ವ್ಯಕ್ತಿಯೊಬ್ಬ ದೇವರ ವಿಗ್ರಹದ ಮೇಲೆ ಕಾಲಿಟ್ಟು ತುಳಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹೀಗೆ ದೇವರ ವಿಗ್ರಹವನ್ನು ತುಳಿಯುತ್ತಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಮ್ಮದ್‌ ಅನ್ಸಾರಿ ಎಂಬ ಎಂದು ಹೇಳಲಾಗಿದೆ. ಅವ್ನಿ ಪಾಂಡೆ ಎಂಬವರು ಜೂನ್‌ 24ರಂದು ಮೊದಲಿಗೆ ಇದನ್ನು ಪೋಸ್ಟ್‌ ಮಾಡಿದ್ದು, ಅದು 25,000 ಬಾರಿ ಶೇರ್‌ ಆಗಿತ್ತು.

 

ಆದರೆ ನಿಜಕ್ಕೂ ಮುಸ್ಲಿಂ ವ್ಯಕ್ತಿಯೊಬ್ಬ ದೇವರ ವಿಗ್ರಹದ ಮೇಲೆ ಕಾಲಿಟ್ಟು ಉದ್ದಟತನ ತೋರಿದನೇ ಎಂದು ಆಲ್ಟ್‌ನ್ಯೂಸ್‌ ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು, ಚಿತ್ರದಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ. ಧಾರ್ಮಿಕ ದ್ವೇಷ ಬಿತ್ತುವ ಉದ್ದೇಶದಿಂದ ಈ ರೀತಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೇ 11ರಂದು ಉತ್ತರ ಪ್ರದೇಶದ ವಾರಣಸಿ ಪೊಲೀಸರು ಮಾಡಿದ್ದ ಟ್ವೀಟ್‌ವೊಂದು ಲಭ್ಯವಾಗಿದೆ.

ಅದರಲ್ಲಿ ‘ಭೀಮ್‌ ಆರ್ಮಿಯ ಸದಸ್ಯನಾದ ಗೌತಮ್‌ ಎಂಬ ಯುವಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ದೂರು ದಾಖಲಾಗಿದ್ದು, ವಾರಣಸಿ ಮಿರ್ಜಾಮುರದ್‌ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಬಂದಿಸಲಾಗಿದೆ’ ಎಂದಿದೆ. ಹಾಗಾಗಿ ಮುಸ್ಲಿಮರು ಈ ಕೃತ್ಯ ಎಸಗಿದ್ದಾರೆ ಎಂಬುದು ಸುಳ್ಳು ಸುದ್ದಿ.

- ವೈರಲ್ ಚೆಕ್