Underarm Hair Color : ಅಂಡರ್ ಆರ್ಮ್ ಕೂದಲು ತೋರಿಸೋದು ಕ್ರೈಮ್ ಎನ್ನುವ ಕಾಲ ಒಂದಿತ್ತು. ಆದ್ರೀಗ ಎಲ್ಲ ಬದಲಾಗಿದೆ. ಕೂದಲಿಗೆ ಜೆನ್ ಜಿಗಳು ಹೊಸ ಲುಕ್ ನೀಡಿ, ಫ್ಯಾಷನ್ ಬದಲಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಹೊಸ ಬ್ಯೂಟಿ ಮತ್ತು ಗ್ರೂಮಿಂಗ್ ಟ್ರೆಂಡ್ ವೈರಲ್ ಆಗ್ತಿವೆ. ಇದೀಗ ಚೀನಾದಲ್ಲಿ ವಿಭಿನ್ನ ಟ್ರೆಂಡ್ವೊಂದು ಗಮನ ಸೆಳೆಯುತ್ತಿದೆ. ಕೆಲವರು, ಅದರಲ್ಲೂ ಜೆನ್ ಜಿ ( Gen Z) ಯುವತಿಯರು ತಮ್ಮ ಅಂಡರ್ಆರ್ಮ್ ಕೂದಲಿಗೆ ವಿವಿಧ ಬಣ್ಣಗಳನ್ನು ಹಚ್ಚಿಸಿಕೊಳ್ಳುತ್ತಿದ್ದಾರೆ. ಇದನ್ನು ಕೆಲವರು ಬಾಡಿ ಪಾಸಿಟಿವಿಟಿ ಹಾಗೂ ತಮ್ಮನ್ನು ತಾವು ವಿಭಿನ್ನವಾಗಿ ವ್ಯಕ್ತಪಡಿಸಿಕೊಳ್ಳುವ ಒಂದು ಮಾರ್ಗ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಹೊಸ ಟ್ರೆಂಡ್ ಏನು? ಇದರ ಬಗ್ಗೆ ಇಲ್ಲಿದೆ ಮಾಹಿತಿ.
ಅಂಡರ್ ಆರ್ಮ್ ಕೂದಲಿಗೆ ಕಲರ್
ಚೀನಾದ ಕೆಲವು ಯುವತಿಯರು ತಮ್ಮ ಅಂಡರ್ಆರ್ಮ್ ಕೂದಲಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿಕೊಳ್ತಿರೋದು ಗಮನ ಸೆಳೆಯುತ್ತಿದೆ. ಹಿಂದೆ ಅಸಾಮಾನ್ಯವಾಗಿ ಕಾಣುತ್ತಿದ್ದ ಈ ರೀತಿಯ ಪ್ರಯೋಗ, ಇದೀಗ ಫ್ಯಾಷನ್ ಆಗ್ತಿದೆ. ತಮ್ಮ ದೇಹವನ್ನು ತಮ್ಮ ಇಷ್ಟದಂತೆ ಸ್ವೀಕರಿಸುವ ಒಂದು ಮಾರ್ಗವಾಗಿದೆ. ಆದರೆ ಇದು ಸಂಪೂರ್ಣ ಹೊಸ ಟ್ರೆಂಡ್ ಅಲ್ಲ. 2011ರಲ್ಲಿ ಪಾಪ್ಸ್ಟಾರ್ ಲೇಡಿ ಗಾಗಾ ಹಸಿರು ಬಣ್ಣದ ಅಂಡರ್ಆರ್ಮ್ ಕೂದಲಿನೊಂದಿಗೆ ಕಾಣಿಸಿಕೊಂಡು ಸಾಕಷ್ಟು ಸುದ್ದಿ ಮಾಡಿದ್ರು. ನಂತರ ಸೋಶಿಯಲ್ ಮೀಡಿಯಾದಲ್ಲಿ ಬಣ್ಣಬಣ್ಣದ ಅಂಡರ್ಆರ್ಮ್ ಕೂದಲು ಹಾಗೂ 'ಗ್ಲಿಟರ್ ಪಿಟ್ಸ್' ಎಂಬ ಟ್ರೆಂಡ್ಗಳು ಕೂಡ ಕಾಣಿಸಿಕೊಂಡಿದ್ದವು. ಇದರಲ್ಲಿ ಅಂಡರ್ಆರ್ಮ್ ಕೂದಲಿಗೆ ಬಣ್ಣ ಹಚ್ಚುವುದರ ಜೊತೆಗೆ ಗ್ಲಿಟರ್ ಬಳಸಿ ವಿಭಿನ್ನ ಲುಕ್ ನೀಡಲಾಗುತ್ತಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಅಂಡರ್ಆರ್ಮ್ ಕೂದಲಿಗೆ ಬಣ್ಣ ಹಚ್ಚುವ ಟ್ರೆಂಡ್ನ ಉದ್ದೇಶ ಕೂದಲನ್ನು ಮರೆಮಾಚುವುದಕ್ಕಿಂತ ಅದನ್ನು ಸ್ವೀಕರಿಸಿ, ಬಣ್ಣಗಳ ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳುವುದು. ಈ ಟ್ರೆಂಡ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯೂ ನಡೆಯುತ್ತಿದೆ. ಕೆಲವರು ಇದನ್ನು ಆತ್ಮವಿಶ್ವಾಸ ಮತ್ತು ವೈಯಕ್ತಿಕ ಆಯ್ಕೆಗೆ ಸಂಬಂಧಿಸಿದ ವಿಚಾರ ಎಂದು ನೋಡುತ್ತಿದ್ದಾರೆ. ಮತ್ತೊಂದೆಡೆ, ಕೆಲವರು ಗ್ರೂಮಿಂಗ್ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಈ ಟ್ರೆಂಡ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಭಾರತದಲ್ಲೂ ಅಂಡರ್ಆರ್ಮ್ ಕೂದಲಿನ ಬಗ್ಗೆ ಚರ್ಚೆ
ಭಾರತದಲ್ಲೂ ದೇಹದ ಕೂದಲಿಗೆ ಸಂಬಂಧಿಸಿದ ಕಂಟೆಂಟ್ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಪಾಯಲ್ ಘೋಘರೆ ತಮ್ಮ ಅಂಡರ್ಆರ್ಮ್ ಕೂದಲನ್ನು ತೋರಿಸುವ ವಿಡಿಯೋಗಳನ್ನು ಹಂಚಿಕೊಂಡು ಹಲವು ಬಾರಿ ವೈರಲ್ ಆಗಿದ್ದಾರೆ. ಸಾಮಾನ್ಯವಾಗಿ ಬ್ಯೂಟಿ ಸ್ಟ್ಯಾಂಡರ್ಡ್ಸ್ ಕಾರಣದಿಂದ ಅಂಡರ್ಆರ್ಮ್ ಕೂದಲನ್ನು ಮರೆಮಾಚುವ ಅಥವಾ ತೆಗೆಯುವ ಅಭ್ಯಾಸವಿದೆ. ಆದರೆ ಪಾಯಲ್ ಅದನ್ನು ಸಹಜವಾಗಿ ಸ್ವೀಕರಿಸಿ, ಮುಕ್ತವಾಗಿ ತೋರಿಸುತ್ತಾರೆ.


