ಅಬ್ಬಬ್ಬಾ! ಸೀರೆಲೂ ಇಷ್ಟೊಂದ್ ಸ್ಟೈಲ್ ಹೊಡೀಬಹುದಾ?!
ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ಬಹಳ ಮುಖ್ಯ ಸ್ಥಾನವಿದೆ. ದಿನಗಳು ಕಳೆದಂತೆ ಸೀರೆ ಉಡುವ ರೀತಿಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ದಿನದಿನಕ್ಕೂ ಟ್ರೆಂಡ್ ಬದಲಾಗುತ್ತಿರುತ್ತದೆ. ಹೊಸದಾಗಿ ಸೀರೆ ಉಡುತ್ತಿರುವವರು, ಅಥವಾ ಒಂದೇ ರೀತಿ ಸೀರೆ ಉಟ್ಟು ಬೇಸತ್ತಿರುವವರು ಸೀರೆಯನ್ನು ಹೇಗೆಲ್ಲ ವಿಭಿನ್ನವಾಗಿ ಧರಿಸಬಹುದು ಗೊತ್ತಾ?
ಯಾವಾಗಲೂ ಒಂದೇ ರೀತಿಯಲ್ಲಿ ಸೀರೆ ಉಟ್ಟು ಬೋರ್ (Bore) ಆಗಿರುವವರು ಹೊಸ ಹೊಸ ರೀತಿಯಲ್ಲಿ ಸೀರೆ ಉಡುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಸೀರೆ ಉಡಲು ಆರಂಭಿಸುವವರು (Beginner) ಈ ಸಲಹೆಯನ್ನು ಪಾಲಿಸಿ ವಿಭಿನ್ನ ರೀತಿಯಲ್ಲಿ ಸೀರೆಯನ್ನು ಉಟ್ಟು ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಿ. ಸೀರೆ ಉಡುವುದರಲ್ಲಿ ಆಗಾಗ ಹೊಸ ರೀತಿಯ ಪ್ರಯೋಗಗಳನ್ನು ನಡೆಸುತ್ತಿರಬೇಕು, ಆಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಟ್ರೆಂಡ್ ಕೂಡಾ ಫಾಲೋ ಮಾಡಿದಂತಾಗುತ್ತದೆ. ಆಗ ಜನಸಂದಣಿಯ ನಡುವೆಯೂ ನೀವು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತೀರಿ.
ಸೀರೆಯ ಜೊತೆಗೆ ಬೆಲ್ಟ್ (Belt) ಧರಿಸಿಕೊಳ್ಳಿ
ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಪ್ರಸ್ತುತ ದಿನಗಳಲ್ಲಿ ಇದೇ ಟ್ರೆಂಡ್. ಎಂದಾದರೂ ಇದನ್ನು ಪ್ರಯತ್ನಿಸಿದ್ದೀರಾ? ಇದಕ್ಕಾಗಿ ನೀವು ಬಹಳ ಏನು ಕಷ್ಟ ಪಡಬೇಕಾಗಿಲ್ಲ ಪ್ರತಿ ದಿನ ಉಡುವ ರೀತಿಯಲ್ಲಿಯೇ ಸಾಮಾನ್ಯವಾಗಿ (Casual) ಸೀರೆ ಉಟ್ಟು ಅದರ ಮೇಲೆ ಬೆಲ್ಟ್ ಧರಿಸಿ. ಎದೆಯ ಕೆಳಭಾಗದಲ್ಲಿ ಬೆಲ್ಟನ್ನು ಧರಿಸಿ. ಇದು ನಿಮಗೆ ಕಂಫರ್ಟಬಲ್ ಆಗಿರುವುದರ ಜೊತೆಗೆ ಸೀರೆಯನ್ನೇ ಬದಲಾಯಿಸುತ್ತದೆ. ಬೆಲ್ಟಿನ ಬದಲಾಗಿ ವಿಭಿನ್ನ ರೀತಿಯ ಚೈನ್ ಗಳನ್ನು ಕೂಡ ಧರಿಸಬಹುದು.
ಧೋತಿ ಸ್ಟೈಲ್ (Dhoti Style)
ಈಗಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರು ಇದೇ ರೀತಿಯ ಸೀರೆ ಉಡಲು ಬಯಸುತ್ತಾರೆ. ಸಾಮಾನ್ಯ ರೀತಿಯಲ್ಲಿ ಸೀರೆ ಉಡುವುದಕ್ಕೆ ಧೋತಿ ಸ್ಟೈಲ್ ನಲ್ಲಿ ಸೀರೆ ಉಡುವುದಕ್ಕೆ ವ್ಯತ್ಯಾಸವೆಂದರೆ, ಇದರಲ್ಲಿ ಪೆಟಿಕೋಟ್ ಧರಿಸುವ ಬದಲಾಗಿ ಲೆಗ್ಗಿಂಗ್ಸ್ (Leggings) ಧರಿಸಿರುತ್ತೀರಿ. ಹಾಗೂ ಧೋತಿಯ ರೀತಿಯಲ್ಲಿ ಕಾಣುವ ಹಾಗೆ ಸೀರೆಯನ್ನು ಉಟ್ಟುಕೊಳ್ಳಬೇಕು. ಇದೊಂದು ವಿಭಿನ್ನ ರೀತಿಯ ಟ್ರೆಂಡ್.
ಪ್ಯಾಂಟ್ (Pant) ರೀತಿಯ ಸೀರೆ
ಈ ರೀತಿಯ ಸೀರೆಗಳನ್ನು ಧರಿಸುವುದರಿಂದ ಸುಂದರವಾಗಿ ಕಾಣುತ್ತೀರಿ ಜೊತೆಗೆ ಇದು ನಿಮ್ಮನ್ನು ಆರಾಮವಾಗಿ (Comfortable) ಇರಿಸುತ್ತದೆ. ನೀವು ಇದನ್ನು ಮದುವೆ ಸಮಾರಂಭಗಳಿಗೆ ಉಡುವ ಆಯ್ಕೆ ಮಾಡಿಕೊಳ್ಳಬಹುದು. ಎಷ್ಟೇ ಜನರಿದ್ದರೂ ಎಲ್ಲರಿಗಿಂತ ನೀವು ಆಕರ್ಷಣೀಯವಾಗಿ (Attractive) ಕಾಣಿಸಿಕೊಳ್ಳುತ್ತೀರಿ.
ಮತ್ಸ್ಯಕನ್ಯೆ (Mermaid) ರೀತಿಯ ಸೀರೆ
ಹೆಚ್ಚು ನೆರಿಗೆಗಳನ್ನು ತೆಗೆದು ಉಡುವ ಒಂದು ವಿಧಾನವಿದು. ಮತ್ಸ್ಯಕನ್ಯೆಯ ಬಾಲದ ರೀತಿಯಲ್ಲಿ ಕಾಣುವ ಹಾಗೆ ನೆರಿಗೆಗಳ ಕೆಳಭಾಗದಲ್ಲಿ ನೆರಿಗೆಗಳು (Pleats) ಹರಡಿಕೊಂಡಿರುವ ಸೀರೆ ಉಟ್ಟುಕೊಳ್ಳಬೇಕು. ಈ ರೀತಿಯಲ್ಲಿ ಸೀರೆ ಉಡುವುದು ಸ್ವಲ್ಪ ಕಷ್ಟ ಎನಿಸಿದರೂ ಕೂಡ ನೀವು ಅತ್ಯಂತ ಸುಂದರವಾಗಿ ಕಾಣುವುದಂತು ಖಚಿತ.
ಫ್ರೆಂಟ್ ಪಲ್ಲು ಸ್ಟೈಲ್ (Front pallu style)
ಸಾಮಾನ್ಯವಾಗಿ ಪಲ್ಲು ಅಥವಾ ಸೆರಗನ್ನು ಮುಂದೆಯಿಂದ ಹಿಂದೆ ಹಾಕುತ್ತೇವೆ. ಆದರೆ, ಈ ರೀತಿಯ ಸೀರೆ ಉಡುವಾಗ ಹಿಂಭಾಗದಿಂದ ಮುಂಭಾಗಕ್ಕೆ ಪಲ್ಲುವನ್ನು ಧರಿಸಲಾಗುತ್ತದೆ. ಇಂಥ ರೀತಿಯ ಸೀರೆ ವಿಭಿನ್ನವಾಗಿ ಇರುವುದರ ಜೊತೆಗೆ ನಿಮ್ಮನ್ನು ವಿಶೇಷವಾಗಿ (Special) ಕಾಣುವ ಹಾಗೆ ಮಾಡುತ್ತದೆ.
ಲೆಹೆಂಗಾ ಸ್ಟೈಲ್ ಸೀರೆ (Lehenga)
ಲೆಹಂಗಾ ಧರಿಸುವುದು ಬಹುಶಃ ಎಂದಿಗೂ ಮರೆಯಾಗದ ಒಂದು ಟ್ರೆಂಡ್ (Trend) ಎನ್ನಬಹುದು. ಈ ರೀತಿಯ ಸೀರೆ ಉಡುತ್ತಿದ್ದೀರಾ ಎಂದಾದರೆ ನಿಮಗಿಷ್ಟವಾಗುವ ಲೆಹೆಂಗಾಗಳಿಗಾಗಿ ನೀವು ಹಲವಾರು ಅಂಗಡಿಗಳಿಗೆ ಸುತ್ತುವ ಅವಶ್ಯಕತೆ ಇಲ್ಲ. ನಿಮ್ಮಲ್ಲಿರುವ ಸೀರೆಯನ್ನೇ ವಿಭಿನ್ನವಾಗಿ (Different) ಲೆಹಂಗಾದ ರೀತಿಯಲ್ಲಿ ಧರಿಸಬಹುದು.
ಇನ್ನೂ ಹುಡುಕುತ್ತಾ ಹೋದರೆ ಹಲವಾರು ವಿಭಿನ್ನ ರೀತಿಯಲ್ಲಿ ಸೀರೆಗಳನ್ನು ಉಟ್ಟುಕೊಳ್ಳಬಹುದು. ಇವು ನಿಮ್ಮ ಅಂದವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮನ್ನು ಕಂಫರ್ಟಬಲ್ಲಾಗಿ ಕೂಡ ಇರಿಸುತ್ತದೆ. ಹೆಚ್ಚು ಗ್ಲಾಮರಸ್ಸಾಗಿ (Glamorous) ಕಾಣಿಸುವಂತೆ ಮಾಡುತ್ತದೆ.