಯಿಂದ  ಎಲ್ಲರ ಮೂಡ್ ಕೆಡಿಸುವುದು ಸರಿಯಲ್ಲ. ಶಾಪಿಂಗ್ ಹೋದಾಗ ಹೇಗಿರಬೇಕು  ಎಂಬುದಿಲ್ಲಿದೆ...

ಕ್ಯೂನಲ್ಲಿ ಕಿರಿಕಿರಿ ಮಾಡಿಕೊಳ್ಳಬೇಡಿ

ಕ್ಯೂನಲ್ಲಿ ನಿಲ್ಲುವುದು ಯಾರಿಗೂ ಇಷ್ಟವಲ್ಲ. ಆದರೆ, ಅದನ್ನು ಎಲ್ಲ ಸಂದರ್ಭಗಳಲ್ಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕ್ಯೂನಲ್ಲಿ ನಿಂತಾಗ ಮುಂದೆ ನಿಂತವರಿಗೆ ಬಯ್ಯುವುದು, ಗೊಣಗಿಕೊಳ್ಳುವುದು, ತಳ್ಳುವುದು, ಮಧ್ಯೆ ನುಗ್ಗುವುದು ಇತ್ಯಾದಿ ಅಭ್ಯಾಸಗಳು ದುರ್ಬುದ್ಧಿ ಎನಿಸಿಕೊಳ್ಳುತ್ತವೆ. ಕ್ಯೂನಲ್ಲಿ ಸರಿಯಾದ ಆರ್ಡರ್‌ನಲ್ಲಿ ನಿಂತುಕೊಳ್ಳಿ. ಯಾರ ಮೇಲೂ ಕೋಪ ತೋರದೆ, ಹಿಂದೆ ಮುಂದೆ ನಿಂತವರೊಡನೆ ಪ್ರಸಕ್ತ ಸುದ್ದಿಗಳನ್ನು ಚರ್ಚಿಸುತ್ತಾ, ಇತರೆ ಲೋಕಾಭಿರಾಮ ಮಾತಾಡುತ್ತಾ ಸಮಯ ಕಳೆಯುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಇದ್ದೇ ಇದೆಯಲ್ಲ ಫೋನ್- ಬಿಲ್ ಕಟ್ಟುವುದು, ಯಾವುದೋ ಮೂವಿ ಬುಕ್ ಮಾಡುವುದು,  ಲೇಖನ ಓದುವುದು ಇತರೆ ಹಲವು ಕೆಲಸಗಳನ್ನು ಮಾಡುತ್ತಾ ಸಮಯ ಸದುಪಯೋಗ ಮಾಡಿಕೊಳ್ಳಿ.

ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ!...

ಪಟ್ಟಿ ಮಾಡಿಕೊಂಡು ಹೋಗಿ

ಶಾಪಿಂಗ್‌ಗೆ ಹೋದಾಗ ಕಂಡಕಂಡಿದ್ದೆಲ್ಲ ಮನೆಗೆ ತಂದು, ನಂತರ ಇದು ಅನಗತ್ಯ ಖರ್ಚೆಂದು ಕೊರಗುವವರು ಹಲವರು. ಹಾಗಾಗಿ, ಹೋಗುವ ಮುನ್ನವೇ ಬೇಕಾದ ವಸ್ತುಗಳ ಪಟ್ಟಿ ಮಾಡಿಟ್ಟುಕೊಂಡು ಹೋದರೆ ಎಷ್ಟು ಬೇಕೋ ಅಷ್ಟೇ ಶಾಪಿಂಗ್ ಮಾಡುತ್ತೀರಿ. ಹಣದ ಜೊತೆ ಸಮಯವೂ ಉಳಿಯುತ್ತದೆ. ಅಂಗಡಿಯವರಿಗೂ ಸುಲಭವಾಗುತ್ತದೆ. 

ನಿಮ್ಮ ಹಣ ಅಥವಾ ಕಾರ್ಡ್ ಮರೆಯುವುದು

ಹಣವನ್ನು ಮರೆತು ಮನೆಯಲ್ಲೇ ಬಿಟ್ಟು ಹೋಗುವುದರಿಂದ ಅವಮಾನವಾಗುವುದಷ್ಟೇ ಅಲ್ಲ, ವಿನಾಕಾರಣ ಕ್ಯೂನಲ್ಲಿ ನಿಂತು ಸಮಯ ಹಾಳು ಮಾಡಿಕೊಂಡಂತಾಗುತ್ತದೆ. ಎಲ್ಲಿಯೇ ಹೊರಗೆ ಹೋಗುವುದಾದರೂ ಹಣ ಹಾಗೂ ಕಾರ್ಡ್ ಇರುವ ವ್ಯಾಲೆಟ್ ಜೊತೆಯಲ್ಲಿಟ್ಟುಕೊಳ್ಳುವುದು ಉತ್ತಮ ಅಭ್ಯಾಸ.

ಜನರಿಗೆ ಸಿಡುಕಬೇಡಿ

ಯಾವುದೇ ಕಾರಣಕ್ಕೂ ಶಾಪ್‌ನಲ್ಲಿರುವ ಯಾರ ಮೇಲೂ ಸಿಡುಕಿ, ಸಿಡುಕುಮೂತಿ ಸಿಂಗಾರಪ್ಪ ಎನಿಸಿಕೊಳ್ಳಬೇಡಿ. ದೂರಿದ್ದರೆ ಆ ಬಗ್ಗೆ ಕಂಪ್ಲೆಂಟ್ ಬರೆದು ಸಜೆಶನ್ ಬಾಕ್ಸ್‌ನಲ್ಲಿ ಹಾಕಿ. ಇಲ್ಲವೇ ಸಂಬಂಧಪಟ್ಟವರಿಗೆ ನಿಧಾನ ಮಾತಿನಲ್ಲಿ ನಿಮ್ಮ ದೂರನ್ನು ತಿಳಿಸಿ. ಸಹಾಯ ಬೇಕಿದ್ದರೆ ವಿನಯದಿಂದ ಕೇಳಿ. ಇತರೆ ಗ್ರಾಹಕರೊಂದಿಗೆ, ಸ್ಟೋರ್ ಮಾಲಿಕರೊಂದಿಗೆ ಜಗಳವಾಡುವುದು ಸಭ್ಯರ ಲಕ್ಷಣವಲ್ಲ. ವಿದ್ಯೆಗೆ ವಿನಯವೇ ಭೂಷಣ ಎಂಬುದನ್ನು ಮರೆಯದಿರಿ. ನೀವು ನಗುನಗುತ್ತಾ ವ್ಯವಹರಿಸಿದಷ್ಟೂ ಸುತ್ತಲಿರುವವರು ಹೆಚ್ಚು ಗೌರವ ಕೊಡುತ್ತಾರೆ. 

ಬೇಕಾಬಿಟ್ಟಿ ಶಾಪಿಂಗ್ ಮಾಡ್ತೀರಾ? ಈ ಗೀಳಿನಿಂದ ಹೊರಬನ್ನಿ ಬೇಗ......

ಸ್ಟೋರ್ ಸೈನ್‌ಗಳನ್ನು ಓದಿ

ಡಿಸ್ಕೌಂಟ್, ಆಫರ್, ಸೇವೆಗಳು, ಅಲ್ಲಿ ಇರಬೇಕಾದ ರೀತಿ ಇತ್ಯಾದಿಯ ಕುರಿತು ಅಂಗಡಿಗಳಲ್ಲಿ ಹಾಕಿರುವ ಬೋರ್ಡ್‌ಗಳನ್ನು ಸರಿಯಾಗಿ ಓದಿಕೊಳ್ಳಿ. ಆಗ ಯಾವುದಕ್ಕೂ ಮತ್ತೊಬ್ಬರ ಸಹಾಯ ಬೇಕಾಗುವುದಿಲ್ಲ. 

ಅನಗತ್ಯ ವಸ್ತುಗಳನ್ನು ಮುಟ್ಟಬೇಡಿ

ಅಂಗಡಿಗಳಲ್ಲಿ ಕೊಳ್ಳುವ ಯೋಚನೆ ಇಲ್ಲದಿದ್ದರೂ ವಿನಾಕಾರಣ ಬಟ್ಟೆ, ತರಕಾರಿ, ಇತರೆ ವಸ್ತುಗಳನ್ನು ಮುಟ್ಟಿ ನೋಡುವುದು, ಹಿಸುಕುವುದು, ಮುದ್ದೆ ಮಾಡುವುದು ಇತ್ಯಾದಿ ಮಾಡಿ ಪರೀಕ್ಷಿಸಬೇಡಿ. ಯಾವುದನ್ನಾದರೂ ಪರೀಕ್ಷಿಸಲೇಬೇಕೆಂದರೆ ಅದಕ್ಕೆ ಅಲ್ಲಿನ ಉದ್ಯೋಗಿ ಸಹಾಯ ಪಡೆಯಿರಿ. 

ಮಕ್ಕಳನ್ನು ನಿಯಂತ್ರಿಸಿ

ನಿಮ್ಮ ಮಕ್ಕಳು ನಿಮಗೆ ಮುದ್ದಿರಬಹುದು. ಹಾಗಂಥ ಎಲ್ಲರೂ ಹಾಗೆ ಕಾಣಬೇಕೆಂದು ಬಯಸುವುದು ತಪ್ಪು. ಹೊರ ಹೋದಾಗ ಮಕ್ಕಳನ್ನು ಬೇಕಾಬಿಟ್ಟಿ ಇರಲು ಬಿಡುವುದರಿಂದ ಅಲ್ಲಿರುವ ಇತರರಿಗೆ ತೊಂದರೆಯಾಗುವುದಲ್ಲದೆ, ಮಕ್ಕಳೂ ಸರಿಯಾದ ವರ್ತನೆ ಕಲಿಯುವುದಿಲ್ಲ. ಮಕ್ಕಳನ್ನು ಅವರ ಪಾಡಿಗೆ ಅಂಗಡಿಯಲ್ಲಿ ಕಂಡಿದ್ದೆಲ್ಲ ಮುಟ್ಟಲು ಬಿಡುವುದು, ಕೂಗುತ್ತಿದ್ದರೂ ನೋಡಿಕೊಂಡಿರುವುದು, ಒಂದು ತುದಿಯಿಂದ ಮತ್ತೊಂದು ತುದಿಗೆ ಓಡಲು ಬಿಡುವುದರಿಂದ ಅಂಗಡಿ ಮಾಲೀಕರಿಗೂ, ಗ್ರಾಹಕರಿಗೂ ಸಮಸ್ಯೆಯಾಗುತ್ತದೆ. ಅವರನ್ನು ಶಿಸ್ತಾಗಿ ಕುಳಿತುಕೊಳ್ಳಲು ಕಲಿಸಿ.