ಬೆಂಗಳೂರು(ಜೂ.05): ಕರ್ನಾಟಕದ 10 ಜನ ರೂಪದರ್ಶಿಯರು ಜೂನ್ 16ರಂದು ಮುಂಬೈಯಲ್ಲಿ ಜರುಗಲಿರುವ “ಮಿಸೆಸ್  ಇಂಡಿಯಾ  -ಐ ಆಮ್ ಪವರ್‌ಫುಲ್-2019”  ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ರಾಜ್ಯದ ವಿವಿದ ಭಾಗಗಳಿಂದ ಭಾಗವಹಿಸಿದ್ದವರಲ್ಲಿ 10 ಜನರನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಗಿದೆ. 

ಇವರು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಲಿರುವ 25 ಜನ ರೂಪದರ್ಶಿಯರೊಂದಿಗೆ ‘ಮಿಸೆಸ್ ಇಂಡಿಯಾ’ ಕಿರೀಟಕ್ಕೆ ಸ್ಪರ್ಧಿಸಲಿದ್ದಾರೆ.

22ರಿಂದ 40, 40ರಿಂದ 60 ವರ್ಷದವರಿಗಾಗಿ ಎರಡು ಹಂತಗಳಲ್ಲಿ ಆಡಿಷನ್ ನಡೆಸಲಾಗಿತ್ತು. ಬೆಂಗಳೂರಿನ ಗೀತಾಂಜಲಿ “ಮಿಸೆಸ್ ಕರ್ನಾಟಕ-ಐ ಆ್ಯಮ್ ಪವರ್‌ಫುಲ್-2019” ಕಿರೀಟ ಮುಡಿಗೇರಿಸಿಕೊಂಡರೆ, ಮಧುರಾ ವಿ. ಆಚಾರ್ ಮಿಸೆಸ್ ಕರ್ನಾಟಕ ಕರ್ವಿ 2019 ಕಿರೀಟವನ್ನು ತಮ್ಮದಾಗಿಸಿಕೊಂಡರು. 

ಎರಡನೇ ಸುತ್ತಿಗೆ ಆಯ್ಕೆಯಾದ ಇನ್ನುಳಿದ 8 ಜನ ರೂಪದರ್ಶಿರು- ಗಾಯತ್ರಿ ಮೊಹಂತಿ, ಗ್ರೀಶ್ಮಾ ನಂಜಪ್ಪ, ರೆಶ್ಮಾ ಸಿಂಗ್,ಪ್ರಿತಾ ಬಿಕ್ಕೆಮಾನೆ, ಬೈಶಾಕಿ ಮಿರ್, ನಿಶಾ ಮಿಥುನ್, ಬೀನಾ ಪಿಂಟೊ ಮತ್ತು ಮಂಜುಳಾ ಮಹೇಶ್.

 ಆಯ್ಕೆಯಾದ ಹತ್ತು ಜನರಿಗೆ ಒಂದು ವಾರ ತರಬೇತಿ ನೀಡಿ ಎರಡನೇ ಸುತ್ತಿಗೆ ತಯಾರು ಮಾಡಲಾಗುವುದು.

 ಈ ಕುರಿತು ಮಾಹಿತಿ ನೀಡಿರುವ ಆಯೋಜಕಿ ನಂದಿನಿ ನಾಗರಾಜ್, ಮಿಸೆಸ್ ಇಂಡಿಯಾ ಒಂದು ವಿಶಿಷ್ಟ ಸೌಂದರ್ಯ ಸ್ಪರ್ಧೆಯಾಗಿದೆ. ಇಲ್ಲಿ ಎತ್ತರ, ತೂಕ, ಬಣ್ಣಕ್ಕಿಂತ ಆಕೆಯ ಆಂತರ್ಯದ ಸೌಂದರ್ಯ, ಸೌಂದರ್ಯ ಕುರಿತಾದ ಅವಳ ವ್ಯಾಖ್ಯಾನ, ಬದುಕಿನ ಬಗೆಗಿನ ದೃಷ್ಟಿಕೋನವನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಎರಡನೇ ಸುತ್ತಿನಲ್ಲಿ ಆಯ್ಕೆಯಾಗುವ ರೂಪದರ್ಶಿ ಸಿಂಗಪುರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.